ಗಡಿಯಲ್ಲಿ ನಾಡಪ್ರೇಮ ಜಾಗೃತಿಗೆ ‘ಕನ್ನುಡಿ’ ಅನುಷ್ಠಾನ

ಬೆಳಗಾವಿ: ಸಾರ್ವಜನಿಕ ಶಿಕ್ಷಣ ಇಲಾಖೆಯು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯಲ್ಲಿ ‘ಕನ್ನುಡಿ’ ಎಂಬ ವಿಶಿಷ್ಟ ಶೈಕ್ಷಣಿಕ ಕಾರ್ಯಕ್ರಮ ಅನುಷ್ಠಾನಗೊಳಿಸಲು ಮುಂದಾಗಿದೆ. ಗಡಿಭಾಗದ ವಿದ್ಯಾರ್ಥಿಗಳಲ್ಲಿ ನಾಡಪ್ರೇಮ ಜಾಗೃತಿ ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಸೇರಿ 500ಕ್ಕೂ ಅಧಿಕ ಪ್ರೌಢಶಾಲೆಗಳಿವೆ. ಪ್ರತಿ ಶಾಲೆಯಲ್ಲಿ ಕನ್ನಡ ಸಂಘ ರಚಿಸಲಾಗಿದೆ. ಈ ಸಂಘಗಳ ಮೂಲಕ ಪ್ರತಿವರ್ಷ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಬಾರಿ ಆಯಾ ಶಾಲೆಯಲ್ಲಿ ಸಂಘಗಳನ್ನು ಇನ್ನಷ್ಟು ಕ್ರಿಯಾಶೀಲಗೊಳಿಸಿ, ‘ಕನ್ನುಡಿ’ (ಕನ್ನಡ ನುಡಿ) ಶೀರ್ಷಿಕೆಯಡಿ ವಿದ್ಯಾರ್ಥಿಗಳ ಸಹಭಾಗಿತ್ವ ಹೆಚ್ಚಿಸಲು ಯೋಜನೆ ರೂಪಿಸಿದ್ದೇವೆ. ಇಂಥದೊಂದು ವಿನೂತನ ಕಾರ್ಯಕ್ರಮ ನಾಡಪ್ರೇಮ ಜಾಗೃತಿಯಲ್ಲಿ ಮಹತ್ತರ ಪಾತ್ರ ವಹಿಸಲಿದೆ ಎಂದು ಚಿಕ್ಕೋಡಿ ಡಿಡಿಪಿಐ ಎಂ.ಜಿ.ದಾಸರ ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ಸಂಘ ರಚನೆ ಹೇಗೆ?

ಪ್ರತಿ ಪ್ರೌಢಶಾಲೆಯಲ್ಲಿ ಕನ್ನಡ ಸಂಘ ರಚಿಸಲಾಗುತ್ತಿದೆ. ಈ ಸಂಘದಲ್ಲಿ ಕನ್ನಡ ವಿಷಯ ಬೋಧಕರು, ಸಾಮಾಜಿಕ ಕಾರ್ಯಕರ್ತರು, ಗಣ್ಯರು, ವಿದ್ಯಾರ್ಥಿಗಳು ಹಾಗೂ ಆಸಕ್ತ ಇತರೆ ಶಿಕ್ಷಕರು ಪದಾಧಿಕಾರಿಯಾಗಿರುತ್ತಾರೆ. ಕನ್ನಡ ಶಿಕ್ಷಕ ಸಂಘದ ಕಾರ್ಯದರ್ಶಿ. ಮುಖ್ಯಾಧ್ಯಾಪಕ ಅಧ್ಯಕ್ಷರಾಗಿರುತ್ತಾರೆ. ಸಂಘದ ವತಿಯಿಂದ ಪ್ರತಿ 15 ದಿನಗಳಿಗೆ ಒಮ್ಮೆ ಒಂದೊಂದು ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಯಾವ್ಯಾವ ಸ್ಪರ್ಧೆ?

ಕನ್ನಡ ನಾಡು ನುಡಿಗೆ ಸಂಬಂಧಿತ ನಿಬಂಧ, ರಂಗೋಲಿ, ಭಾಷಣ ಸ್ಪರ್ಧೆ, ಕನ್ನಡ ಭಿತ್ತಿ ಫಲಕ ಪ್ರದರ್ಶನ, ಕವಿಗಳು, ಸಾಹಿತಿಗಳು ಹಾಗೂ ಬರಹಗಾರರ ಸಂವಾದ, ಕನ್ನಡ ಗಟ್ಟಿಗೊಳಿಸುವ ವಿಚಾರವಾಗಿ ವಿಚಾರ ಸಂಕಿರಣ, ಕಾರ್ಯಗಾರ ಹಾಗೂ ಉಪನ್ಯಾಸ ಕಾರ್ಯಕ್ರಮ ನಡೆಯಲಿವೆ. ಇವೆಲ್ಲ ಕಾರ್ಯಕ್ರಮಗಳು ಪಠ್ಯ ಕಲಿಕೆಗೆ ಪೂರಕವಾಗಿರುತ್ತವೆ ಎಂದು ದಾಸರ ತಿಳಿಸುತ್ತಾರೆ.
ಜುಲೈ ತಿಂಗಳಿನಿಂದಲೇ ಎಲ್ಲ ಪ್ರೌಢಶಾಲೆಗಳಲ್ಲಿ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ಸಿಗಲಿದೆ. ಅದರಲ್ಲೂ ಗಡಿನಾಡಿನಲ್ಲಿ ಕನ್ನಡ-ಮರಾಠಿ ಸಂಸ್ಕೃತಿ ಮೇಳೈಸಿದ್ದು, ಇಲ್ಲಿ ಕನ್ನಡ ಡಿಂಡಿಮ ಮೊಳಗಿಸಬೇಕು ಎಂಬುದು ಅಧಿಕಾರಿಗಳ ನಿಲುವಾಗಿದೆ.

ಗಡಿಭಾಗದ ಪ್ರೌಢಶಾಲೆ ಮಕ್ಕಳಲ್ಲಿ ಕನ್ನಡ ಪ್ರೇಮ ಬೆಳೆಸುವುದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉದ್ದೇಶವಾಗಿದೆ. ಹಾಗಾಗಿ, ಕನ್ನುಡಿ ಎಂಬ ಶೈಕ್ಷಣಿಕ ಕಾರ್ಯಕ್ರಮ ಜಾರಿಗೊಳಿಸಲು ಯೋಜಿಸಲಾಗಿದ್ದು, ಎಲ್ಲ ಪ್ರೌಢಶಾಲೆಗಳಲ್ಲಿ ಸಮರ್ಪಕ ಅನುಷ್ಠಾನಕ್ಕೆ ಮುಖ್ಯಾಧ್ಯಾಪಕರನ್ನು ಕೋರಿದ್ದೇವೆ. ಅವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಕಾರ್ಯಕ್ರಮದ ಅಂಶಗಳು ಇನ್ನೂ ಅಂತಿಮಗೊಂಡಿಲ್ಲ.
ಎಂ.ಜಿ.ದಾಸರ ಡಿಡಿಪಿಐ, ಚಿಕ್ಕೋಡಿ

ಇಮಾಮ್‌ಹುಸೇನ್ ಗೂಡುನವರ್