2028ರ ಒಲಿಂಪಿಕ್ಸ್​ನಲ್ಲಿ ಅತಿಹೆಚ್ಚು ಪದಕ ಗೆಲ್ಲಲಿದೆ ಭಾರತ: ಕ್ರೀಡಾ ಸಚಿವ ರಾಜವರ್ಧನ ಸಿಂಗ್​ ಭರವಸೆ

ಪಣಜಿ: 2028ರ ಒಲಿಂಪಿಕ್ಸ್​ನಲ್ಲಿ ಭಾರತ ಅತಿಹೆಚ್ಚು ಪದಕಗಳನ್ನು ವಿಜೇತವಾಗುವ ದೇಶಗಳ ಸಾಲಿನಲ್ಲಿ ನಿಲ್ಲಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ ಸಿಂಗ್​ ರಾಥೋಡ್​ ಹೇಳಿದರು.

ಸೆಸಾ ಫುಟ್​ಬಾಲ್​ ಅಕಾಡೆಮಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡುತ್ತ, 2018ರಲ್ಲಿ ಕ್ರೀಡಾ ವಿಭಾಗದಲ್ಲಿ ಹಲವು ಸಾಧನೆಗಳಾಗಿವೆ. ನನಗೆ ಭಾರತದ ಯುವಜನತೆ ಮತ್ತು ಅವರ ಸಾಮರ್ಥ್ಯದ ಮೇಲೆ ಅಪಾರ ನಂಬಿಕೆಯಿದೆ. ಖಂಡಿತ ಜಗತ್ತಿನೆದುರು ಭಾರತದ ಹೆಗ್ಗಳಿಕೆಯನ್ನು ಅವರು ಹೆಚ್ಚಿಸುತ್ತಾರೆ ಎಂದರು.

2020ರಲ್ಲಿ ಟೋಕಿಯೋದಲ್ಲಿ ಒಲಿಂಪಿಕ್ಸ್ ನಡೆಯಲಿದ್ದು ಅದರಲ್ಲಿ ನಾವು ಅತ್ಯುತ್ತಮ ಪ್ರದರ್ಶನ ಕೊಡಲು ಎಲ್ಲ ರೀತಿಯ ಪ್ರಯತ್ನವನ್ನೂ ಮಾಡಬೇಕು. ಆಟವನ್ನು ಪ್ರವೇಶಿಸುವ ಮುನ್ನವೇ ನಾವು ಎಷ್ಟು ಪದಕ ಗೆಲ್ಲುತ್ತೇವೆ ಎಂಬುದನ್ನು ನಿಖರವಾಗಿ ತಿಳಿಯುವಂತಾಗಬೇಕು. ನಾನು 2024 ಮತ್ತು 2028ರ ಒಲಿಂಪಿಕ್ಸ್​​ನತ್ತ ಗುರಿ ನೆಟ್ಟಿದ್ದೇನೆ. ಅದಕ್ಕಾಗಿ ಈಗಿನಿಂದಲೇ ತಯಾರಿ ಶುರುವಾಗಿದೆ. 2028ರಲ್ಲಿ ನಮ್ಮ ದೇಶ ಪದಕ ವಿಜೇತರ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ನಿಲ್ಲಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಭಾರತೀಯ ಆಟಗಾರರು ಇತ್ತೀಚಿನ ವರ್ಷಗಳಲ್ಲಿ ಹಲವು ಕ್ರೀಡೆಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಕಾಮನ್​ವೆಲ್ತ್​, ಏಷಿಯನ್​, ಪ್ಯಾರಾ ಏಷಿಯನ್​, ಯುತ್​ ಒಲಿಂಪಿಕ್ಸ್​ ಗೇಮ್ಸ್​ಗಳಲ್ಲಿ ಹಲವು ಪದಕಗಳನ್ನು ಗೆಲ್ಲುವ ಮೂಲಕ ನಮ್ಮ ದೇಶ ಇತಿಹಾಸ ಸೃಷ್ಟಿಸಿದೆ ಎಂದರು.

ಕ್ರೀಡೆಗಳು ಯುವಜನರ ಪೂರ್ಣ ಸಮಯದ ವೃತ್ತಿಯಾಗಿದೆ. ಕಾಮನ್​ವೆಲ್ತ್​, ಏಷಿಯನ್​ ಗೇಮ್ಸ್​, ಒಲಿಂಪಿಕ್ಸ್​ನಲ್ಲಿ ಹಲವರು ಪದಕಗಳನ್ನು ಗೆದ್ದಿದ್ದಾರೆ. ಅಂಥವರಿಗೆಲ್ಲ ಪ್ರಾಯೋಜಕರು ಇದ್ದಾರೆ. ಒಡಂಬಡಿಕೆಗಳನ್ನು ಮಾಡಿಕೊಳ್ಳುತ್ತಾರೆ. ಹಲವು ಸಂಸ್ಥೆಗಳು ಕ್ರೀಡೆಗಳನ್ನು ಆಯೋಜಿಸುತ್ತಿವೆ. ಸರ್ಕಾರವೂ ಸಹ ಖೇಲೋ ಇಂಡಿಯಾ ಎಂಬ ಘೋಷಾವಾಕ್ಯದಡಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.