‘ಅಕ್ಕ ಪೆಟ್ರೋಲ್​ ಬೆಲೆ ಏರುತ್ತಲೇ ಇದೆ’ ಎಂದ ಆಟೋ ಚಾಲಕನಿಗೆ ಬಿಜೆಪಿ ಮುಖಂಡನಿಂದ ಹಲ್ಲೆ

ಚೆನ್ನೈ: ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷೆ ತಮಿಳ್​ಸಾಯಿ ಸೌಂದರ್​ರಾಜನ್​ ಅವರು ವರದಿಗಾರರೊಂದಿಗೆ ಮಾತನಾಡುತ್ತಿರುವಾಗಲೇ ಪೆಟ್ರೋಲ್​ ಬೆಲೆ ಏರಿಕೆಯ ಬಗ್ಗೆ ಗಮನಸೆಳೆಯಲು ಮುಂದಾದ ಆಟೋ ಚಾಲಕನೊಬ್ಬನನ್ನು ಬಿಜೆಪಿ ಮುಖಂಡರು ಮಾಧ್ಯಮಗಳ ಎದುರೇ ತಳ್ಳಾಡಿ, ಥಳಿಸಿದ್ದಾರೆ.

ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಹಲ್ಲೆ ದೃಶ್ಯ ಸ್ಥಳೀಯ ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ಅಲ್ಲದೆ, ವಿಡಿಯೋ ಸಾಮಾಜಿಕ ತಾಣಗಳಲ್ಲಿಯೂ ವೈರಲ್​ ಆಗಿದ್ದು, ಬಿಜೆಪಿ ನಾಯಕರ ಈ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.

ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷೆ ತಮಿಳ್​ಸಾಯಿ ಅವರು, ವಿಚಾರವೊಂದರ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಅವರ ಹಿಂದೆ ಪಕ್ಷದ ಮುಖಂಡರು, ಬೆಂಬಲಿಗರು ಸುತ್ತುವರಿದಿದ್ದರು. ಈ ವೇಳೆ ಹಿಂದೆ ಬಂದು ನಿಂತ ಅದಾಗಲೇ ವಯಸ್ಸಾದ ಆಟೋ ಚಾಲಕರೊಬ್ಬರು, ಮಾತಿನ ನಡುವೆಯೇ, ” ಅಕ್ಕಾ, ಪೆಟ್ರೋಲ್​ ಬೆಲೆ ದಿನೇ ದಿನೆ ಏರುತ್ತಲೇ ಇದೆ,” ಎಂದು ಹೇಳಿದರು. ತಮಿಳ್​ಸಾಯಿ ಅವರು ಆ ಆಟೋ ಚಾಲಕನ ಕಡೆ ತಿರುಗಿಯೂ ನೋಡಲಿಲ್ಲವಾದರೂ, ಅಲ್ಲಿಯೇ ಇದ್ದ ಅವರ ಬೆಂಬಲಿರು ಆಟೋ ಚಾಲಕನನ್ನು ದೂರಕ್ಕೆ ತಳ್ಳಿ, ಥಳಿಸಿದರು. ಅದನ್ನು ಕಂಡೂ ಕಾಣದಂತಿದ್ದ ತಮಿಳ್​ಸಾಯಿ ಅವರು, ನಂತರ ವರದಿಗಾರರೊಂದಿಗೆ ಮಾತು ಮುಂದುವರಿಸಿದ್ದರು.

ಈ ಇಡೀ ಘಟನಾವಳಿ ಮಾಧ್ಯಮ ಪ್ರತಿನಿಧಿಗಳ ಎದುರಲ್ಲೇ ನಡೆದಿದೆ.

ಹಲ್ಲೆಗೊಳಗಾದ ಆಟೋ ಚಾಲಕನನ್ನು ಕದಿರ್​ ಎಂದು ಗುರುತಿಸಲಾಗಿದೆ. ಮಾಧ್ಯಮಗಳೊಂದಿಗೂ ಅವರು ಮಾತನಾಡಿದ್ದಾರೆ. ” ತೈಲ ಬೆಲೆ ಏರಿಕೆಯಿಂದ ಆಟೋ ಚಾಲಕರು ತೊಂದರೆ ಅನುಭವಿಸುತ್ತಿರುವ ಬಗ್ಗೆ ನಾನು ತಿಳಿಸಲು ಪ್ರಯತ್ನಿಸಿದೆ. ಆದರೆ, ಅವರು ಕೆಟ್ಟದಾಗಿ ನಡೆದುಕೊಂಡರು. ದಿನದ ಬದುಕು ದೂಡಲು ನಮಗೆ ಕನಿಷ್ಠ 500 ರೂ.ಗಳಾದರೂ ಬೇಕು. ಆದರೆ, ತೈಲ ಬೆಲೆ ಏರುತ್ತಿರುವ ಹಿನ್ನೆಲೆಯಲ್ಲಿ, ಆಟೋ ಬಾಡಿಗೆ ಕೊಟ್ಟು ನಮಗೆ ಉಳಿಯುತ್ತಿರುವುದು ಕೇವಲ 350 ರೂ.ಗಳು ಮಾತ್ರ,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಚೆನ್ನೈನಲ್ಲಿ ಒಂದು ಲೀಟರ್​ ಪೆಟ್ರೋಲ್​ಗೆ 85.31 ರೂ. ನೀಡಬೇಕಾಗಿದ್ದು, ಮಧ್ಯಮ ವರ್ಗ, ಬಡಜನತೆ ಬೆಲೆ ಏರಿಕೆಯಿಂದ ಹೈರಾಣಾಗಿದ್ದಾರೆ.