Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ಭಾರತ ನಿಜಕ್ಕೂ ಪ್ರವಾಸಿಗರ ಸ್ವರ್ಗ ಆಗುವುದೇ?

Sunday, 21.01.2018, 3:05 AM       No Comments

ನಮಲ್ಲಿ ಪ್ರೇಕ್ಷಣಿಯ ಪ್ರವಾಸಿ ತಾಣಗಳಿಗೆ ಕೊರತೆಯಿಲ್ಲ. ಆದರೆ, ಪ್ರವಾಸಿಗರನ್ನು ಮೋಸ ಮಾಡುವ, ಬೆದರಿಸುವ, ನಿರ್ಲಕ್ಷಿಸುವ ನಡವಳಿಕೆಗಳು ಪ್ರವಾಸವನ್ನು ಪ್ರಯಾಸವನ್ನಾಗಿಸುತ್ತವೆ. ಪ್ರವಾಸವೆಂದರೆ ಭಯ ಪಡುವ ಸ್ಥಿತಿ ನಿರ್ವಣವಾಗುತ್ತದೆ. ಈ ಸ್ಥಿತಿ ಬದಲಾದರೆ ಪ್ರವಾಸೋದ್ಯಮದ ಭವಿಷ್ಯ ಉಜ್ವಲ.

 ಭಾರತ ಅತ್ಯಂತ ಪ್ರೇಕ್ಷಣೀಯ ದೇಶ. ಪ್ರತಿಯೊಂದು ತಿರುವಿನಲ್ಲೂ ಒಂದೊಂದು ಸುಂದರ ನೋಟ. ಪ್ರತಿ ಊರಿನಲ್ಲೂ ಪರಂಪರೆಯ ಮೆರೆತ. ಪ್ರತಿ ದಿಕ್ಕಿನಲ್ಲೂ ತೀರ್ಥಕ್ಷೇತ್ರಗಳು. ಪ್ರಕೃತಿಯ ಆವಾಸಸ್ಥಾನವಿದು. ಎತ್ತ ಹೊರಟರೂ ಗುಡ್ಡ-ಬೆಟ್ಟ-ಪರ್ವತಗಳ ರುದ್ರರಮಣೀಯ ರೂಪ. ನದಿ-ಜಲಪಾತಗಳ ಜುಳುಜುಳು. ಬೆರೆತು ಅರಿತರೆ- ಜನರ ಭಾಷೆ, ಸಂಸ್ಕೃತಿ, ವಿಚಾರ, ಆಚರಣೆಗಳಲ್ಲಿನ ವೈವಿಧ್ಯ. ನಮ್ಮ ಭಾರತ- ಒಂದು ದೇಶವೆಂದರೆ ಒಂದು ದೇಶ. ಆಳಕ್ಕಿಳಿದವನ ಕಣ್ಣಿಗೆ ಸಾವಿರಾರು ವೇಷ. ಅನುಮಾನವೇ ಇಲ್ಲ, ಕೋಶ ಓದುವ ಬದಲು ದೇಶ ಸುತ್ತಿ ಜ್ಞಾನಾರ್ಜನೆ ಮಾಡಿಕೊಳ್ಳಲು ಹೊರಟವನಿಗೆ ಇದು- ಪ್ರವಾಸಿಗರ ಸ್ವರ್ಗ!

ಆದರೆ, ಇಂತಹ ವೈವಿಧ್ಯಮಯ ಸೌಂದರ್ಯವನ್ನು ಸವಿಯಲು ಬಂದ ರಸಿಕನನ್ನು ಭಾರತದ ಪ್ರವಾಸಿತಾಣಗಳು ಹೇಗೆ ಸ್ವಾಗತಿಸುತ್ತವೆ? ನಿಜಕ್ಕೂ ಭಾರತ ಪ್ರವಾಸಿಗರ ಸ್ವರ್ಗವೇ? ಮೊದಲಿಗೆ, ನನ್ನ ಅನುಭವಕ್ಕೆ ಬಂದ ನಾಲ್ಕು ಪ್ರಕರಣಗಳನ್ನು ವಿವರಿಸುತ್ತೇನೆ.

ಪ್ರಕರಣ ಒಂದು: ಅಮೆರಿಕದವರಾದ ಆಂಡಿ ಜಗತ್ತಿನ ಅನೇಕ ದೇಶಗಳನ್ನು ಸುತ್ತಿರುವ ಯಶಸ್ವಿ ಉದ್ಯಮಿ. ಅವರು ಕೆಲಸದ ನಿಮಿತ್ತ ನಮ್ಮ ಕಚೇರಿಗೆ ಬಂದಿದ್ದರು. ಬೆಂಗಳೂರಿಗೆ ಇದು ಅವರ ಮೊದಲ ಭೇಟಿಯಾಗಿತ್ತು. ಭಾನುವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ ಅವರಿಗೆ ಎರಡು ದಿನಗಳ ಬಿಜಿ ಕಾರ್ಯಕ್ರಮ ಇತ್ತು. ಆದಾಗ್ಯೂ, ಭಾರತವನ್ನು ಧರ್ಮ ಮತ್ತು ಅಧ್ಯಾತ್ಮದ ತವರು ಎಂದು ನಂಬಿರುವ ಆಂಡಿ ಬೆಂಗಳೂರಿನಲ್ಲಿ ಸಿಕ್ಕ ಅರ್ಧ ದಿನದಲ್ಲಿ ಒಂದೆರಡು ಖ್ಯಾತ ದೇವಸ್ಥಾನಗಳನ್ನು ನೋಡಲು ನಿರ್ಧರಿಸಿದರು.

ಅವರು ಭೇಟಿ ಕೊಟ್ಟ ಮೊದಲ ದೊಡ್ಡ ದೇವಸ್ಥಾನದಲ್ಲಾದ ಅನುಭವ ಹೇಳಿಕೊಂಡರು. ದೇವಸ್ಥಾನದಿಂದ ಹೊರಬಂದು, ಬಿಟ್ಟುಹೋಗಿದ್ದ ಚಪ್ಪಲಿಯನ್ನು ಹಿಂಪಡೆಯುವ ಸಾಲಿನಲ್ಲಿ ನಿಂತಿದ್ದರು. ಭಾನುವಾರವಾದ್ದರಿಂದ ಸಾಲು ಸ್ವಲ್ಪ ಉದ್ದವಾಗಿಯೇ ಇತ್ತು. ಚಪ್ಪಲಿ ಕಾಯುವವ ಎಲ್ಲರಿಂದಲೂ ಎರಡೆರಡು ರೂಪಾಯಿ ಪಡೆಯುತ್ತಿರುವುದನ್ನು ಆಂಡಿ ಗಮನಿಸಿದ್ದರು. ತಮ್ಮ ಸರದಿ ಬಂದಾಗ, ಸೌಜನ್ಯಕ್ಕೆಂದು, ‘ಎಷ್ಟು?’ ಎಂದು ಕೇಳಿದರು. ಕೂಡಲೆ, ಯಾವ ಹಿಂಜರಿಕೆಯೂ ಇಲ್ಲದೆ ಕೌಂಟರ್ ಹಿಂದಿದ್ದ ವ್ಯಕ್ತಿ ಐವತ್ತು ರೂಪಾಯಿ ಅಂದನಂತೆ! ಅದು ದೇವಸ್ಥಾನವಾದ್ದರಿಂದ- ಒಳಗೆ ಹೋಗಿ ತಿಳಿಯಾಗಿದ್ದ ಮನಸ್ಸನ್ನು ಹೊರಗೆ ಬಗ್ಗಡಗೊಳಿಸಿಕೊಳ್ಳುವ ಮನಸ್ಸಾಗದೆ- ವಾದ ಮಾಡದೆ ಐವತ್ತು ರೂಪಾಯಿ ಕೊಟ್ಟು ಬಂದೆ ಎಂದರು ಆಂಡಿ. ಇಂತಹ ಅನುಭವಗಳು ವಿದೇಶಿಯರಿಗೆ ಮಾತ್ರ ಸೀಮಿತವಲ್ಲ ಎನ್ನುವುದಕ್ಕೆ ಮಿಕ್ಕ ಮೂರು ಪ್ರಕರಣಗಳು ಸಾಕ್ಷಿ.

ಪ್ರಕರಣ ಎರಡು: ಐತಿಹಾಸಿಕ ದೌಲತಾಬಾದ್​ನಲ್ಲಿ ನಾವು ಕಾರ್ ಇಳಿಯುವ ವೇಳೆಗೆ ನಾಲ್ಕೈದು ಜನ ಗೈಡ್-ಬುಕ್​ಗಳನ್ನು ಮಾರುವವರು ನಮ್ಮನ್ನು ಮುತ್ತಿಕೊಂಡರು. ನಮಗೆ ಬೇಡವೆಂದರೂ, ಒಬ್ಬ ವ್ಯಕ್ತಿ ಪಟ್ಟುಬಿಡದೆ ನಮ್ಮ ಹಿಂದೆಯೇ ಬಿದ್ದರು. ಅವರ ಒತ್ತಡ ತಡೆಯಲಾಗದೆ, ‘ಎಷ್ಟು?’ ಎಂದು ವಿಚಾರಿಸಿದೆವು. ಆತ ಸೌಜನ್ಯದ ದನಿಯಲ್ಲಿ ಹೇಳಿದ, ‘ಸರ್, ಇದೊಂದು ವಿಶೇಷವಾದ ಪುಸ್ತಕ. ಇದರಲ್ಲಿ ದೌಲತಾಬಾದ್​ನ ಅಪರೂಪವಾದ ಚಿತ್ರಗಳು ಮತ್ತು ವಿವರಣೆಗಳಿವೆ. ಇದಕ್ಕೆ 12 ಡಾಲರ್ ಆಗುತ್ತದೆ. ಅಂದರೆ ಸುಮಾರು 800 ರೂಪಾಯಿ’. ನಮಗೆ ಪಿತ್ತ ನೆತ್ತಿಗೇರಿತು. 30-40 ಹಾಳೆಗಳ ಪುಸ್ತಕವನ್ನು ಕೈಯಲ್ಲಿಟ್ಟುಕೊಂಡು ಅದನ್ನು ಡಾಲರ್ ಲೆಕ್ಕದಲ್ಲಿ ಮಾರಲು ಯತ್ನಿಸುತ್ತಿ್ತದ್ದಾನಲ್ಲ… ಈ ಪುಸ್ತಕದ ನಿಜವಾದ ಬೆಲೆ ಅರಿಯಬೇಕು ಎಂದು ನಿರ್ಧರಿಸಿ, ಅವನ ಜೊತೆ ಚೌಕಾಸಿಗಿಳಿದೆವು.

ಆಗ, ಪುಸ್ತಕದ ಬೆಲೆ ಇಳಿದ ಪರಿ ಕುತೂಹಲಕಾರಿ-ನಾವು ವಿದೇಶದಿಂದ ಬಂದವರಲ್ಲ ಎಂದು ಹೇಳಿದಾಗ ಅವನು 800ರಿಂದ 160ಕ್ಕೆ ಇಳಿಸಿದ್ದ. ಹಿಂದಿಯಲ್ಲಿ ಚೌಕಾಸಿ ಆರಂಭಿಸಿದಾಗ 100ಕ್ಕೆ ಬಂದ. ನಮ್ಮ ಬಳಿ 100 ರೂಪಾಯಿ ಇಲ್ಲ, ಆದರೆ ಎರಡು ನಿಮಿಷ ಆ ಪುಸ್ತಕವನ್ನು ನೋಡಲು ನಮಗೆ ಕೊಟ್ಟರೆ, 10 ರೂಪಾಯಿ ಕೊಡುವುದಾಗಿ ಹೇಳಿದೆವು. ಆಗ ಅವನು, ‘ಅಯ್ಯೋ ಬಿಟ್ಟಾಕಿ. 20 ರೂಪಾಯಿ ಕೊಟ್ಟು ಪುಸ್ತಕವನ್ನು ನೀವೇ ಇಟ್ಟುಕೊಳ್ಳಿ’ ಎಂದ!

ವ್ಯಾಪಾರ ಕುದುರಿದಾಗ 800 ರೂಪಾಯಿಗೆ ಮಾರಲು ಹೊರಟಿದ್ದ ಪುಸ್ತಕವನ್ನು ಕೇವಲ 20 ರೂಪಾಯಿಗೆ ನಮಗೆ ಕೊಟ್ಟಿದ್ದ. ತನ್ನ ಮೊದಲ ಆಫರ್​ನಲ್ಲಿ ಪುಸ್ತಕದ ವಾಸ್ತವ ಬೆಲೆಗಿಂತ 40 ಪಟ್ಟು ಹೆಚ್ಚು ಹೇಳಿದ್ದ!

ಪ್ರಕರಣ ಮೂರು: ಈ ಪ್ರಕರಣ ನಡೆದದ್ದು ಜಗದ್ವಿಖ್ಯಾತ ಅಜಂತಾದಲ್ಲಿ. ಬೆಟ್ಟದ ಮೇಲಿರುವ ಅಜಂತಾ ಗುಹೆಗಳಿಗೆ ಹೋಗಬೇಕಾದರೆ, ನಾವು ನಮ್ಮ ಖಾಸಗಿ ವಾಹನದಲ್ಲಿ ಹೋಗುವಂತಿಲ್ಲ. ಖಾಸಗಿ ವಾಹನಗಳಿಂದ ಹೊರಹೊಮ್ಮುವ ಹೊಗೆಯಿಂದ ಪರಿಸರ ಮಲಿನಗೊಂಡು ಗುಹೆಗಳಲ್ಲಿರುವ ವರ್ಣಚಿತ್ರಗಳ ಮೇಲೆ ಪರಿಣಾಮವಾಗಬಹುದು ಎನ್ನುವ ದೃಷ್ಟಿಯಿಂದ, ಅಲ್ಲಿನ ಸರ್ಕಾರ, ನಮ್ಮ ವಾಹನಗಳನ್ನು ಬೆಟ್ಟದ ತಪ್ಪಲಿನಲ್ಲಿ ನಿಲ್ಲಿಸುವ; ಸರ್ಕಾರಿ ಬಸ್​ಗಳಲ್ಲಿ ಬೆಟ್ಟದ ಮೇಲೆ ಹೋಗಲು ಅನುವಾಗುವ ವಿಶೇಷ ವ್ಯವಸ್ಥೆ ಮಾಡಿದೆ.

ಹೀಗೆ, ನಮ್ಮ ವಾಹನವನ್ನು ನಿಲ್ಲಿಸಿ ಬಸ್ ನಿಲ್ದಾಣಕ್ಕೆ ಹೋಗುವ ವೇಳೆಗೆ ದಿನದ ಮೊದಲ ಬಸ್ ಆಗ ತಾನೇ ಹೊರಟಿತ್ತು. ಮುಂದಿನ ಬಸ್​ಗೆ ಟಿಕೆಟ್ ಪಡೆದು ಕಾಯುತ್ತ ಕುಳಿತೆವು. ಮೇಲೆ ಹೋಗಿ ಗುಹೆಗಳನ್ನು ನೋಡುವ ಉತ್ಸಾಹದಲ್ಲಿದ್ದ ನಾವು, ಸ್ವಲ್ಪ ಹೊತ್ತಿನ ಬಳಿಕ ಆ ಬಸ್​ಗಳ ಉಸ್ತುವಾರಿ ವಹಿಸಿದ್ದ ನಿರ್ವಾಹಕರ ಬಳಿಗೆ ಹೋಗಿ ‘ಬಸ್ ಎಷ್ಟು ಹೊತ್ತಿಗೆ ಹೊರಡಬಹುದು?’ ಎಂದು ಕೇಳಿದೆವು. ಆಶ್ಚರ್ಯ! ಸುಮಾರು 50-55ರ ಪ್ರಾಯದ ಆ ವ್ಯಕ್ತಿ ಯಾವ ಮಾತನ್ನೂ ಆಡಲಿಲ್ಲ. ನಮ್ಮನ್ನು ದುರುದುರು ನೋಡಿ ಪಕ್ಕಕ್ಕೆ ತಿರುಗಿದರು. ಥೇಟ್ ಸಿನಿಮಾಗಳಲ್ಲಿ ನಡೆಯುವಂತೆ! ನಾವೂ ಛಲ ಬಿಡಲಿಲ್ಲ. ಮೂರ್ನಾಲ್ಕು ಬಾರಿ ಅವರನ್ನು ಮಾತನಾಡಿಸಲು ಪ್ರಯತ್ನಿಸಿದ ಮೇಲೆ, ಸಿಡುಕಿದರು-‘ಎಷ್ಟು ಸಾರಿ ಹೇಳಬೇಕು? ಇನ್ನೂ ಸ್ವಲ್ಪ ಹೊತ್ತು ಕಾಯಿರಿ. ನಿಮಗೆ ಉತ್ತರ ಹೇಳುತ್ತ ಕೂರುವುದು ನಮ್ಮ ಕೆಲಸವಲ್ಲ’. ನಾವೂ ಜಗಳಕ್ಕೆ ನಿಂತೆವು. ‘ಅಲ್ಲ ಸ್ವಾಮಿ, ನೀವು ಬಾಯಿ ಬಿಡಲೇ ಇಲ್ಲ. ಈಗ, ಎಷ್ಟು ಸಾರಿ ಹೇಳುವುದು ಎನ್ನುತ್ತೀರಿ. ಅಲ್ಲದೆ, ಇಲ್ಲಿನ ನಿರ್ವಾಹಕರಾಗಿ ಇದು ನಿಮ್ಮ ಜವಾಬ್ದಾರಿ ತಾನೆ?’ ಎಂದೆಲ್ಲ, ತರ್ಕಕ್ಕೆ ಇಳಿದೆವು.

ಪರಿಸ್ಥಿತಿ ಕೈಮೀರಬಹುದೆಂದು ಅರಿತ ಅಲ್ಲಿನ ಕೆಲವರು ನಮಗೆ ‘ಸಮಾಧಾನ’ ಹೇಳಿದರು, ‘ಪಾಪ ಅವರಿಗೆ ವಯಸ್ಸಾಗಿದೆ ಬಿಡಿ ಸಾರ್. ಕಳೆದ 25 ವರ್ಷದಿಂದ ಇಲ್ಲೇ ಕೆಲಸ ಮಾಡುತ್ತಿದ್ದಾರೆ. ಅವರಿಗೂ ಸಾಕಾಗಿದೆ. ಅದಕ್ಕೇ ನಿತ್ಯವೂ ಹೀಗೆ ಬಂದವರ ಮೇಲೆ ರೇಗಾಡುತ್ತಾರೆ. ಇನ್ನೇನು ರಿಟೈರ್ ಆಗುತ್ತಾರೆ, ಬಿಡಿ’. ನಮಗೆ ಆಶ್ಚರ್ಯವಾಯಿತು! ‘ಅರೆ, ನಿತ್ಯವೂ ಹೀಗೇ ರೇಗಾಡಿದರೂ, 25 ವರ್ಷದಿಂದ ಇಲ್ಲೇ ಇದ್ದಾರಾ?’ ಎಂದು ಕೇಳಿದೆವು. ಹೌದು. ಊರಿನೊಳಗೆ ಇಂಥವರನ್ನು ಜನ ಸುಮ್ಮನೆ ಬಿಡುವುದಿಲ್ಲವಲ್ಲ. ಇಂತಹ ಟೂರಿಸ್ಟ್ ಜಾಗದಲ್ಲಾದರೆ ಪರವಾಗಿಲ್ಲ ಎಂದು ಸಮಜಾಯಿಷಿ ನೀಡಿದರು! ಅವರ ತರ್ಕಕ್ಕೆ ನಾವು ಅವಾಕ್ಕಾದೆವು!

ಪ್ರಕರಣ ನಾಲ್ಕು: ಈ ಘಟನೆ ನಡೆದದ್ದು ಪಕ್ಕದ ಗೋವಾದಲ್ಲಿ. ನೀವು ದಿನದ ಯಾವ ಹೊತ್ತಿನಲ್ಲಿ ಗೋವಾದ ಕಾಲಂಗೂಟ್ ಬೀಚ್​ಗೆ ಹೋದರೂ, ವಿವಿಧ ಭಂಗಿಗಳಲ್ಲಿ ಫೋಟೋ ತೆಗೆಸಿಕೊಂಡವರ ಆಲ್ಬಮ್ ಕೈಯಲ್ಲಿ ಹಿಡಿದ ಕನಿಷ್ಠ ಹತ್ತಿಪ್ಪತ್ತು ಮಂದಿ ಹುಡುಗರಾದರೂ ನಿಮ್ಮನ್ನು ಮಾತನಾಡಿಸುತ್ತಾರೆ. ಫೋಟೋ ತೆಗೆಸಿಕೊಳ್ಳಿ ಎಂದು ನಿಮ್ಮನ್ನು ಪೀಡಿಸುತ್ತಾರೆ. ನಿಮ್ಮದೇ ಕ್ಯಾಮರಾ ತೋರಿಸಿ, ‘ನಮ್ಮ ಬಳಿಯೇ ಇದೆ, ನಿಮ್ಮ ಫೋಟೋ ಬೇಡ’ ಎಂದು ಎಷ್ಟು ಹೇಳಿದರೂ ಕೇಳುವುದಿಲ್ಲ. ಇವರಿಗೆ ಉತ್ತರ ಹೇಳುವಷ್ಟರಲ್ಲಿ ಸಾಕುಸಾಕಾಗುತ್ತದೆ. ಕಾಲಂಗೂಟ್ ಬೀಚ್ ಒಂದರಲ್ಲೇ ಇಂತಹ 30-40 ಹುಡುಗರನ್ನು ನೀವು ನೋಡಬಹುದು.

ನಮ್ಮಲ್ಲಿ ಕೆಲವರು ನೀರಿನಲ್ಲಿ ಆಡುತ್ತ ಮತ್ತೆ ಕೆಲವರು ಚಪ್ಪಲಿ, ಫೋನು, ಪರ್ಸಗಳನ್ನು ಕಾಯುತ್ತ ಮರಳಿನ ಮೇಲೆ ಕುಳಿತಿದ್ದೆವು. ನಮ್ಮಲ್ಲೊಬ್ಬರು ಅಲ್ಲಿ ನಡೆಯುತ್ತಿದ್ದ ಘಟನೆಯೊಂದರ ಕಡೆ ನಮ್ಮ ಗಮನ ಸೆಳೆದರು. ಆ ‘ಫೋಟೋಗ್ರಾಫರ್’ ಹುಡುಗರುಗಳಲ್ಲೊಬ್ಬ ಮರಳಿನಲ್ಲಿ ಹುದುಗಿಹೋಗಿದ್ದ ಪರ್ಸ್ ಒಂದನ್ನು ಮೇಲೆತ್ತಿಕೊಂಡು, ಒದರಿ, ರಾಜಾರೋಷವಾಗಿ ತನ್ನ ಒಳಜೇಬಿನಲ್ಲಿ ಇಟ್ಟುಕೊಳ್ಳುತ್ತಿದ್ದ!

ನಾವು ಅವನ ಬಳಿಗೆ ಹೋಗಿ, ‘ಏನಪ್ಪ, ಇಷ್ಟು ಹೊತ್ತೂ ಫೋಟೋ ಮಾರುವವನಂತೆ ನಟಿಸುತ್ತಿದ್ದೆ. ಈಗ ಯಾರೋ ಬಿಟ್ಟುಹೋಗಿರುವ ಪರ್ಸ್ ಜೇಬಿಗಿಳಿಸಿಕೊಳ್ಳುತ್ತಿದ್ದೀಯಾ?’ ಎಂದು ನೇರವಾಗಿ ಕೇಳಿದೆವು. 16-18 ವಯಸ್ಸಿನ ಚಿಕ್ಕ ಹುಡುಗನಾದ್ದರಿಂದ, ಅವನು ಮಾಡುತ್ತಿರುವುದು ತಪ್ಪು ಎಂದು ಬುದ್ಧಿವಾದ ಹೇಳಲು ಪ್ರಯತ್ನಿಸಿದೆವು.

ಸ್ವಲ್ಪ ಹೊತ್ತು ನಮ್ಮ ಉಪದೇಶವನ್ನು ಕೇಳಿದ ಹುಡುಗ, ಹೀಗೆಂದ, ‘ಅಲ್ಲ ಸರ್, ಈ ಫೋಟೋ ತೆಗೆಯುವುದರಿಂದ ನಮಗೇನು ಮಹಾ ದುಡ್ಡ ಸಿಗುತ್ತೆ ಅಂದ್ಕೊಂಡ್ರಾ? ನಮಗೆ ದುಡ್ಡು ಸಿಗೋದೇ ಈ ತರಹ ಯಾರಾದರೂ ಪರ್ಸ, ವಾಚು, ಉಂಗುರ, ಕ್ಯಾಮರಾ, ಮೊಬೈಲು ಇವುಗಳನ್ನ ಬೀಚ್​ನಲ್ಲಿ ಮರೆತು ಹೋದಾಗ. ಈಗ ನಾನು ಇದನ್ನು ಇಲ್ಲೇ ಬಿಟ್ಟರೆ, ಇನ್ನೊಬ್ಬರು ತೆಗೆದುಕೊಳ್ಳುತ್ತಾರೆ. ನಾನು ಬೆಳಗ್ಗಿನಿಂದ ಇಲ್ಲಿ ಕಾದದ್ದು ವ್ಯರ್ಥವಾಗುತ್ತದೆ’. ಮುಂದೇನಾಯಿತು ಎನ್ನುವುದು ಇಲ್ಲಿ ಪ್ರಸ್ತುತವಲ್ಲ. ಆದರೆ, ಬೇರೊಬ್ಬರ ವಸ್ತುವನ್ನು ತೆಗೆದುಕೊಂಡು ತಾನು ಕಳ್ಳತನ ಮಾಡುತ್ತಿದ್ದೇನೆ ಎನ್ನುವ ಅರಿವಾಗಲೀ, ಪಾಪಪ್ರಜ್ಞೆಯಾಗಲಿ ಆ ಹುಡುಗನಲ್ಲಿ ಇರಲಿಲ್ಲ ಎನ್ನುವುದು ಗಮನಾರ್ಹ.

ಮೇಲೆ ವರ್ಣಿಸಿದಂತೆ, ನಮ್ಮ ಪ್ರವಾಸಿ ತಾಣಗಳು ಕಣ್ಣಿಗೇನೋ ಸ್ವರ್ಗ. ಆದರೆ, ಪ್ರವಾಸಿಯಾಗಿ ಅನುಭವಿಸಲು ಒಂದಿಲ್ಲೊಂದು ರೀತಿಯಲ್ಲಿ ನರಕ. ಸಿಡುಕುವ ಅಧಿಕಾರಿಗಳಿಂದ ಹಿಡಿದು ಕದಿಯುವ ಹುಡುಗರವರೆಗೆ ಎಲ್ಲರೂ ಪ್ರವಾಸಿಗರನ್ನು ಗೋಳುಹೊಯ್ದುಕೊಳ್ಳುವುದರಿಂದ, ನಮ್ಮ ಪ್ರವಾಸಿ ತಾಣಗಳು ನರಕಸದೃಶ.

ಸಣ್ಣ ಕಳ್ಳರಿಂದ ಹಿಡಿದು ದೊಡ್ಡ ದಗಾಕೋರರವರೆಗೆ ಎಲ್ಲರಿಗೂ ಪ್ರವಾಸಿ ತಾಣಗಳೇ ಪ್ರಶಸ್ತ! ಪರಿಚಯವಿರದ ಊರಿನಲ್ಲಿ, ನಮ್ಮನ್ನು ಭಯಭೀತರನ್ನಾಗಿಸಿ ಹಣ ಕೀಳುವುದೇ ಇವರ ಉದ್ದೇಶ. ಜೊತೆಗೆ, ಫಾರಿನರ್​ಗಳನ್ನು ಅಟ್ಟಿಸಿಕೊಂಡು ಹೋಗಿ ದುಡ್ಡು ಕೇಳುವ ಮಕ್ಕಳು, ಅಥವಾ ಅವರೊಡನೆ ವಿವಿಧ ಭಂಗಿಗಳಲ್ಲಿ ಫೋಟೋ ತೆಗೆಸಿಕೊಳ್ಳಲು ಪೀಡಿಸುವ ಯುವಕರು. ಹತ್ತು ರೂಪಾಯಿಯ ಮಣಿಸರಗಳನ್ನು ಮುಖಕ್ಕೆ ಹಿಡಿದು ಸಾವಿರಗಟ್ಟಲೆ ಬೆಲೆ ಹೇಳುವವರು. ಹುಡುಗಿಯರ ಮೈ ಮುಟ್ಟಲು ಬರುವವರು. ಎಚ್ಚರ ತಪ್ಪಿದರೆ, ನಮ್ಮ ಮೊಬೈಲು, ಪರ್ಸಗಳನ್ನು ತಮ್ಮದಾಗಿಸಿಕೊಳ್ಳುವವರು… ಒಟ್ಟಿನಲ್ಲಿ, ನಮ್ಮ ಪ್ರವಾಸಿ ತಾಣಗಳು, ಅಲ್ಲಿಗೆ ಬರುವ ಪ್ರವಾಸಿಗರನ್ನು ಸುಲಿಯುಲೆಂದೇ ಸಜ್ಜಾಗಿರುವಂತಿವೆ. ನಾವೂ ಅಷ್ಟರ ಮಟ್ಟಿಗೆ ಭಂಡರಲ್ಲದಿದ್ದರೆ, ಪ್ರವಾಸವೆಂದರೆ ಭಯವಾಗಬೇಕು.

ಭಾರತದಲ್ಲಿ ಪ್ರವಾಸಿಗರಿಗಾಗುವ ಕಿರುಕುಳವನ್ನು ತಪ್ಪಿಸಲು ಸಾಧ್ಯವೇ? ನಮ್ಮ ಸರ್ಕಾರ ಏನು ಮಾಡಬಹುದು? ಪ್ರವಾಸಿ ತಾಣಗಳಲ್ಲಿ ವಾಸಿಸುವ ಜನರು ಏನು ಮಾಡಬಹುದು? ಹಾಗೆಯೇ ಪ್ರವಾಸಿಗರಾದ ನಮ್ಮನಿಮ್ಮಂಥವರ ಜವಾಬ್ದಾರಿ ಏನು? ಅದರ ಬಗ್ಗೆ, ಮುಂದಿನ ವಾರ ಬರೆಯುತ್ತೇನೆ.

(ಲೇಖಕರು ಸಂವಹನ ಸಲಹೆಗಾರರು)

Leave a Reply

Your email address will not be published. Required fields are marked *

Back To Top