Thursday, 15th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಫ್ಲಿಪ್​ಕಾರ್ಟ್ ಯಶಸ್ಸು ನವೋದ್ಯಮಕರ್ತರಿಗೆ ಪ್ರೇರಣೆ

Sunday, 13.05.2018, 3:04 AM       No Comments

| ಎನ್​. ರವಿಶಂಕರ್​

ಫ್ಲಿಪ್​ಕಾರ್ಟ್​ನ ಮಾರಾಟದಿಂದ ನಮ್ಮ ದೇಶಕ್ಕೆ ದೊಡ್ಡ ಲಾಭವಾಯಿತೋ ಅಥವಾ ನಷ್ಟವಾಯಿತೋ ಎನ್ನುವುದರ ಬಗ್ಗೆ ಹಲವು ಅಭಿಪ್ರಾಯಗಳಿವೆ. ಆದರೆ, ಇದರಿಂದ ನಮ್ಮ ದೇಶದ ‘ಸ್ಟಾರ್ಟ್​ಅಪ್ ಇಕೋಸಿಸ್ಟಮ್ ಅಥವಾ ‘ನವೋದ್ಯಮ ವ್ಯವಸ್ಥೆ’ಗೆ ದೊಡ್ಡಮಟ್ಟದ ಲಾಭವಾಯಿತು ಎನ್ನುವುದಂತೂ ಚರ್ಚಾತೀತ.

ಇವನ ತುತ್ತೂರಿ ಇವನೇ ಊದಿಕೊಳ್ಳುತ್ತಿದ್ದಾನೆ ಎಂದುಕೊಂಡರೂ ಚಿಂತೆಯಿಲ್ಲ, ನನ್ನ ಮತ್ತು ಫ್ಲಿಪ್​ಕಾರ್ಟ್​ನ ಒಡನಾಟದ ಕತೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇದಕ್ಕಿಂತ ಸುಸಮಯ ಮತ್ತೊಂದು ಸಿಗಲಿಕ್ಕಿಲ್ಲ!

ಮೊನ್ನೆ, ಫ್ಲಿಪ್​ಕಾರ್ಟ್ 20 ಶತಕೋಟಿ ಡಾಲರ್​ಗೂ ಹೆಚ್ಚಿನ ಮೌಲ್ಯಕ್ಕೆ ವಾಲ್​ವಾರ್ಟ್​ಗೆ ಮಾರಾಟವಾಗುತ್ತಿದೆ ಎನ್ನುವ ಸುದ್ದಿ ಬಂದಾಗ ನನ್ನ ಹೊಟ್ಟೆಯಲ್ಲಿ ಸಣ್ಣಗೆ ತಳಮಳ. ಅದು ಸಂತೋಷದ್ದೋ ಅಥವಾ ಬೇಸರದ್ದೋ ಎಂದು ಆಗ್ಗೆ ಸ್ಪಷ್ಟವಾಗಿ ಗೊತ್ತಾಗಲಿಲ್ಲ. ಫ್ಲಿಪ್​ಕಾರ್ಟ್ ಅನ್ನು ಹೆಚ್ಚೂಕಡಿಮೆ ಅದರ ಔದ್ಯಮಿಕ ಹುಟ್ಟಿನಿಂದ ಬಲ್ಲ ನನಗೆ ಅದು ಸಂಪೂರ್ಣವಾಗಿ ಪರಭಾರೆಯಾಗುತ್ತಿದೆಯಲ್ಲ ಎನ್ನುವ ಸಂಕಟ. ಹಾಗೆಯೇ, ಭಾರತದಲ್ಲಿ ನನ್ನ ಕಣ್ಣೆದುರೇ ಹುಟ್ಟಿಬೆಳೆದ ಉದ್ಯಮವೊಂದು ಜಗತ್ತಿನಲ್ಲಿಯೇ ಅತಿದೊಡ್ಡ ಇ-ಕಾಮರ್ಸ್ ಖರೀದಿಗೆ ಒಳಪಟ್ಟು, ನನ್ನ ಕಕ್ಷಿದಾರರೂ ಮಿತ್ರರೂ ಆದ ಅದರ ಸ್ಥಾಪಕರು ಒಬ್ಬೊಬ್ಬರೂ ಶತಕೋಟಿ ಡಾಲರ್​ಗೂ ಅಧಿಕ ಸಂಪಾದಿಸಿದರಲ್ಲ ಎನ್ನುವ ಅತೀವ ಸಂತೋಷ!

ಫ್ಲಿಪ್​ಕಾರ್ಟ್​ನ ಕತೆಯಲ್ಲಿ ಎಷ್ಟೋ ಕಡೆ, ನಾನು ಹುಟ್ಟುಹಾಕಿದ ‘ಏಮ್ ಹೈ ಕನ್ಸಲ್ಟಿಂಗ್’ ಸಂವಹನ ಸಲಹಾ ಸಂಸ್ಥೆಯ ಕತೆಯೂ ಹೆಣೆದುಹೋಗಿದೆ. ಇಲ್ಲಿ ಅದನ್ನು ಬಿಡಿಸಿ ಹೇಳುವ ಗೋಜಿಗೆ ಹೋಗದೆ, ಫ್ಲಿಪ್​ಕಾರ್ಟ್​ನ ಯಶಸ್ಸನ್ನು ಹತ್ತಿರದಿಂದ ನೋಡಿದಾಗ ನನಗೆ ಕಂಡ ಸಕಾರಾತ್ಮಕ ಗುಣಗಳನ್ನು ಮಾತ್ರ ದಾಖಲಿಸುವ ಪ್ರಯತ್ನ ಮಾಡಿದ್ದೇನೆ. ಕೆಲವೆಡೆಗಳಲ್ಲಿ ಸ್ವಪ್ರಶಂಸೆ ಕಂಡುಬಂದರೆ ದಯವಿಟ್ಟು ಸ್ವಲ್ಪ ಸಹಿಸಿಕೊಳ್ಳಿ!

ಸ್ಪಷ್ಟ ಗುರಿ: ಫ್ಲಿಪ್​ಕಾರ್ಟ್​ನ ಸಂಸ್ಥಾಪಕರ ಜತೆಗಿನ ಮೊದಲ ಭೇಟಿಯಲ್ಲಿ ಅವರನ್ನು ‘ನಿಮ್ಮ ಗುರಿ ಏನು?’ ಎಂದು ಕೇಳಿದಾಗ ಸಚಿನ್ ಬನ್ಸಲ್ ಥಟ್ಟನೆ ಕೊಟ್ಟಿದ್ದ ಉತ್ತರ ‘ನಾವು ಮೊದಲು ಭಾರತದ ಅಮೆಝಾನ್ ಆಗಬೇಕು. ನಂತರ ಅಮೆಝಾನ್ ಅನ್ನೂ ಮೀರಿಸಬೇಕು’. ‘ಹಾಗಿದ್ದರೆ ಈಗ ಬರೇ ಪುಸ್ತಕಗಳನ್ನು ಮಾತ್ರ ಏಕೆ ಮಾರುತ್ತಿದ್ದೀರಿ?’ ಎಂದು ಕೇಳಿದ್ದಕ್ಕೆ, ‘ಪುಸ್ತಕಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸುಲಭವಾಗಿ ರವಾನಿಸಬಹುದು, ಮತ್ತು ಓದುಗರು ಭಾರತದ ಪ್ರತಿಯೊಂದು ಪಿನ್​ಕೋಡ್​ನಲ್ಲಿಯೂ ಇದ್ದಾರೆ. ನಮ್ಮ ಇ-ಕಾಮರ್ಸ್ ಬಿಜಿನೆಸ್ ಮಾಡೆಲ್​ನ ಸತ್ವಪರೀಕ್ಷೆಗೆ ಪುಸ್ತಕಗಳ ಮಾರಾಟ ಪ್ರಯೋಗಶಾಲೆಯಿದ್ದಂತೆ. ಇದರ ಯಶಸ್ಸು ಅಥವಾ ವೈಫಲ್ಯದ ಆಧಾರದ ಮೇಲೆ ಮಿಕ್ಕೆಲ್ಲ ವಸ್ತುಗಳನ್ನು ಮಾರುತ್ತೇವೆ. ಇನ್ನು 4-5 ವರ್ಷಗಳಲ್ಲಿ ಭಾರತದಲ್ಲಿ ಅತಿಹೆಚ್ಚಿನ ಸಂಖ್ಯೆಯ ವಸ್ತುಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರುವ ಉದ್ಯಮ ನಮ್ಮದಾಗಿರುತ್ತದೆ’ ಎಂದು ಭವಿಷ್ಯವಾಣಿ ನುಡಿದಿದ್ದರು. ಭಾರತದ ಅತಿದೊಡ್ಡ ನವೋದ್ಯಮವನ್ನು ಕಟ್ಟಲು ಹೊರಟಿದ್ದ ಸಚಿನ್ ಮತ್ತು ಬಿನ್ನಿಯ ಕಣ್ಣುಗಳಲ್ಲಿ ಹೊಳಪಿದ್ದುದು ಮಾತ್ರವಲ್ಲ, ದೃಷ್ಟಿಯೂ ಸ್ಪಷ್ಟವಿತ್ತು.

ಇನ್ನೊಬ್ಬರ ಮಾತನ್ನು ಕೇಳುವ ವ್ಯವಧಾನ: 2010ರ ಏಪ್ರಿಲ್ ತಿಂಗಳಲ್ಲಿ ‘ಏಮ್ ಹೈ ಕನ್ಸಲ್ಟಿಂಗ್’ ಮತ್ತು ‘ಫ್ಲಿಪ್​ಕಾರ್ಟ್’ನ ಸಂಸ್ಥಾಪಕರ ನಡುವೆ ನಮ್ಮ ಕಚೇರಿಯಲ್ಲಿ ನಡೆಯುತ್ತಿದ್ದ ಮೀಟಿಂಗ್​ನ ದೃಶ್ಯವನ್ನು ಕಲ್ಪಿಸಿಕೊಳ್ಳಿ. ಆ ದಿನ, ‘ಕ್ಯಾಷ್-ಆನ್-ಡೆಲಿವರಿ’ ಎನ್ನುವ ಸೌಲಭ್ಯವನ್ನು ಫ್ಲಿಪ್​ಕಾರ್ಟ್ ಆರಂಭಿಸುತ್ತಿರುವುದರ ಬಗ್ಗೆ ನಮಗೆ ಮಾಹಿತಿ ನೀಡಿದರು. ನಮ್ಮ ತಂಡ ಇದರಲ್ಲಿದ್ದ ಪ್ರಚಾರಸತ್ವವನ್ನು ಗ್ರಹಿಸಿ ‘ನಾವು ಈ ‘ಕ್ಯಾಷ್-ಆನ್-ಡೆಲಿವರಿ’ ಅನ್ನು ದೊಡ್ಡದಾಗಿ ಪ್ರಚಾರ ಮಾಡಿ, ಇದು ಭಾರತದಲ್ಲಿ ಇ-ಕಾಮರ್ಸ್​ಗೆ ಬೆನ್ನೆಲುಬಾಗಲಿದೆ ಎಂದು ಬಿಂಬಿಸೋಣ’ ಎಂದೆವು. ಮೊದಲಿಗೆ ಅದನ್ನೊಪ್ಪದ ಫ್ಲಿಪ್​ಕಾರ್ಟ್​ನ ಸ್ಥಾಪಕರು, ‘ಭಾರತದಲ್ಲಿ ಈಗಾಗಲೇ ‘ಕ್ಯಾಷ್-ಆನ್-ಡೆಲಿವರಿ’ ಸೌಲಭ್ಯ ಜಾರಿಯಲ್ಲಿದೆ. ಅದನ್ನು ನಾವೇ ಸೃಷ್ಟಿಸಿದ್ದು ಎಂದರೆ, ಸುಳ್ಳು ಹೇಳಿದಂತಾಗುತ್ತದೆ’ ಎಂದರು. ನಾವು ವಿವರಿಸಿದೆವು- ‘ಅದು ಹಾಗಲ್ಲ. ನಾವು ಯಾವ ಕಾರಣಕ್ಕೂ ಸುಳ್ಳು ಹೇಳಬಾರದು. ನಾವೆಲ್ಲೂ ಫ್ಲಿಪ್​ಕಾರ್ಟ್ ಮೊದಲ ಬಾರಿಗೆ ‘ಕ್ಯಾಷ್-ಆನ್-ಡೆಲಿವರಿ’ ಪರಿಚಯಿಸುತ್ತಿದೆ ಎಂದು ಹೇಳುವುದಿಲ್ಲ. ಆದರೆ, ಸಂಸ್ಥೆ ಪರಿಚಯಿಸುತ್ತಿರುವ ‘ಕ್ಯಾಷ್-ಆನ್-ಡೆಲಿವರಿ’ಯಿಂದಾಗಿ ಭಾರತದಲ್ಲಿ ಇ-ಕಾಮರ್ಸ್​ಗೆ ದೊಡ್ಡ ಬೂಸ್ಟ್ ದೊರೆಯಲಿದೆ ಎಂದು ಪ್ರವರ್ತಿಸುತ್ತೇವೆ…’. ಇದರ ಒಳಮರ್ಮವನ್ನೂ, ಸಂವಹನಕಲೆಯಲ್ಲಿನ ನಮ್ಮ ಪರಿಣತಿಯನ್ನೂ ಮೆಚ್ಚಿದ ಫ್ಲಿಪ್​ಕಾರ್ಟ್ ಈ ತಂತ್ರಕ್ಕೆ ಒಪ್ಪಿತು. ಮುಂದಿನದ್ದು ಈಗ ಇತಿಹಾಸ! ‘ಕ್ಯಾಷ್-ಆನ್-ಡೆಲಿವರಿ’ ಮತ್ತು ಅದರಿಂದ ಸಾಮಾನ್ಯ ಜನರಿಗೆ ಆಗುತ್ತಿದ್ದ ಲಾಭದ ಬಗ್ಗೆ ಮಾಧ್ಯಮಗಳು ಎಗ್ಗಿಲ್ಲದೆ ಬರೆದವು. ‘ಕ್ಯಾಷ್-ಆನ್-ಡೆಲಿವರಿ’ ದೆಸೆಯಿಂದಾಗಿ ಭಾರತದಲ್ಲಿ ಇ-ಕಾಮರ್ಸ್ ಬೆಳೆಯಿತು. ಇದರಲ್ಲಿ ನಾನು ಹೇಳಹೊರಟ ಮುಖ್ಯ ಅಂಶವೆಂದರೆ, ಫ್ಲಿಪ್​ಕಾರ್ಟ್​ನ ಸ್ಥಾಪಕರಿಗೆ ತಮ್ಮ ಯೋಚನೆಯೇ ಶ್ರೇಷ್ಠವಾದುದು ಎನ್ನುವ ಅಹಂಕಾರ ಇರಲಿಲ್ಲ. ಇನ್ನೊಬ್ಬರ ಸಲಹೆಯನ್ನು ಕೇಳಿ, ಅದರಲ್ಲಿ ಹುರುಳಿದೆ ಎನಿಸಿದರೆ, ಅನುಸರಿಸುವ ಪ್ರಬುದ್ಧತೆಯಿತ್ತು.

ಹಾದಿ ಕಂಡಲ್ಲಿ ಥಟ್ಟನೆ ನಿರ್ಧಾರ: ಆಗ್ಗೆ, ನಮ್ಮ ಸಂಸ್ಥೆ ಫ್ಲಿಪ್​ಕಾರ್ಟ್​ನ ಪಿಆರ್ (ಮಾಧ್ಯಮ ಸಂಪರ್ಕ) ನಿರ್ವಹಿಸುತ್ತಿತ್ತು. ಮೇಲೆ ಹೇಳಿದ ‘ಕ್ಯಾಷ್-ಆನ್-ಡೆಲಿವರಿ’ ಅನುಷ್ಠಾನಗೊಂಡ ಸಂದರ್ಭದಲ್ಲಿ, ಆಗಿನ್ನೂ ಅಂಬೆಗಾಲಿಡುತ್ತಿದ್ದ ಫ್ಲಿಪ್​ಕಾರ್ಟ್​ನ ಸ್ಥಾಪಕರಿಗೆ ಒಂದು ಸಲಹೆಯಿತ್ತೆವು. ‘ನೋಡಿ, ‘ಕ್ಯಾಷ್-ಆನ್-ಡೆಲಿವರಿ’ ನಿಮ್ಮ ಉದ್ಯಮದ ಸ್ವರೂಪವನ್ನು ಬದಲಿಸಿದೆ. ಇದರ ದೆಸೆಯಿಂದಾಗಿ ಗ್ರಾಹಕರನ್ನು ನೀವು ಆನ್​ಲೈನ್​ನಲ್ಲಿ ಮಾತ್ರವಲ್ಲ ಆಫ್​ಲೈನ್​ನಲ್ಲಿಯೂ ಓಲೈಸಬಹುದು. ಹಾಗಾಗಿ ತಕ್ಷಣವೇ ಆಫ್​ಲೈನ್ ಮಾಧ್ಯಮಗಳಲ್ಲಿಯೂ (ದೈನಿಕ, ನಿಯತಕಾಲಿಕಗಳು, ಟಿವಿ, ರೇಡಿಯೋ ಇತ್ಯಾದಿ.) ಜಾಹೀರಾತುಗಳನ್ನು ಪ್ರಕಟಿಸಿ. ಅದರಿಂದ ಮಾರುಕಟ್ಟೆಯ ವಿಸ್ತರಣೆಯಾಗುತ್ತದೆ’. ಇದರ ತರ್ಕವನ್ನು ಗಬಕ್ಕನೆ ಹಿಡಿದ ಬನ್ಸಲ್​ಗಳು, ಹಿಂದೆಮುಂದೆ ನೋಡದೆ ಪ್ರತಿಪ್ರಶ್ನೆ ಹಾಕಿದರು- ‘ಇನ್ನೆಷ್ಟು ದಿನದಲ್ಲಿ ನೀವು ಜಾಹೀರಾತು ಸಿದ್ಧಪಡಿಸಿ ಆಫ್​ಲೈನ್ ಮಾಧ್ಯಮಗಳಲ್ಲಿ ಪ್ರಕಟಿಸುತ್ತೀರಿ?’. ಒಂದೇ ಕ್ಷಣದಲ್ಲಿ ನಾವು ಅವರ ಜಾಹೀರಾತು ಏಜೆನ್ಸಿಯೂ ಆಗಿಬಿಟ್ಟೆವು. ಹದಿನೈದೇ ದಿನದಲ್ಲಿ ಅವರ ಜಾಹೀರಾತುಗಳು ದಿನಪತ್ರಿಕೆ, ನಿಯತಕಾಲಿಕಗಳಲ್ಲಿ ರಾರಾಜಿಸಲು ಆರಂಭಿಸಿದವು. ಗಮನಿಸಬೇಕಾದ ಅಂಶವೆಂದರೆ, ಈ ದಿಢೀರ್ ನಿರ್ಧಾರ ಕೈಗೊಂಡ ಹೊತ್ತಿನಲ್ಲಿ ಫ್ಲಿಪ್​ಕಾರ್ಟ್​ನ ಬಳಿ ದೊಡ್ಡ ಪ್ರಮಾಣದ ಫಂಡಿಂಗ್ ಏನೂ ಇರಲಿಲ್ಲ! ಆದರೆ, ಸರಿಯಾದ ದಾರಿ ಕಂಡಿರುವಾಗ ಹಣವನ್ನು ಹೇಗೋ ಹೊಂಚಬಲ್ಲೆವೆಂಬ ಆತ್ಮವಿಶ್ವಾಸವಿತ್ತು! ಈ ‘ಥಟ್ಟನೆ ನಿರ್ಧಾರ ತೆಗೆದುಕೊಳ್ಳುವ’ ಸಾಮರ್ಥ್ಯ ಆ ಸಂಸ್ಥೆಯನ್ನು ಅನೇಕ ಸಂದರ್ಭಗಳಲ್ಲಿ ಮುನ್ನಡೆಸಿದೆ. ಉದಾಹರಣೆಗೆ ಫ್ಲಿಪ್​ಕಾರ್ಟ್ ತನ್ನ ಪ್ರತಿಸ್ಪರ್ಧಿಗಳಾದ ಮಿಂತ್ರ ಮತ್ತು ಜಬಾಂಗ್​ಗಳನ್ನು ಕೊಂಡ ಸಮಯದಲ್ಲಿ, ಕೊಳ್ಳುಗರ ಪಟ್ಟಿಯಲ್ಲಿ ಬೇರೆ ಹೆಸರುಗಳೂ ಕೇಳಿಬಂದಿದ್ದವು. ಆದರೆ, ಫ್ಲಿಪ್​ಕಾರ್ಟ್​ನ ನಿರ್ಧಾರದ ವೇಗವನ್ನು ಅವರ್ಯಾರೂ ಸರಿಗಟ್ಟಲಾಗಲಿಲ್ಲ.

ತಪ್ಪೊಪ್ಪಿಕೊಳ್ಳುವುದು, ಧೃತಿಗೆಡದಿರುವುದು: ಐದಾರು ವರ್ಷಗಳ ಹಿಂದೆ ಫ್ಲಿಪ್​ಕಾರ್ಟ್ ಮೊದಲಬಾರಿಗೆ ‘ಬಿಗ್ ಬಿಲಿಯನ್ ಡೇ’ ಎನ್ನುವ, ಆನ್​ಲೈನ್​ನಲ್ಲಿ ನಮ್ಮ ದೇಶ ಹಿಂದೆಂದೂ ಕಂಡಿರದಷ್ಟು ಬೃಹತ್ ಸೇಲ್ ಪರಿಚಯಿಸಿತು. ಆ ‘ಸೇಲ್’ಗೆ ಬೇಡಿಕೆ ಎಷ್ಟು ಬಂದಿತೆಂದರೆ, ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ಸೇಲ್​ಗೆ ಇಡಲಾಗಿದ್ದ ವಸ್ತುಗಳೆಲ್ಲ ಖರ್ಚಾಗಿಹೋದವು! ಡಿಸ್ಕೌಂಟ್​ನಲ್ಲಿ ವಸ್ತುಗಳನ್ನು ಖರೀದಿಸಲಾಗದ ಜನ ಸಿಟ್ಟಿಗೆದ್ದರು! ಸಾಮಾಜಿಕ ಮಾಧ್ಯಮಗಳಲ್ಲಿ ಹಿಗ್ಗಾಮುಗ್ಗ ಬೈದರು; ಸಾಮೂಹಿಕ ಮಾಧ್ಯಮಗಳೂ ಈ ನಡೆಯನ್ನು ನಿಂದಿಸಿದವು. ಆದ ಅಚಾತುರ್ಯವನ್ನು ಫ್ಲಿಪ್​ಕಾರ್ಟ್ (ಇಟ್ಟ ವಸ್ತುಗಳು ಬೇಗನೆ ಬಿಕರಿಯಾದರೆ ತಾವೇನು ಮಾಡಲಾಗುತ್ತದೆ ಎಂದು) ಸುಲಭವಾಗಿ ಸಮರ್ಥಿಸಿಕೊಳ್ಳಬಹುದಿತ್ತು. ಆದರೆ, ಅದರ ಸ್ಥಾಪಕರು ಹಾಗೆ ಮಾಡಲಿಲ್ಲ. ಬದಲಿಗೆ ಗ್ರಾಹಕರ, ಉದ್ಯೋಗಿಗಳ ಮತ್ತು ಮಾಧ್ಯಮಗಳ ಬಳಿ ಬೇಷರತ್ ಕ್ಷಮೆ ಕೋರಿದರು. ‘ನಮ್ಮ ಬಗ್ಗೆ ನೀವಿಟ್ಟಿದ್ದ ನಿರೀಕ್ಷೆ ಹುಸಿಯಾದುದಕ್ಕೆ ನಾವೇ ನೇರವಾಗಿ ಜವಾಬ್ದಾರರು’ ಎಂದು ತಪ್ಪೊಪ್ಪಿಕೊಂಡರು. ಅಂದಮಾತ್ರಕ್ಕೆ ಅವರು ಧೃತಿಗೆಟ್ಟರೆಂದಲ್ಲ. ಮುಂದಿನ ವರ್ಷಗಳಲ್ಲಿ ಮತ್ತಷ್ಟು ಯಶಸ್ವಿ ‘ಬಿಗ್ ಬಿಲಿಯನ್ ಡೇ’ಗಳನ್ನು ಆಚರಿಸಿದರು. ಹಿಂದಿನ ತಪ್ಪುಗಳು ಮರುಕಳಿಸದಂತೆ ನೋಡಿಕೊಂಡರು. ಸೋಲಿನಲ್ಲಿ ಧೃತಿಗೆಡಲಿಲ್ಲ. ಗೆದ್ದಾಗ ಅಹಂಕಾರವನ್ನೂ ತೋರಲಿಲ್ಲ.

ಉದ್ಯೋಗಿಗಳನ್ನು ಜತೆಗೆ ಕೊಂಡೊಯ್ಯುವ ಮನಸ್ಥಿತಿ: ಫ್ಲಿಪ್​ಕಾರ್ಟ್ ಯಾವಾಗಲೂ ತನ್ನ ಉದ್ಯೋಗಿಗಳೊಂದಿಗೆ ತನ್ನ ದೂರದೃಷ್ಟಿಯನ್ನು ಹಂಚಿಕೊಳ್ಳಲು ಯತ್ನಿಸುತ್ತಿತ್ತು. ಆ ಕೆಲಸವನ್ನು ಇನ್ನಷ್ಟು ಸಮರ್ಪಕವಾಗಿ ಮಾಡಲೆಂದು ಬಹಳ ಮುಂಚಿನಿಂದಲೇ ನಮ್ಮಂಥ ಸಲಹೆಗಾರ ಸಂಸ್ಥೆಗಳನ್ನು ನೇಮಿಸಿಕೊಂಡಿತ್ತು. ‘ಏಮ್ ಹೈ ಕನ್ಸಲ್ಟಿಂಗ್’ ಫ್ಲಿಪ್​ಕಾರ್ಟ್​ನ ಆಂತರಿಕ ಸಂವಹನ (ಇಂಟರ್ನಲ್ ಕಮ್ಯೂನಿಕೇಷನ್) ನಿರ್ವಹಿಸುವ ಜವಾಬ್ದಾರಿ ತೆಗೆದುಕೊಂಡಾಗ ಇದ್ದುದು ನೂರಕ್ಕೂ ಕಡಿಮೆ ಉದ್ಯೋಗಿಗಳು. ಮುಂದಿನ 4-5 ವರ್ಷಗಳಲ್ಲಿ ಆ ಸಂಖ್ಯೆ ಲಕ್ಷ ಮೀರಿರಬಹುದು! ಅಗಾಧವಾದ ಬೆಳವಣಿಗೆಯ ಸಾಧ್ಯತೆಯನ್ನು ಮೊದಲೇ ಮುಂಗಂಡು, ಆ ಹೊನಲಿನಲ್ಲಿ ಉದ್ಯೋಗಿಗಳು ಕೊಚ್ಚಿಹೋಗದಂತೆ ನೋಡಿಕೊಂಡದ್ದು ಫ್ಲಿಪ್​ಕಾರ್ಟ್​ನ ಯಶಸ್ಸಿನಲ್ಲಿ ಮತ್ತೊಂದು ಉಪಕತೆ. ಮೊನ್ನೆಯ ಮಾರಾಟದಲ್ಲಿ ಕೆಲವು ಉದ್ಯೋಗಿಗಳೂ ಕೋಟ್ಯಧಿಪತಿಗಳಾಗಿರುವುದು ಮಾಧ್ಯಮಗಳಲ್ಲಿಯೂ ವರದಿಯಾಗಿದೆ.

ಗ್ರಾಹಕ ಕೇಂದ್ರಿತ ಉದ್ಯಮ: ‘ನೀವು ಕಸ್ಟಮರ್ ಫ್ರಾಡ್​ಗಳನ್ನು (ಗ್ರಾಹಕ ರೂಪದಲ್ಲಿ ಮೋಸಮಾಡಲು ಯತ್ನಿಸುವವರನ್ನು) ಹೇಗೆ ನಿಭಾಯಿಸುತ್ತೀರಿ?’ ಎಂದು ಫ್ಲಿಪ್​ಕಾರ್ಟ್ ಉದ್ಯಮ ಇನ್ನೂ ಬೆಳೆಯುತ್ತಿದ್ದ ವರ್ಷಗಳಲ್ಲಿ ಸಚಿನ್​ರನ್ನು ಕೇಳಿದ್ದೆ. ಅದಕ್ಕವರು ಕೊಟ್ಟಿದ್ದ ಉತ್ತರ ಸ್ವಾರಸ್ಯಕರವಾಗಿತ್ತು- ‘ಶೇ. 2-3 ಫ್ರಾಡ್​ಗಳ ಬಗ್ಗೆ ನಾವು ತಲೆ ಕೆಡಿಸಿಕೊಂಡರೆ ಮಿಕ್ಕ ಶೇ. 97-98 ಒಳ್ಳೆಯ ಗ್ರಾಹಕರನ್ನು ನಾವು ಅನುಮಾನದಿಂದ ಕಾಣಬೇಕಾಗುತ್ತದೆ. ನಮ್ಮ ಮೂಲಮೌಲ್ಯವಾದ ‘ಕಸ್ಟಮರ್ ಸೆಂಟ್ರಿಸಿಟಿ’ಗೆ (ಗ್ರಾಹಕನೇ ಕೇಂದ್ರಬಿಂದು) ಇದರಿಂದ ಧಕ್ಕೆಯಾಗುತ್ತದೆ. ಫ್ರಾಡ್ ನಿಯಂತ್ರಣ ಪ್ರಕ್ರಿಯೆಯನ್ನು ನಮ್ಮ ಒಳ್ಳೆಯ ಗ್ರಾಹಕರಿಗೆ ತೊಂದರೆಯಾಗದಂತೆ ಮಾಡಲು ಪ್ರಯತ್ನಿಸುತ್ತೇವೆ’. ಇದೇ ಧೋರಣೆ ಎಲ್ಲ ಯೋಜನೆಗಳಲ್ಲಿಯೂ ಪ್ರತಿಧ್ವನಿಸಿತು. ‘ಗ್ರಾಹಕನೇ ಕೇಂದ್ರಬಿಂದು’ ಎನ್ನುವ ಸಿದ್ಧಾಂತಕ್ಕೆ ತನ್ನೆಲ್ಲ ಕಾರ್ಯಕ್ರಮಗಳನ್ನು ಹೊಂದಿಸಿಕೊಂಡು ಬೆಳೆಯಿತು ಫ್ಲಿಪ್​ಕಾರ್ಟ್! ಇದ್ಯಾವುದೂ ಫ್ಲಿಪ್​ಕಾರ್ಟ್​ನ ಉದ್ಯಮದ ವಿಶ್ಲೇಷಣೆಯಲ್ಲ (ಅದನ್ನು ನಾನು ಬೇರೆಯದೇ ತರಹದ ವೇದಿಕೆಗಳಲ್ಲಿ ಮಾಡಬೇಕಾಗಬಹುದು!); ಗ್ರಾಹಕರ ಮತ್ತು ಹೂಡಿಕೆದಾರರ ದೃಷ್ಟಿಯಲ್ಲಿ ಅದು ತನ್ನ ಮೌಲ್ಯವನ್ನು ವೃದ್ಧಿಸಿಕೊಳ್ಳುವಲ್ಲಿ ಏಕೆ ಯಶಸ್ವಿಯಾಯಿತು ಎನ್ನುವುದಕ್ಕೆ ನನಗೆ ಮೇಲ್ಪದರದಲ್ಲಿ ಕಂಡ ಕೆಲವು ಕಾರಣಗಳಷ್ಟೆ. ಇದರಲ್ಲಿ ಸುಲಭಕ್ಕೆ ದೋಷಗಳು ಕಾಣಬಹುದು. ಆದರೆ, ಯಶಸ್ಸಿನ ಜತೆ ವಾದ ಹೂಡಿ ಗೆದ್ದವರು ಅಪರೂಪ. ಫ್ಲಿಪ್​ಕಾರ್ಟ್​ನ ಕತೆಯೂ ಅಂತಹುದೇ!

ಫ್ಲಿಪ್​ಕಾರ್ಟ್​ನ ಮಾರಾಟದಿಂದ ನಮ್ಮ ದೇಶಕ್ಕೆ ದೊಡ್ಡ ಲಾಭವಾಯಿತೋ ಅಥವಾ ನಷ್ಟವಾಯಿತೋ ಎನ್ನುವುದರ ಬಗ್ಗೆ ಹಲವು ಅಭಿಪ್ರಾಯಗಳಿವೆ. ಆದರೆ, ಇದರಿಂದ ನಮ್ಮ ದೇಶದ ‘ಸ್ಟಾರ್ಟ್​ಅಪ್ ಇಕೋಸಿಸ್ಟಮ್ ಅಥವಾ ‘ನವೋದ್ಯಮ ವ್ಯವಸ್ಥೆ’ಗೆ ದೊಡ್ಡಮಟ್ಟದ ಲಾಭವಾಯಿತು ಎನ್ನುವುದಂತೂ ಚರ್ಚಾತೀತ. ನಮ್ಮ ಹಿತ್ತಲಿನಲ್ಲೇ ಸೃಷ್ಟಿಯಾಗುವ ಉದ್ಯಮವೊಂದನ್ನು ಕೊಳ್ಳಲು ಜಗತ್ತಿನ ಅತಿದೊಡ್ಡ ಉದ್ಯಮಗಳು ಸಾಲುಗಟ್ಟುತ್ತವೆ ಮತ್ತು ಹಿಂದೆಂದೂ ಬೇರ್ಯಾರಿಗೂ ಕೊಡದಷ್ಟು ಮೌಲ್ಯವನ್ನು ಬೆಲೆಯಾಗಿ ಕಟ್ಟುತ್ತವೆ ಎನ್ನುವುದು ಇಂದಿನ ನವೋದ್ಯಮ ಸೃಷ್ಟಿಕರ್ತರಿಗೆ ದೊಡ್ಡ ಪ್ರೇರಣೆ. ಭಾರತದ ಸ್ಟಾರ್ಟ್​ಅಪ್​ಗಳಿಗೆ ಎಲ್ಲ ರೀತಿಯಲ್ಲಿಯೂ ಮಾದರಿಯಾದ ಫ್ಲಿಪ್​ಕಾರ್ಟ್ ಔದ್ಯಮಿಕವಾಗಿ ಒಂದು ರ್ತಾಕ ಅಂತ್ಯ ಕಂಡಿರುವ ಈ ಹೊತ್ತಿನಲ್ಲಿಯೂ ಭಾರತದ ಯುವಜನರಲ್ಲಿ ಹೊಸ ಕನಸುಗಳನ್ನು ಸೃಷ್ಟಿಸಿದೆ. ಹೊಸದೊಂದು ಭರವಸೆಯ ಕಿಡಿ ಹೊತ್ತಿಸಿ ಭಾರತದ ನವಪೀಳಿಗೆಯ ನವೋದ್ಯಮಕರ್ತರಲ್ಲಿ ನವಉಮೇದನ್ನು ಉದ್ದೀಪಿಸಿದೆ.

(ಲೇಖಕರು ಸಂವಹನ ಸಲಹೆಗಾರರು)

Leave a Reply

Your email address will not be published. Required fields are marked *

Back To Top