ನವರಾತ್ರಿ ಸಡಗರಕ್ಕೆ ತುಟ್ಟಿಯಾದ ಹೂವು, ಹಣ್ಣು

ಉಡುಪಿ/ಮಂಗಳೂರು: ನವರಾತ್ರಿ ಸಡಗರಕ್ಕೆ ಮಾರುಕಟ್ಟೆಯಲ್ಲಿ ಹೂ, ಹಣ್ಣಿನ ದರ ಏರಿಕೆಯಾಗಿದೆ. ತರಕಾರಿ ದರವೂ ನಿಧಾನವಾಗಿ ಏರಿಕೆಯಾಗುತ್ತಿದ್ದು, ಮಾಂಸ ದರ ಯಥಾಸ್ಥಿತಿಯಲ್ಲಿದೆ.

ಎಲ್ಲ ಬಗೆಯ ಹಣ್ಣುಗಳಿಗೆ ಪ್ರತಿ ಕೆಜಿಗೆ 20ರಿಂದ 30 ರೂ. ದರ ಹೆಚ್ಚಳವಾಗಿದೆ ಎನ್ನುತ್ತಾರೆ ಉಡುಪಿ ನಗರದ ವಿಶ್ವೇಶ್ವರಯ್ಯ ತರಕಾರಿ, ಹಣ್ಣು ಮಾರುಕಟ್ಟೆಯ ಅಬ್ದುಲ್ ರಹೀಂ. ಕೆಜಿಗೆ ಸೇಬು 80ರಿಂದ 160 ರೂ., ದಾಳಿಂಬೆ 100ರಿಂದ 140 ರೂ, ಬಾಳೆಹಣ್ಣಿಗೆ 60ರಿಂದ 80 ರೂ., ದ್ರಾಕ್ಷಿಗೆ 120 ರೂ. ದರವಿದೆ. ಹಬ್ಬದ ಸಂದರ್ಭವಾದ್ದರಿಂದ ಹೆಚ್ಚಿನ ಬೇಡಿಕೆ ಇದ್ದು, ಎರಡು ದಿನಗಳ ಹಿಂದೆ ಸಾಮಾನ್ಯ ದರ ಏರಿಕೆಯಾಗಿದೆ. ಮಂಗಳೂರು ಮಾರುಕಟ್ಟೆಯಲ್ಲಿ ಸೇಬು, ಮೂಸಂಬಿ, ಕಿತ್ತಳೆ, ದ್ರಾಕ್ಷಿ ಹಾಗೂ ದಾಳಿಂಬೆ ಹಣ್ಣುಗಳ ದರದಲ್ಲಿ ಸರಾಸರಿ 10ರಿಂದ 15 ರೂ. ಏರಿಕೆ ಕಂಡಿದೆ.

ತರಕಾರಿ ದರ ಸದ್ಯ ಸ್ಥಿರ: ಉಡುಪಿ ಮಾರುಕಟ್ಟೆಯಲ್ಲಿ ತರಕಾರಿ ದರ ಸ್ಥಿರವಾಗಿದೆ. ಬೀನ್ಸ್ 35, ಬೆಂಡೆ 35, ಅಲಸಂಡೆ 30, ಮುಳ್ಳುಸೌತೆ 20, ಹೀರೆಕಾಯಿ 30, ತೊಂಡೆ 30, ಊರಿನ ಗುಳ್ಳ, 60, ಹಾಗಲಕಾಯಿ 40, ಟೊಮ್ಯಾಟೊ 14, ಈರುಳ್ಳಿ 16, ಆಲೂಗಡ್ಡೆ 22, ಕ್ಯಾರೆಟ್ 40, ಬೀಟ್‌ರೂಟ್ 20, ತೆಂಗಿನಕಾಯಿ 10ರಿಂದ 20 ರೂ, ನಿಂಬೆ.2.50, ಬಾಳೆ ಎಲೆಗೆ 2 ರೂ, ತುದಿ ಎಲೆಗೆ 2.50 ರೂ. ದರವಿದೆ. ಎರಡು ಮೂರು ದಿನಗಳಲ್ಲಿ ಏರಿಕೆಯಾಗುವ ಸಂಭವವಿದೆ. ಪೂರೈಕೆದಾರರು ಹೆಚ್ಚಿನ ದರ ವಿಧಿಸುತ್ತಿದ್ದಾರೆ. ನಾವು ಒಮ್ಮೆಲೆ ತರಕಾರಿ ರೇಟು ಜಾಸ್ತಿ ಮಾಡಿಲ್ಲ ಎನ್ನುತ್ತಾರೆ ತರಕಾರಿ ವ್ಯಾಪಾರಿ ಚಂದ್ರಕಾಂತ್.

ಮಂಗಳೂರು ಮಾರುಕಟ್ಟೆಯಲ್ಲಿ ಕೆಲವು ತರಕಾರಿ ದರ ಹೆಚ್ಚಳವಾಗಿದೆ. ಹಸಿರು ಬೀನ್ಸ್ 60 ರೂ., ಬಿಳಿ ಬೀನ್ಸ್ 50 ರೂ., ಟೊಮ್ಯಾಟೋ 15 ರೂ., ತೊಂಡೆ 35 ರೂ., ಕೊತ್ತಂಬರಿ ಸೊಪ್ಪು ಕಿ.ಗ್ರಾಂ.ಗೆ 80 ರೂ. ದರವಿದೆ.

ಶಂಕರಪುರ ಮಲ್ಲಿಗೆ 865 ರೂ.!: ಅಷ್ಟಮಿ, ಚೌತಿ ವೇಳೆ ಗಗನಕ್ಕೇರಿ ಇಳಿಕೆಯಾಗಿದ್ದ ಮಲ್ಲಿಗೆ ದರ ಮತ್ತೆ ಏರಿಕೆಯಾಗಿದೆ. ಶಂಕರಪುರ ಮಲ್ಲಿಗೆ ಅಟ್ಟೆಗೆ 865 ರೂ, ಭಟ್ಕಳ ಮಲ್ಲಿಗೆ 700 ರೂ. ಏರಿಕೆಯಾಗಿದೆ. ಕೆಲವು ದಿನಗಳ ಹಿಂದೆ 400ರ ಆಸುಪಾಸು ಇದ್ದ ದರ ಒಮ್ಮೆಲೆ ದುಪ್ಟಟ್ಟಾಗಿದೆ. ಹೆಚ್ಚು ಬೇಡಿಕೆ, ಉತ್ಪಾದನೆ ಕೊರತೆಯಿಂದ ಮಲ್ಲಿಗೆ ಹಬ್ಬದ ದಿನಗಳಲ್ಲಿ ದರ ಹೆಚ್ಚಲು ಕಾರಣ ಎನ್ನುತ್ತಾರೆ ವ್ಯಾಪಾರಿಗಳು. ಸೇವಂತಿಗೆ, ಚೆಂಡು ಹೂ ಮೊಳಕ್ಕೆ 20ರಿಂದ 30 ರೂ. ದರವಿದೆ. ಮಂಗಳೂರು ಮಾರುಕಟ್ಟೆಯಲ್ಲಿ ಸೇವಂತಿಗೆ ಗುಚ್ಛಕ್ಕೆ 200 ರೂ. ಏರಿಕೆಯಾಗಿ 800 ರೂ. ತಲುಪಿದೆ. ಸಣ್ಣ ಸೇವಂತಿಗೆ 600 ರೂ.ನಿಂದ 1000 ರೂ.ಗೆ ಏರಿಕೆ ಕಂಡಿದೆ. ವಾರದ ಹಿಂದೆ 880 ರೂ. ಇದ್ದ ಮಲ್ಲಿಗೆ ದರ ಪ್ರಸ್ತುತ 1600 ರೂ. ತಲುಪಿದೆ. ಆದರೂ ಮಲ್ಲಿಗೆ ಪೂರೈಕೆಯಾಗುತ್ತಿಲ್ಲ ಎಂದು ಮಾಲೀಕರು ತಿಳಿಸಿದ್ದಾರೆ.

ಮೀನು, ಮಾಂಸಕ್ಕೆ ಬೇಡಿಕೆ ಕುಸಿತ: ನವರಾತ್ರಿ ಅಂಗವಾಗಿ ಬೇಡಿಕೆ ಇಲ್ಲದೆ ಮೀನು, ಮಾಂಸದ ವ್ಯಾಪಾರ ಪ್ರಮಾಣದಲ್ಲಿ ಕಡಿಮೆಯಾಗಿದೆ. ಆದರೂ ದರ ಇಳಿಕೆಯಾಗಿಲ್ಲ. ಚಿಕನ್ ಕೆಜಿಗೆ 170 ರೂ., ಮಟನ್‌ಗೆ 400, ಸ್ಪೆಶಲ್ ಬನ್ನೂರು 500, ಹೋಲ್‌ಸೇಲ್ 360 ರೂ. ಇದೆ. ಮೀನು ಮಾರುಕಟ್ಟೆಯಲ್ಲೂ ದರ ಕಡಿಮೆಯಾಗಿಲ್ಲ. ಮೀನು ಸಾಕಷ್ಟು ಪ್ರಮಾಣದಲ್ಲಿ ಬರುತ್ತಿಲ್ಲವಾದ್ದರಿಂದ ಮೀನು ರೇಟು ಯಥಾಸ್ಥಿತಿಯಲ್ಲಿದೆ. ಬಂಗುಡೆ ಕೆಜಿ 180 ರೂ, ಪಾಂಪ್ಲೆಟ್ 800ರಿಂದ 900, ಅಂಜಲ್‌ಗೆ 500ರಿಂದ 600 ರೂ. ದರವಿದೆ. ಮಂಗಳೂರಿನಲ್ಲೂ ಮಾಂಸ ದರ ಯಥಾಸ್ಥಿತಿಯಲ್ಲಿದೆ. ಚಂಡಮಾರುತದಿಂದ ಕಡಲು ಪ್ರಕ್ಷುಬ್ಧಗೊಂಡು ಮೀನುಗಾರಿಕೆ ಸ್ಥಗಿತಗೊಂಡಿರುವುದರಿಂದ ಮೀನು ದರ ಅಲ್ಪ ಪ್ರಮಾಣದ ಹೆಚ್ಚಳ ಕಂಡಿದೆ.