Wednesday, 12th December 2018  

Vijayavani

Breaking News

ಬದುಕಿಗೊಂದು ಅರ್ಥ ಕೊಟ್ಟ ಸ್ಟೀಫನ್ ಹಾಕಿಂಗ್

Sunday, 18.03.2018, 3:03 AM       No Comments

| ಎನ್​ ರವಿಶಂಕರ್​

ಸ್ಟೀಫನ್ ಹಾಕಿಂಗ್, ಬುದ್ಧಿವಂತಿಕೆಗೆ ಮತ್ತೊಂದು ಹೆಸರು. ಅವರ ಕೊಡುಗೆಯನ್ನು ಸಮಗ್ರವಾಗಿ ಗ್ರಹಿಸುವ ಶಕ್ತಿ ನಮ್ಮನಿಮ್ಮಂಥವರಿಗೆ ಇಲ್ಲದಿರಬಹುದು. ಆದರೆ, ವಿಜ್ಞಾನದ ಅಗಾಧತೆ, ಸಾಧ್ಯತೆಗಳನ್ನು ಜನರಿಗೆ ತಲುಪಿಸುವ, ಅರ್ಥವಾಗುವಂತೆ ಸರಳೀಕರಿಸಿ ಹೇಳುವ ನಿಟ್ಟಿನಲ್ಲಿಯೂ ಹಾಕಿಂಗ್ ವಿಶೇಷ ವ್ಯಕ್ತಿಯಾಗಿ ನಿಲ್ಲುತ್ತಾರೆ.

ನನಗೆ ಹಾಕಿಂಗ್​ರ ಪರಿಚಯವಾದದ್ದು 25 ವರ್ಷಗಳ ಹಿಂದೆ ಅವರ ‘ದಿ ಬ್ರೀಫ್ ಹಿಸ್ಟರಿ ಆಫ್ ಟೈಮ್ ಓದಿದಾಗ. ಆ ಎಳೆವಯಸ್ಸಿನಲ್ಲಿ ಪುಸ್ತಕ ಪೂರ್ತಿಯಾಗಿ ಅರ್ಥವಾಗದಿದ್ದರೂ, ವಿಶ್ವದ ಬಗ್ಗೆ ಮೂಡಿದಷ್ಟೇ ಜಿಜ್ಞಾಸೆ ಸೋಜಿಗಗಳು ಹಾಕಿಂಗ್​ರ ಬಗ್ಗೆಯೂ ಮೂಡಿದ್ದಂತೂ ನಿಜ. ‘ಎ ಸೌಂಡ್ ಮೈಂಡ್ ಇಸ್ ಇನ್ ಎ ಸೌಂಡ್ ಬಾಡಿ’ ಅಥವಾ ‘ಸಮರ್ಥವಾದ ದೇಹದೊಳಗೆ ಸಮರ್ಥವಾದ ಮನಸ್ಸು ಇರುತ್ತದೆ’ ಎನ್ನುವುದಕ್ಕೆ ಅಪವಾದ. ತನ್ನ ದೇಹದೊಳಗೇ ಬಂದಿಯಾಗಿ ಬದುಕಿದ ಈ ಅಸಾಧಾರಣ ಮೇಧಾವಿ, ಮಾನವ ಸಾಧ್ಯತೆಗಳನ್ನು ಮೀರಿ ಯೋಚಿಸಿದ್ದು ಮಾತ್ರವಲ್ಲ, ಮಾನವ ಸಾಧ್ಯತೆಗಳನ್ನು ಮೀರಿ ಬದುಕಿದರು ಕೂಡ! ಇನ್ನೆರಡೇ ವರ್ಷ ಬದುಕುತ್ತೀಯೆ ಎಂದ ಡಾಕ್ಟರ್​ಗಳ ಗಡುವಿಗೆ ಇನ್ನೂ 51 ವರ್ಷದ ಕೊಸರನ್ನು ಸೇರಿಸಿದರು! ಅದರ ಬಗ್ಗೆ ಸಾಕಷ್ಟು ಮಾಹಿತಿ ಎಲ್ಲೆಡೆಯೂ ಲಭ್ಯವಿರುವುದರಿಂದ, ಈ ಅಂಕಣದಲ್ಲಿ ನಾನು ಹೇಳಹೊರಟಿರುವುದು ಬೇರೆಯದೇ ವಿಷಯವನ್ನು.

ಹಾಕಿಂಗ್, ಅಸಾಧಾರಣ ವಿಜ್ಞಾನಿಯಾಗಿದ್ದುದರ ಜತೆಗೇ ಅಸಾಧಾರಣ ಚಿಂತಕರೂ ಆಗಿದ್ದರು. ಅವರ ವೈಜ್ಞಾನಿಕ ಮತ್ತು ವಿಜ್ಞಾನೇತರ ಚಿಂತನೆಗಳ ತುಣುಕುಗಳನ್ನು ಈ ಲೇಖನದಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ. ಅವರ ಜೀವನಪ್ರೀತಿ, ಹಾಸ್ಯಪ್ರಜ್ಞೆಗಳ ಜತೆಜತೆಗೇ ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳ ಬಗೆಗಿನ ಅವರ ಜಿಜ್ಞಾಸೆಗಳು ಮುಂದಿನ ಪೀಳಿಗೆಗಳಿಗೆ ಮಾರ್ಗದರ್ಶಿಯಾಗಬಲ್ಲವು. ‘ಮೈಂಡ್ ಓವರ್ ಮ್ಯಾಟರ್’ ಅಥವಾ ‘ಸಕಲವನ್ನೂ ನಿಯಂತ್ರಿಸುವ ಮನಸ್ಸು’ ತತ್ತ್ವಕ್ಕೆ ಬದ್ಧರಾಗಿ, ದೇಹದ ಸಂಕೋಲೆಯನ್ನೂ, ಜೀವನದ ಸಕಲ ಕಾಠಿಣ್ಯವನ್ನೂ ಮನಸ್ಸಿನ ಶಕ್ತಿಯೊಂದರಿಂದಲೇ ಮೀರಿದ ಆ ಮಹಾನ್ ಚೇತನ, ಬೇರೆ ಬೇರೆ ಸಂದರ್ಭಗಳಲ್ಲಿ ಆಡಿದ ಮಾತುಗಳು ನಮ್ಮಲ್ಲಿಯೂ ಸ್ಪೂರ್ತಿಯ ಕಿಡಿಯನ್ನು ಹೊತ್ತಿಸಬಲ್ಲವು. ಅವುಗಳಲ್ಲಿ ಕೆಲವನ್ನು ದಾಖಲಿಸುವ ಪ್ರಯತ್ನವಿದು-

# ನನ್ನ ಗುರಿ ಸರಳವಾದುದು. ಜಗತ್ತನ್ನು ಸಂಪೂರ್ಣ ಅರ್ಥಮಾಡಿಕೊಂಡು, ಅದು ಹೇಗಿದೆ ಮತ್ತು ಏಕಿದೆ ಎನ್ನುವುದನ್ನು ಅರಿಯುವುದು. #ಈ ಜಗತ್ತಿನಲ್ಲಿ ನಮ್ಮ ಪ್ರೀತಿಪಾತ್ರರು ಇರದೇ ಹೋಗಿದ್ದಿದ್ದರೆ, ಇದು ಜಗತ್ತಾಗಿರುತ್ತಿರಲಿಲ್ಲ. #ನಾನು ವೈಜ್ಞಾನಿಕ ಸಂಶೋಧನೆಗಳನ್ನು ಲೈಂಗಿಕ ಕ್ರಿಯೆಗೆ ಹೋಲಿಸುವುದಿಲ್ಲ! ಏಕೆಂದರೆ, ವಿಜ್ಞಾನದ ಸುಖ ದೀರ್ಘಾವಧಿಯದ್ದು! #ಜೀವನ ಅದೆಷ್ಟೇ ಕಠಿಣವಾದರೂ ನಾವು ಏನಾದರೊಂದನ್ನು ಮಾಡಿ ಗೆಲ್ಲುವುದು ಸಾಧ್ಯ. ನಾವು ಛಲ ಬಿಡಬಾರದೆಂಬುದೊಂದೇ ಇಲ್ಲಿ ಮುಖ್ಯ.#ನಾವು ಯಾವಾಗಲೂ ನಕ್ಷತ್ರಗಳನ್ನು ನೋಡುತ್ತಿರಬೇಕೇ ವಿನಾ ನಮ್ಮದೇ ಪಾದಗಳನ್ನಲ್ಲ! ನಿಮಗೆ ಕಂಡದ್ದನ್ನು ಅರ್ಥಮಾಡಿಕೊಳ್ಳಲು ಯತ್ನಿಸಿ ಮತ್ತು ಜಗತ್ತು ಏಕಿದೆ ಎಂದು ಜಿಜ್ಞಾಸೆ ಪಡಿ, ಕುತೂಹಲಿಗಳಾಗಿ. #ನಾನು ಬುದ್ಧಿವಂತನೆಂದು ಎಂದಿಗೂ ಹೇಳಿಕೊಳ್ಳುವುದಿಲ್ಲ. ತಮ್ಮ ಬುದ್ಧಿಮತ್ತೆಯ ಬಗ್ಗೆ ಕೊಚ್ಚಿಕೊಳ್ಳುವವರೆಲ್ಲ ಸೋತಪುರುಕರು! #ದೇವರು ಇರಬಹುದು! ಆದರೆ, ದೇವರಿಲ್ಲವೇನೋ ಎನ್ನುವಂತೆ ಜಗತ್ತನ್ನು ಅರ್ಥೈಸುವ ಸಾಮರ್ಥ್ಯ ವಿಜ್ಞಾನಕ್ಕಿದೆ. #ವಿಜ್ಞಾನದ ಪರಿಧಿ ಅಪೂರ್ಣವಾದುದು. ಹಾಗೆಯೇ ತತ್ತ್ವಶಾಸ್ತ್ರವೂ ಅನಗತ್ಯವಾದುದು! #ನಾನು ಭೌತಶಾಸ್ತ್ರವನ್ನು ಅರ್ಥಮಾಡಿಕೊಂಡಿರಬಹುದು, ಆದರೆ ಹೆಂಗಸರನ್ನಲ್ಲ. ಅವರು ನನ್ನ ಪಾಲಿಗೆ ನಿಗೂಢಗಳಾಗಿಯೇ ಉಳಿದಿದ್ದಾರೆ. #ನನ್ನೆಲ್ಲ ಇತಿಮಿತಿಗಳನ್ನೂ ಮೀರಿ ತುಂಬುಜೀವನ ನಡೆಸಲು ಯತ್ನಿಸಿದ್ದೇನೆ. ಜಗತ್ತನ್ನು ಸುತ್ತಿದ್ದೇನೆ- ಅಂಟಾರ್ಕ್ಟಿಕದಿಂದ ಝೀರೋ ಗ್ರಾವಿಟಿಯವರೆಗೆ ಎಲ್ಲವನ್ನೂ ಅನುಭವಿಸಿದ್ದೇನೆ. ಬಹುಶಃ ಮುಂದೊಂದು ದಿನ ಅಂತರಿಕ್ಷಕ್ಕೂ ಹೋಗುತ್ತೇನೆ. #ಇತರ ಅಂಗವಿಕಲರಿಗೆ ನನ್ನ ಸಲಹೆ- ಏನನ್ನು ಸಾಧಿಸಲು ನಿಮ್ಮ ವೈಕಲ್ಯ ಅಡ್ಡ ಬರುವುದಿಲ್ಲವೋ ಅಂಥ ವಿಷಯಗಳ ಬಗ್ಗೆ ಗಮನ ಹರಿಸಿ ಮತ್ತು ಯಾವುದು ಸಾಧ್ಯವಿಲ್ಲವೋ ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ದೇಹದ ಜತೆಗೆ ನಿಮ್ಮ ಚೈತನ್ಯವೂ ಊನವಾಗದಿರಲಿ. #ಜಗತ್ತಿನ ಬೇರೆಡೆಗಳಲ್ಲಿ ಜೀವಿಗಳು ಇದ್ದರೂ ಇರಬಹುದು. ಆದರೆ, ಬುದ್ಧಿವಂತ ಜೀವಿಗಳು ಇರಲಿಕ್ಕಿಲ್ಲ. ಅಂದಹಾಗೆ, ಬುದ್ಧಿವಂತ ಜೀವಿಗಳು ಭೂಮಿಯ ಮೇಲೂ ಇಲ್ಲ ಎಂದು ಕೆಲವರು ಹೇಳುತ್ತಾರೆ! #ಜ್ಞಾನದ ಅತಿದೊಡ್ಡ ಶತ್ರು ಎಂದರೆ ಅಜ್ಞಾನವಲ್ಲ, ತಾವು ಜ್ಞಾನಿಗಳೆಂಬ ಭ್ರಮೆ! #ಜೀವನ ತಮಾಷೆಯಾಗಿರದಿದ್ದಿದ್ದರೆ, ಬಹಳ ದುರಂತಮಯವಾಗಿರುತ್ತಿತ್ತು! #ಬುದ್ಧಿವಂತಿಕೆ ಎಂದರೆ ಬದಲಾವಣೆಗೆ ಹೊಂದಿಕೊಳ್ಳುವ ಸಾಮರ್ಥ್ಯ. #ನೀವು ಯಾವಾಗಲೂ ಕೋಪದಲ್ಲಿದ್ದರೆ ಅಥವಾ ದೂರುತ್ತಿದ್ದರೆ, ಜನರು ನಿಮ್ಮಿಂದ ದೂರವಾಗುತ್ತಾರೆ. #ಭವಿಷ್ಯದಂತೆಯೇ ಭೂತಕಾಲವೂ ಅನಿಶ್ಚಿತ! ಅದು ಕೂಡ ಅಪಾರ ಸಾಧ್ಯತೆಗಳಲ್ಲಿ ಮಾತ್ರ ಇರುವಂಥದು! #ನಾವು ಒಂದು ಸಾಧಾರಣ ನಕ್ಷತ್ರದ ಪುಟ್ಟ ಗ್ರಹವೊಂದರಲ್ಲಿ ವಾಸಿಸುತ್ತಿರುವ ಮುಂದುವರಿದ ಜಾತಿಯ ಮಂಗಗಳು. ಆದರೆ, ನಮಗೆ ಬ್ರಹ್ಮಾಂಡವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿದೆ. ಅದೇ ನಮ್ಮನ್ನು ವಿಶೇಷವಾಗಿರಿಸಿರುವುದು. #ನಾನು ಬೆಳೆಯಲು ಒಪ್ಪದ ಪುಟ್ಟಮಗು. ಅದಕ್ಕೇ ಈಗಲೂ ‘ಹೇಗೆ’ ಮತ್ತು ‘ಏಕೆ’ ಎಂಬ ಪ್ರಶ್ನೆಗಳನ್ನು ಕೇಳುತ್ತಿರುತ್ತೇನೆ. ಅಪರೂಪಕ್ಕೊಮ್ಮೆ ಉತ್ತರಗಳನ್ನೂ ಕಂಡುಕೊಂಡಿದ್ದೇನೆ. #ಕೆಲಸ ನಮ್ಮ ಜೀವನಕ್ಕೆ ಉದ್ದೇಶವನ್ನೂ ಅರ್ಥವನ್ನೂ ಕೊಡುತ್ತದೆ. ಅದಿಲ್ಲದ ಜೀವನ ಬರಡು. #ದುರಾಸೆ, ಮೂರ್ಖತನಗಳಿಂದಾಗಿ ನಮ್ಮನ್ನು ನಾವು ನಾಶಮಾಡಿಕೊಳ್ಳುವ ಹಂತಕ್ಕೆ ಬಂದಿದ್ದೇವೆ. ಜನನಿಬಿಡವಾದ ಮತ್ತು ಮಲಿನಗೊಂಡಿರುವ ಈ ಭೂಮಿಯ ಮೇಲೆ ಕುಳಿತು, ನಮ್ಮ ಸ್ವಾರ್ಥದ ಬಗ್ಗೆ ಮಾತ್ರ ಚಿಂತಿಸುತ್ತ ಕೂರುವುದರಲ್ಲಿ ಅರ್ಥವಿಲ್ಲ. #ವಾಸ್ತವಕ್ಕೆ ಯಾವುದೇ ವಿಶಿಷ್ಟವಾದ ಚಿತ್ರ ಇರುವುದಿಲ್ಲ. #ಎಲ್ಲವೂ ಪೂರ್ವನಿರ್ಧಾರಿತ ಮತ್ತು ಯಾರೂ ಏನನ್ನೂ ಬದಲಾಯಿಸಲು ಸಾಧ್ಯವಿಲ್ಲ ಎನ್ನುವವರೂ ರಸ್ತೆ ದಾಟುವಾಗ ಎರಡೂ ಕಡೆ ನೋಡುತ್ತಾರೆ! #ನನಗೆ ಸಾವಿನ ಬಗ್ಗೆ ಭಯವಿಲ್ಲ. ಆದರೆ ಸಾಯಲು ಆತುರವೂ ಇಲ್ಲ. ಸಾಯುವ ಮುನ್ನ ಮಾಡಬೇಕಾದ್ದು ಬಹಳಷ್ಟಿದೆ. #ಮಿದುಳೆಂಬುದು ಒಂದು ಗಣಕಯಂತ್ರದಂತೆ. ಅದರ ಭಾಗಗಳು ತಮ್ಮ ಕಾರ್ಯದಲ್ಲಿ ವಿಫಲಗೊಂಡಾಗ ಮಿದುಳು ಸ್ಥಗಿತವಾಗಿಬಿಡುತ್ತದೆ. ಇಂತಹ ಗಣಕಯಂತ್ರಕ್ಕೆ ಮುಂದೆ ಸ್ವರ್ಗವಾಗಲೀ ಮರುಜನ್ಮವಾಗಲೀ ಇದೆಯೆಂದು ನಾನು ನಂಬುವುದಿಲ್ಲ. ಅದೆಲ್ಲವೂ ಕತ್ತಲನ್ನು ಕಂಡರೆ ಭಯಪಡುವ ಜನರಿಗಾಗಿನ ಕಟ್ಟುಕತೆ! #ನಮ್ಮ ನಿರೀಕ್ಷೆಗಳು ಶೂನ್ಯಕ್ಕೆ ಇಳಿದಾಗ, ನಮ್ಮ ಬಳಿ ಇರುವ ಎಲ್ಲದರ ಬಗ್ಗೆಯೂ ಮೆಚ್ಚುಗೆ ಬರುತ್ತದೆ.#ದೇವರು ದಾಳ ಎಸೆಯುವುದಿಲ್ಲ ಎಂದು ಐನ್​ಸ್ಟೈನ್ ಹೇಳಿದ್ದರು. ಆದರೆ, ದೇವರು ದಾಳ ಎಸೆಯುವುದು ಮಾತ್ರವಲ್ಲ, ಒಮ್ಮೊಮ್ಮೆ ನಮಗೆ ಕಾಣದ ಜಾಗಗಳಿಗೂ ದಾಳಗಳನ್ನು ಎಸೆಯುತ್ತಾನೆ! #ಗಮನಕ್ಕೆ ಬಂದ ಬೇರೆಬೇರೆ ವಿಷಯಗಳ ನಡುವೆ ಸಂಬಂಧ ಕಲ್ಪಿಸಿದಾಗ ಮತ್ತು ಅಸಾಧಾರಣ ಘಟನಾವಳಿಗಳಿಗೆ ಸರಳ ವಿವರಣೆಗಳನ್ನು ಕೊಟ್ಟಾಗ ವಿಜ್ಞಾನ ಸುಂದರವಾಗುತ್ತದೆ.=ಸಕ್ರಿಯ ಮನಸ್ಸು ನನ್ನ ಉಳಿವಿಗೆ ಕಾರಣವಾಗಿದೆ. ಹಾಗೆಯೇ ಹಾಸ್ಯಪ್ರಜ್ಞೆ ಕೂಡ ನನ್ನ ಉಳಿಸಿದೆ! #ಮನುಷ್ಯನ ಮನಸ್ಸಿಗೆ ನಿಲುಕದ ಯಾವ ಸತ್ಯವೂ ಇಲ್ಲ. =ಬುದ್ಧಿವಂತ ಜೀವಿಗಳು ಅದು ಹೇಗೆ ಯಾರೂ ಭೇಟಿಮಾಡಲು ಇಚ್ಛಿಸದಂತಹ ವ್ಯಕ್ತಿಗಳಾಗಿ ಪರಿವರ್ತನೆಗೊಂಡರು ಎನ್ನುವುದನ್ನು ಅರ್ಥಮಾಡಿಕೊಳ್ಳಲು ಒಮ್ಮೆ ನಮ್ಮನ್ನು ನಾವು ನೋಡಿಕೊಂಡರೆ ಸಾಕು! #ದೇವರು ಎನ್ನುವುದು ನಾವಿಲ್ಲಿರುವ ಕಾರಣಕ್ಕೆ ಜನರು ಕೊಟ್ಟಿರುವ ಹೆಸರು. ನನ್ನ ಪ್ರಕಾರ ಆ ದೇವರು ಭೌತಶಾಸ್ತ್ರದ ನಿಯಮಗಳೇ ಹೊರತು, ನಾವು ಭೇಟಿ ಮಾಡಬಹುದಾದ ಓರ್ವ ವ್ಯಕ್ತಿ ಅಲ್ಲ. ಆತನೊಬ್ಬ ವ್ಯಕ್ತಿಗತನಲ್ಲದ ದೇವರು. #ಎಲ್ಲ ಭೌತಿಕ ಶಾಸ್ತ್ರಗಳೂ ಕೇವಲ ತಾತ್ಕಾಲಿಕ. ಅವೆಲ್ಲವೂ ಎಂದೂ ನಿರೂಪಿಸಲಾಗದ ಕಲ್ಪಿತ ಸಿದ್ಧಾಂತ. ಎಷ್ಟೋ ಬಾರಿ ನಮ್ಮ ಪ್ರಯೋಗದ ಪರಿಣಾಮಗಳು ತತ್ತ್ವದ ಪ್ರಕಾರವೇ ಇದ್ದರೂ, ಮುಂದಿನ ಸಾರಿ ಅದು ತತ್ತ್ವಕ್ಕೆ ವಿರುದ್ಧವಾದ ಫಲಿತಾಂಶ ಕೊಡುವುದಿಲ್ಲ ಎನ್ನುವ ಯಾವ ಖಾತ್ರಿಯೂ ಇಲ್ಲ. #ಕೃತಕ ಬುದ್ಧಿಮತ್ತೆ ಪೂರ್ತಿಯಾಗಿ ಬೆಳೆದರೆ, ಅಲ್ಲಿಂದ ಮಾನವ ಸಂಕುಲದ ನಾಶ ಪ್ರಾರಂಭವಾಗುತ್ತದೆ. ಈ ಭೂಮಿಗೆ ಅದೆಷ್ಟು ಕಡೆಗಳಿಂದ ಅದೆಷ್ಟು ಬಗೆಯ ಅಪಾಯಗಳಿದೆ ಎಂದರೆ, ನನಗೆ ಆಶಾವಾದಿಯಾಗಿರಲು ಸಾಧ್ಯವಾಗುತ್ತಿಲ್ಲ. #ಲಕ್ಷಾಂತರ ವರ್ಷಗಳ ಕಾಲ ಮನುಷ್ಯರು ಪ್ರಾಣಿಗಳಂತೆಯೇ ಬದುಕಿದರು. ಅನಂತರ, ಮನುಷ್ಯರ ಕಲ್ಪನಾಶಕ್ತಿಯನ್ನು ಉದ್ದೀಪಿಸುವ ಅದೇನೋ ನಡೆಯಿತು. ಮಾತನಾಡುವುದನ್ನೂ ಕೇಳಿಸಿಕೊಳ್ಳುವುದನ್ನೂ ಕಲಿತೆವು. ಮಾತು ಅಥವಾ ಅಲೋಚನೆಗಳನ್ನು ಹಂಚಿಕೊಳ್ಳಲು ಅನುವಾಗಿಸಿದ ಸಂವಹನ ಕ್ರಿಯೆ ಮನುಷ್ಯರು ಒಟ್ಟಾಗಿ ಕೆಲಸ ಮಾಡಿ ಅಸಾಧ್ಯಗಳನ್ನು ಮೀರುವಂತೆ ಮಾಡಿತು. ಮನುಕುಲದ ಅತಿದೊಡ್ಡ ಸಾಧನೆಗಳು ಮಾತಿನಿಂದ ಬಂದಿವೆ ಮತ್ತು ಮನುಕುಲದ ಅತಿದೊಡ್ಡ ವೈಫಲ್ಯಗಳಿಗೆ ಸಂವಹನದ ಕೊರತೆಯೇ ಮೂಲಕಾರಣವಾಗಿದೆ. ಇಂದು ತಂತ್ರಜ್ಞಾನದ ದೆಸೆಯಿಂದಾಗಿ ನಮ್ಮ ಬಳಿ ಎಲ್ಲವೂ ಇದೆ. ನಾವು ಮಾತನಾಡುತ್ತಿದ್ದರೆ ಸಾಕು, ನಮ್ಮ ಎಲ್ಲ ಆಸೆ ನಿರೀಕ್ಷೆಗಳು ಭವಿಷ್ಯದಲ್ಲಿ ಸಾಕಾರವಾಗುವುವು.

ಸಂವಹನ ಸಲಹೆಗಾರನಾಗಿ, ಈ ಮೇಲಿನ ಮಾತುಗಳು ನನಗೆ ಅಚ್ಚುಮೆಚ್ಚು. ಸಂವಹನದ ವಿಷಯದಲ್ಲಿ, ಅದು ಅವರು ಕಂಡುಹಿಡಿಯಲು ಬಯಸಿದ ‘ಥಿಯರಿ ಆಫ್ ಎವೆರಿಥಿಂಗ್’ಗೆ ಸಮನಾದುದು ಎನ್ನುವುದು ನನ್ನ ಅಭಿಪ್ರಾಯ! ನಾವು ಅವರ ಎಷ್ಟೋ ಮಾತುಗಳನ್ನು ಒಪ್ಪಬಹುದು ಅಥವಾ ಬಿಡಬಹುದು. ಅವರೇ ಹೇಳಿರುವಂತೆ ವಿಜ್ಞಾನದ ತತ್ತ್ವಗಳೂ ನಿರ್ದಿಷ್ಟವಲ್ಲ. ಇನ್ನು ಮಾತುಗಳಿಗೆ ವಿಚಾರಗಳಿಗೆ ಅದ್ಯಾವ ಬೆಲೆ? ಆದರೆ, ಪ್ರಜ್ಞಾವಂತರಾದ ಯಾರೂ ಹಾಕಿಂಗ್ ಪ್ರಸ್ತಾಪಿಸಿರುವ ವಿಷಯಗಳ ಬಗ್ಗೆ ಚಿಂತಿಸದಿರಲು ಸಾಧ್ಯವಿಲ್ಲ. ಅವರ ತೀಕ್ಷ ್ಣತೆಗೂ ಹಾಸ್ಯಪ್ರಜ್ಞೆಗೂ ಜೀವನಪ್ರೀತಿಗೂ ಮನಸೋಲದಿರಲು ಸಾಧ್ಯವಿಲ್ಲ. ಅವರ ಬದುಕು ವಿಚಾರಗಳೆರಡೂ ಮುಂದಿನ ನೂರಾರು ಪೀಳಿಗೆಗಳಿಗೆ ಮಾರ್ಗದರ್ಶಿಯಾಗಲಿ. ಅವರು ಕಂಡುಹಿಡಿಯಲು ಆರಂಭಿಸಿದ ಸಂಶೋಧನೆಗಳಿಗೆ ಮುಂದೊಮ್ಮೆ ಅವರಿಂದ ಪ್ರೇರಿತರಾದ ವಿಜ್ಞಾನಗಳು ರ್ತಾಕ ಅಂತ್ಯ (ಅಥವಾ ಸೃಷ್ಟಿಯ ಆರಂಭ) ಕಾಣಿಸಲಿ. ‘ಥಿಯರಿ ಆಫ್ ಎವೆರಿಥಿಂಗ್’ ಅಥವಾ ‘ಎಲ್ಲದರ ತತ್ವ’ ಎಲ್ಲರಿಗೂ ಲಭ್ಯವಾಗಲಿ. ‘ಮೈಂಡ್ ಆಫ್ ಗಾಡ್’ ಅಥವಾ ‘ದೇವರ ಮನಸ್ಸು’ ಏನೆಂಬುದು, ಹಾಕಿಂಗ್ ಹೇಳಿದಂತೆ, ನಮಗೆ ವಿಜ್ಞಾನದ ಮೂಲಕ ಗ್ರಹಿಕೆಗೆ ಬರಲಿ. ಆ ಮೂಲಕ, ದೇವರನ್ನು ನಂಬುವವರಿಗೂ ವಿಜ್ಞಾನವನ್ನು ನಂಬುವವರಿಗೂ ಅವೆರಡೂ ಬಹುಶಃ ಒಂದೇ ಎನ್ನುವ ದಿವ್ಯದರ್ಶನ ಸಿಗಲಿ.

(ಲೇಖಕರು ಸಂವಹನ ಸಲಹೆಗಾರರು)

Leave a Reply

Your email address will not be published. Required fields are marked *

Back To Top