ದೊಡ್ಡಬಳ್ಳಾಪುರ : ನಗರದಲ್ಲಿ ಶ್ರೀ ಸಪ್ತಮಾತೃಕ ಮಾರಿಯಮ್ಮ ದೇವಿ ಕರಗ ಮಹೋತ್ಸವದ ಪ್ರಯುಕ್ತ ಏಳು ಸುತ್ತಿನ ಕೋಟೆಯಲ್ಲಿ ಒನಕೆ ನಾಟ್ಯ ಮತ್ತು ವಸಂತೋತ್ಸವ ವಿಜೃಂಭಣೆಯಿಂದ ನೆರವೇರಿತು.

ಕರಗ ಹೊತ್ತಿದ್ದ ಪೂಜಾರಿ ಮುನಿರತ್ನಂ ಬಾಲಾಜಿ ಪೂಜೆ ಸಲ್ಲಿಸಿ, ಒನಕೆ ಹಾಗೂ ಓಕುಳಿ ನೀರಿನ ತಪ್ಪಲೆ ತಲೆ ಮೇಲೆ ಹೊತ್ತು ಮಾಡಿದ ನಾಟ್ಯ ಪ್ರದರ್ಶನ ಭಕ್ತರ ಮನಸೂರೆಗೊಳಿಸಿತು. ವಹ್ನಿಕುಲ ಕುಲಸ್ಥರು ಓಕುಳಿ ನೀರು ಎರಚುತ್ತಾ, ಮಡಿಕೆ ಹೊಡೆಯುವ ವಸಂತೋತ್ಸವವನ್ನು ಸಂಭ್ರಮದಿಂದ ಆಚರಿಸಿದರು. ಕರಗ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಪೂಜಾ ಕೈಕಂರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು.
ದಾಖಲೆಯ ಕರಗ: ನಗರದಲ್ಲಿ ಶ್ರೀ ಸಪ್ತಮಾತೃಕ ಮಾರಿಯಮ್ಮ ದೇವಿ ಕರಗ ಮಹೋತ್ಸವ ವಿಜೃಂಭಣೆಯಿಂದ ನಡೆದಿದ್ದು, ಮೇ5ರಂದು ಆರಂಭವಾದ ಧಾರ್ಮಿಕ ಕಾರ್ಯಗಳು ಮೇ 20ರಂದು ಮಾರಿಯಮ್ಮ ದೇವಿ, ಪಿಳ್ಳಕಮ್ಮ ದೇವಿ, ಮುತ್ಯಾಲಮ್ಮ ದೇವಿ, ಶ್ರೀ ದೊಡ್ಡಮ್ಮ ದೇವಿಗೆ ಆರತಿ ಬೆಳಗುವ ಮೂಲಕ ಸಮಾರೋಪಗೊಳ್ಳಲಿವೆ.
25 ಗಂಟೆ ಕರಗ ಹೊತ್ತು ದಾಖಲೆ ನಿರ್ಮಿಸಿದ ಪೂಜಾರಿ : ಕರಗ ಮಹೋತ್ಸವದಲ್ಲಿ ಸೋಮವಾರ ರಾತ್ರಿ 10.30ಕ್ಕೆ ಕರಗ ಹೊತ್ತ ಪೂಜಾರಿ ಮುನಿರತ್ನಂ ಬಾಲಾಜಿ ಮಂಗಳವಾರ ರಾತ್ರಿ 11.40ಕ್ಕೆ ಕರಗ ಇಳಿಸಲಿದ್ದು, ಸತತ 25 ಗಂಟೆಗಳ ಕಾಲ ಕರಗ ಹೊತ್ತು ದಾಖಲೆ ನಿರ್ಮಿಸಿದ್ದಾರೆ. ಕರಗ ಹೊರುವ ವೇಳೆ ಎರಡು ಬಾರಿ ಜೋರು ಮಳೆ, ಸುಡು ಬಿಸಿಲು ಯಾವುದನ್ನೂ ಲೆಕ್ಕಿಸದೆ ಕರಗದ ಧಾರ್ಮಿಕ ಆಚರಣೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿ ಪೂಜಾರಿ ಮುನಿರತ್ನಂ ಬಾಲಾಜಿ ಸಲ್ಲುತ್ತದೆ. ಅವರ ಸಾಧನೆಗೆ ಎಲ್ಲೆಡೆ ಪ್ರಶಂಸೆ ಹಾಗೂ ಬಾವುಕ ನಮನಗಳ ಮಹಾಪೂರವೇ ಹರಿದು ಬಂದಿದೆ. ಈ ಹಿಂದೆ ಕರಗದ ಪೂಜಾರಿ ಬಿ.ವೈ.ನಾರಾಯಣಸ್ವಾಮಿ 23 ಗಂಟೆಗಳ ಕಾಲ ಕರಗ ಹೊತ್ತಿದ್ದರು.