Thursday, 15th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಕೊಡುವ ಮನಸ್ಸಿಗೆ ನೂರೆಂಟು ಅವಕಾಶಗಳು!

Sunday, 24.06.2018, 3:04 AM       No Comments

| ಎನ್​. ರವಿಶಂಕರ್​

ಎರಡು ವಾರದ ಕೆಳಗೆ, ನಂದನ್ ನಿಲೇಕಣಿ ತಮ್ಮರ್ಧ ಆಸ್ತಿಯನ್ನು ದಾನ ಮಾಡುವ ‘ಗಿವಿಂಗ್ ಪ್ಲೆಡ್ಜ್’/ಕೊಡುವ ಸಂಕಲ್ಪ ಮಾಡಿದ ಬೆನ್ನಲ್ಲೇ, ಬಿ ಆರ್ ಶೆಟ್ಟಿಯವರೂ ಅದೇ ಸಂಕಲ್ಪ ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ. ಕಳೆದ ಐದಾರು ವರ್ಷಗಳಿಂದ ಬಿಲ್ ಗೇಟ್ಸ್​ರಿಂದ ವಾರೆನ್ ಬಫೆಟ್​ವರೆಗೆ ಜಗತ್ತಿನ ಆಗರ್ಭ ಶ್ರೀಮಂತರಲ್ಲನೇಕರು ಈ ಕೊಡುವ ಸಂಕಲ್ಪ ತೊಟ್ಟು ಕೃತಾರ್ಥರಾಗಿದ್ದಾರೆ. ಕನಿಷ್ಠ 50% ದಾನ ಮಾಡಿರೆನ್ನುವ ‘ಗಿವಿಂಗ್ ಪ್ಲೆಡ್ಜ್’ನ ಕರೆಗೆ ಓಗೊಟ್ಟ ಕೆಲವರು ಜೀವನದ ದುಡಿಮೆಯ ಶೇಕಡ 90ರವರೆಗೂ ಜಗತ್ತಿನ ಒಳಿತಿಗೆಂದು ಮುಡಿಪಾಗಿಟ್ಟ ಉದಾಹರಣೆಗಳಿವೆ. ‘ನಮ್ಮ ನಂತರ ನಮ್ಮ ಮುಂದಿನ ಇಪ್ಪತ್ತು ಪೀಳಿಗೆಗಳು ಈ ಸಂಪತ್ತನ್ನು ಅನುಭವಿಸಲಿ’ ಎನ್ನುವ ಆಲೋಚನೆಗೆ ವಿರುದ್ಧ ದಿಕ್ಕಿನ ಸಂಕಲ್ಪ ಮಾಡಿ ಸಂಪತ್ತಿನ ಬಹುಭಾಗವನ್ನು ಲೋಕಕಲ್ಯಾಣಕ್ಕೆಂದು ಧಾರೆಯೆರೆದಿದ್ದಾರೆ. ಈ ‘ಗಿವಿಂಗ್ ಪ್ಲೆಡ್ಜ್’ ಬಗ್ಗೆ ನಿಮಗೆ ಇನ್ನಷ್ಟು ಮಾಹಿತಿ ಬೇಕಿದ್ದರೆ ಗೂಗಲ್​ನಲ್ಲಿ ಹುಡುಕಿಕೊಳ್ಳಿ! ನಾನದನ್ನು ಕೊಡುವ ಸಂಕಲ್ಪವನ್ನು ಮಾಡುವುದರಲ್ಲಿ ಇರುವ ಕಷ್ಟದ ಬಗ್ಗೆ ಬರೆಯಲು ಪೀಠಿಕೆಯಾಗಿಯಷ್ಟೇ ಬಳಸುತ್ತಿದ್ದೇನೆ.

ಒಳ್ಳೆ ಕತೆಯಾಯ್ತಲ್ಲ ಸ್ವಾಮಿ. ಇದ್ದವರು ಕೊಡುತ್ತಾರೆ. ನಾವೆಲ್ಲಿಂದ ಕೊಡೋಣ. ನಮ್ಮ ಬಳಿ ಇದ್ದಿದ್ದರೆ, ನಾವೂ ಕೊಡುತ್ತಿದ್ದೆವು! ನಿಜ. ಕೊಡುವ ಇಚ್ಛೆ ಬಹುತೇಕ ಎಲ್ಲರಲ್ಲೂ ಇರುತ್ತದೆ. ಆದರೆ, ಕೊಡುವ ಬಗ್ಗೆ ಎಲ್ಲರಲ್ಲೂ ಗೊಂದಲಗಳೂ ಇರುವುದರಿಂದ, ಇವುಗಳಲ್ಲಿ ನಮ್ಮೆಲ್ಲರನ್ನೂ ಕಾಡಿರಬಹುದಾದ ಕೆಲವು ಗೊಂದಲಗಳನ್ನು ನೋಡೋಣ.

ಭಿಕ್ಷುಕರು: ದೇವಸ್ಥಾನದ ಹೊರಗೋ, ಟ್ರಾಫಿಕ್ ಸಿಗ್ನಲ್​ನಲ್ಲೋ, ಹೋಟೆಲಿನ ಆಚೆಯೋ ಭಿಕ್ಷೆ ಬೇಡುವವರನ್ನು ಕಂಡಾಗ ನಮ್ಮ ಮನಸ್ಸಿನಲ್ಲಿ ಓಡುವ ಆಲೋಚನೆಗಳು. ಭಿಕ್ಷೆ ಬೇಡುತ್ತಿರುವವರು ವಯಸ್ಸಾದವರಾದರೆ- ಇವರನ್ನು ಮಕ್ಕಳು ನೋಡಿಕೊಳ್ಳಬಾರದೇ, ಸರ್ಕಾರ ನಡೆಸುವ ವೃದ್ಧಾಶ್ರಮಗಳಲ್ಲಿ ದಾಖಲಾಗಬಾರದೇ, ಇತ್ಯಾದಿ. ಭಿಕ್ಷೆ ಬೇಡುವವರು ಗಟ್ಟುಮುಟ್ಟಾಗಿದ್ದರೆ, ‘ಇವನಿಗೇನು ಬಂದಿದೆ ದೊಡ್ಡ ರೋಗ? ದುಡಿಯಲಿಕ್ಕೇನು ಧಾಡಿ? ಮೈಗಳ್ಳರಿರಬೇಕು! ಊರಲ್ಲೇನೋ ಕೆಟ್ಟದ್ದು ಮಾಡಿ ಈಗ ನಗರಕ್ಕೆ ಬಂದು ಭಿಕ್ಷೆ ಬೇಡುತ್ತಿದ್ದಾನೆ’, ಇತ್ಯಾದಿ.

ದೊಡ್ಡ ನಗರಗಳಲ್ಲಿ ಸಾಮಾನ್ಯದೃಶ್ಯವಾದ, ಮಕ್ಕಳನ್ನು ಹೊತ್ತು ಕಾರಿನ ಗಾಜು ಕುಟ್ಟುತ್ತಿರುವ ಮಹಿಳೆಯನ್ನು ಕಲ್ಪಿಸಿಕೊಳ್ಳಿ. ಕಾರಿನೊಳಗೆ ವಿವಿಧ ವ್ಯಾಖ್ಯಾನಗಳು ಆರಂಭ! ಮಕ್ಕಳಿಗೆ ಮಾದಕವಸ್ತುಗಳನ್ನು ಉಣಿಸಿ, ಅರೆನಿದ್ರೆಯಲ್ಲಿರುವ ಅವರನ್ನು ಹೆಗಲಮೇಲೋ ಬಟ್ಟೆಯ ಜೋಲಿಯಲ್ಲೋ ಹಾಕಿಕೊಂಡು ಹೇಗೆ ಜನರನ್ನು ವಂಚಿಸುತ್ತಾರೆ ಎನ್ನುವ ಬಗ್ಗೆ ತಮಗೆ ತಿಳಿದ-ತಿಳಿಯದ ಜ್ಞಾನವನ್ನೆಲ್ಲ ಪ್ರದರ್ಶಿಸದಿದ್ದರೆ ಜನರಿಗೆ ಸಮಾಧಾನವೇ ಇಲ್ಲ!

ಒಟ್ಟಿನಲ್ಲಿ, ನಾವು ಕಾಸು ಬಿಚ್ಚುವುದಕ್ಕೆ ಮುನ್ನವೇ ಹಣ ಕೇಳುತ್ತಿರುವ ವ್ಯಕ್ತಿಯನ್ನು ಜಡ್ಜ್ ಮಾಡುತ್ತೇವೆ. ಕೊಡಬೇಕಿರುವುದು ಸುಲಭಕ್ಕೆ ಕೊಡಬಹುದಾದ ಒಂದೋ ಎರಡೋ ರೂಪಾಯಿಯಾದರೂ ಅದರ ಹಿಂದೆ ದೊಡ್ಡ ವಿಶ್ಲೇಷಣೆ ಮಾಡುತ್ತೇವೆ. ಬೇಡುತ್ತಿರುವವರ ಪರಿಸ್ಥಿತಿಯನ್ನು ಈಗಾಗಲೇ ಬಲ್ಲವರಂತೆ ವರ್ತಿಸುತ್ತೇವೆ. ನಾನಾಗಿದ್ದಿದ್ದರೆ, ಹೀಗೆ ನಿರ್ವಹಿಸುತ್ತಿದ್ದೆ ಎನ್ನುವ ಅಹಂಕಾರ ಮೆರೆಯುತ್ತೇವೆ. ಬೇಡುವವ ಒಂದಿಲ್ಲೊಂದು ರೀತಿಯ ಮೋಸಗಾರ ಎನ್ನುವ ತೀರ್ವನಕ್ಕೆ ಮೊದಲು ಬಂದು, ನಂತರ ಆ ತತ್ತ್ವದ ಸಮರ್ಥನೆಗೆ ಇಳಿಯುತ್ತೇವೆ. ‘ಅಯ್ಯೋ, ದುರುಪಯೋಗ ಆದರೆ ಆಯಿತು ಬಿಡಿ. ಅವರ ಜೀವನದೊಳಕ್ಕಿಳಿದು ಅವರ ಅವಶ್ಯಕತೆಗಳನ್ನು ಗ್ರಹಿಸುವುದು ಸಾಧ್ಯವಿಲ್ಲವಲ್ಲ. ಕೊಡುವುದರಿಂದ ನಮ್ಮ ಮನಸ್ಸು ಶುದ್ಧವಾಗುತ್ತದೆ. ಪಡೆದುಕೊಂಡವರಿಗೆ ಏನಿಲ್ಲವೆಂದರೂ ಒಂದೊಪ್ಪತ್ತು ಹೊಟ್ಟೆ ತುಂಬಬಹುದು!’ ಈ ರೀತಿಯ ಕ್ಲಾರಿಟಿಯನ್ನು ನಾನು ಕಂಡಿರುವುದು ಶ್ರಮಿಕ ವರ್ಗದಲ್ಲಿ ಮತ್ತು ಬಡವರು/ಕೆಳಮಧ್ಯಮವರ್ಗದವರಲ್ಲಿ. ಕಷ್ಟವೇನೆಂದು ಅವರಿಗೂ ಗೊತ್ತಿರುವುದರಿಂದ ಬೇಡುತ್ತಿರುವವರ ಬಗ್ಗೆ ಔದಾಸೀನ್ಯವಾಗಲೀ, ಅವರು ಕೆಟ್ಟವರೇ ಇರಬೇಕೆಂಬ ಧೋರಣೆಯಾಗಲೀ ಕಡಿಮೆ. ನಾನು ಜನರಲೈಸ್ ಮಾಡಿ, ಅತಿಸರಳೀಕರಿಸಿ ಹೇಳುತ್ತಿದ್ದೇನೆಂದು ಕೋಪಗೊಳ್ಳಬೇಡಿ! ಸ್ಥಿತಿವಂತರಿಗೆ ಅಂತಃಕರಣದ ಕೊರತೆಯೇ? ವಿಷಯ ಅದಲ್ಲ! ಸ್ಥಿತಿವಂತರು, ವಿದ್ಯಾವಂತ-ಬುದ್ಧಿವಂತರಿಗೆ ಚ್ಯಾರಿಟಿಯ ಇತರ ಮುಖಗಳ ಪರಿಚಯ ಚೆನ್ನಾಗಿ ಇರುವುದರಿಂದ, ಬಹುಶಃ ಅವರು ಈ ಬಿಡಿಗಾಸಿನ ಲೆಕ್ಕಾಚಾರವನ್ನು ಸ್ವಲ್ಪ ಹೆಚ್ಚಾಗಿಯೇ ಹಾಕುವಂತಾಗಿದೆ ಎನ್ನುವ ಅಭಿಪ್ರಾಯ ಅಷ್ಟೆ!

ಇದೇ ಮಂದಿ ಸ್ವಲ್ಪ ಸ್ಟ್ರಕ್ಚರ್ಡ್ ಆದ, ಅಥವಾ ವ್ಯವಸ್ಥಿತವಾದ ದಾನಗಳ ವಿಷಯಕ್ಕೆ ಬಂದಾಗ ಬೇರೆಯದೇ ರೀತಿಯಲ್ಲಿ ವರ್ತಿಸುತ್ತಾರೆನ್ನುವುದು ಸಕಾರಾತ್ಮಕವಾದ ಅಂಶ! ಈಚಿನ ವರ್ಷಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಅಂಥ ಕೆಲವು ವ್ಯವಸ್ಥಿತ ದಾನ-ಧರ್ಮಗಳ ಉದಾಹರಣೆಗಳು ಇಲ್ಲಿವೆ-

ಎನ್​ಜಿಒಗಳು ಅಥವಾ ದೊಡ್ಡ ಧ್ಯೇಯಕ್ಕಾಗಿ: ಒಬ್ಬೊಬ್ಬರಿಗೆ ಒಂದೊಂದು ಕಾಸ್/ಉದ್ದೇಶ ಹೃದಯಕ್ಕೆ ಹತ್ತಿರವಾಗಿರುತ್ತದೆ. ಪರಿಸರ, ಶಿಕ್ಷಣ, ಮಹಿಳಾ ಸುರಕ್ಷತೆ, ಬೀದಿಮಕ್ಕಳ ಒಳಿತು, ಶೋಷಿತ ಮಹಿಳೆಯರಿಗೆ ಸಹಾಯ- ಹೀಗೆ ವಿವಿಧ ಕ್ಷೇತ್ರಗಳಲ್ಲಿ ಬದಲಾವಣೆ ತರುವ ಗುರಿಗಳನ್ನಿಟ್ಟುಕೊಂಡ ಸರ್ಕಾರೇತರ ಸಂಸ್ಥೆಗಳು ಪ್ರತಿ ನಗರದಲ್ಲೂ ಸಿಗುತ್ತವೆ. ನೇರವಾಗಿ ಬೇಡುವ ಜನರಿಗೆ ಕೊಡುವುದಕ್ಕಿಂತಲೂ ಇಂಥಹ ಸಂಸ್ಥೆಗಳ ಮೂಲಕ ಕೊಟ್ಟರೆ, ಸಮಗ್ರವಾದ ರೀತಿಯಲ್ಲಿ ಬದಲಾವಣೆ ತರಲು ಸಾಧ್ಯ ಎನ್ನುವುದು ಹಲವರ ಅಂಬೋಣ.

ಪ್ರತಿಷ್ಠಿತ ಸಂಸ್ಥೆಗಳಿಗೆ ದಾನ: ಯಾವುದೋ ಒಂದು ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ, ದೊಡ್ಡಮಟ್ಟದ ಪರಿವರ್ತನೆ ತರುತ್ತಿರುವ ಸಂಸ್ಥೆಗೆ ನಿಯಮಿತ ರೀತಿಯಲ್ಲಿ ಧನಸಹಾಯ ಮಾಡುವುದು. ಉದಾಹರಣೆಗೆ- ‘ಅಕ್ಷಯ ಪಾತ್ರೆ’, ಓದುವ ಮಕ್ಕಳಿಗೆ ಮಧ್ಯಾಹ್ನದ ಊಟ ಕೊಡುವುದರಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆ. ಇಂತಹ ಸಂಸ್ಥೆಗಳ ಲೆಕ್ಕ-ಪತ್ರ-ವ್ಯವಹಾರಗಳೆಲ್ಲವೂ ಸಾರ್ವಜನಿಕವಾಗಿ ಲಭ್ಯವಿರುವುದರಿಂದ, ಇಂಥವುಗಳನ್ನು ನಂಬುವುದು ಸುಲಭ. ಜತೆಗೆ, ಇಂಥ ಸಂಸ್ಥೆಗಳು ನಮ್ಮದೇ ಕಷ್ಟದ ಪರಿಸ್ಥಿತಿಯನ್ನು ನೆನಪಿಸುವುದರಿಂದ, ದುಡ್ಡು ಬಿಚ್ಚುವುದು ಸುಲಭ. ಉದಾಹರಣೆಗೆ, ವಾರಾನ್ನ ತಿಂದು ಓದಿದ ವ್ಯಕ್ತಿಯೊಬ್ಬರಿಗೆ ಅಕ್ಷಯ ಪಾತ್ರೆಗೆ ಹಣ ಕೊಡುವಾಗ ಸಾರ್ಥಕಭಾವ.

ಧರ್ಮ ಮಾಡಲು ಪ್ರೇರೇಪಿಸುವ ಧರ್ಮ: ನನ್ನ ಸಹೋದ್ಯೋಗಿ ಅಜಿತ್ ಸ್ಯಾಮುಯಲ್ ಪ್ರತಿ ತಿಂಗಳೂ ಸಂಬಳದ ಶೇಕಡ ಹತ್ತರಷ್ಟನ್ನು ದಾನ ನೀಡುವುದಕ್ಕಾಗಿ ಮೀಸಲಿಡುತ್ತಾರೆ. ಈ ಎಲ್ಲ ಹಣವನ್ನೂ ಅವರು ಚರ್ಚ್​ಗೆ ಸಂಬಂಧಿಸಿದ ದಾನಗಳಿಗೇ ಕೊಡಬೇಕೆಂದೇನಿಲ್ಲ (ಹಾಗೆ ಮಾಡುವವರೂ ಇದ್ದಾರೆ). ಯಾವುದಾದರೊಂದು ವಿಷಯ ಅಥವಾ ಉದ್ದೇಶ ಆಯ್ದುಕೊಂಡು ಹೇಗೋ ಮಾಡಿ ಈ ಹತ್ತು ಪರ್ಸೆಂಟ್ ಹಣವನ್ನು ತಮ್ಮದಲ್ಲವೆಂಬಂತೆ ಪ್ರತಿ ತಿಂಗಳೂ ಕೊಟ್ಟುಬಿಡುತ್ತಾರೆ, ಧಾರ್ವಿುಕ ಕಾರಣಗಳಿಗಾಗಿ ಅಥವಾ ಧರ್ಮದಿಂದ ಪ್ರೇರೇಪಿತರಾಗಿ ಕೊಡುವವರು ಎಲ್ಲ ಧರ್ಮಗಳಲ್ಲಿಯೂ ಯಥೇಚ್ಛವಾಗಿ ಸಿಗುತ್ತಾರೆ. ದಾನಗಳಲ್ಲಿ ಬಹುಪಾಲು ದೇವರ ಹೆಸರಿನ ದಾನದ್ದೇ ಇರಬೇಕು ಎನ್ನುವುದು ನನ್ನ ಸಂಶಯ (ಇದಕ್ಕೆ ಪುರಾವೆಯಿಲ್ಲ).

ಕ್ಯುರೇಟೆಡ್ ಮಾರ್ಕೆಟ್​ಪ್ಲೇಸಸ್/ಕ್ರೌಡ್ ಫಂಡಿಂಗ್: ಇವು ನವಪೀಳಿಗೆಯ, ಸಾಮಾಜಿಕ ಕಳಕಳಿಯುಳ್ಳ ‘ಚ್ಯಾರಿಟಿ ಉದ್ಯಮಗಳು’. ಉದಾಹರಣೆಗೆ, ‘ಮಿಲಾಪ್’ನಂಥ ಸಂಸ್ಥೆಗಳು. ಯಾವುದೋ ಕೆಟ್ಟ ಕಾಯಿಲೆ ಬಂದ ಮಗು, ಜೀವನೋಪಾಯಕ್ಕಾಗಿ ಹೊಲಿಗೆಯಂತ್ರ ಖರೀದಿಸಬೇಕಿರುವ ಮಹಿಳೆ, ವೃದ್ಧಾಪ್ಯ ವೇತನವಿರದೆ ಸಣ್ಣ ಸಹಾಯ ಯಾಚಿಸುತ್ತಿರುವ ವಿಧವೆ- ಹೀಗೆ ಸಹಸ್ರಾರು ಬೇರೆ-ಬೇರೆ ಪರಿಸ್ಥಿತಿಗಳಲ್ಲಿರುವ ಜನರನ್ನು ನೀವು ಮಿಲಾಪ್​ನಂತಹ ಆನ್​ಲೈನ್ ವೇದಿಕೆಯಲ್ಲಿ ನೋಡಬಹುದು. ಅವರ ಕಷ್ಟಕ್ಕೆ ನೀವು ಮಿಡಿದರೆ, ಸಣ್ಣ ಸಹಾಯ ಮಾಡಬಹುದು. ನೀವೇ ಎಲ್ಲ ಖರ್ಚನ್ನೂ ವಹಿಸಿಕೊಳ್ಳಬೇಕಿಲ್ಲ. ಇಷ್ಟೇ ಕೊಡಬೇಕೆಂದೂ ಇಲ್ಲ. ನಿಮ್ಮಂಥ ಸಾವಿರಾರು ಜನ ಹನಿಗೂಡಿಸಿ (ಕ್ರೌಡ್ ಸೋರ್ಸಿಂಗ್ ಮುಖೇನ) ಅವಶ್ಯಕತೆಯಿರುವವರಿಗೆ ಸಹಾಯ ಮಾಡುತ್ತಾರೆ. ಚಿಕ್ಕ ಮೊತ್ತ ಕೊಟ್ಟು, ಇತರರ ಜೀವನದಲ್ಲಿ ದೊಡ್ಡ ವ್ಯತ್ಯಾಸ ತರಿಸುವಂತೆ ಮಾಡುವ ಇಂತಹ ಕ್ಯುರೇಟೆಡ್ ಮಾರ್ಕೆಟ್​ಪ್ಲೇಸಸ್/ ಕ್ರೌಡ್ ಸೋರ್ಸಿಂಗ್ ಪ್ಲಾಟ್​ಫಾಮ್ರ್ ಗಳು ಭಾರತದ ಆನ್​ಲೈನ್ ಲೋಕದಲ್ಲಿ ಜನಪ್ರಿಯವಾಗುತ್ತಿವೆ.

ಅಂತೂ ಕೊಡಲಿಚ್ಛಿಸುವ ಹೃದಯಗಳಿಗೆ ಅನೇಕ ಆಯ್ಕೆಗಳಿವೆ. ಅವೆಲ್ಲವನ್ನೂ ಇಲ್ಲಿ ಉದಾಹರಿಸಲು ಸಾಧ್ಯವಿಲ್ಲದಿದ್ದರೂ, ನಮ್ಮದು ಎಂಥ ಕೊಡುಗೈ ಅಥವಾ ಎಷ್ಟು ಸಾಮರ್ಥ್ಯ ಎನ್ನುವುದನ್ನು ಆಧರಿಸಿ ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿಯೂ ಗೊಂದಲಗಳಿಲ್ಲವೆಂದಲ್ಲ. ಉದಾಹರಣೆಗೆ- ನಮ್ಮ ದಾನದ ಟ್ರಾ್ಯಕ್ ಇರಬೇಕೆ? ನಾವು ಯಾವ ವ್ಯಕ್ತಿಗೆ ಸಹಾಯ ಮಾಡಿದೆವೋ ಅವರು ನಮಗೆ ಕೃತಾರ್ಥರಾಗಿರಬೇಕೋ ಅಥವಾ ದಾನಿಯಾದವನು ಅಜ್ಞಾತನಾಗಿಯೇ ಉಳಿದರೆ ಒಳಿತೋ (ಇಂದಿನ ಆಧಾರ್ ಯುಗದಲ್ಲಿ ಎರಡೂ ಆಯ್ಕೆಗಳು ಲಭ್ಯ). ನಾವು ಕೊಟ್ಟದ್ದನ್ನು ಇತರರಿಗೆ ಹೇಳಿ ಅವರನ್ನು ಹುರಿದುಂಬಿಸಬೇಕೋ, ಅಥವಾ ನಮ್ಮ ತತ್ತ್ವ-ಪುರಾಣಗಳು ಹೇಳುವಂತೆ ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ಗೊತ್ತಾಗಕೂಡದೋ? ಎಲ್ಲಕ್ಕೂ ಸಮರ್ಪಕವಾದ ಉತ್ತರಗಳಿವೆಯೆಂದಲ್ಲ!

ಒಂದಂತೂ ಸತ್ಯ. ದಾನ ಚಿಕ್ಕದಾಗಲೀ ದೊಡ್ಡದಾಗಲೀ, ಅದು ಅಪಾತ್ರದಾನವಾದೀತೆಂಬ ಅಳುಕು ಸಹಜವೇ. ನಾವು ಶ್ರಮಪಟ್ಟು ಗಳಿಸಿದ ಹಣ-ವಸ್ತುಗಳನ್ನು ಪರಭಾರೆಯಾಗಿಸುವಾಗ ದೊಡ್ಡ ಹೃದಯದಷ್ಟೇ ವಿವೇಚನೆಯೂ ಅಗತ್ಯ! ಈ ನಿಟ್ಟಿನಲ್ಲಿ ಸ್ಪಷ್ಟತೆ ಕೊಡುವ, ಅನುಮಾನಗಳನ್ನೂ ಮೀರಿಸುವ, ಕೊಡುವ ಮುನ್ನ ವಿಶ್ಲೇಷಣೆಗಿಳಿಯುವ ನಮ್ಮಂಥ ಅಲ್ಪರಿಗೆ ದಾರಿದೀಪವಾಗಬಲ್ಲ ಸತ್ಯಕತೆಯೊಂದನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.

ಮೊನ್ನೆ ಬುಧವಾರ ನಡೆದ ಘಟನೆ. ಮುಂಬೈನಲ್ಲಿ ಯಾವುದೋ ಮೀಟಿಂಗ್ ತಲುಪುವ ತರಾತುರಿಯಲ್ಲಿದ್ದೆ. ಫೋನ್​ನಿಂದ ಕಣ್ಣು ತೆಗೆದು ಕ್ಯಾಬ್ ಡ್ರೖೆವರ್​ನೊಡನೆ ಮಾತನಾಡಲು ಅವನ ಕಡೆಗೆ ನೋಡಿದಾಗ, ಒಂದು ಕ್ಷಣ ನನ್ನ ಎದೆಬಡಿತವೇ ನಿಂತುಹೋಯಿತು. ಸ್ಟೇರಿಂಗ್ ಚಕ್ರದ ಮೇಲಿದ್ದ ಅವನ ಕೈ! ಅದು ಕೈಯಲ್ಲ! ಸಂಪೂರ್ಣವಾಗಿ ಬೆಂದು ಕಪ್ಪಗೆ ಸುರುಟಿಹೋಗಿದ್ದ ಆಕೃತಿಗಳು. ಬೆರಳಿನ ಜಾಗಗಳಲ್ಲಿ ಹತ್ತಾರು ಚಿಕ್ಕ-ಚಿಕ್ಕ ಮಾಂಸಗಳಂಥ ಏನನ್ನೋ ಜೋಡಿಸಿದಂತಿದೆ. ಅಂತೂ ದೊಡ್ಡದೊಂದು ಬೆಂಕಿ ಅಪಘಾತದಿಂದ ಅರೆಬರೆ ಚೇತರಿಸಿಕೊಂಡು ತನ್ನ ಶ್ರಮದಿಂದಲೇ ಬದುಕು ಸಾಗಿಸುತ್ತಿರುವ ಜೀವ! ಈತನ ಬಗ್ಗೆ ಮನಸ್ಸಿನಲ್ಲಿ ಗೌರವಾದರಗಳು ಹಾಗೆಯೇ ಬರಬೇಕು. ಆದರೆ, ಮುಂದೆ ನಡೆದ ಘಟನೆಯಿಂದ, ಆತ ಈ ಲೇಖನಕ್ಕೂ ನನ್ನ ಜೀವನಕ್ಕೂ ಪ್ರೇರಣೆಯಾಗಿಬಿಟ್ಟ.

ಟ್ರಾಫಿಕ್ ಸಿಗ್ನಲ್ ಒಂದರಲ್ಲಿ ನಿಂತಾಗ ಮಧ್ಯವಯಸ್ಸಿನ ಭಿಕ್ಷುಕನೊಬ್ಬ ಎಂದಿನಂತೆ ಗಾಜು ಕುಟ್ಟಿದ. ನಮ್ಮ ಕ್ಯಾಬ್ ಡ್ರೖೆವರ್, ತನ್ನ ಕಾರಿನ ಸೈಡ್ ಪಾಕೆಟ್​ನಲ್ಲಿ ಬಹುಶಃ ಇದಕ್ಕೆಂದೇ ಮೀಸಲಿಟ್ಟಿರಬಹುದಾದ ಹಣವನ್ನು ಕಷ್ಟಪಟ್ಟು ತೆಗೆದು, ಗಾಜು ಇಳಿಸಿ, ಆ ಸುಸ್ತಾದಂತೆ ಕಾಣುತ್ತಿದ್ದ ಭಿಕ್ಷುಕನಿಗೆ ಕೊಡಲು ಮುಂದಾದ. ಹಣ ಪಡೆಯುವಾಗ ಡ್ರೖೆವರ್​ನ ವಿರೂಪವಾಗಿದ್ದ ಕೈಯನ್ನು ನೋಡಿದ. ಏನೆನ್ನಿಸಿತೋ ಏನೋ, ‘ನಹಿ ಆಪ್ ರಖ್​ಲೋ…’ ಎಂದು ತನ್ನ ಕೈಗೆ ವರ್ಗಾವಣೆಯಾಗಿದ್ದ ಹಣವನ್ನು ವಾಪಸ್ ಕೊಡಲು ಭಿಕ್ಷುಕ ಮುಂದಾದ ! ನಮ್ಮ ಡ್ರೖೆವರ್ ಮುಗುಳ್ನಗುತ್ತ, ‘ಕೋಯಿ ಬಾತ್ ನಹೀ. ಮೈ ಬಿಲ್ಕುಲ್ ಠೀಕ್ ಹೂಂ. ಮೈ ಆಪ್ಕೋ ದೇ ಸಕ್ತಾ ಹೂಂ…’ ಎಂದು ಅವನಿಗೆ ಹಣ ಇಟ್ಟುಕೊಳ್ಳಲು ಒತ್ತಾಯಿಸಬೇಕಾಯಿತು! ಆ ಭಿಕ್ಷುಕನ ಮುಖದಲ್ಲಿ ಇನ್ನೂ ಗೊಂದಲ ಇದ್ದೇ ಇತ್ತು! ಅಷ್ಟರಲ್ಲಿ ಸಿಗ್ನಲ್ ಹಸಿರಾದ್ದರಿಂದ ಮುಂದೆ ಹೊರಟೆವು!

ಇಬ್ಬರು ಸಹೃದಯರ ನಡುವಿನ ಈ ಭಾವನಾತ್ಮಕವಾದ ಕೊಡುಕೊಳ್ಳುವಿಕೆ, ಎಲ್ಲ ಕೊಡುವ ಮನಸ್ಸುಗಳಿಗೂ ಮಾದರಿಯಾಗಬಹುದೇನೋ! ಕೊಟ್ಟವನ ಮನಸ್ಸಿನಲ್ಲಿ ಕೊಟ್ಟೆನೆಂಬ ಅಹಂಕಾರ ಬರಕೂಡದು. ತೆಗೆದುಕೊಂಡವನ ಹೃದಯದಲ್ಲಿ ಈಸಿಕೊಂಡ ದೈನ್ಯ ನೆಲೆಸಕೂಡದು. ಕೊಡುವವ ಜಗತ್ತಿನ ಅಸಮತೋಲನವನ್ನು ಸ್ವಲ್ಪವಾದರೂ ಸರಿಪಡಿಸುವಲ್ಲಿ ಸಣ್ಣದೊಂದು ಪಾತ್ರ ವಹಿಸುತ್ತಿದ್ದಾನೆ ಅಷ್ಟೆ! ಅದು ದೊಡ್ಡಸ್ತಿಕೆಯಾಗಕೂಡದು. ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಕೊಟ್ಟವರೂ ಪಡೆದವರೂ ಸಮಾನರಂತಿರಬೇಕು.

(ಲೇಖಕರು ಸಂವಹನ ಸಲಹೆಗಾರರು)

Leave a Reply

Your email address will not be published. Required fields are marked *

Back To Top