ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಆತ ಸುನಿ (ಸುನಿಲ್). ಹುಟ್ಟೂರು ಕೊಡಗು. ಸಾಲದ ಶೂಲದಲ್ಲಿ ಸಿಲುಕಿರುವ ಕೆಳಮಧ್ಯಮವರ್ಗದ ಕುಟುಂಬದ ಹುಡುಗ. ಮೆಕಾನಿಕಲ್ ಇಂಜಿನಿಯರಿಂಗ್ ಓದಿರುವ ಸುನಿಲ್ ಕೆಲಸವಿಲ್ಲದೇ ಪ್ರೀತಿ-ಪ್ರೇಮ ಅಂತ ಓಡಾಡಿಕೊಂಡಿರುತ್ತಾನೆ. ಕಾಫಿ ಬೆಳೆಗಾರ ಕಾರ್ಯಪ್ಪ (ಬಲರಾಜವಾಡಿ) ಊರಿನಲ್ಲೇ ಶ್ರೀಮಂತ. ಆತನ ಮಗಳು ವೈನವಿ (ಖುಷಿ) ಜತೆ ಕೆಲಸವಿಲ್ಲದ ಸುನಿ ಓಡಾಡುತ್ತಿರುವುದನ್ನು ನೋಡುತ್ತಾನೆ. ಮಗಳ ಕೈ ಕೇಳಿಕೊಂಡು ಬರುವ ಸುನಿ ಕುಟುಂಬಕ್ಕೆ ಕಾರ್ಯಪ್ಪ ಅವಮಾನ ಮಾಡುತ್ತಾನೆ. ಕೇವಲ 2 ಎಕರೆಯ ಮಾಲೀಕ ಸುನಿ 200 ಎಕರೆಯ ಮಾಲೀಕ ಕಾರ್ಯಪ್ಪನಿಗೆ 2 ವರ್ಷಗಳಲ್ಲಿ ತಾನೇ ಸಿರಿವಂತನಾಗಿ ಬಂದು ಖುಷಿಯನ್ನು ಮದುವೆ ಮಾಡಿಕೊಳ್ಳುವುದಾಗಿ ಸವಾಲು ಹಾಕಿ ಊರು ಬಿಡುತ್ತಾನೆ.
ಬೆಂಗಳೂರಿಗೆ ಬರುವ ಸುನಿ ಗೆಳೆಯ ಧನು (ರಾಮ್ ಧನುಷ್) ಕೆಲಸ ಮಾಡುವ ಗ್ಯಾರೇಜ್ನಲ್ಲೇ ಕೆಲಸಕ್ಕೆ ಸೇರುತ್ತಾನೆ. ಹಗಲಲ್ಲಿ ಗ್ಯಾರೇಜ್ ಮೆಕಾನಿಕ್, ಇರುಳಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡತೊಡಗುತ್ತಾನೆ. ಹಾಗಾದರೆ ಎರಡು ವರ್ಷಗಳಲ್ಲಿ ಸುನಿ, ಮನಿ (ಹಣ) ಎಣಿಸುತ್ತಾ, ಮನೆಗೆ ವಾಪಸ್ಸಾಗುತ್ತಾನಾ? ಖುಷಿಯನ್ನು ಪಡೆಯುತ್ತಾನಾ? ಪಡೆದರೂ ಆಕೆಯ ಜತೆ ಸಂಸಾರ ಮಾಡುತ್ತಾನಾ? ಎಂಬುದೇ “ಒಲವಿನ ಪಯಣ’.
ಡಬಲ್ ಮೀನಿಂಗ್ ಇಲ್ಲದೇ, ಸುಖಾಸುಮ್ಮನೇ ಮಸಾಲಾ ಸೇರಿಸದೇ, ಅನವಶ್ಯಕ ಹೊಡಿ&ಬಡಿ ಕೇಳದ, ಸೀದಾಸಾದಾ ಸಿಂಪಲ್ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಕಿಶನ್ ಬಲ್ನಾಡ್. ಸ್ವಲ್ಪ ನಿಧಾನ ಎನಿಸಿದರೂ ನೋಡಿಸಿಕೊಂಡು ಹೋಗುವ ಕಥೆ, ದ್ವೀತಿಯಾರ್ಧದಲ್ಲಿ ಗಂಭೀರವಾಗುತ್ತದೆ. ಕೊನೆಗೆ ಊಹಿಸಲಾಗದ ಕ್ಲೆಮ್ಯಾಕ್ಸ್ ಮೂಲಕ ಓಕೆ ಒಮ್ಮೆ ನೋಡಲಡ್ಡಿಯಿಲ್ಲ ಎನಿಸುವಂತ ಚಿತ್ರವಿದು. ಸಾಯಿ ಸರ್ವೇಶ್ ಅವರ ಸಂಗೀತದಲ್ಲಿ ಹಾಡುಗಳು ಇಂಪಾಗಿ ಕೇಳಿಸುತ್ತವೆ.