ಕೂಡ್ಲಿಗಿ: ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಹಾಗೂ ಬಿಸಿಎಂ ಇಲಾಖೆಯಿಂದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜಯಂತಿ ಪೂರ್ವಭಾವಿ ಸಭೆ ನಡೆಯಿತು.
ತಹಸೀಲ್ದಾರ್ ಎಂ.ರೇಣುಕಾ ಮಾತನಾಡಿ, ಡಿ.ದೇವರಾಜ ಅರಸು ಬಡವರು, ಸಾಮಾಜಿಕ ನ್ಯಾಯದ ಪರವಾಗಿ ಇದ್ದರು. ಹಾವನೂರು ಆಯೋಗ ವರದಿ ಜಾರಿಮಾಡಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದ್ದು ಇತಿಹಾಸ. ಆ.20 ರಂದು ಅವರ ಜಯಂತಿ ನಿಮಿತ್ತ ತಾಲೂಕು ಆಡಳಿತ ಹಾಗೂ ಬಿಸಿಎಂ ಇಲಾಖೆಯಿಂದ ಪಟ್ಟಣದ ಗಾಂಧಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕ ಬಳಿ ಅಲಂಕೃತ ವಾಹನದಲ್ಲಿ ಅರಸು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಗುವುದು.
ನಂತರ ಮಂಗಳ ವಾದ್ಯ, ಮೇಳಗಳ ಮೂಲಕ ಮದಕರಿ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಅಂಬೇಡ್ಕರ್ ಭವನ ತಲುಪಲಿದೆ. ಬಳಿಕ ವೇದಿಕೆ ಕಾರ್ಯಕ್ರಮ ನಡೆಯಲಿದೆ. ತಾಲೂಕಿನ ಗಣ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು.
ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದು ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ ಎಂದರು. ಇಇಒ ಪದ್ಮನಾಭ ಕರಣಂ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಿ.ಶಿವರಾಜ್, ಟಿಎಚ್‌ಒ ಡಾ.ಎಸ್.ಪಿ.ಪ್ರದೀಪ್ ಕುಮಾರ್, ಎಸ್ಟಿ ಅಧಿಕಾರಿ ಮೆಹಬೂಬ್ ಬಾಷಾ, ಕಾರ್ಮಿಕ ಇಲಾಖೆ ಅಧಿಕಾರಿ ಮಂಜುಳಾ ವಿಶ್ವನಾಥ, ಅರಣ್ಯ ಅಧಿಕಾರಿ ಬಿ.ಎಸ್.ಮಂಜುನಾಥ, ಶ್ರೀಮತಿ ಅಂಗಡಿ ವೀರಮ್ಮ,ತಿರುಕಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಎನ್.ಕಲ್ಲಪ್ಪ, ಸಿರಬಿ ಅಂಜಿನಪ್ಪ ಇತರರಿದ್ದರು.