ಹಳೇ ಬೋರ್ ಮರೆತ ಮಂಗಳೂರು ಮಹಾನಗರಪಾಲಿಕೆ

– ವಿಜಯವಾಣಿ ಸುದ್ದಿಜಾಲ ಮಂಗಳೂರು
ಕುಡಿಯುವ ನೀರಿಗಾಗಿ ಮಹಾನಗರ ವ್ಯಾಪ್ತಿಯಲ್ಲಿ ಮೂರು ವರ್ಷ ಹಿಂದೆ ಕೊರೆಯಲಾದ 35ಕ್ಕೂ ಅಧಿಕ ಕೊಳವೆ ಬಾವಿಗಳು ವ್ಯರ್ಥವಾಗುತ್ತಿವೆ. ಬೋರ್‌ವೆಲ್ ಕೊರೆದ ನಂತರ ಅದರ ಉಸಾಬರಿಗೆ ಹೋಗದ ಕಾರಣ ಉಪ್ಪು, ಮಡ್ಡಿ ನೀರು ತುಂಬಿ ನಿರುಪಯುಕ್ತವಾಗಿವೆ.
ಇದು ಮಂಗಳೂರು ಮಹಾನಗರಪಾಲಿಕೆ ವತಿಯಿಂದ 2016ರಲ್ಲಿ ಕೊರೆಯಲಾದ ಬಹುತೇಕ ಕೊಳವೆ ಬಾವಿಗಳ ಸ್ಥಿತಿ. ಜನರ ತೆರಿಗೆ ಹಣವನ್ನು ಹೇಗೆ ಪೋಲು ಮಾಡಬಹುದು ಎಂದು ಮಂಗಳೂರು ಮಹಾನಗರ ಪಾಲಿಕೆ ತೋರಿಸಿಕೊಟ್ಟಿರುವ ರೀತಿ.
2016ರಲ್ಲಿ ನಗರ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸಿದಾಗ 50.36 ಲಕ್ಷ ರೂ. ವೆಚ್ಚದಲ್ಲಿ ಪಾಲಿಕೆ ಬೇಕಾಬಿಟ್ಟಿಯಾಗಿ 46 ಕೊಳವೆ ಬಾವಿಗಳನ್ನು ಕೊರೆಸಿತ್ತು. ಆರು ಕೊಳವೆ ಬಾವಿಗಳು ಆಗಲೇ ನೀರು ಸಿಗದೆ ವ್ಯರ್ಥವಾಗಿದ್ದವು. 35 ಈಗ ಉಪಯೋಗವಿಲ್ಲದೆ ವ್ಯರ್ಥವಾಗುತ್ತಿವೆ. ಈ ಬೋರ್‌ವೆಲ್‌ಗಳಲ್ಲಿ ಉಪ್ಪು-ಮಡ್ಡಿ ನೀರು ತುಂಬಿದೆ. ಉಳಿದ ಐದು ಬೋರ್‌ವೆಲ್‌ಗಳಲ್ಲಿ ನೀರು ಕ್ಷೀಣವಾಗಿದೆ.

ಮರೆತ ಮನಪಾ: 2016ರಲ್ಲಿ ನೀರಿನ ಸಮಸ್ಯೆ ತೀವ್ರವಾದಾಗ ಬೋರ್‌ವೆಲ್ ಕೊರೆದರೂ, ಆ ಹೊತ್ತಿಗೆ ಮಳೆ ಆರಂಭವಾಗಿ ನೀರಿನ ಸಮಸ್ಯೆ ಪರಿಹಾರ ಕಂಡಿತ್ತು. ಆದರೆ ಆ ಬೋರ್‌ವೆಲ್‌ಗಳನ್ನು ನಂತರ ಬಳಸುವ ಗೋಜಿಗೆ ಮನಪಾ ಹೋಗಿಲ್ಲ. ಅಧಿಕಾರಿಗಳು, ಕಾರ್ಪೊರೇಟರ್‌ಗಳು ಮರೆತೇ ಬಿಟ್ಟರು. ಪರಿಣಾಮ ಶೇ.90ರಷ್ಟು ಬೋರ್‌ವೆಲ್‌ಗಳು ನಿಷ್ಪ್ರಯೋಜಕವಾಗಿವೆ.
ಈ ವರ್ಷ ಜಲಕ್ಷಾಮವೆಂದು ಆ ಬೋರ್‌ವೆಲ್‌ಗಳನ್ನು ಪರಿಶೀಸಿದಾಗ ನಿರ್ವಹಣೆ ಇಲ್ಲದೆ ನಿರ್ಜೀವ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಸಮರ್ಪಕವಾಗಿರುವ ಕೊಳವೆ ಬಾವಿಗಳಲ್ಲಿ ಉಪ್ಪು, ಮಡ್ಡಿ ನೀರು ಬರುತ್ತಿದೆ. ಕೆಲವು ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ, ಪೈಪ್‌ಗಳು ಕಡಿದು ಹೋಗಿದೆ. ಕಬ್ಬಿಣದ ಪೈಪ್‌ಗೆ ತುಕ್ಕು ಹಿಡಿದಿದೆ, ಪಂಪ್‌ಗಳು ಕೆಟ್ಟು ಹೋಗಿವೆ.
ಈ ಬೋರ್‌ವೆಲ್‌ಗಳನ್ನು ಸ್ವಚ್ಛ ಮಾಡಿದರೆ ಇನ್ನೂ ಬಳಸಲು ಅವಕಾಶವಿದೆ. ಆದರೂ ಅದರ ದುರಸ್ತಿಗೆ ಅಧಿಕಾರಿಗಳು ಮನಸ್ಸು ಮಾಡಿಲ್ಲ. ಬದಲಿಗೆ ಮತ್ತೆ ಹೊಸದಾಗಿ ಬೋರ್‌ವೆಲ್‌ಗಳನ್ನು ಕೊರೆಸಲು ಹೊರಟಿದ್ದಾರೆ.

ಬೋರ್‌ವೆಲ್ ಹೇಗಿವೆ?:  ಹೊಗೆಬೈಲ್‌ನ ಈರಿ ಆದಿ ಶ್ರೀ ಕೋರ‌್ದಬ್ಬು ದೈವಸ್ಥಾನದ ಎದುರಿನ ಕೊಳವೆ ಬಾವಿಯಲ್ಲಿ ಉಪ್ಪು ನೀರು ಬರುತ್ತಿದೆ. ಅಶೋಕನಗರದ ಕೊಳವೆ ಬಾವಿಯಲ್ಲಿ ಮಡ್ಡಿ ನೀರು ತುಂಬಿದೆ. ಇದರಿಂದ ಎರಡು ದಿನ ಹಿಂದೆ ಪೂರೈಕೆ ಮಾಡಿದ್ದ ನೀರು ಕಲ್ಮಶದಿಂದ ಕೂಡಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ಉರ್ವಸ್ಟೋರ್ ಬಳಿ ಬೋರ್‌ವೆಲ್‌ನಲ್ಲಿ ನೀರು ಪಂಪ್ ಆಗುತ್ತಿಲ್ಲ. ಬಿಜೈ ನ್ಯೂ ರೋಡ್‌ನ ಬೋರ್‌ಗೆ ಪಂಪ್ ಅಳವಡಿಸದೆ ಮುಚ್ಚಳ ಹಾಕಿ ಇಡಲಾಗಿದ್ದು, ಉಪಯೋಗವೇ ಮಾಡಿಲ್ಲ. ಬಹುತೇಕ ಕೊಳವೆ ಬಾವಿಗಳ ಸ್ಥಿತಿ ಇದೇ ರೀತಿ ಇದೆ.
ಹೊಸಬೆಟ್ಟು ವಾರ್ಡ್‌ನ ಕೊಳವೆ ಬಾವಿ ಸಮರ್ಪಕವಾಗಿದೆ. ಗಣೇಶ್ ಹೊಸಬೆಟ್ಟು ವಿಶೇಷ ಅನುದಾನದಲ್ಲಿ ಇದನ್ನು ಕೊರೆಸಿದ್ದು ಈಗಲೂ ಶುದ್ಧ ನೀರು ಲಭಿಸುತ್ತಿದೆ. ವಾರ್ಡ್‌ನಲ್ಲಿ ಅವಶ್ಯ ಇರುವಲ್ಲಿಗೆ ಪೂರೈಕೆ ಮಾಡಲಾಗುತ್ತಿದೆ. ಸುರತ್ಕಲ್‌ನ ಕುಕ್ಕಾಡಿ ಮತ್ತು ಚೊಕ್ಕಬೆಟ್ಟುನಲ್ಲಿರುವ ಕೊಳವೆ ಬಾವಿಗಳು ವ್ಯವಸ್ಥಿತವಾಗಿದ್ದರೂ ನೀರು ಕಡಿಮೆಯಾಗಿದೆ. ಈ ಭಾಗದ ಜನರಿಗೆ ನಿರಂತರ ನೀರು ಸಿಗುತ್ತಿಲ್ಲ.
ಸುರತ್ಕಲ್, ವಾಮಂಜೂರು ಭಾಗದಲ್ಲಿ ಹೆಚ್ಚಿನ ಬೋರ್‌ವೆಲ್ ಕೊರೆಯಲಾಗಿದೆ. ಸರಿಯಾದ ಯೋಜನೆ ಇಲ್ಲದೆ ಸಮುದ್ರದ ಬಳಿ ಕೊಳವೆ ಬಾವಿಗಳನ್ನು ಕೊರೆದ ಪರಿಣಾಮ ಅದರಲ್ಲಿ ಉಪ್ಪು ನೀರು ತುಂಬಿದೆ. ಒಳಚರಂಡಿ ನೀರು ಸೇರಿ ಕುಡಿಯಲು ಅಯೋಗ್ಯವಾಗಿದೆ.

ಹೊಸದಾಗಿ ನಾಲ್ಕು ಕಡೆ: ಪಾಲಿಕೆ ಅಂಕಿ ಅಂಶಗಳ ಪ್ರಕಾರ ನಗರದಲ್ಲಿ ಒಟ್ಟು 136 ಕೊಳವೆ ಬಾವಿಗಳು ಇವೆ. ಹೆಚ್ಚಿನ ಕೊಳವೆ ಬಾವಿಗಳಿಂದ ಸಾರ್ವಜನಿಕರಿಗೆ ನೀರು ಪೂರೈಕೆ ಮಾಡಲಾಗುತ್ತಿದೆ ಎನ್ನುವುದು ಅಧಿಕಾರಿಗಳ ಸಮರ್ಥನೆ. ಈ ವರ್ಷ ವಾಮಂಜೂರು, ಕುಡುಪು ಮೊದಲಾದ ಕಡೆ ಮತ್ತೆ ನಾಲ್ಕು ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಮಳೆ ಆರಂಭವಾದಾಗ ಈ ಬೋರ್‌ವೆಲ್‌ಗಳನ್ನು ಅಧಿಕಾರಿಗಳು ಮರೆತು ನಿರ್ವಹಣೆ ಮಾಡದಿದ್ದರೆ ಅವೂ ವ್ಯರ್ಥವಾಗುವುದು ಖಚಿತ.

ಮಂಗಳೂರು ನಗರ ವ್ಯಾಪ್ತಿಯಲ್ಲಿರುವ ಎಲ್ಲ ಕೊಳವೆ ಬಾವಿಗಳನ್ನು ಪರಿಶೀಲಿಸಿ ಸದುಪಯೋಗ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪಂಪ್ ಹಾಳಾಗಿದ್ದರೆ ಅದನ್ನು ಸರಿಪಡಿಸಿಕೊಂಡು ನೀರು ಪೂರೈಕೆ ಮಾಡಬೇಕಾಗಿದೆ. ತುಂಬೆಯಿಂದ ಬರುವ ನೀರು ಕಡಿಮೆಯಾದ ಕಾರಣ ಆದಷ್ಟು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಉಪ್ಪು ನೀರು ಬರುವುದು, ನೀರೇ ಇಲ್ಲದ ಕೊಳವೆ ಬಾವಿಗಳನ್ನು ಬಿಟ್ಟು ಉಳಿದ ಕೊಳವೆ ಬಾವಿಗಳನ್ನು ಬಳಸಿಕೊಳ್ಳಲಾಗುತ್ತಿದೆ.
– ಬಿ.ನಾರಾಯಣಪ್ಪ, ಮನಪಾ ಆಯುಕ್ತ

Leave a Reply

Your email address will not be published. Required fields are marked *