ಮಸೂದ್​ ಅಜರ್​ ವಿಚಾರದಲ್ಲಿ ಚೀನಾದೊಂದಿಗೆ ತಾಳ್ಮೆಯಿಂದಿರಲು ಭಾರತ ನಿರ್ಧಾರ

ನವದೆಹಲಿ: ಜೈಷ್​ ಎ ಮೊಹಮದ್​ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್​ ಅಜರ್​ನನ್ನು ಜಾಗತಿಕ ಉಗ್ರಗಾಮಿಯ ಪಟ್ಟಿಗೆ ಸೇರಿಸಬೇಕೆಂಬ ಭಾರತದ ಪ್ರಸ್ತಾವನೆಯನ್ನು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಚೀನಾ ವಿರೋಧಿಸಿರುವ ಹಿನ್ನೆಲೆಯಲ್ಲಿ ಆ ದೇಶದೊಂದಿಗೆ ಕೆಲ ಕಾಲ ತಾಳ್ಮೆಯಿಂದ ನಡೆದುಕೊಳ್ಳಲು ಭಾರತ ನಿರ್ಧರಿಸಿದೆ.

ಈ ಕುರಿತು ಸರ್ಕಾರದ ಮೂಲಗಳ ಮಾಹಿತಿ ಉಲ್ಲೇಖಿಸಿ ರಾಷ್ಟ್ರೀಯ ಸುದ್ದಿ ವಾಹಿನಿಗಳು ವರದಿ ಮಾಡಿವೆ. ” ಮಸೂದ್​ ಅಜರ್​ನನ್ನು ಜಾಗತಿಕ ಉಗ್ರಗಾಮಿ ಪಟ್ಟಿಗೆ ಸೇರಿಸುವ ಕುರಿತು ಚೀನಾ ಪಾಕಿಸ್ತಾನದೊಂದಿಗೆ ಕೆಲವು ವಿಚಾರಗಳನ್ನು ಬಗೆಹರಿಸಿಕೊಳ್ಳಬೇಕಾಗಿದೆ. ಹೀಗಾಗಿ ಅಲ್ಲಿಯವರೆಗೆ ಭಾರತ ತಾಳ್ಮೆ ಮತ್ತು ಎಚ್ಚರಿಕೆಯಿಂದ ವಿಶ್ವಾಸವಿಟ್ಟುಕೊಂಡಿರಲು ನಿರ್ಧಾರ ಮಾಡಿದೆ,” ಎಂದು ಹೇಳಲಾಗಿದೆ.

ಮಸೂದ್​ನನ್ನು ಉಗ್ರರ ಪಟ್ಟಿಗೆ ಸೇರಿಸುವ ಪ್ರಸ್ತಾವನೆಯನ್ನು ವಿಶ್ವ ಸಂಸ್ಥೆಯ 15 ರಾಷ್ಟ್ರಗಳ ಪೈಕಿ 14 ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ. ಆದರೆ, ಚೀನಾ ವಿರೋಧಿಸಿದೆ. ಅಲ್ಲದೆ, ಭದ್ರತಾ ಮಂಡಳಿಯ ಏಳು ರಾಷ್ಟ್ರಗಳೂ ಭಾರತದ ಪ್ರಸ್ತಾವನೆಯನ್ನು ಒಪ್ಪಿಕೊಂಡಿವೆ. ಇನ್ನು ಆರು ತಿಂಗಳಲ್ಲಿ ಭಾರತದ ಪ್ರಸ್ತಾವ ಮರಳಿ ಭದ್ರತಾ ಮಂಡಳಿಯ ಎದುರು ಬರಲಿದೆ. ಅಲ್ಲಿಯವರೆಗೆ ಭಾರತ ತಾಳ್ಮೆಯಿಂದಿ ವರ್ತಿಸಲಿದೆ. ಅಲ್ಲದೆ, ಭದ್ರತಾ ಮಂಡಳಿಯ ಎಲ್ಲ ಸದಸ್ಯ ರಾಷ್ಟ್ರಗಳಿಗೂ ಮಸೂದ್​ ಕುರಿತು ಹೆಚ್ಚಿನ ಮಾಹಿತಿ ಒದಗಿಸಲು ಭಾರತ ತೀರ್ಮಾನ ಕೈಗೊಂಡಿದೆ.

ಇದಿಷ್ಟೇ ಅಲ್ಲದೆ, ಜೈಷ್​ ಸಂಘಟನೆಗೆ ಪಾಕಿಸ್ತಾನವು ಹೇಗೆ ನೆರವು ನೀಡುತ್ತಿದೆ ಮತ್ತು ಉಗ್ರ ನಿಗ್ರಹದ ಸೂಚನೆಗಳನ್ನು ಅದು ಹೇಗೆ ನಿರ್ಲಕ್ಷಿಸುತ್ತಿದೆ ಎಂಬುದನ್ನು ಜಾಗತಿಕ ಆರ್ಥಿಕ ಕಾವಲು ಪಡೆಗೆ ಮನವರಿಕೆ ಮಾಡಿಕೊಡುವತ್ತ ಭಾರತ ಹೆಜ್ಜೆ ಇಟ್ಟಿದೆ.