19ರಿಂದ ನಾಮಪತ್ರ ಸಲ್ಲಿಕೆಗೆ ಅವಕಾಶ

ಮೈಸೂರು: ಲೋಕಸಭಾ ಚುನಾವಣೆಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದ್ದು, ಮಾ.19ರಂದು ಚುನಾವಣಾ ಅಧಿಸೂಚನೆ ಹೊರಡಿಸಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ನಾಮಪತ್ರ ಸಲಿಕೆಗೆ ಮಾರ್ಚ್ 26 ಅಂತಿಮ ದಿನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.

ಮಾರ್ಚ್ 27ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಮಾ.29ರವರೆಗೆ ಕಾಲಾವಕಾಶ ನೀಡಲಾಗಿದೆ. ಏಪ್ರಿಲ್ 18ರಂದು ಮತದಾನ ನಡೆಯಲಿದ್ದು, ಮೇ 23ರಂದು ಮತ ಎಣಿಕೆ ನಡೆಯಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 18,57,693 ಮತದಾರರು ಇದ್ದಾರೆ. ಮೈಸೂರು ಜಿಲ್ಲೆಯ ಒಟ್ಟು ಹನ್ನೊಂದು ಕ್ಷೇತ್ರಗಳಿಂದ 12,34,454 ಪುರುಷ, 1230648 ಮಹಿಳಾ ಮತದಾರರು ಸೇರಿ ಒಟ್ಟು 24,65,102 ಮತದಾರರಿದ್ದಾರೆ.

ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಮಡಿಕೇರಿ, ವಿರಾಜಪೇಟೆ, ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ, ನರಸಿಂಹರಾಜ ಕ್ಷೇತ್ರ ಬರಲಿದೆ. ಉಳಿದಂತೆ ಕೆ.ಆರ್.ನಗರ ಮಂಡ್ಯ ಲೋಕಸಭಾ ವ್ಯಾಪ್ತಿಗೆ ಸೇರಿದರೆ ಎಚ್.ಡಿ.ಕೋಟೆ, ನಂಜನಗೂಡು, ವರುಣ, ತಿ.ನರಸೀಪುರ ವಿಧಾನಸಭಾ ಕ್ಷೇತ್ರಗಳು ಚಾಮರಾಜನಗರ ಲೋಕಸಭಾ ವ್ಯಾಪ್ತಿಗೆ ಒಳಪಡುತ್ತವೆ. ಜಿಲ್ಲೆಯ ಹನ್ನೊಂದು ವಿಧಾನಸಭಾ ಕ್ಷೇತ್ರಗಳಿಂದ 36163 ಹೊಸ ಮತದಾರರು ನೋಂದಣಿ ಮಾಡಿಸಿಕೊಂಡಿದ್ದು, ನೋಂದಣಿ ಕಾರ್ಯ ಮುಂದುವರಿಯಲಿದೆ ಎಂದು ಹೇಳಿದರು.

ಮತದಾನಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಹನ್ನೊಂದು ವಿಧಾನಸಭಾ ಕ್ಷೇತ್ರಗಳಿಂದ 2921 ಮತಗಟ್ಟೆಗಳಿದ್ದು ಯಾವುದೇ ಹೆಚ್ಚುವರಿ ಮತಗಟ್ಟೆ ನಿರ್ಮಿಸಿಲ್ಲ. ವಿಧಾನಸಭೆ ಚುನಾವಣೆಯಲ್ಲಿದ್ದಂತೆ ಈ ಬಾರಿಯೂ ಮತಗಟ್ಟೆಗಳು ಇರಲಿದ್ದು, ಪಿರಿಯಾಪಟ್ಟಣದಲ್ಲಿ 235, ಕೆ.ಆರ್.ನಗರದಲ್ಲಿ 252, ಹುಣಸೂರಿನಲ್ಲಿ 274, ಎಚ್.ಡಿ.ಕೋಟೆಯಲ್ಲಿ 284, ನಂಜನಗೂಡಿನಲ್ಲಿ 251, ಚಾಮುಂಡೇಶ್ವರಿಯಲ್ಲಿ 338, ಕೃಷ್ಣರಾಜದಲ್ಲಿ 270, ಚಾಮರಾಜದಲ್ಲಿ 245, ನರಸಿಂಹರಾಜದಲ್ಲಿ 282, ವರುಣಾದಲ್ಲಿ 263, ತಿ.ನರಸೀಪುರದಲ್ಲಿ 227 ಮತಗಟ್ಟೆ ಸ್ಥಾಪಿಸಲಾಗಿದೆ ಎಂದರು.

ಮತದಾನದ ದಿನ ಮತಗಟ್ಟೆಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ. ಕುಡಿಯುವ ನೀರು, ಶೌಚಗೃಹ, ವಿದ್ಯುತ್, ರ‌್ಯಾಂಪ್ ವ್ಯವಸ್ಥೆ ಒದಗಿಸಲು ಕ್ರಮವಹಿಸಲಾಗಿದೆ. ಅಸಕ್ತರಿಗೆ ಮತಗಟ್ಟೆ ಬಳಿ ಗಾಲಿ ಕುರ್ಚಿ, ಮನೆಗಳಿಂದ ಕರೆ ತರಲು ವಾಹನಗಳ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಎಲ್ಲ್ಲ ಮತಗಟ್ಟೆಗಳಿಗೆ ಬ್ಯಾಲೆಟ್ ಯೂನಿಟ್, ಕಂಟ್ರೋಲ್ ಯೂನಿಟ್, ವಿವಿ ಪ್ಯಾಟ್‌ಗಳನ್ನು ಸರಬರಾಜು ಮಾಡಲಾಗುವುದು. ವೇರ್‌ಹೌಸ್‌ನ ಸುರಕ್ಷತೆ ದೃಷ್ಟಿಯಿಂದ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಸಿಸಿಟಿವಿ ಕಣ್ಗಾವಲನ್ನು ಮಾಡಲಾಗಿದ್ದು, ಎಲ್ಲ ಪಕ್ಷಗಳ ಮುಖಂಡರ ಸಮ್ಮುಖದಲ್ಲಿಯೇ ಬಿಇಎಲ್ ಸಂಸ್ಥೆಯಿಂದಲೇ ಮೊದಲನೆ ಹಂತದ ಪರಿಶೀಲನೆ ಕಾರ್ಯ ನಡೆಸಿದ್ದಾರೆ ಎಂದು ತಿಳಿಸಿದರು.

ಎರಡನೇ ಹಂತದಲ್ಲಿ ವಿವಿ ಪ್ಯಾಟ್‌ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಿ ಅಣಕು ಮತದಾನ ಮಾಡುವ ಜತೆಗೆ ಜನರು ಮಾಡಿದ ಮತದಾನ ಹೇಗೆ ಕಾರ್ಯ ನಿರ್ವಹಿಸುತ್ತದೆ. ತಾವು ಯಾರಿಗೆ ಮತ ಹಾಕಿದ್ದೇವೆ ಎನ್ನುವುದನ್ನು ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಲಾಗಿದೆ. ಜನರು ಹೆಚ್ಚಾಗಿರುವ ಪ್ರದೇಶ, ಸಂತೆ ಇನ್ನಿತರೆ ಕಡೆಗಳಲ್ಲಿ ಅರಿವು ಮೂಡಿಸುವ ಕಾರ್ಯ ನಡೆದಿದೆ ಎಂದು ವಿವರಿಸಿದರು.

ಮಾದರಿ ನೀತಿ ಸಂಹಿತೆ, ಅಭ್ಯರ್ಥಿಗಳ ವೆಚ್ಚದ ಮೇಲೆ ನಿಗಾ ಇಡಲು ತಂಡಗಳನ್ನು ರಚನೆ ಮಾಡಲಾಗಿದ್ದು, ಮಾದರಿ ನೀತಿಸಂಹಿತೆಯನ್ನು ಜಾರಿಗೊಳಿಸಲು ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ. 11 ವಿಧಾನಸಭಾ ಕ್ಷೇತ್ರಗಳಲ್ಲಿ 191 ಸೆಕ್ಟರ್ ಆಫೀಸರ್ಸ್‌, 33 ಪ್ಲೈಯಿಂಗ್ ಸ್ಕ್ವಾಡ್, 48 ಸ್ಟ್ಯಾಟಿಕ್ಸ್ ಸರ್ವಲೆನ್ಸ್ , 33 ವಿಡಿಯೋ ಸರ್ವಲೆನ್ಸ್, ತಲಾ 11 ವಿಡಿಯೋ ವೀವಿಂಗ್, ಲೆಕ್ಕಪತ್ರ, ನಿರ್ವಹಣೆಯ ತಂಡವನ್ನು ರಚನೆ ಮಾಡಲಾಗಿದೆ ಎಂದರು

ಪೊಲೀಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‌ಸಿಂಗ್, ಜಿಪಂ ಸಿಇಒ ಕೆ.ಜ್ಯೋತಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ನಗರಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಇನ್ನಿತರರು ಹಾಜರಿದ್ದರು.

ಆಯೋಗದ ಅನುಮತಿ ಕಡ್ಡಾಯ:   ಯಾವುದೇ ಚುನಾವಣಾ ಕರಪತ್ರಗಳು, ಪೋಸ್ಟರ್, ಬಿಲ್‌ಗಳಲ್ಲಿ ಪ್ರಕಾಶಕರು ಮತ್ತು ಪ್ರಕಾಶನದ ಸಂಸ್ಥೆಯ ಮಾಹಿತಿಯನ್ನು ಕಡ್ಡಾಯವಾಗಿ ಮುದ್ರಿಸಬೇಕು. ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಅಭ್ಯರ್ಥಿಗಳು ಯಾವುದೇ ಜಾಹೀರಾತನ್ನು ಮಾಧ್ಯಮಗಳಲ್ಲಿ ಪ್ರಕಟಿಸುವ ಮುನ್ನ ಜಾಹೀರಾತು ವಿವರವನ್ನು ಎಂಸಿಎಂಸಿ ತಂಡದ ಗಮನಕ್ಕೆ ತಂದು ಪ್ರಮಾಣ ಪತ್ರ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಪೇಯ್ಡ ಸುದ್ದಿಗಳ ಕುರಿತು ಚುನಾವಣಾ ಮಾದರಿ ನೀತಿ ಸಂಹಿತೆ ತಂಡವು ಕಾರ್ಯ ನಿರ್ವಹಿಸಲಿದೆ. ಮಾಧ್ಯಮದವರಿಗೂ ಈ ಕುರಿತು ಕಾರ್ಯಾಗಾರ ನಡೆಸಿ ಮಾಹಿತಿ ನೀಡಲಾಗುವುದು ಎಂದು ಹೇಳಿದರು.

ಮಾದರಿ ಸಂಹಿತೆ ಜಾರಿ:  ಸಾರ್ವಜನಿಕರ ಸ್ವತ್ತು, ಸಾರ್ವಜನಿಕರ ಸ್ಥಳಗಳಾದ ರೈಲ್ವೆ , ಬಸ್‌ನಿಲ್ದಾಣ, ಏರ್‌ಪೋರ್ಟ್, ರೈಲ್ವೆ ಬ್ರಿಡ್ಜ್‌ಗಳು, ರಸ್ತೆ, ರಸ್ತೆಬದಿಗಳಲ್ಲಿ, ಸರ್ಕಾರಿ ಬಸ್‌ಗಳು, ವಿದ್ಯುತ್, ಟೆಲಿಪೋನ್ ಕಂಬಗಳು, ಮುನಿಸಿಪಲ್, ಸ್ಥಳೀಯ ಸಂಸ್ಥೆಗಳ ಕಟ್ಟಡ ಸೇರಿದಂತೆ ಇತ್ಯಾದಿಗಳಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಒಳಪಡುವಂತಹ ಗೋಡೆಬರಹಗಳು, ಪೋಸ್ಟರ್‌ಗಳು, ಬ್ಯಾನರ್, ಕಟೌಟ್, ಹೋಲ್ಡಿಂಗ್ಸ್, ಫ್ಲಕ್ಸ್ ಇತ್ಯಾದಿ ತೆರವುಗೊಳಿಸಲು ಕ್ರಮವಹಿಸಲಾಗುವುದು. ಜನಪ್ರತಿನಿಧಿಗಳು ಬಳಸುವ ಸರ್ಕಾರಿ ವಾಹನಗಳನ್ನು ವಾಪಸ್ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದರು.

ಸರ್ಕಾರಿ ವೆಬ್‌ಸೈಟ್‌ನಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ ತಕ್ಷಣದಿಂದಲೇ ಯಾವುದೇ ರಾಜಕೀಯ ವ್ಯಕ್ತಿಗಳು, ಮಂತ್ರಿಗಳು, ರಾಜಕೀಯ ಪಕ್ಷದವರ ಭಾವಚಿತ್ರ ಇರುವುದನ್ನು ನಿಷೇಧಿಸಲಾಗಿದೆ. ವೇಳಾಪಟ್ಟಿ ಪ್ರಕಟಿಸಿದ ತಕ್ಷಣ ಸರ್ಕಾರಿ ವೆಬ್‌ಸೈಟ್‌ನಲ್ಲಿರುವ ಮಂತ್ರಿಗಳ ಭಾವಚಿತ್ರ ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.

ಸ್ಥಳದಿಂದಲೇ ದೂರು ಸಲ್ಲಿಸಬಹುದು: ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದರೆ ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕ ಸ್ಥಳದಿಂದಲೇ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ. ನಾಗರಿಕರ ಅನುಕೂಲಕ್ಕಾಗಿ ಆನ್‌ಲೈನ್ ಮೊಬೈಲ್ ತಂತ್ರಾಂಶವೊಂದನ್ನು ಚುನಾವಣಾ ಆಯೋಗ ಹೊರತಂದಿದ್ದು, ಇದರ ಮೂಲಕ ಜನರು ಮಾದರಿ ನೀತಿ ಸಂಹಿತೆ ಹಾಗೂ ಚುನಾವಣಾ ವೆಚ್ಚದ ಉಲ್ಲಂಘನೆ ಬಗ್ಗೆ ತಾವಿರುವ ಸ್ಥಳದಿಂದಲೇ ದೂರು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಹಾಯವಾಣಿ ಸ್ಥಾಪನೆ
ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಮತದಾರರ ಸಹಾಯವಾಣಿ ಕೇಂದ್ರ ಪ್ರಾರಂಭವಾಗಿದ್ದು, ಮೂರು ಪಾಳಿಯಲ್ಲಿ 24ಗಂಟೆಯೂ ಕಾರ್ಯ ನಿರ್ವಹಿಸಲಿದೆ. ಸಾರ್ವಜನಿಕರು 1950 ಉಚಿತ ದೂರವಾಣಿಗೆ ಕರೆ ಮಾಡಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಅವಶ್ಯಕ ಮಾಹಿತಿ ಪಡೆಯಬಹುದಾಗಿದೆ. ಅಲ್ಲದೆ, ದೂರುಗಳನ್ನು ನೀಡಲು ಸಹ ಅವಕಾಶ ನೀಡಲಾಗಿದ್ದು, ಎಲ್ಲ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ದೂರವಾಣಿ ಸಂಖ್ಯೆಗಳನ್ನು ನೀಡಲಾಗಿದೆ ಎಂದು ಹೇಳಿದರು.
ವಿಧಾನಸಭಾ ಕ್ಷೇತ್ರದ ಹೆಸರು ಕಚೇರಿ ದೂರವಾಣಿ ಸಂಖ್ಯೆ
ಪಿರಿಯಾಪಟ್ಟಣ ತಾಲೂಕು ಕಚೇರಿ 08223-274175
ಕೆ.ಆರ್.ನಗರ ತಾಲೂಕು ಕಚೇರಿ 02223- 262371, 08223 262234
ಹುಣಸೂರು ತಾಲೂಕು ಕಚೇರಿ 08228 255325
ನಂಜನಗೂಡು ತಾಲೂಕು ಕಚೇರಿ 08221-223108
ಚಾಮುಂಡೇಶ್ವರಿ ತಾಲೂಕು ಕಚೇರಿ 0821-2414811/12
ಕೃಷ್ಣರಾಜ, ಚಾಮರಾಜ, ನರಸಿಂಹರಾಜ ನಗರಪಾಲಿಕೆ ಕಚೇರಿ 0821-2418800
ವರುಣ ತಾಲೂಕು ಕಚೇರಿ 08221- 223108
ತಿ.ನರಸೀಪುರ ತಾಲೂಕು ಕಚೇರಿ 08227- 260210