ಒಲಿಂಪಿಕ್ ನಮ್ಮ ಮುಂದಿರುವ ಗುರಿ

ವಿಜಯವಾಣಿ ಸುದ್ದಿಜಾಲ ಮಂಗಳೂರು
ನನ್ನ ಏಷ್ಯಾಡ್ ಪದಕದ ಸಾಲಿಗೆ ಮತ್ತೆರಡು ಪದಕ ಸೇರ್ಪಡೆಯಾಗಿದೆ. ಇದಕ್ಕಿಂತ ಸಂತಸ ಬೇರೇನಿದೆ. ಭಾರತೀಯ ತಂಡವೂ ಈ ಬಾರಿ ಉತ್ತಮ ಸಾಧನೆ ಮಾಡಿದೆ. ಖುಷಿಯಿಂದ ತಾಯ್ನಡಿಗೆ ಮರಳಲಿದ್ದೇವೆ..
ಇದು ಏಷ್ಯಾಡ್‌ನ 4*400 ರಿಲೇಯಲ್ಲಿ ಚಿನ್ನ, ಮಿಶ್ರ ರಿಲೆಯಲ್ಲಿ ಬೆಳ್ಳಿ ಗೆದ್ದ ಮಂಗಳೂರಿನ ಹುಡುಗಿ ಎಂ.ಆರ್.ಪೂವಮ್ಮ ಮಾತು.
‘ವಿಜಯವಾಣಿ’ ಜತೆ ಅನುಭವ ಹಂಚಿಕೊಂಡ ಪೂವಮ್ಮ, ಜಕಾರ್ತಾಕ್ಕೆ ಅಗಮಿಸುವ ಮೊದಲು ಜೆಕ್ ಗಣರಾಜ್ಯದಲ್ಲಿ ನಮ್ಮ ತಂಡ ಸುಮಾರು 4 ತಿಂಗಳು ತರಬೇತಿ ಪಡೆದಿತ್ತು. ರಿಲೇಯಲ್ಲಿ ಚಿನ್ನ ಗೆಲ್ಲಲು ಕಠಿಣ ಶ್ರಮ ವಹಿಸಿದ್ದೇವೆ. ನಮ್ಮ ಶ್ರಮ ಕೊನೆಗೂ ಸಾರ್ಥಕವಾಗಿದೆ. ಹಾಗೆಂದು ಇದರಿಂದ ತೃಪ್ತರಾಗುವಂತಿಲ್ಲ. ಮಹತ್ತರ ಸವಾಲು ನಮ್ಮ ಮುಂದಿದೆ. ಒಲಿಂಪಿಕ್ ನಮ್ಮ ಮುಂದಿರುವ ಗುರಿ’ ಎಂದರು.
ಸದ್ಯ ನಮ್ಮ ವಿಭಾಗದ ಸ್ಪಧೆಗಳು ಮುಗಿದಿವೆ. ತಂಡದ ಜತೆ ಸದಸ್ಯರ ಜತೆ ಶಾಪಿಂಗ್ ಮಾಡುತ್ತಿದ್ದೇನೆ. ಸೆ.3ರಂದು ಭಾರತಕ್ಕೆ ಮರಳಲಿದ್ದೇವೆ. ಸೆ.7ರಂದು ಮಂಗಳೂರಿಗೆ ಬರಲಿದ್ದೇನೆ ಎಂದರು ಪೂವಮ್ಮ.
ಹೆಮ್ಮೆ ಇದೆ:ಮನೆಯ ಶೋಕೇಸ್‌ನಲ್ಲಿ ಪೂವಮ್ಮ 2014ರ ಕೊರಿಯಾ ಏಷ್ಯಾಡ್‌ನಲ್ಲಿ ಗೆದ್ದ ಚಿನ್ನ (4*400 ರಿಲೇ) ಮತ್ತು ಕಂಚು (400 ಮೀ.) ಇದೆ. ಈಗ ಮತ್ತೆ ಎರಡು ಪದಕ ಸಹಿತ ಬರುತ್ತಿದ್ದಾಳೆ. ಸಂಸದರು, ಶಾಸಕರು ಸಹಿತ ನೂರಾರು ಮಂದಿ ಫೋನ್ ಮಾಡಿ ಅಭಿನಂದಿಸಿದ್ದಾರೆ. ನಿಜಕ್ಕೂ ನಮಗೆ ಮಗಳ ಬಗ್ಗೆ ಅತೀವ ಹೆಮ್ಮೆ ಅನಿಸುತ್ತಿದೆ ಎಂದು ಪೂವಮ್ಮ ತಂದೆ ರಾಜು ಖುಷಿ ಹಂಚಿಕೊಂಡಿದ್ದಾರೆ.
ಅವಳಿಗೆ ಕಾಲು ನೋವು ಇತ್ತು. ಹಾಗಾಗಿ ನಮಗೆ ಕೊಂಚ ಆತಂಕವಿತ್ತು. ಟಿ.ವಿ.ಯಲ್ಲಿ ರಿಲೇ ತಂಡ ಮೊದಲಿಗೆ ಗುರಿ ಮುಟ್ಟಿದಾಗ ಸಂಭ್ರಮಿಸಿದೆವು. ಫೋನ್ ಕರೆ ಬರಲಾರಂಭಿಸಿತು ಎಂದು ಆ ಕ್ಷಣದ ಅನುಭವ ತಿಳಿಸಿದರು.

ಕೊಡಗು ನೆರೆ ಸಂತ್ರಸ್ತರಿಗೆ ಪದಕ ಅರ್ಪಣೆ:  ಪ್ರತಿದಿನ ಫೋನ್ ಮೂಲಕ ಅಮ್ಮ ಮತ್ತು ಅಪ್ಪನ ಜತೆ ಮಾತನಾಡುತ್ತಿದ್ದೆ. ನನ್ನ ಈ ಹಂತದ ಬೆಳವಣಿಗೆ ಹಿಂದೆ ಅವರ ಪರಿಶ್ರಮವಿದೆ. ನಾನು ಮೂಲತಃ ಕೊಡಗಿನವಳು. ಮಂಗಳೂರು ನನ್ನನ್ನು ಬೆಳೆಸಿದ ಊರು. ಕೊಡಗಿನ ನೆರೆಯ ಬಗ್ಗೆ ಕೇಳುವಾಗ ಮನಸ್ಸಿಗೆ ಅತೀವ ಬೇಸರವಾಗುತ್ತಿತ್ತು. ಗೆದ್ದ ಪದಕವನ್ನು ಕೊಡಗಿನ ಸಂತ್ರಸ್ತರಿಗೆ ಅರ್ಪಿಸಿದ್ದೇನೆ ಎಂದು ಪೂವಮ್ಮ ತಿಳಿಸಿದರು.