ಕೇರಳದಲ್ಲಿ ಓಣಂ ಸಂಭ್ರಮ

ಕಾಸರಗೋಡು: ಸಮೃದ್ಧಿ, ಐಶ್ವರ್ಯದ ಸಂಕೇತ ಓಣಂ ಹಬ್ಬವನ್ನು ಬುಧವಾರ ಕೇರಳದ ಜನತೆ ಸಂಭ್ರಮ, ಸಡಗರದಿಂದ ಆಚರಿಸಿದರು.

ಅತ್ತಂ ಪತ್ತ್ ಪೊನ್ನೋಣಂ ಎಂಬಂತೆ ಅತ್ತಂನಿಂದ ತೊಡಗಿ ಹತ್ತನೇ ದಿನ ನಡೆಯುವ ತಿರುವೋಣಂ ಹಬ್ಬ ರಾಜ್ಯದ ಜನತೆಯ ಪಾಲಿಗೆ ವಿಶಿಷ್ಟ ಸಂಭ್ರಮಾಚರಣೆಯ ದಿನವಾಗಿದೆ. ತಿರುವೋಣಂ ದಿನದಂದು ಮಹಾಬಲಿ ಪ್ರತಿ ಮನೆಗೆ ಭೇಟಿ ನೀಡಿ ತನ್ನ ಪ್ರಜೆಗಳ ಯೋಗ ಕ್ಷೇಮ ವಿಚಾರಿಸುವ ನಂಬಿಕೆಯಿದೆ.
ಜನತೆ ಹೊಸ ಬಟ್ಟೆ ಧರಿಸಿ, ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದ ನಂತರ ಮನೆಗಳಲ್ಲಿ ಮೃಷ್ಟಾನ್ನ ಭೋಜನ ಸವಿದರು. ಜತೆಗೆ ನಾನಾ ತರದ ಸ್ಪರ್ಧೆಗಳನ್ನೂ ನಾಡಿನೆಲ್ಲೆಡೆ ಆಯೋಜಿಸಲಾಯಿತು. ಕುಂಬಳೆ ಸೀಮೆಯ ಪ್ರಮುಖ ದೇವಾಲಯಗಳಾದ ಅಡೂರು, ಮಧೂರು, ಕಾವು(ಮುಜುಂಗಾವು), ಕನ್ಯಾರ(ಕುಂಬಳೆ ಕಣಿಪುರ) ಸಹಿತ ಜಿಲ್ಲೆಯಾದ್ಯಂತ ದೇವಾಲಯಗಳಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿತ್ತು. ಗುರುವಾಯೂರು ಶ್ರೀಕೃಷ್ಣ ದೇವಸ್ಥಾನಕ್ಕೂ ಭಾರಿ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದರು.
ವರ್ಷಕ್ಕೊಮ್ಮೆ ನಾಡಿನ ಪ್ರಜೆಗಳ ಯೋಗ ಕ್ಷೇಮ ವಿಚಾರಣೆಗೆ ಆಗಮಿಸುತ್ತಾರೆಂಬ ಐತಿಹ್ಯ ಹೊಂದಿರುವ ಮಹಾಬಲಿಯನ್ನು ನಾಡಿನ ದೇವಾಲಯಗಳು, ಸಂಘ ಸಂಸ್ಥೆಗಳಲ್ಲಿ ಹೂವಿನ ರಂಗೋಲಿ ರಚಿಸಿ ಜನರು ಸ್ವಾಗತಿಸಿದರು. ಹೊಸದಾಗಿ ಓಣಂ ಹಬ್ಬ ಆಚರಿಸುವ ಪುಟ್ಟ ಮಕ್ಕಳಿಗೆ ವಿಶೇಷ ಪರಿಗಣನೆ ನೀಡಲಾಗುತ್ತದೆ. ಇವರಿಗೆ ಹೆತ್ತವರಿಂದ ಹಾಗೂ ಸಂಬಂಧಿಕರಿಂದ ಹೊಸ ಬಟ್ಟೆ ಸಹಿತ ವಿಶೇಷ ಕೊಡುಗೆಗಳೂ ಲಭಿಸುತ್ತದೆ. ನವದಂಪತಿಗಳಿಗಳೂ ಓಣಂ ಹಬ್ಬಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕಲ್ಪಿಸುತ್ತಾರೆ.

Leave a Reply

Your email address will not be published. Required fields are marked *