Thursday, 15th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಸುಖ ಸರ್ಕಾರಕ್ಕೆ ಹನ್ನೆರಡು ಸೂತ್ರಗಳು!

Sunday, 20.05.2018, 3:03 AM       No Comments

| ಎನ್​. ರವಿಶಂಕರ್​

ಒಂದೇ ಪಕ್ಷ ಮೇಲುಗೈ ಸಾಧಿಸಿ ಸ್ಥಿರಸರ್ಕಾರದ ಆಶಯವನ್ನು ಹುಟ್ಟುಹಾಕದಿರುವ ಈ ಚುನಾವಣೆಯ ಫಲಿತಾಂಶ ರಾಜಕೀಯದ ಕಚ್ಚಾಟ, ಕಿತ್ತಾಟ, ಕೀಳಾಟ, ಮೇಲಾಟಗಳ ಕುರಿತಂತೆ ಸುದ್ದಿವಾಹಿನಿಗಳಿಗೆ ಮತ್ತಷ್ಟು ಸರಕುಗಳನ್ನು ಒದಗಿಸಬಹುದು! ಸದ್ಯ! ಇನ್ನೈದು ವರ್ಷ, ಅಥವಾ ಮತ್ತೊಮ್ಮೆ ಚುನಾವಣೆ ಘೊಷಣೆಯಾಗುವವರೆಗೆ ಸುದ್ದಿಗಂತೂ ಬರವಿಲ್ಲ! ಸುದ್ದಿವಾಹಿನಿಗಳ ಈವರೆಗಿನ ಮೂಲಗ್ರಾಸವಾದ ‘ರಾಜಕೀಯ ಚಟುವಟಿಕೆ’ಯ ದೃಷ್ಟಿಯಿಂದ ಮುಂದಿನ ಐದು ವರ್ಷ ಹೇಗಿರುತ್ತದೋ ಗೊತ್ತಿಲ್ಲ. ಕುರ್ಚಿಯಲ್ಲಿ ಕುಳಿತವರು ಇರುವವರೆಗೆ, ಅವರನ್ನು ಕೆಳಕ್ಕಿಳಿಸಲು ಪ್ರಯತ್ನಿಸುವವರೂ ಇರುವುದು ಸರ್ವವಿದಿತ. ಆದರೆ, ಆಡಳಿತಾತ್ಮಕವಾಗಿ ಕ್ಷಿಪ್ರಪ್ರಗತಿ ಸಾಧ್ಯವೇ ಎನ್ನುವುದು ಮಾತ್ರ ಸದ್ಯದ ಪ್ರಶ್ನೆ. ರಾಜಕೀಯ ಸುಭದ್ರತೆಯೂ, ಆಡಳಿತ ಕ್ಷಮತೆಯೂ ಬಿಡಿಸಲಾಗದಂತೆ ಹೆಣೆದುಹೋಗಿರುವುದರಿಂದ, ಒಂದನ್ನು ಬಿಟ್ಟು ಇನ್ನೊಂದರ ಬಗ್ಗೆ ಮಾತನಾಡುವಂತಿಲ್ಲ. ಹಾಗಾದರೆ, ತಮ್ಮ ಆಡಳಿತಾವಧಿ ಸುಖಕರವಾಗಿರಬೇಕಾದರೆ, ಸರ್ಕಾರಗಳು ಏನು ಮಾಡಬೇಕು? ಅಥವಾ ಮಾಡಬಾರದು? ಸಿಂಹಾಸನದ ಮೇಲೆ ಕೂರುವವರಿಗೆ, ಬಿಟ್ಟಿಸಲಹೆ ಕೊಡುವವರ ಬರವೇ? ಹೀಗೆ ಮಾಡಿ, ಹಾಗೆ ಮಾಡಬೇಡಿ. ಆ ನೀತಿ ಜಾರಿಗೆ ತನ್ನಿ, ಇದನ್ನು ಜಾರಿಗೆ ತಂದರೆ ನಿಮಗೆ ತೊಂದರೆ. ನಿಮ್ಮ ಕುರ್ಚಿಯ ಕಾಲಿಗೆ ಇಂತಹ ರಂಗಿನ ಫೆವಿಕಾಲನ್ನೇ ಹಾಕಿ- ಕೇಳದಿದ್ದರೂ ನೂರೆಂಟು ಉಪಚಾರದ ಮಾತು. ಇವೆಲ್ಲವೂ, ಬಹುತೇಕ ಯಾವ ವಿಷಯವಾಗಿ ಎಂತಹ ನಿರ್ಧಾರ ತೆಗೆದುಕೊಂಡರೆ ಒಳ್ಳೆಯದು ಎಂಬುದರ ಬಗೆಗಿನ ನಿರ್ದಿಷ್ಟ ಸಲಹೆ-ಸೂಚನೆಗಳು.

ಆದರೆ, ಇವೆಲ್ಲ ಮಾಡಲು- ಆಡಳಿತದ ಚುಕ್ಕಾಣಿ ಕೈಯಲ್ಲಿ ಹಿಡಿದು, ಸಮರ್ಥವಾಗಿ ನಿರ್ಧಾರಗಳನ್ನು ಕೈಗೊಳ್ಳಬೇಕಾದರೆ, ಒಂದು ಪೂರ್ವಾಪೇಕ್ಷಿತ ಪರಿಸ್ಥಿತಿ ಇರಲೇಬೇಕು. ಅದೇನೆಂದರೆ, ನಮ್ಮನ್ನಾಳುವ ಪ್ರಭುಗಳ ನಿತ್ಯಶಾಂತಿಗೆ ಭಂಗ ಬರಬಾರದು. ಹಾಗೆ ಶಾಂತಿ ಕದಡದಿರಲು, ಅವರ ಆಡಳಿತ ಕಚೇರಿಗಳ ಪಡಸಾಲೆಗಳಲ್ಲಿ ಆಡಳಿತ ನಡೆಸಬಹುದಾದಷ್ಟು ಸೌಖ್ಯ ಮನೆಮಾಡುವಂತಾಗಲು, ನಮ್ಮ ಪ್ರಭುಗಳಾದವರು ಯಾವಾಗ-ಯಾರೊಡನೆ-ಯಾವ ನೀತಿ ಅನುಸರಿಸಬೇಕು ಎನ್ನುವ ವಿವೇಚನೆ ತೋರುವುದು ಮುಖ್ಯ. ಸರ್ಕಾರ ನಡೆಸುವವರು ತಮ್ಮತಮ್ಮೊಳಗೆ ಶಾಂತಿಯಿಂದಿದ್ದರೆ, ಜನರೂ ನೆಮ್ಮದಿಯಾಗಿರುತ್ತಾರೆ. ಯಥಾ ರಾಜಾ, ತಥಾ ಪ್ರಜಾ! ಈ ವಿಷಯದಲ್ಲಂತೂ, ಪ್ರಜಾಪ್ರಭುತ್ವ ಬಲವಾಗಿ ಮತ್ತು ಖಂಡಿತವಾಗಿ ಕೆಲಸ ಮಾಡುತ್ತದೆ! ಸುಖಸಂಸಾರಕ್ಕೆ 12 ಸೂತ್ರಗಳಿದ್ದಂತೆ, ಇದು, ಸುಖಸರ್ಕಾರಕ್ಕೆ ಅವಶ್ಯಕವಾದ ನನಗೆ ತೋಚಿದ ಒಂದು ಡಜನ್ ಸುಲಭಸೂತ್ರಗಳು-

ಲಕ್ಷ್ಯ-ಕೇಂದ್ರಿತ ನಿರ್ವಹಣೆ: ಯಾವ ಕೆಲಸವನ್ನೇ ಮಾಡಬೇಕಾದರೂ, ಸಹಜವಾಗಿ ಗುರಿಯನ್ನಿಟ್ಟುಕೊಂಡೇ ಮುನ್ನುಗ್ಗುತ್ತೇವೆ ಅಥವಾ ಹಾಗೆಂದುಕೊಂಡಿರುತ್ತೇವೆ. ನಿರ್ವಹಣಾಶಾಸ್ತ್ರದ ಮೊದಲನೇ ಪಾಠವೇ ಈ ‘ಮ್ಯಾನೇಜ್​ವೆುಂಟ್ ಬೈ ಆಬ್ಜೆಕ್ಟಿವ್ಸ್’. ಸರ್ಕಾರ ನಡೆಸುವವರು ಇದಕ್ಕೆ ಒಂದು ಸಣ್ಣ ಮಾರ್ಪಾಡು ಮಾಡಿಕೊಂಡು ‘ಮ್ಯಾನೇಜ್​ವೆುಂಟ್ ಬೈ ಸ್ಟೇಟೆಡ್ ಆಬ್ಜೆಕ್ಟಿವ್ಸ್’/‘ಘೊಷಿತ ಲಕ್ಷ್ಯ-ಕೇಂದ್ರಿತ ನಿರ್ವಹಣೆ’ ಎಂದು ಮಾಡಿಕೊಂಡರೆ ಆಡಳಿತದ ಮೂಲಮಂತ್ರ ಸುಲಭವಾಗಿ ಸ್ಥಾಪಿಸಿದಂತಾಗುತ್ತದೆ. ತೋರಬೇಕಾದ ಪ್ರಗತಿಗೆ ಒಂದು ದಿಕ್ಕು ಬರುತ್ತದೆ. ಮುಂದೆ ಉದ್ಭವಿಸಬಹುದಾದ ಅನೇಕ ಆಡಳಿತಾತ್ಮಕ ಪ್ರಶ್ನೆಗಳಿಗೆ ಈ ಘೊಷಿತ ಲಕ್ಷ್ಯದ ಅನುಷ್ಠಾನದಲ್ಲೇ ಉತ್ತರವೂ ಹುದುಗಿರುತ್ತದೆ.

ಫಲಿತಾಂಶವನ್ನು ಮುಂಗಡವಾಗಿ ನಿರ್ಧರಿಸಿ, ಸಾಧಿಸಿದಾಗ ಸಂಭ್ರಮಿಸಿ: ಲಕ್ಷ್ಯವು ಏನು ಮಾಡಬೇಕು ಎನ್ನುವುದರ ದೂರದೃಷ್ಟಿಯಾದರೆ, ಅದರ ಮೌಲ್ಯಮಾಪನವಾಗುವುದು ಕೊನೆಗೆ ಸಿಗುವ ಫಲಿತಾಂಶದಲ್ಲಿ. ನಿರೀಕ್ಷಿಸಬಹುದಾದ ಫಲಿತಾಂಶವನ್ನು ವೈಜ್ಞಾನಿಕವಾಗಿ ಅಂದಾಜು ಮಾಡಿ, ಅದರ ಪ್ರಕಾರ ಅಧಿಕಾರಿಗಳಿಗೆ ‘ಟಾರ್ಗೆಟ್’ ನೀಡಬೇಕು. ಅಧಿಕಾರಿವರ್ಗ ಸರ್ಕಾರಗಳ ಗುರಿತಪ್ಪಿಸುವುದು ಈ ಟಾರ್ಗೆಟ್ ನಿರ್ಧಾರದ ಹಂತದಲ್ಲೇ. ಸರ್ಕಾರದ ಸಾಧನೆಗಳಿಗೆ ಹೊಳಪು ಬರಬೇಕಾದರೆ, ಸಾಧನೆಗಳನ್ನು ಮುಂಗಂಡು, ಅದರಂತೆ ಅಧಿಕಾರಿವರ್ಗವನ್ನು ನಿರ್ದೇಶಿಸಬೇಕು.

ಯುದ್ಧದಲ್ಲಿನ ಕಾಲಾಳುಗಳು ಭ್ರಮನಿರಸನಗೊಳ್ಳುವುದು, ಜಯದ ಕೀರ್ತಿ ಪ್ರಭುಗಳಿಗೆ ಮಾತ್ರ ಸೀಮಿತವಾದಾಗ. ಉದ್ದೇಶ ಸ್ಪಷ್ಟವಾಗಿದ್ದು, ಫಲಿತಾಂಶವನ್ನು ಮುಂಗಂಡು ಅದನ್ನು ಸಾಧಿಸಿಯೂ ಆದ ಮೇಲೆ, ಅದರ ಬಹುಪಾಲು ಕೀರ್ತಿ ಅಧಿಕಾರಿಗಳಿಗೆ ಮತ್ತು ಇಲಾಖೆಗಳಿಗೆ ಸಲ್ಲುವಂತಾಗಬೇಕು. ಫಲಿತಾಂಶವನ್ನು ಮತ್ತು ಅದನ್ನು ತಂದುಕೊಟ್ಟವರನ್ನು ಎಷ್ಟು ಸಂಭ್ರಮಿಸುತ್ತೇವೆಯೋ, ಮುಂದಿನ ಜವಾಬ್ದಾರಿಗಳನ್ನು ಅವರು ಅಷ್ಟೇ ಶ್ರದ್ಧೆಯಿಂದ ನಿರ್ವಹಿಸುತ್ತಾರೆ.

ಬಹಿರಂಗ ಪ್ರಶಂಸೆ, ಖಾಸಗಿ ಖಂಡನೆ: ಅಧಿಕಾರಿಗಳನ್ನು ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿರುವವರನ್ನು ಮುಕ್ತವಾಗಿ ಮತ್ತು ಸಾರ್ವಜನಿಕವಾಗಿ ಪ್ರಶಂಸಿಸುವ ಪ್ರವೃತ್ತಿ ಬೆಳೆಯಬೇಕು. ಆಗ, ಗೆಲುವಿನ ಮತ್ತು ಸೋಲಿನ ಹೊಣೆಯನ್ನು ಅಧಿಕಾರಿಗಳಿಗೆ ವರ್ಗಾಯಿಸಿದಂತಾಗುತ್ತದೆ. ವ್ಯವಸ್ಥೆ ಸಕ್ಷಮಗೊಳ್ಳುತ್ತದೆ. ಹಾಗೆಯೇ, ತಪ್ಪು ಮಾಡಿದ ಸಹಚರರು ಮತ್ತು ಅಧಿಕಾರಿಗಳನ್ನು ಖಾಸಗಿಯಾಗಿ ತರಾಟೆಗೆ ತೆಗೆದುಕೊಳ್ಳಿ- ಸಾರ್ವಜನಿಕವಾಗಿ ತಮ್ಮನ್ನು ಬಿಟ್ಟುಕೊಡದ, ಆದರೆ ಆಪ್ತಸಮಾಲೋಚನೆಯಲ್ಲಿ ನಿಷ್ಠುರವಾಗಿ ಬುದ್ಧಿವಾದ ಹೇಳುವ ನಾಯಕರನ್ನು ಎಲ್ಲರೂ ಗೌರವಿಸುತ್ತಾರೆ.

ಪ್ರಕ್ರಿಯೆಗೆ ಯಾರೂ ಹೊರತಲ್ಲ: ಸರ್ಕಾರಗಳು ಎಡವೋದು ಇಲ್ಲೇ! ರೂಲ್​ನ ಜತೆಜತೆಗೇ ಎಕ್ಸೆಪ್ಷನ್ ಅನ್ನೂ ತಂದಾಗ. ಸರ್ಕಾರದಪ್ರಕ್ರಿಯೆಯಲ್ಲಿ, ಕಾನೂನು- ನಿಯಮಾವಳಿ-ಅಧಿಸೂಚನೆಗಳ ಮಟ್ಟದಲ್ಲಿ ಅಥವಾ ಸಣ್ಣ-ಪುಟ್ಟ ಕ್ಷಮಾಪಣೆಗಳ ಮಟ್ಟದಲ್ಲಿ, ಎಂಥವ ರಿಗೂ ವಿನಾಯಿತಿ ಇಲ್ಲ ಎಂದಾದಾಗ, ವ್ಯವಸ್ಥೆ ಸದೃಢವಾಗುತ್ತದೆ. ಸರ್ಕಾರದ ಮೊದಲ ದಿನಗಳಲ್ಲೇ ಇದನ್ನು ಉದಾಹರಣೆಗಳ ಸಮೇತ ಜಾಹೀರಾಗಿಸಿದರೆ, ಮುಂದಿನ ಹಾದಿ ಸುಗಮ.

ಅರ್ಥ ಸರಿಯಿದ್ದರೆ ರಾಜ್ಯ ಸುಭಿಕ್ಷ: ಸರ್ಕಾರವೆನ್ನುವುದು ಸದಾ ಲಾಭ ಮಾಡಲೇಬೇಕಾದ ಉದ್ಯಮ! ಪ್ರತಿಯೊಂದು ಮಂತ್ರಾಲಯವೂ, ಇಲಾಖೆಯೂ ಒಂದು ‘ಪ್ರಾಫಿಟ್-ಸೆಂಟರ್’/ಲಾಭ-ಕೇಂದ್ರ ಇದ್ದಂತೆ. ಪ್ರತಿ ಅಧಿಕಾರಿಯೂ ಸಿಇಒ ಇದ್ದಂತೆ. ಸರ್ಕಾರದ ಬೊಕ್ಕಸಕ್ಕೆ ಹಣ ತರದ ಯಾವ ಚಟುವಟಿಕೆಯನ್ನಾದರೂ ಮಾಡುವ ಮುನ್ನ ನೂರು ಸಲ ಯೋಚಿಸಬೇಕು.

ಗೊತ್ತಿಲ್ಲದ್ದನ್ನು ಒಪ್ಪಿಕೊಳ್ಳುವುದು: ರಾಜಕಾರಣಿಗಳು, ಅದರಲ್ಲೂ ಯಾವುದಾದರೂ ಖಾತೆಯ ಜವಾಬ್ದಾರಿಯನ್ನು ಹೊರುವ ಸಚಿವರು, ತಮ್ಮ ಮಾತಿನ ಸುಳಿಯಲ್ಲಿ ತಾವೇ ಸಿಕ್ಕಿಕೊಳ್ಳುವುದರಲ್ಲಿ ನಿಸ್ಸೀಮರು. ಕೇಳಿದ ಪ್ರಶ್ನೆಗೆ ‘ಗೊತ್ತಿಲ್ಲ’ ಎನ್ನಲು ಮುಜುಗರವಾಗಿ, ಏನೋ ಉತ್ತರ ಕೊಡುತ್ತಾರೆ. ಅದನ್ನು ಸಮರ್ಥಿಸಿಕೊಳ್ಳಲಾಗದೆ, ಮತ್ತೊಂದು ಹಾರಿಕೆಯ ಉತ್ತರ. ಅದನ್ನು ಮುಚ್ಚಲು ಸಣ್ಣ ಸುಳ್ಳು. ಸಣ್ಣ ಸುಳ್ಳನ್ನು ಮುಚ್ಚಲು ದೊಡ್ಡದೊಂದು

ಅಪದ್ಧ. ಹೀಗೆ… ವಿನಾಕಾರಣ ಗೊತ್ತಿಲ್ಲದ್ದರೊಳಗೆ ಗಂಟುಹಾಕಿ ಕೊಂಡು ಒದ್ದಾಡುತ್ತಾರೆ. ‘ನನಗೆ ಈ ವಿಷಯ ಗೊತ್ತಿಲ್ಲ. ಸ್ವಲ್ಪ ಕಾಲಾವಕಾಶ ಕೊಡಿ, ತಿಳಿದುಕೊಂಡು ಹೇಳುತ್ತೇನೆ’- ಈ ಮಾತುಗಳು ಅತಿವಿರಳ. ಆದ್ದರಿಂದಲೇ, ಸ್ವಯಂಕೃತ ಒತ್ತಡ.

ಮಾಧ್ಯಮಗಳೊಂದಿಗೆ ಆಮ್್ಸರ್ಲೆಂಥ್ ಸಂಬಂಧ: ಮಾಧ್ಯಮಗಳನ್ನು ಗೌರವಿಸಿ. ಆದರೆ, ಮಾಧ್ಯಮಗಳ ಒತ್ತಡ-ಹೇರುವ ತಂತ್ರಗಳಿಗೆ ಹೆದರದಿರಿ. ಒಂದು ನಕಾರಾತ್ಮಕ ಸುದ್ದಿ ಹೊರಬಂದ ಕೂಡಲೆ, ಮಾಧ್ಯಮವನ್ನು ಸುಪ್ರೀತಗೊಳಿಸಲೆಂದೇ ನಿಮ್ಮ ಸಮಯವನ್ನು ಹೂಡದಿರಿ. ಸಂಕಷ್ಟದ ಸಮಯದಲ್ಲಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳು ಸರಿಯಾಗಿದ್ದರೆ, ಮಾಧ್ಯಮಗಳಿಗೆ ಉತ್ತರ ತಾನಾಗಿಯೇ ದೊರೆಯುತ್ತದೆ. ಮಾಧ್ಯಮಗಳನ್ನು ಸ್ನೇಹಿತರೆಂದೋ ವಿರೋಧಿಗಳೆಂದೋ ಬಗೆಯದೆ, ನಿರ್ಲಿಪ್ತ ಟಿಪ್ಪಣಿಕಾರರು ಎಂದು ಪರಿಭಾವಿಸಿದರೆ, ಅವರನ್ನು ಸಂತುಷ್ಟಗೊಳಿಸಲೆಂದು ಹೋಗಿ ಮುಜುಗರಕ್ಕೆ ಸಿಲುಕುವ ಅಗತ್ಯ ಬರುವುದಿಲ್ಲ.

ಒಂದೇ ‘ಥೀಮ್ ಸಾಲದು: ಸರ್ಕಾರವನ್ನು ಒಂದೇ ಶೀರ್ಷಿಕೆಯ ಅಡಿಯಲ್ಲಿ ನಡೆಸಲು ಸಾಧ್ಯವಿಲ್ಲ; 4-5 ಸಮಾನ ಶಕ್ತಿಯುಳ್ಳ ಶೀರ್ಷಿಕೆಗಳು ಬೇಕು. ಉದಾಹರಣೆಗೆ, ಉದ್ಯಮಾಭಿವೃದ್ಧಿ ಒಂದೇ ಶೀರ್ಷಿಕೆಯಾದರೆ, ಅಥವಾ ಗ್ರಾಮೀಣಾಭಿವೃದ್ಧಿ ಒಂದೇ ಥೀಮ್ ಆದರೆ, ಮಿಕ್ಕೆಲ್ಲವೂ ಸೊರಗುತ್ತವೆ. ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಉದ್ದೇಶಗಳುಳ್ಳ ಐದಾರು ಶೀರ್ಷಿಕೆಗಳಿದ್ದು, ಅದನ್ನು ಸಂಭಾಳಿಸುವ ಜವಾಬ್ದಾರಿ ಸಮರ್ಥ ನಾಯಕರ ಕೈಲಿದ್ದಾಗ ಸರ್ಕಾರ ಸೋಲಿನ ನಿಂದನೆಗೊಳಗಾಗುವ ಅಪಾಯವೂ ಕಡಿಮೆಯಾಗುತ್ತದೆ. ಒಂದು ಶೀರ್ಷಿಕೆ ದುರ್ಬಲವಾದರೆ ಮತ್ತೊಂದರ ಗಾಡಿ ಓಡುತ್ತಿರುತ್ತದೆ.

ಮಾಹಿತಿಯುಗಕ್ಕೆ ಅನುಗುಣರಾಗಿ: ಮಾಹಿತಿಯುಗದ ಸಾಧ್ಯತೆಗಳಲ್ಲಿ ನಂಬಿಕೆಯಿಟ್ಟರೆ, ಜನರನ್ನು ತಲುಪುವುದು ಸುಲಭ. ಇಂದು ಸ್ಮಾರ್ಟ್​ಫೋನ್ ಮತ್ತು ಸಾಮಾಜಿಕ ಮಾಧ್ಯಮಗಳು ಸರ್ಕಾರವನ್ನು ನೇರವಾಗಿ ಸುಶಿಕ್ಷಿತ ನಾಗರಿಕ ಸಮಾಜದೊಂದಿಗೆ ಬೆಸೆಯಬಲ್ಲವು. ಸರ್ಕಾರದ ನಿರ್ಧಾರಗಳಿಗೆ ಸುಶಿಕ್ಷಿತ ನಾಗರಿಕ ಸಮಾಜದ ಪರೋಕ್ಷ ಅನುಮೋದನೆ ಸಿಕ್ಕಾಗ, ಗೆಲುವು ಬಹುತೇಕ ಖಚಿತ. ಹಾಗೆಯೇ, ಪ್ರತಿಯೊಬ್ಬರ ಕೈಯಲ್ಲೂ ಒಂದಿಲ್ಲೊಂದು ಸಂಪರ್ಕ ಸಾಧನ ಇರುವ ಹೊತ್ತಿನಲ್ಲಿ, ಸಾಮಾನ್ಯ ಜನರ ನಾಡಿಮಿಡಿತ ಅರಿಯುವುದು ಹಿಂದಿನಷ್ಟು ಕಷ್ಟವಲ್ಲ. ಸರ್ಕಾರ ನಡೆಸುವವರು ಮಾಹಿತಿಯುಗದ ಉಪಕರಣಗಳನ್ನು ಸಮರ್ಪಕವಾಗಿ ಉಪಯೋಗಿಸಿದರೆ, ಜನರ ನಿರೀಕ್ಷೆ, ಆಶಯಗಳಿಗನುಗುಣವಾಗಿ ನಿರ್ಧಾರಗಳನ್ನು ಕೈಗೊಳ್ಳುವುದು ಸಾಧ್ಯ.

ಸಂಕಷ್ಟ ಬಂದಾಗ ಮುಕ್ತವಾಗಿ ರ್ಚಚಿಸಿ: ‘ಕ್ಲೋಸ್ಡ್-ಡೋರ್’ ರಾಜಕೀಯ, ಒಳ್ಳೆಯ ನಿರ್ಧಾರಗಳಿಗಷ್ಟೇ ಸೀಮಿತವಾಗಲಿ. ಸಂಕಷ್ಟ ಬಂದಾಗ ಎಲ್ಲರನ್ನೂ ತೊಡಗಿಸಿ. ಉದಾಹರಣೆಗೆ, ಸಂಕಷ್ಟದ ಪರಿಸ್ಥಿತಿಯಲ್ಲಿ, ಪತ್ರಕರ್ತರೂ ವಿರೋಧಿಗಳೂ ಸರ್ಕಾರ ದವರನ್ನು ಮೂಲೆಗೆ ನೂಕಿ ಪ್ರಶ್ನೆಗಳ ಸುರಿಮಳೆಗರೆಯುತ್ತಿರುವಾಗ ‘ನಮಗೆ ಸಲಹೆ ಬೇಕಿದೆ. ಈ ಪರಿಸ್ಥಿತಿಯಲ್ಲಿ ನೀವಿದ್ದಿದ್ದರೆ ಏನು ಮಾಡುತ್ತಿದ್ದಿರಿ?’ ಎಂದು ಅವರನ್ನು ವಿನಯದಿಂದಲೇ ಹಿಮ್ಮೆಟ್ಟಿಸುವ, ನಿಜಕ್ಕೂ ಅವರ ಸಲಹೆ ಪಡೆಯುವಷ್ಟು ಮುಕ್ತ ವಾತಾವರಣ ಬೆಳೆಸುವ ಪ್ರಯತ್ನ ಮಾಡಿದರೆ ಸಂಕಷ್ಟಗಳಿಗೆ ಹೆಚ್ಚು ಹೆದರಬೇಕಾಗಿಲ್ಲ.

ರಾಜಕಾರಣಿಗಳು ಆಡಳಿತಗಾರರಲ್ಲ: ಶಾಸಕರು ಶಾಸನಗಳನ್ನು ಸದುಪಯೋಗಕ್ಕೆ ಬರುವಂತೆ ಮಾಡುವ ಕೆಲಸವನ್ನೂ, ಕೆಲವೊಮ್ಮೆ ಕಾಲಕ್ಕನುಗುಣವಾಗಿ ಸಾಂವಿಧಾನಿಕ ಚೌಕಟ್ಟಿನಲ್ಲಿ ಶಾಸನಗಳನ್ನು ತಿದ್ದುವ ಕೆಲಸವನ್ನೂ ಮಾಡಿದರೆ, ಕೆಲಸದ ಅರ್ಧಪಾಲನ್ನು ಯಶಸ್ವಿಯಾಗಿ ನಿರ್ವಹಿಸಿದಂತೆ. ಮಿಕ್ಕರ್ಧ, ಆಡಳಿತ ವ್ಯವಸ್ಥೆಯನ್ನು ಸಬಲಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದರೆ, ಪೂರ್ಣಗೊಳ್ಳುತ್ತದೆ. ಅದನ್ನು ಬಿಟ್ಟು, ತಾವೇ ಆಡಳಿತ ಯಂತ್ರವನ್ನು ನೇರವಾಗಿ ನಿಯಂತ್ರಿಸುವ ಕೆಲಸಕ್ಕೆ ಕೈಹಾಕಿದರೆ, ವ್ಯವಸ್ಥೆ ಕುಸಿಯುತ್ತದೆ.

ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆಯಿರಲಿ: ರಾಜ್ಯಗಳು ಕೇಂದ್ರಕ್ಕೆ ಸದಾ ಗೋಣು ಆಡಿಸುತ್ತಿದ್ದರೆ, ನಮ್ಮ ಸುತ್ತಲಿನವರ ಹಿತಾಸಕ್ತಿಗಳನ್ನು ಒತ್ತೆಯಿಡಬೇಕಾಗುತ್ತದೆ. ಕೇಂದ್ರವೊಂದೇ ಕೇಂದ್ರಬಿಂದುವಾದಾಗ ಆಡಳಿತ ಪ್ರಕ್ರಿಯೆ ಸಹಜವಾಗಿಯೇ ಒತ್ತಡಕ್ಕೊಳಗಾಗುತ್ತದೆ. ಭಾರತದ ಅದ್ಭುತ ಶಕ್ತಿಯಾದ ಬಹುತ್ವವನ್ನು ಕಾಪಾಡಿಕೊಳ್ಳಬೇಕಾದರೆ- ಪ್ರಾಂತ್ಯಗಳು ಮತ್ತು ರಾಜ್ಯಗಳು ಆರ್ಥಿಕವಾಗಿ, ಆಡಳಿತಾತ್ಮಕವಾಗಿ ಸಬಲವೂ ಸ್ವಾಯತ್ತವೂ ಆಗಿರಬೇಕು. ಹಾಗಾಗಬೇಕಾದರೆ, ಸ್ಥಳೀಯ ಭಾಷೆಯಲ್ಲಿ ಆಡಳಿತ ನೀಡುವುದರ ಜತೆಜತೆಗೆ ಸ್ಥಳೀಯ ಆರ್ಥಿಕ ಮತ್ತು ಸಾಮಾಜಿಕ ಆಶಯಗಳನ್ನು ಕಾರ್ಯಯೋಜನೆಗಳಲ್ಲಿ ಅಳವಡಿಸಿಕೊಳ್ಳುವುದು ರಾಜಿಯಿಲ್ಲದ ಕ್ರಮವಾಗಬೇಕು. ರಾಜ್ಯ ಸರ್ಕಾರಗಳಿಗೆ ಕೇಂದ್ರದ ಇರವನ್ನು ಮರೆತು, ಇಲ್ಲಿಗನುಗುಣವಾದ ಆಡಳಿತ ನಡೆಸುವಷ್ಟು ಸ್ವಾತಂತ್ರ್ಯ ಮತ್ತು ಬೆಂಬಲ ಸಿಗಬೇಕು. ಆಗ ಇಲ್ಲಿಯೂ ಗೆಲ್ಲುತ್ತಾರೆ, ಅಲ್ಲಿಯೂ ಸಲ್ಲುತ್ತಾರೆ.

ಕೊನೆಯದಾಗಿ, ಜನರನ್ನು ಬುದ್ಧಿವಂತರೆಂದು ಪರಿಗಣಿಸಿ. ಸರ್ಕಾರಗಳು ತಪ್ಪು ಮಾಡುವುದು ನಿತ್ಯ ಆಡಳಿತದಲ್ಲೂ ‘ಚುನಾವಣೆ ರಾಜಕೀಯ’ ಮಾಡಿದಾಗಲೇ! ಹೊಸ ಸರ್ಕಾರದ ಹೊಸ್ತಿಲನ್ನು ಈಗಿನ್ನೂ ದಾಟಿ ಒಳಬಂದಿರುವವರು ಕನಿಷ್ಠ 4 ವರ್ಷವಾದರೂ (ಅಥವಾ ಮಧ್ಯಂತರದಲ್ಲೇ ಅದು ಅನಿವಾರ್ಯವಾಗಿ, ತನ್ನಿಂತಾನೇ ಹೆಗಲೇರುವವರೆಗೆ!) ಚುನಾವಣೆ ಬಗ್ಗೆ ತಲೆಕೆಡಿಸಿಕೊಳ್ಳದೆ ಇದ್ದರೆ, ಉತ್ತಮ ಆಡಳಿತವನ್ನು ನಿರೀಕ್ಷಿಸಬಹುದು. ಒಳ್ಳೆಯ ಆಡಳಿತದ ವಿಷಯಕ್ಕೆ ಬಂದಾಗ ಸಿದ್ಧತೆಯೇ ನಿಜವಾದ ಬದ್ಧತೆ. ಐದು ವರ್ಷದ(?) ವಿಸ್ತಾರವಾದ ಅವಧಿ ಮುಂದಿದೆ. ಅಗ್ನಿಪರೀಕ್ಷೆ ದಾಟಿ ಬಂದಮೇಲೆ, (ದಾಟಿ ಬರುವವರು ಯಾರೇ ಆದರೂ!), ಮುಂದಿನ ಒಂದೆರಡು ತಿಂಗಳು ಯೋಜನೆ ಮಾಡಲು ಸಮಯ ಹೂಡಿ. ಬರುವ ಪ್ರತಿಯೊಂದು ಸವಾಲನ್ನೂ ಅವಕಾಶವೆಂದೇ ಪರಿಗಣಿಸಿ, ಒಳ್ಳೆಯ ಅಡಳಿತ ನೀಡಲು ಬದ್ಧರಾಗಿ. ಅದಕ್ಕಾಗಿ, ಮೊದಲು ಸಿದ್ಧರಾಗಿ. ಮೊದಲು ಯೋಜನೆ ಮಾಡಿ, ಅನಂತರ ಕಾರ್ಯಪ್ರವೃತ್ತರಾಗಿ.

ಈಗ, ಎಲ್ಲಕ್ಕೂ ಮುಖ್ಯವಾದ, ಮೊದಲ ಹನ್ನೆರಡಕ್ಕೂ ಅಡಿಪಾಯವಾದ ಹದಿಮೂರನೆಯ ಸೂತ್ರ. ಜನಮನ್ನಣೆಯೆಂಬ ಮೃಷ್ಟಾನ್ನವನ್ನು ಹೊಟ್ಟೆತುಂಬ ಉಂಡಿರುವ ನೀವು, ಎಂದಿಗೂ ಭ್ರಷ್ಟಾಚಾರವೆಂಬ ಭಿಕ್ಷಾನ್ನಕ್ಕೆ ಕೈಚಾಚದಿರಿ. ಇಡೀ ಆಡಳಿತಯಂತ್ರದಲ್ಲಿ ಯಾರೂ ನೀಚದುಡ್ಡಿಗೆ ಕೈಚಾಚದಂತಹ ಪರಿಸ್ಥಿತಿ ನಿರ್ವಿುಸಿ. ನಮ್ಮ ಸುಂದರ ನಾಡನ್ನು ಎಲ್ಲ ರೀತಿಯಲ್ಲಿಯೂ ಸ್ವಚ್ಛವಾಗಿಡಿ!

(ಲೇಖಕರು ಸಂವಹನ ಸಲಹೆಗಾರರು)

Leave a Reply

Your email address will not be published. Required fields are marked *

Back To Top