ಇಡೀ ಎನ್​ಡಿಎ ಬಿಹಾರದಲ್ಲಿದ್ದರೂ, ಹುತಾತ್ಮ ಯೋಧನ ಪಾರ್ಥಿವ ಶರೀರ ಬರಮಾಡಿಕೊಳ್ಳಲು ಯಾವ ನಾಯಕರೂ ಬರಲಿಲ್ಲ

ಪಟನಾ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯ ವೇಳೆ ಮಡಿದ ಬಿಹಾರ ಮೂಲದ ಸಿಆರ್​ಪಿಎಫ್​ ಇನ್ಸ್​ಪೆಕ್ಟರ್​ ಪಿಂಟು ಕುಮಾರ್​ ಸಿಂಗ್​ ಅವರ ಪಾರ್ಥಿವ ಶರೀರವನ್ನು ಪಟನಾ ವಿಮಾನ ನಿಲ್ದಾಣಕ್ಕೆ ಹೊತ್ತು ತರಲಾಗಿದ್ದರೂ, ಸಿಎಂ ಅವರಿಂದ ಹಿಡಿದು ಸರ್ಕಾರದ ಯಾವೊಬ್ಬ ಪ್ರತಿನಿಧಿಯೂ ಬಾರದ ಪ್ರಸಂಗ ನಡೆದಿದೆ.

ಅಲ್ಲದೆ, ಇಂದು ಬಿಹಾರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಂಕಲ್ಪ ಯಾತ್ರೆ ನಡೆಯುತ್ತಿದ್ದು, ಇಡೀ ಎನ್​ಡಿಎ ಮೈತ್ರಿ ಕೂಟದ ನಾಯಕರೂ ಅಲ್ಲಿ ಬೀಡು ಬಿಟ್ಟಿದ್ದಾರೆ. ಆದರೂ, ಎನ್​ಡಿಎಯ ಯಾವೊಬ್ಬ ನಾಯಕರೂ ಯೋಧನ ಪಾರ್ಥಿವ ಶರೀರ ಸ್ವೀಕರಿಸಲು ಆಗಮಿಸಿಲ್ಲ.

ಆದರೆ, ಜಿಲ್ಲಾಧಿಕಾರಿ ಕುಮಾರ್​ ರವಿ, ಹಿರಿಯ ಪೊಲೀಸ್​ ಅಧಿಕಾರಿ ಗರಿಮಾ ಮಲ್ಲಿಕ್​, ಸಿಆರ್​ಪಿಎಫ್​ನ ಅಧಿಕಾರಿಗಳು, ರಾಜ್ಯ ಕಾಂಗ್ರೆಸ್​ ಅಧ್ಯಕ್ಷ ಮದನ್​ ಮೋಹನ್​ ಜಾ, ಲೋಕ ಜನಶಕ್ತಿ ಪಕ್ಷದ ಚೌದ್ರಿ ಮೆಹಬೂಬ್​ ಅಲಿ ಕೈಸರ್​ ಪಟನಾ ಏರ್​ಪೋರ್ಟ್​ ಆಗಮಿಸಿ, ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದರು.

ಈ ವೇಳೆ ಮಾತನಾಡಿರುವ ಯೋಧ ಸಿಂಗ್​ ಅವರ ಸೋದರ ಸಂಬಂಧಿ, ” ರಾಜ್ಯದ ಯೋಧನೊಬ್ಬನ ಪಾರ್ಥಿವ ಶರೀರ ರಾಜ್ಯಕ್ಕೆ ಬರುತ್ತಿದ್ದರೂ, ಅದರ ಮುಖ್ಯಮಂತ್ರಿ ತಲೆಕೆಡಿಸಿಕೊಂಡಿಲ್ಲ. ಇದು ಅತ್ಯಂತ ದುರದೃಷ್ಟಕರ,” ಎಂದು ಹೇಳಿದ್ದಾರೆ.

ಈ ವೇಳೆ ಹಾಜರಿದ್ದ ಬಿಹಾರ ಕಾಂಗ್ರೆಸ್​ನ ಅಧ್ಯಕ್ಷ ಮದನ್​ ಮೋಹನ್​, ” ನಾನು ಇಲ್ಲಿ ರಾಜಕೀಯ ಮಾಡಲು ಬಂದಿಲ್ಲ. ಕುಪ್ವಾರದಲ್ಲಿ ಮಡಿದ ಪಿಂಟು ಕುಮಾರ್​ ನಮ್ಮ ರಾಜ್ಯದ ಯೋಧ. ಅವರಿಗೆ ಗೌರವ ಸಲ್ಲಿಸಲಷ್ಟೇ ಇಲ್ಲಿಗೆ ಬಂದಿದ್ದೇನೆ,” ಎಂದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಪಟಣಾದಲ್ಲಿ ಮೋದಿ ನೇತೃತ್ವದಲ್ಲಿ ವಿಜಯ ಸಂಕಲ್ಪ ಯಾತ್ರೆ ಆಯೋಜನೆಗೊಂಡಿದೆ. ಇದಲ್ಲಿ ಬಿಜೆಪಿ ಮತ್ತು ಜೆಡಿಯುನ ಎಲ್ಲ ನಾಯಕರು ಭಾಗವಹಿಸುತ್ತಿದ್ದಾರೆ.