Thursday, 15th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಶಾಲೆ-ಕಾಲೇಜಿನ ನಿಜವಾದ ಪಾಠ ಯಾವುದು ಗೊತ್ತೆ?

Sunday, 03.06.2018, 3:03 AM       No Comments

| ಎನ್​. ರವಿಶಂಕರ್​

ಮಕ್ಕಳು ಕೇವಲ ಪುಸ್ತಕದ ಬದನೆಕಾಯಿ ಆಗಬಾರದು. ಶೇಕಡ 99 ಅಂಕಗಳಿಗೂ ಜೀವನಪರ್ಯಂತ ಸಂತೋಷಕ್ಕೂ ನೇರಸಂಬಂಧ ಇಲ್ಲವೆನ್ನುವುದು ಸಾಬೀತಾಗಿದೆ. ನಮ್ಮ ಸುತ್ತಲಿನ ಅಚ್ಚರಿಗಳನ್ನು ಗಮನಿಸುತ್ತ ಶಾಲೆಯ ಒಳಗಷ್ಟೇ ಅಲ್ಲದೆ ಹೊರಗೂ ಜೀವನದ ಕಲಿಕೆಗೆ ತೆರೆದುಕೊಳ್ಳಬೇಕು. ಆಗ ಮಾತ್ರ ವ್ಯಕ್ತಿತ್ವದ ಸಮಗ್ರ ವಿಕಾಸ ಸಾಧ್ಯ.

ಶಾಲೆ-ಕಾಲೇಜು ಬಿಟ್ಟು ದಶಕಗಳೇ ಕಳೆದರೂ, ಇನ್ನೇನು ಶಾಲಾ-ಕಾಲೇಜುಗಳು ಆರಂಭವಾಗುತ್ತಿವೆ ಎನ್ನುವುದರ ಅರಿವಾಗುತ್ತಿದ್ದಂತೆ, ಮತ್ತೊಮ್ಮೆ ಪುಳಕವಾಗುತ್ತದೆ! ಹೊಸ ತರಗತಿಗೆ ಹೋಗುವ ಉತ್ಸಾಹಕ್ಕಿಂತ ಹೆಚ್ಚಾಗಿ, ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಕಾತುರ; ರಜೆಯಲ್ಲಿ ಏನೇನು ಮಾಡಿದಿರಿ ಎನ್ನುವುದರ ಬಗ್ಗೆ ಪ್ರಬಂಧ ಬರೆಯಿರಿ ಎಂದು ಪ್ರತಿ ವರ್ಷವೂ ಶಾಲೆಯಲ್ಲಿ ಕೊಡುತ್ತಿದ್ದ ‘ಸಮ್ಮರ್ ಅಸೈನ್​ವೆುಂಟ್’ ಅನ್ನು ರಜೆಯ ಕೊನೆಯ ದಿನ ಕುಳಿತು ಬರೆಯುವಾಗ, ನಿಜವಾಗಿ ಮಾಡಿದ್ದು, ಮಾಡದಿದ್ದದ್ದು ಎಲ್ಲ ಸೇರಿದ ಸುಸಂಬದ್ಧ-ಅಬದ್ಧ-ಅಸಂಬದ್ಧಗಳನ್ನು ಪೇರಿಸುತ್ತಿದ್ದುದು; ಇಂಗ್ಲಿಷ್ ಹಾಗೂ ಕನ್ನಡ ಪಠ್ಯಪುಸ್ತಕಗಳನ್ನು (ಮಾತ್ರ!) ಶಾಲೆಯಲ್ಲಿ ಮೊದಲ ಪಾಠ ಆರಂಭವಾಗಿಬಿಡುವುದಕ್ಕೆ ಮುಂಚೆಯೇ ಓದಿ ಮುಗಿಸಿ, ನಮ್ಮ ಸಮಾನರಿಲ್ಲ ಎನ್ನುವಂತೆ ಬೀಗುತ್ತಿದ್ದುದು; ಎಲ್ಲವೂ ಈಗಷ್ಟೇ ನಡೆದಿರುವಷ್ಟು ಸ್ಪಷ್ಟವಾಗಿ ನೆನಪಾಗುತ್ತದೆ.

ಜತೆಗೆ, ಶಾಲೆ-ಕಾಲೇಜಿನ ಆರಂಭದ ಮೊದಲ ದಿನವೆಂದರೆ, ಹೊಸದನ್ನೂ-ಹೊಸಬರನ್ನೂ ಸಂಭಾಳಿಸಬೇಕಾದ ಭಯವೂ, ಹೊಸ ಪಠ್ಯ ಹಾಗೂ ಹೊಸ ಗುರುಗಳನ್ನು ಎದುರಿಸಬೇಕಾದ ಆತಂಕವೂ ಸೇರಿಕೊಂಡಿರುತ್ತಿತ್ತು. ಉತ್ಸಾಹ, ಉಮೇದಿನ ಜತೆಜತೆಗೆ ಉದ್ವೇಗ-ಉಮ್ಮಳಗಳೂ ಸೇರಿ ಶಾಲೆ-ಕಾಲೇಜಿನ ಆರಂಭದ ದಿನವನ್ನು ಒಮ್ಮೆ ಆಸೆಯಿಂದಲೂ, ಮಗದೊಮ್ಮೆ ಆತಂಕದಿಂದಲೂ ಎದುರುನೋಡುವಂತಹ ಪರಿಸ್ಥಿತಿ ಇರುತ್ತಿತ್ತು.

ಆದರೆ, ಇಂದಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗನ್ನಿಸುತ್ತದೆಯೇ? ಅದೂ, ಹೈಸ್ಕೂಲು ಹಾಗೂ ಅದಕ್ಕೂ ಮೇಲಿನ ಶಿಕ್ಷಣದಲ್ಲಿನ ವಿದ್ಯಾರ್ಥಿಗಳಿಗೆ. ಬೇಕೆನಿಸಿದ್ದೆಲ್ಲವೂ ಮನೋವೇಗದಲ್ಲಿ ದೊರೆಯುವ ಇಂದಿನ ಮಾಹಿತಿಯುಗದಲ್ಲಿ, ಶಾಲಾ-ಕಾಲೇಜಿನ ಪುನರಾರಂಭಕ್ಕೆ ಮಹತ್ವವಿದೆಯೇ? ಹಿಂದಿನ ಎರಡು, ಮೂರು ಪೀಳಿಗೆಯವರು ಅನುಭವಿಸಿದ ಭಯಮಿಶ್ರಿತ ಆಶಾಭಾವ, ಇಂದಿನ ಮಕ್ಕಳ ಅನುಭವಕ್ಕೂ ಬರುತ್ತದೆಯೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಇದು ಸಕಾಲವೇನೋ! ಏಕೆಂದರೆ, ಬೂಟು ಕೊಂಡು, ಬಟ್ಟೆ ಇಸ್ತ್ರಿ ಮಾಡಿ(ಸಿ)ಕೊಂಡು, ಪುಸ್ತಕಗಳಿಗೆ ರ್ಯಾಪರ್ ಹಾಕಿ(ಸಿ)ಕೊಂಡು, ಶಾಲೆಗೆ ಹೊರಡುವ ಹೊತ್ತು ಬಂದಾಗಿದೆ!

ಇಷ್ಟು ವರ್ಷಗಳಲ್ಲಿ ಏನೆಲ್ಲ ಬದಲಾಗಿದೆ. ಆದರೆ, ಕೆಲವೊಂದು ವಿಷಯಗಳಲ್ಲಿ ಏನೂ ಬದಲಾಗಿಲ್ಲ. ಈಗಲೂ ಪತ್ರಿಕೆಯ ಪುಟಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಳ್ಳಿಮಕ್ಕಳನ್ನು ಮತ್ತು ಬಡಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಹುರಿದುಂಬಿಸುವ ಜಾಹೀರಾತುಗಳು ಪ್ರಕಟವಾಗುತ್ತವೆ. ಶಾಲೆಗೆ ಮಕ್ಕಳು ಬರುವಂತೆ ಮಾಡುವುದು ಸರ್ಕಾರದ ಹಾಗೂ ಒಂದು ವರ್ಗದ ಸವಾಲಾದರೆ, ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಅರ್ಥಪೂರ್ಣವಾಗಿ ಕಲಿಯುವಂತೆ ಮಾಡುವುದು ಅದಕ್ಕಿಂತಲೂ ದೊಡ್ಡ ಸವಾಲು.

ಶಾಲಾ-ಕಾಲೇಜಿನ ಪಠ್ಯದ ಪರಿಧಿಗೂ ಮೀರಿದ್ದನ್ನು ಕಲಿಸುವುದು ಹೇಗೆ? ವಿದ್ಯಾರ್ಥಿಗಳಲ್ಲಿ ಸಹಜ ಕುತೂಹಲವನ್ನೂ, ತಮ್ಮ ಕ್ಷಿತಿಜವನ್ನು ವಿಸ್ತರಿಸಿಕೊಳ್ಳುವ ತಹತಹವನ್ನೂ ಮೂಡಿಸುವುದು ಹೇಗೆ? ಈ ವಿಷಯವಾಗಿ, ಇಂದಿನ ವಿದ್ಯಾರ್ಥಿಗಳಿಗೆ ಭಾಷಣರೂಪದಲ್ಲಿರಬಹುದಾದ ಅಥವಾ ಅಡಗೂಲಜ್ಜಿಯ ಕತೆ ಎಂದು ಸುಲಭಕ್ಕೆ ತಿರಸ್ಕರಿಸಿಬಿಡಬಹುದಾದ, ಆದರೆ ಜೀವನಪಯಣದಲ್ಲಿ ಕೆಲವೊಮ್ಮೆ ಹಿಂದಿರುಗಿ ನೋಡಿದಾಗ ಅಹುದಹುದೆನಿಸುವ ಕೆಲವು ಸ್ನೇಹಪೂರ್ವಕ ಸಂದೇಶಗಳನ್ನು, ಈ ಶಾಲೆ-ಕಾಲೇಜು ಆರಂಭದ ಸಂದರ್ಭದಲ್ಲಿ ನೀಡುವ ಮನಸ್ಸಾಗುತ್ತದೆ.

ನಮ್ಮ ಸುತ್ತಲಿನ ಪ್ರಪಂಚ ಅಚ್ಚರಿ ಹುಟ್ಟಿಸುವ ಸಂಗತಿಗಳಿಂದ ಕೂಡಿದೆ. ಅದನ್ನು ನೋಡುವ, ಕೇಳುವ ಕುತೂಹಲ ನಮಗಿರಬೇಕು ಅಷ್ಟೆ. ನಮ್ಮ ಪಂಚೇಂದ್ರಿಯಗಳಿಗೆ ಸುಲಭಕ್ಕೆ ನಿಲುಕುವ, ನಮ್ಮನ್ನು ಇನ್ನಷ್ಟು ಸವಿಯಲು ಉತ್ತೇಜನಗೊಳಿಸುವ ವಿಸ್ಮಯಕಾರಿ ಪ್ರಪಂಚ ಯಾವಾಗಲೂ ನಮ್ಮ ಕೈಗೆಟುಕುವಷ್ಟು ದೂರದಲ್ಲೇ ಇರುತ್ತದೆ.

ಇದನ್ನು ಕೆಲವರು ‘ಸಾಮಾನ್ಯ ಜ್ಞಾನ’ ಎನ್ನುತ್ತಾರೆ. ಆದರೆ, ನಾನು ಇದನ್ನು ‘ಅಸಾಮಾನ್ಯ ಜ್ಞಾನ’ ಎನ್ನಲು ಇಷ್ಟಪಡುತ್ತೇನೆ. ಏಕೆಂದರೆ, ನಮ್ಮ ಶಾಲಾ-ಕಾಲೇಜಿನ ಅಥವಾ ಪಠ್ಯಪುಸ್ತಕದ ಓದು ಎಲ್ಲಿ ನಮ್ಮ ಕೈ ಬಿಡುತ್ತದೋ, ಅಲ್ಲಿ, ಜೀವನದುದ್ದಕ್ಕೂ ನಾವು ಪಡೆದುಕೊಂಡ ಈ ‘ಅಸಾಮಾನ್ಯ ಜ್ಞಾನ’ ನಮ್ಮ ಕೈ ಹಿಡಿಯುತ್ತದೆ.

ಈ ಅಸಾಮಾನ್ಯ ಜ್ಞಾನ ನಮಗೆ ಎಲ್ಲಿ ಪ್ರಯೋಜನಕ್ಕೆ ಬರುತ್ತದೆ? ಕೆಲಸದ ಸಂದರ್ಶನಗಳಲ್ಲಿ, ಉನ್ನತ ವಿದ್ಯಾಭ್ಯಾಸಗಳ ಪ್ರವೇಶ ಪರೀಕ್ಷೆಗಳಲ್ಲಿ, ವಿವಿಧ ಅಪ್ಟಿಟ್ಯೂಡ್ ಟೆಸ್ಟ್​ಗಳಲ್ಲಿ, ಇತ್ಯಾದಿ. ಇಷ್ಟು ಮಾತ್ರವಲ್ಲ, ಸದಾ ನಮ್ಮನ್ನು ಮೌಲ್ಯಮಾಪನ ಮಾಡುವ ಈ ಸ್ಪರ್ಧಾತ್ಮಕ ಪ್ರಪಂಚದಲ್ಲಿ ನಮ್ಮನ್ನು ಭೇಟಿಯಾಗುವ ಪ್ರತಿಯೊಬ್ಬ ಅಪರಿಚಿತನ ಮುಂದೆಯೂ ನಾವು ಸಾಮಾನ್ಯವಾಗಿ ಪ್ರದರ್ಶನಕ್ಕಿಡಬೇಕಾದ್ದು, ಈ ‘ಅಸಾಮಾನ್ಯ ಜ್ಞಾನ’ವನ್ನು. ಸುಲಭಕ್ಕೆ ತುಲನೆಗೆ ಸಿಕ್ಕುವುದು ಹಾಗೂ ನಮ್ಮ ಬಗ್ಗೆ ಜನರಲ್ಲಿ ಕ್ಷಣಗಳಲ್ಲಿ ಸದಭಿಪ್ರಾಯ/ದುರಭಿಪ್ರಾಯ ಮೂಡುವಂತೆ ಮಾಡುವುದು ಈ ‘ಅಸಾಮಾನ್ಯ ಜ್ಞಾನ’.

ಅಲ್ಲಿಗೆ, ಜನರು ನಮ್ಮನ್ನು ಒರೆಹಚ್ಚಿ ನೋಡುವುದು ನಮ್ಮ ‘ಸಾಮಾನ್ಯ ಜ್ಞಾನ’ವನ್ನು ಅಳತೆಗೋಲಾಗಿಸಿಕೊಂಡು ಎಂದಾಯ್ತು. ಹಾಗಾದರೆ, ‘ಸಾಮಾನ್ಯ ಜ್ಞಾನ’ವನ್ನು ಪಡೆದುಕೊಳ್ಳುವುದು ಹೇಗೆ? ಸುಲಭೋಪಾಯಗಳೇನಾದರೂ ಇವೆಯೆ?

ಇದೆ ಹಾಗೂ ಇಲ್ಲ. ಪರಿಶ್ರಮಕ್ಕೆ ಖಂಡಿತ ಪರ್ಯಾಯವಿಲ್ಲ. ಆದರೆ, ನಾವು ಯಾವುದಾದರೂ ವಿಷಯದ ಬಗ್ಗೆ ಕುತೂಹಲ ತಳೆದರೆ, ಆ ವಿಷಯ ತಿಳಿದುಕೊಳ್ಳುವ ಕ್ರಿಯೆ ನಮಗೆ ಪ್ರಯಾಸವೆನಿಸುವುದಿಲ್ಲ. ಬದಲಿಗೆ, ಮನರಂಜಕವೆನಿಸುತ್ತದೆ. ನಮ್ಮ ಸುತ್ತಲಿನ ಪ್ರಪಂಚದ ವಿಸ್ಮಯಗಳನ್ನು ಆಯ್ದುಕೊಂಡು ನಮ್ಮ ಸ್ಮೃತಿಪಟಲದ ಮೇಲೆ ಕಾಯಂ ಆಗಿ ದಾಖಲಿಸಿಕೊಳ್ಳುವ ಸಣ್ಣ ಸುಲಭ ಮಾರ್ಗಗಳು ಖಂಡಿತ ಇವೆ-

ದಿನಪತ್ರಿಕೆಗಳು: ಇವು, ದಿನವೂ ಹೊರಗಿನ ಪ್ರಪಂಚದ ಸಾಮಾನ್ಯ ಜ್ಞಾನವನ್ನು ನಮ್ಮ ಮನೆಬಾಗಿಲಿಗೇ ತಂದು ತಲುಪಿಸುತ್ತವೆ. ನೀವು ದಿನವೂ ವೃತ್ತಪತ್ರಿಕೆಯನ್ನು ಓದುವ ಹವ್ಯಾಸ ಬೆಳೆಸಿಕೊಂಡಲ್ಲಿ ಅರ್ಧಯುದ್ಧ ಗೆದ್ದಂತೆ. ರಾಜಕೀಯ ವಿದ್ಯಮಾನಗಳು, ದೇಶ-ವಿದೇಶದ ಆಗುಹೋಗುಗಳು, ವಾಣಿಜ್ಯ ಸಮಾಚಾರ, ಆಟೋಟಗಳ ವಿಚಾರ- ಇವೆಲ್ಲವನ್ನೇ ಅಲ್ಲವೇ ನಾವು ಒಟ್ಟಾಗಿ ಸಾಮಾನ್ಯ ಜ್ಞಾನ ಎಂದು ಕರೆಯುವುದು? ಇವೆಲ್ಲವನ್ನೂ ಒಂದು ದಿನಪತ್ರಿಕೆ ನಿತ್ಯವೂ ಕ್ರಮಬದ್ಧವಾಗಿ ಪ್ರಸ್ತುತಪಡಿಸುತ್ತದೆ. ಆದ್ದರಿಂದಲೇ ಸಾಮಾನ್ಯ ಜ್ಞಾನದ ಅರಿಕೆಯಲ್ಲಿ ದಿನಪತ್ರಿಕೆ ಓದುವ ಅಭ್ಯಾಸ ಕಡ್ಡಾಯವಾಗಿ ಇರಲೇಬೇಕು.

ಇದೇ ಜ್ಞಾನವನ್ನು ಟಿವಿ ನೋಡಿ ಅಥವಾ ಅಂತರ್ಜಾಲವನ್ನು ಜಾಲಾಡುತ್ತ ಲೀಲಾಜಾಲವಾಗಿ ಪಡೆಯಬಹುದಲ್ಲ ಎಂದು ವಾದಿಸಬಹುದು. ಆದರೆ ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಓದುವಾಗ ನಮ್ಮ ಕಲ್ಪನಾಶಕ್ತಿ ಹೆಚ್ಚು ಸಕ್ರಿಯವಾಗಿರುತ್ತದೆ, ಅದೇ ಟಿವಿ ನೋಡುವಾಗ ನಾವು ವಿರಾಮ ಮನಃಸ್ಥಿತಿಯಲ್ಲಿರುವುದರಿಂದ, ನಮ್ಮ ಗ್ರಹಣಶಕ್ತಿ ಕುಂಠಿತವಾಗಿರುತ್ತದೆ. ಆದ್ದರಿಂದಲೇ, ದಿನಪತ್ರಿಕೆಗಳಿಂದ ನಾವು ಪಡೆದುಕೊಂಡ ಸಾಮಾನ್ಯ ಜ್ಞಾನ, ದೃಶ್ಯ-ಶ್ರವ್ಯ ಮಾಧ್ಯಮಗಳಿಂದ ಪಡೆದುಕೊಂಡ ಸಾಮಾನ್ಯ ಜ್ಞಾನಕ್ಕಿಂತ ಹೆಚ್ಚು ಕಾಲ ನಮ್ಮೊಂದಿಗಿರುತ್ತದೆ.

ಪುಸ್ತಕ ಓದುವುದು: ದಿನಪತ್ರಿಕೆ ಓದಿನ ಮುಂದಿನ ಹಂತ ಪುಸ್ತಕ ಓದುವುದು. ಓರ್ವ ಸಾಮಾನ್ಯ ಜ್ಞಾನದ ವಿದ್ಯಾರ್ಥಿ ದೃಷ್ಟಿಯಲ್ಲಿ ದಿನಪತ್ರಿಕೆಯ ಓದನ್ನು ಪ್ರಾಥಮಿಕ/ಮಾಧ್ಯಮಿಕ ಶಿಕ್ಷಣಕ್ಕೆ ಹೋಲಿಸಬಹುದಾದರೆ, ಪುಸ್ತಕ ಓದುವುದನ್ನು ಪ್ರೌಢ/ಉನ್ನತ ವ್ಯಾಸಂಗಕ್ಕೆ ಹೋಲಿಸಬಹುದು. ಪುಸ್ತಕಗಳು ನಮಗೆ ಬೇರೆ-ಬೇರೆ ಪ್ರಪಂಚಗಳನ್ನು ತೆಗೆದಿಡುವ ಮಾಯಾಕಿಟಕಿಗಳಿದ್ದಂತೆ. ಯಾವುದೇ ಯಶಸ್ವಿ ವ್ಯಕ್ತಿಯನ್ನು ಕೇಳಿ ನೋಡಿ- ಆತನ/ಆಕೆಯ ಹವ್ಯಾಸಗಳಲ್ಲಿ ಪುಸ್ತಕ ಓದುವ ಹವ್ಯಾಸ ಮೊದಲ ಸ್ಥಾನದಲ್ಲಿರುತ್ತದೆ.

ಆಟೋಟಗಳು: ಯೋಜನೆ ಮಾಡುವುದು, ಕಾರ್ಯತಂತ್ರ ರಚಿಸುವುದು, ಪರ್ಯಾಯಗಳನ್ನು ಹುಡುಕುವುದು, ತಂಡವಾಗಿ ಕಾರ್ಯನಿರ್ವಹಿಸುವುದು- ಇವುಗಳನ್ನು ಶಾಲೆಯಲ್ಲಿ ಪಠ್ಯಗಳ ಮುಖೇನ ಕಲಿಸುವುದು ಅಸಾಧ್ಯ. ನೆರೆಹೊರೆಯ ಬಗೆಬಗೆಯ (ಬೇರೆಬೇರೆ ಶಾಲೆಗಳಲ್ಲಿ ಓದುವ, ವಿವಿಧ ಆರ್ಥಿಕ ಮತ್ತು ಸಾಮಾಜಿಕ ಸ್ತರಗಳಿಂದ ಬಂದ) ಹುಡುಗ-ಹುಡುಗಿಯರು ಈ ಪಾಠಗಳನ್ನು ಆಟಗಳ ಮೂಲಕ ಸುಲಭವಾಗಿ ಹೇಳಿಕೊಡಬಲ್ಲರು. ಎಲ್ಲಕ್ಕೂ ಮುಖ್ಯವಾಗಿ ಕ್ರೀಡೆಗಳು ನಮಗೆ ‘ಸೋಲುವುದನ್ನು’ ಕಲಿಸುತ್ತವೆ. ‘ಸೋತಾಗ ನಾವು ಮಾಡಬೇಕಾದ್ದಿಷ್ಟೆ. ಸೋಲೊಪ್ಪಿಕೊಳ್ಳಬಾರದು. ಬದಲಾಗಿ, ಸೋಲು ಕಲಿಸುವ ಪಾಠಗಳನ್ನು ಮಾತ್ರ ಒಪ್ಪಿಕೊಳ್ಳಬೇಕು. ಸೋಲಿನ ನಿಜವಾದ ಕಾರಣಗಳಿಗೂ ಮೇಲ್ನೋಟಕ್ಕೆ ಕಾಣುವ ನೆವಗಳಿಗೂ ಇರುವ ವ್ಯತ್ಯಾಸವನ್ನು ಕಂಡುಕೊಳ್ಳಬೇಕು. ಈ ಕಾರಣಗಳಲ್ಲೇ ಅಡಗಿರುವುದು ನಮ್ಮ ನ್ಯೂನತೆಗಳ/ದೌರ್ಬಲ್ಯಗಳ ಪಟ್ಟಿ. ಈ ಪಟ್ಟಿ ನಮಗೆ ದೊರಕುವುದು ವಸ್ತುನಿಷ್ಠವಾದ ಆತ್ಮಾವಲೋಕನದಿಂದ ಮಾತ್ರ’ ಎಂಬಿತ್ಯಾದಿ ಪಾಠಗಳು ನಮಗೆ ಕ್ರೀಡಾಂಗಣಗಳಲ್ಲಿ, ಮೈದಾನಗಳಲ್ಲಿ ಮತ್ತು ಮನೆಯ ಹೊರಗೆ ಆಡುವ ಆಟಗಳಿಂದ ಮಾತ್ರ ಲಭ್ಯ.

ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು: ಓದು ಬುದ್ಧಿಗೆ ಸೋಪಾನ ವಾದರೆ. ಪಠ್ಯೇತರ ಚಟುವಟಿಕೆಗಳು ಆತ್ಮವಿಶ್ವಾಸದ ಮಜಲುಗಳು. ಸಾಂಸ್ಕೃತಿಕ ಚಟುವಟಿಕೆಗಳಾದ ಕಲೆ, ಸಂಗೀತ, ಸಾಹಿತ್ಯ, ನಾಟಕ, ಚರ್ಚೆ, ಬರವಣಿಗೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ವಿದ್ಯಾರ್ಥಿಗಳು ಸಹಜವಾಗಿಯೇ ಜೀವನದಲ್ಲಿ ಮುಂದೆ ಬಂದಿರುವುದನ್ನು ನೋಡುತ್ತೇವೆ. ಏಕೆಂದರೆ, ಆತ್ಮವಿಶ್ವಾಸಕ್ಕೆ ಸಹಜಪ್ರತಿಭೆಗಿಂತ ಹೆಚ್ಚಿನ ಶಕ್ತಿಯಿದೆ. ಪ್ರತಿಭೆ ನಮ್ಮನ್ನು ಒಂದೆರಡು ಕ್ಷೇತ್ರಗಳಲ್ಲಿ ಯಶಸ್ವಿಯಾಗಿಸಬಲ್ಲದು. ಆದರೆ ವಿವಿಧ ಕ್ಷೇತ್ರಗಳಲ್ಲಿನ ಪ್ರದರ್ಶನಗಳಿಗೆ ಪೂರಕ ತಯಾರಿಯ ಫಲಿತಾಂಶವಾದ ಸಕಾರಾತ್ಮಕ ಆತ್ಮವಿಶ್ವಾಸ, ನಮ್ಮ ಇಡೀ ಜೀವನವನ್ನೇ ಯಶಸ್ವಿಯಾಗಿಸಬಲ್ಲದು.

ದಿನಕ್ಕೆ ಸ್ವಲ್ಪ ಹೊತ್ತು ಏನೂ ಮಾಡದಿರುವುದು: ಹೌದು, ವೃಥಾ ಕಾಲಹರಣ ಅಂತಾರಲ್ಲ, ಅದು! ಮಲಗುವ ಮುನ್ನ ಅರೆಜಾಗ್ರತಾವಸ್ಥೆಯಲ್ಲಿ ಶೂನ್ಯವನ್ನು ದಿಟ್ಟಿಸುವುದಲ್ಲ. ಬದಲಿಗೆ, ಮನಸ್ಸು-ದೇಹಗಳು ಅತ್ಯಂತ ಸಕ್ರಿಯ ಸ್ಥಿತಿಯಲ್ಲಿರುವಾಗ ಯೋಜಿತವಾಗಿ ಏನೂ ಮಾಡದೆ ಸುಮ್ಮನೆ ಅದೂ-ಇದೂ ಮಾಡಲು ಬಿಡುವುದು. ಮಕ್ಕಳು ಸುತ್ತಲಿನ ಪ್ರಪಂಚದ ಬಗ್ಗೆ ಕಲಿಯುವುದು ಇಂಥ ವೃಥಾ ಸ್ಥಿತಿಯಲ್ಲಿಯೇ. ವಸ್ತುಗಳನ್ನು ತಿರುಗಿಸಿಮುರುಗಿಸಿ ನೋಡುವುದು, ಮುಟ್ಟುವುದು, ವಾಸನೆ ನೋಡುವುದು, ತಟ್ಟಿ ಶಬ್ದ ಕೇಳುವುದು, ರುಚಿ ನೋಡುವುದು- ಹೀಗೆ ಪಂಚೇಂದ್ರಿಯಗಳ ಮೂಲಕ ಪ್ರಪಂಚವನ್ನು ಗ್ರಹಿಸುವುದು, ಮಕ್ಕಳು ಏನೂ ಮಾಡದಿದ್ದಾಗಲೇ. ಇದು, ಮಕ್ಕಳಿಗೆ ನಾವು ಮನೆಯಲ್ಲಿ ಕೊಡಬಹುದಾದ ಅತಿದೊಡ್ಡ ‘ಎಕ್ಸ್​ಪೀರಿಯನ್ಷಲ್ ಲರ್ನಿಂಗ್’ ಅಥವಾ ಅನುಭವಾತ್ಮಕವಾದ ಕಲಿಕೆ. ಜೀವನದಲ್ಲಿನ ನಮ್ಮ ಯಶಸ್ಸಿಗೂ ನಮ್ಮ ಸಾಮಾನ್ಯ ಜ್ಞಾನಕ್ಕೂ ತುಂಬ ಹತ್ತಿರದ ನೆಂಟಸ್ತನವಿದೆ. ನಮ್ಮ ಸಾಮಾನ್ಯ ಜ್ಞಾನ, ನಾವು ಪ್ರಪಂಚವನ್ನು ನೋಡುವ ರೀತಿಯನ್ನು ಹಾಗೂ ಪ್ರಪಂಚ ನಮ್ಮನ್ನು ನೋಡುವ ರೀತಿಯನ್ನು ಏಕಕಾಲದಲ್ಲಿ ಬದಲಿಸಬಲ್ಲದು.

ಮಕ್ಕಳೇ! ನಿಮಗೆ ’ಏನು ಗೊತ್ತು, ಎಷ್ಟು ಗೊತ್ತು’ ಎಂದು ಪ್ರಪಂಚ ನಂಬುತ್ತದೋ ಅದೇ ನೀವು. ಅಲ್ಲಿಗೆ, ನಿಮ್ಮ ಸಾಮಾನ್ಯ ‘ಅಸಾಮಾನ್ಯ ಜ್ಞಾನ’ವೇ ನೀವು. ಅದಕ್ಕೇ, ಇಂದೇ ನಿಮ್ಮ ಕ್ಷಿತಿಜವನ್ನು ವಿಸ್ತರಿಸಿಕೊಳ್ಳುವ ಕೆಲಸವನ್ನು ಪ್ರಾರಂಭಿಸಿ. ತೆರೆದ ಮನಸ್ಸಿನಿಂದ, ತೆರೆದ ಶಾಲಾ-ಕಾಲೇಜುಗಳನ್ನು ಪ್ರವೇಶಿಸಿ.

ಪೋಷಕರೇ! ನಿಜ. ರ್ಯಾಂಕ್ ಅಥವಾ ಶೇ.99 ಅಂಕ ಗಳಿಸಿ ಪತ್ರಿಕೆಗಳಲ್ಲಿ ಫೋಟೋ ಹಾಕಿಸಿಕೊಂಡ ಮಕ್ಕಳಂತೆ ತಮ್ಮ ಮಕ್ಕಳೂ ಆಗಬೇಕೆಂದು ಪೋಷಕರು ಅಪೇಕ್ಷಿಸುವುದು ಸಹಜವೇ! ಆದರೆ, ಜೀವನದಲ್ಲಿನ ಯಶಸ್ಸಿಗೂ ರ್ಯಾಂಕಿಗೂ, ಅಥವಾ ಶೇ.99 ಅಂಕಕ್ಕೂ ಜೀವನಪರ್ಯಂತ ಸಂತೋಷಕ್ಕೂ ನೇರಸಂಬಂಧ ಇಲ್ಲವೆನ್ನುವುದು ಎಂದೋ ಸ್ಥಾಪಿತವಾಗಿದೆ. ನಮ್ಮ ಮಕ್ಕಳು ಚೆನ್ನಾಗಿ ಓದಲಿ. ಆದರೆ ಕುಡುಮಿಗಳೋ ಪುಸ್ತಕದ ಬದನೆಕಾಯಿಗಳೋ ಮಾತ್ರ ಆಗಿಬಿಡುವುದು ಬೇಡ. ಶಾಲೆ ಆರಂಭಗೊಂಡಿರುವ ಹೊತ್ತಿನಲ್ಲಿ, ಮಕ್ಕಳ ಜೀವನದ ಕಲಿಕೆ, ಶಾಲೆಯ ಒಳಗಿನಷ್ಟೇ ಹೊರಗೂ ಆಗಲಿ!

(ಲೇಖಕರು ಸಂವಹನ ಸಲಹೆಗಾರರು)

Leave a Reply

Your email address will not be published. Required fields are marked *

Back To Top