More

    ಬೆಳಗಾವಿ: ಹಳೇ ಸದಸ್ಯತ್ವದ ಅರ್ಜಿಯನ್ನೇ ಸ್ವೀಕರಿಸಿ

    ಬೆಳಗಾವಿ: ಚನ್ನಮ್ಮ ಕಿತ್ತೂರು ತಾಲೂಕಿನ ಪಿಎಲ್‌ಡಿ ಬ್ಯಾಂಕ್ ಸದಸ್ಯತ್ವ ಪಡೆದುಕೊಳ್ಳಲು ಇಚ್ಛಿಸಿದ್ದ ರೈತರ ಹಳೇ ಸದಸ್ಯತ್ವದ ಅರ್ಜಿಯನ್ನು ಸ್ವೀಕರಿಸುವಂತೆ ಆಗ್ರಹಿಸಿ ಬುಧವಾರ ರೈತರು ಪ್ರತಿಭಟಿಸಿದರು. ಪ್ರತಿಭಟನಾನಿರತ ಬಸವರಾಜ ಹುಣಶ್ಯಾಳ ಮಾತನಾಡಿ, ಬೆಳಗಾವಿಯ ಸಂಯುಕ್ತ ನಿಬಂಧಕರ ಆದೇಶದನ್ವಯ 2018ನೇ ಸಾಲಿನಲ್ಲಿ ಈ ಬ್ಯಾಂಕ್‌ನ ಸದಸ್ಯತ್ವ ಪಡೆದುಕೊಳ್ಳುವಂತೆ ಸೂಚಿಸಿದ್ದರು. ರೈತರು ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಲು ಬಂದಿದ್ದರು. ಮುಖ್ಯ ಪ್ರವರ್ತಕರು ಅರ್ಜಿ ಸ್ವೀಕರಿಸಲಿಲ್ಲ. ನಂತರ ಬ್ಯಾಂಕ್‌ಗೆ ಅಲೆದಾಡಿದರೂ ಸಹ ಬ್ಯಾಂಕ್ ಕಚೇರಿ ಬಂದ್ ಮಾಡಲಾಗಿತ್ತು. ರೈತರು ಅಂಚೆ ಮೂಲಕ ಅರ್ಜಿ ಸಲ್ಲಿಸಲು ಯತ್ನಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

    ಬ್ಯಾಂಕ್ ಸದಸ್ಯತ್ವ ಪಡೆದುಕೊಳ್ಳಲು ರೈತರು ಡಿಸಿಸಿ ಬ್ಯಾಂಕಿಗೆ ಹಣ ತುಂಬಿ ಚಲನ್ ಪಡೆದಿದ್ದಾರೆ. ಸದಸ್ಯತ್ವ ಪಡೆದುಕೊಳ್ಳುವ ಅರ್ಜಿಯಲ್ಲಿಯೂ ಚಲನ್ ನಂಬರ್ ದಾಖಲಿಸುವ ಜತೆಗೆ ಅವಶ್ಯ ದಾಖಲೆ ನೀಡಿದ್ದಾರೆ. ಆದರೆ ಈಗಾಗಲೇ ತುಂಬಿರುವ ಅರ್ಜಿಯನ್ನು ಕೈಬಿಟ್ಟು ಮಾಹಿತಿ ನೀಡದೆ ಹೊಸ ನಮೂನೆಯ ಅರ್ಜಿ ಸಲ್ಲಿಸುವಂತೆ ತಿಳಿಸುತ್ತಿರುವುದು ಸರಿ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯ ಪ್ರವರ್ತಕ ಬಸವರಾಜ ಕುಗಟಿ ಮಾತನಾಡಿ, ನ್ಯಾಯಾಲಯದ ಆದೇಶದಂತೆ ಸದಸ್ಯತ್ವಕ್ಕೆ ಅರ್ಜಿ ಪಡೆದುಕೊಳ್ಳುತ್ತಿದ್ದೇವೆ. ಈಗಾಗಲೇ ನೂರಾರು ಅರ್ಜಿ ಸ್ವಿಕರಿಸಿದ್ದೇವೆ. ಈ ಎಲ್ಲ ಅರ್ಜಿಗಳನ್ನು ಮುಂಬರುವ ಆಡಳಿತ ಮಂಡಳಿ ಗಮನಕ್ಕೆ ತರುತ್ತೇವೆ. ಸದಸ್ಯತ್ವವನ್ನು ಆಡಳಿತ ಮಂಡಳಿಯೇ ಅಂತಿಮಗೊಳಿಸುತ್ತದೆ ಎಂದು ಉತ್ತರ ನೀಡಿದರು. ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಸಂದೀಪ ದೇಶಪಾಂಡೆ, ಬಸವರಾಜ ಮಾಂತನವರ, ಶಾಂತಪ್ಪ ದೇಗಲೊಳ್ಳಿ, ಈರಪ್ಪ ಹೈಬತ್ತಿ, ಮುದಕಪ್ಪ ಸಕ್ರೆನ್ನವರ, ಬಸವರಾಜ ತಳವಾರ, ಭೀಮಸೇನ ಮುತ್ತೆನ್ನವರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts