ಒಂಟಿಯಾಗಿದ್ದ ಹಿರಿಜೀವಕ್ಕೆ ಸಿಕ್ಕಿತು ನೆರಳಿನಾಸರೆ

ಸಂದೀಪ್ ಸಾಲ್ಯಾನ್ ಬಂಟ್ವಾಳ

ಮನೆಮಂದಿಯನ್ನು ಕಳಕೊಂಡು ಒಂಟಿಯಾಗಿ ಮುರುಕಲು ಗುಡಿಸಲಲ್ಲಿ ವಾಸಿಸುತ್ತಿದ್ದ ಹಿರಿ ಜೀವಕ್ಕೆ ಕುಟುಂಬ ಸಂಘಟನೆ ಸದಸ್ಯರು ಸೇರಿಕೊಂಡು ಶ್ರಮದಾನ ಮೂಲಕ ಮನೆ ಕಟ್ಟಿಕೊಟ್ಟಿದಾರೆ.

ಕಲ್ಲಡ್ಕ ನಿಟಿಲಪುರದ ಪಿಲಿಂಜ ಎಂಬಲ್ಲಿ ಮುರುಕಲು ಮನೆಯಲ್ಲಿ ಜೀವಿಸುತ್ತಿದ್ದ ಧರ್ಣಮಜ್ಜಿ ಜೀವನದಲ್ಲಿ ಮೂಡಿದ ಆಶಾಕಿರಣವಿದು. ಪತಿ ಹಾಗೂ ಎರಡು ಮಂದಿ ಮಕ್ಕಳೊಂದಿಗೆ ಸ್ವಂತ ಮನೆಯಲ್ಲಿ ಜೀವನ ನಡೆಸುತಿದ್ದ ಧರ್ಣಮ್ಮ ಆರಂಭದಲ್ಲಿ 15 ವರ್ಷದ ಮಗಳನ್ನು ಕಳಕೊಳ್ಳುತ್ತಾರೆ. ಮೂರು ವರ್ಷಗಳ ಹಿಂದೆ ಅನಾರೋಗ್ಯ ಪೀಡಿತ ಪತಿ ಮೃತಪಟ್ಟರೆ ಜೀವನಕ್ಕೆ ಆಸರೆಯಾಗಿದ್ದ ಒಬ್ಬ ಮಗನನ್ನು ವರ್ಷದ ಹಿಂದೆ ಕಳಕೊಂಡು ಒಬ್ಬಂಟಿಯಾಗಿದ್ದರು.

ಬದುಕಿಗೆ ಆಸರೆಯಾಗಿದ್ದ ಮರುಕುಲು ಮನೆ ಕುಸಿಯುವ ಹಂತಕ್ಕೆ ತಲುಪಿತ್ತು. ಬಂಟ್ವಾಳ ನಗರ ಠಾಣೆ ಸಿಬ್ಬಂದಿ ನಾಗರಾಜ್ ಹಾಗೂ ಚೆನ್ನಪ್ಪಗೌಡ ಧರ್ಣಮ್ಮಜ್ಜಿ ಮನೆಗೆ ಬಂದಾಗ ಅವರ ಪರಿಸ್ಥಿತಿ ತಿಳಿದುಕೊಂಡು ಎಸೈ ಚಂದ್ರಶೇಖರ್ ಗಮನಕ್ಕೆ ತರುತ್ತಾರೆ. ಧರ್ಣಮ್ಮಜ್ಜಿ ಬದುಕಿಗೆ ಆಸರೆಯಾಗಬೇಕು ಎನ್ನುವ ಸಂಕಲ್ಪತೊಟ್ಟ ಬಂಟ್ವಾಳ ನಗರ ಪೊಲೀಸರು ಕುಟುಂಬ ಸಂಘಟನೆ ನೆರವಿನಲ್ಲಿ ಮನೆ ನಿರ್ಮಿಸಿಕೊಟ್ಟಿದ್ದಾರೆ.

ನೆರವಿಗೆ ಬಂತು ಕುಟುಂಬ: ಸುಮಾರು 50 ಮಂದಿ ಸದಸ್ಯರಿರುವ ಸಮಾನ ಮನಸ್ಕ ಯುವಕರ ತಂಡ ಕುಟುಂಬ. ವರ್ಷಗಳ ಹಿಂದೆಯಷ್ಟೇ ನೆಟ್ಲ ಪರಿಸರದಲ್ಲಿ ಹುಟ್ಟಿಕೊಂಡ ಯುವಕರ ಈ ತಂಡ ಸ್ವಚ್ಛತೆ, ಶ್ರಮದಾನ ಮೂಲಕ ಸಾರ್ವಜನಿಕ ವಲಯದಲ್ಲಿ ಗಮನ ಸೆಳೆದಿತ್ತು. ಧರ್ಣಮಜ್ಜಿಗೆ ಮನೆ ನಿರ್ಮಿಸಿ ಕೊಡಬೇಕೆನ್ನುವ ಬಂಟ್ವಾಳ ಪೊಲೀಸರ ಕನಸಿಗೆ ಸಾಥ್ ನೀಡಿದವರು ಕುಟುಂಬ ಸದಸ್ಯರು. ಕಳೆದ ಮಾಚ್ 23ರಂದು ಧರ್ಣಮಜ್ಜಿಯ ಮನೆ ಕಟ್ಟುವ ಕಾರ್ಯ ಆರಂಭಿಸಿದ ತಂಡದ ಸದಸ್ಯರು ರಾತ್ರಿ ಹಗಲೆನ್ನದೆ ಶ್ರಮದಾನ ನಡೆಸಿದರು. ತಾವೇ ಕಲ್ಲು ಹೊತ್ತು, ಗೋಡೆ ಕಟ್ಟಿ, ಹಂಚಿನ ಛಾವಣಿ ಹಾಕಿ, ಬಣ್ಣ ಬಳಿದು ಭರ್ತಿ ಒಂದು ತಿಂಗಳಿನಲ್ಲಿ ಸುಂದರ ಮನೆ ನಿರ್ಮಿಸಿಕೊಟ್ಟಿದಾರೆ. ಸಾಲಿಯಾನ್ ಸರ್ವಿಸಸ್ ಮಾಲೀಕ ಚಂದ್ರಶೇಖರ, ಗ್ರಾ.ಪಂ.ಸದಸ್ಯ ಗಿರೀಶ್ ಕುಲಾಲ್ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ನಗರ ಪೊಲೀಸರ ಸಹಕಾರದೊಂದಿಗೆ ಸುಂದರ ಮನೆ ನಿರ್ಮಾಣಗೊಂಡಿದೆ. ಗುರುವಾರ ಬೆಳಗ್ಗೆ ಗಣಹೋಮ ಸಹಿತ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಕುಟುಂಬ ಸದಸ್ಯರ ಉಪಸ್ಥಿತಿಯಲ್ಲಿ ಗ್ರಹಪ್ರವೇಶ ಕಾರ್ಯ ನಡೆದಿದೆ. ಮುಂದೇನು ಎಂದು ದಿಕ್ಕು ತೋಚದೆ ಕುಳಿತ್ತಿದ್ದ ಹಿರಿ ಜೀವದ ಬದುಕಿಗೆ ಈಗ ನೆಮ್ಮದಿ ಸಿಕ್ಕಿದೆೆ. ಬಡವೃದ್ದೆ ಸೂರು ನಿರ್ಮಿಸಿಕೊಟ್ಟ ಸಾರ್ಥಕತೆ ಯುವಕರ ಮೊಗದಲ್ಲಿದೆ.

ಊರವರೆಲ್ಲಾ ಸೇರಿ ನನಗೆ ಮನೆ ನಿರ್ಮಿಸಿಕೊಟ್ಟಿದಾರೆ. ಸಾಯಬೇಕೆಂದಿದ್ದವಳನ್ನು ಬದುಕಿಸಿದ್ದಾರೆ. ಅವರ ಋಣ ಮರೆಯುವುದಿಲ್ಲ. ನನಗೆ ಈಗ ನೆಮ್ಮದಿ ಸಿಕ್ಕಿದೆ.
ಧರ್ಣಮ್ಮ.

ಒಬ್ಬಂಟಿ ಮಹಿಳೆ ಧರ್ಣಮ್ಮಜ್ಜಿಗೆ ಸಂಘಟನೆ ಮೂಲಕ ಮನೆ ನಿರ್ಮಿಸಿ ಕೊಡುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದರು. ಒಂದು ತಿಂಗಳ ಹಿಂದೆ45 ಮಂದಿ ಸದಸ್ಯರು ಮನೆ ನಿರ್ಮಾಣ ಮಾಡಿಕೊಟ್ಟಿದ್ದೇವೆ. ಪ್ರಸಕ್ತ ಮನೆ ಗ್ರಹಪ್ರವೇಶವೂ ಆಗಿದೆ.
ಧನಂಜಯ ಗುಂಡಿಮಜಲು, ಅಧ್ಯಕ್ಷರು, ಕುಟುಂಬ ತಂಡ

Leave a Reply

Your email address will not be published. Required fields are marked *