Thursday, 15th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಸಿಂಗಾಪುರವೆಂಬ ಬೆರಗಿಗೆ ಸ್ವಚ್ಛತೆಯೇ ಮೆರುಗು!

Sunday, 27.05.2018, 3:05 AM       No Comments

ಸಿಂಗಾಪುರದಿಂದ ಕಲಿಯುವಂಥದ್ದು ಸಾಕಷ್ಟಿದೆ. ಸ್ವಚ್ಛತೆ, ಪಾರದರ್ಶಕತೆ, ಶಿಸ್ತು, ಬದ್ಧತೆ, ನಿಯತ್ತು, ಪರಿಪೂರ್ಣತೆ ಸೇರಿದಂತೆ ಹಲವು ಮೌಲ್ಯಗಳು ಸಿಂಗಾಪುರವನ್ನು ವಿಶ್ವದ ಮಾದರಿ ನಗರವಾಗಿಸಿವೆ. ಅಲ್ಲಿ ಅಪರಾಧಗಳೂ ಕಮ್ಮಿ ಮಾತ್ರವಲ್ಲ ಅಭಿವೃದ್ಧಿಯೇ ಮೂಲಮಂತ್ರ.

ನಾನು ಅತಿ ಹೆಚ್ಚು ಬಾರಿ ಭೇಟಿ ಕೊಟ್ಟಿರುವ ದೇಶ ಎಂದರೆ ಸಿಂಗಾಪುರ. ಹಲವು ವಿಷಯಗಳಲ್ಲಿ ಭಾರತಕ್ಕೆ ಹಾಗೂ ವಿಶ್ವದ ಇನ್ನಿತರ ಅಭಿವೃದ್ಧಿಶೀಲ ದೇಶಗಳಿಗೆ ಮಾದರಿಯಾಗಬಲ್ಲ ದೇಶ / ನಗರವೆಂದರೆ ಸಿಂಗಾಪುರ.

ಕಳೆದ ತಿಂಗಳು, ನಾನು ನನ್ನ ಸಿಂಗಾಪುರದ ಭೇಟಿಗಳ ಸುಖವನ್ನು ಕುಟುಂಬದೊಂದಿಗೆ ಹಂಚಿಕೊಳ್ಳಲು ಅವರನ್ನು ಪ್ರವಾಸಕ್ಕೆಂದು ಅಲ್ಲಿಗೆ ಕರೆದೊಯ್ದಿದ್ದ ಸಂದರ್ಭದಲ್ಲಿ, ನಮ್ಮನಾಡು ಚುನಾವಣೆಗೆ ಸಿದ್ಧವಾಗುತ್ತಿತ್ತು. ಅಲ್ಲಿ ಕುಳಿತು ಇಲ್ಲಿನ ಸುದ್ದಿಗಳನ್ನು ಓದುತ್ತಿರುವಾಗ, ಮೂರ್ನಾಲ್ಕು ಬಾರಿ ಸಿಂಗಾಪುರದ ಪ್ರಸ್ತಾಪ ಕಂಡಿತ್ತು. ಎಲ್ಲದರಲ್ಲಿಯೂ ಒಂದೇ ಒಕ್ಕಣೆ-‘ನಾವು ನಿಮ್ಮೂರನ್ನು ಸಿಂಗಾಪುರ ಮಾಡುತ್ತೇವೆ’ ಎಂಬುದಾಗಿ, ಪಕ್ಷಾತೀತವಾಗಿ ಅಭ್ಯರ್ಥಿಗಳು ಕೊಡುತ್ತಿದ್ದ ಆಶ್ವಾಸನೆ! ಅಲ್ಲಿನದನ್ನೂ ಇಲ್ಲಿನದನ್ನೂ ಬಲ್ಲವರಿಗೆ ಇದು ಕೆಲವೊಮ್ಮೆ ಹಾಸ್ಯಾಸ್ಪದವಾಗಿಯೂ, ಮತ್ತೆ ಕೆಲವೊಮ್ಮೆ ಅಣಕವಾಗಿಯೂ, ಮಗದೊಮ್ಮೆ ಸ್ಪೂರ್ತಿದಾಯಕ ಉದಾಹರಣೆಯಂತೆಯೂ ಕಾಣುತ್ತಿತ್ತು! ಈ ಸಂದರ್ಭದಲ್ಲಿ, ನಾನು ಮೊದಲ ಬಾರಿ ಈ ಸಿಂಗಾಪುರವೆಂಬ ಅದ್ಭುತಕ್ಕೆ ಭೇಟಿ ಕೊಟ್ಟಾಗ ಬರೆದಿದ್ದ ಅನುಭವಗಳ ಪುನಃರುಲ್ಲೇಖ ಇಲ್ಲಿದೆ.

ಯಾರಾದರೂ ಸಿಂಗಾಪುರಕ್ಕೆ ಹೋದಾಗ, ನಮ್ಮ ದೇಶದ ನಗರಗಳೊಂದಿಗೆ ಹೋಲಿಸಿಕೊಂಡು ನೋಡುವುದು ಸಹಜವೇ. ಮಾತ್ರವಲ್ಲ, ಹಾಗೆ ಮಾಡದಿದ್ದರೆ ಆತ್ಮವಂಚನೆ ಮಾಡಿಕೊಂಡಂತಾಗುತ್ತದೆ. ಏಕೆಂದರೆ, ಅಭಿವೃದ್ಧಿಯ ಮಂತ್ರ ಜಪಿಸುವುದು ‘ಪೊಲಿಟಿಕಲ್ ಫ್ಯಾಷನ್’ ಆಗಿರುವ ಈ ಕಾಲದಲ್ಲಿ, ಒಂದಿಲ್ಲೊಂದು ಹಂತದಲ್ಲಿ ಎಲ್ಲ ರಾಜಕೀಯ ಪಕ್ಷಗಳು ನಮ್ಮ ನಗರಗಳನ್ನು (ಅದರಲ್ಲೂ ಬೆಂಗಳೂರನ್ನು) ಸಿಂಗಾಪುರ ಮಾಡುವುದು ಹೇಗೆ ಎಂಬ ಜಿಜ್ಞಾಸೆ ತೋರಿವೆ. ಸಮಗ್ರ ಅಭಿವೃದ್ಧಿಯ ಮಾನದಂಡಗಳನ್ನು ಬಿಡಿಸಿ ಹೇಳಲು ಸಾಧ್ಯವಾಗದಿದ್ದಾಗಲೆಲ್ಲ, ಭಾರತದ ರಾಜಕಾರಣಿಗಳು ಸಿಂಗಾಪುರವನ್ನು ಉಪಮೆಯಾಗಿ ಉಪಯೋಗಿಸುತ್ತಾರೆ.

ಯೋಚಿಸಿ ನೋಡಿ- ಯಾರೂ ಲಂಡನ್, ನ್ಯೂಯಾರ್ಕ್, ಟೋಕ್ಯೋನಂತಹ ಇತರ ಅತ್ಯಾಧುನಿಕ ನಗರಗಳ ಉದಾಹರಣೆಯನ್ನು ಕೊಡುವುದಿಲ್ಲ! ಏಕೆಂದರೆ, ಇವುಗಳಲ್ಲಿ ಒಂದೊಂದು ನಗರಕ್ಕೂ ಒಂದೊಂದು ‘ಸ್ಟಿಗ್ಮ ’/ ‘ಕಳಂಕ’ ಅಂಟಿದೆ! ಲಂಡನ್ ಎಂದೊಡನೆ ನಮ್ಮ ರಾಜಕಾರಣಿಗಳಿಗೆ ಬ್ರಿಟಿಷರು ನೆನಪಾಗುತ್ತಾರೆ. ನ್ಯೂಯಾರ್ಕ್ ಪಾಶ್ಚಿಮಾತ್ಯ ಸಂಸ್ಕೃತಿಯ ಸಂಕೇತ. ಟೋಕಿಯೋ ಬಗ್ಗೆ ಹೆಚ್ಚು ಜನರಿಗೆ ಗೊತ್ತಿಲ್ಲ, ಹಾಗೂ ಸಾಂಸ್ಕೃತಿಕವಾಗಿ ಅದು ನಮ್ಮ ನಗರಗಳಿಗಿಂತ ತೀರಾ ಭಿನ್ನವಾದದ್ದು. ಸಿಂಗಾಪುರವಾದರೋ, ಭೌಗೊಳಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಭಾರತಕ್ಕೆ ಹತ್ತಿರವಾಗಿದೆ. ಇದಕ್ಕೆ ಕಾರಣ, ಪ್ರಾಯಶಃ, ಸಿಂಗಾಪುರದಲ್ಲಿ ಭಾರತೀಯ ಸಂಜಾತರು ಹೆಚ್ಚಾಗಿರುವುದು. ಜೊತೆಗೆ, ಉದಾರೀಕರಣಕ್ಕೂ ಮುಂಚಿನ ಯುಗದಲ್ಲಿ ಭಾರತೀಯ ಸಿನಿಮಾಗಳನ್ನು ಸಿಂಗಾಪುರದಲ್ಲಿ ಯಥೇಚ್ಛವಾಗಿ ಚಿತ್ರಿಸಿರುವುದು! ಈ ಎಲ್ಲ ಕಾರಣಗಳಿಂದಾಗಿ ಭಾರತೀಯರಿಗೆ ಸಿಂಗಾಪುರ ಎಂದರೆ ಪ್ರಗತಿಯ ಪ್ರತಿಮೆ. ಆದ್ದರಿಂದಲೇ, ನಮ್ಮ ರಾಜಕಾರಣಿಗಳಿಗೆ ಹಾಗೂ ಅಧಿಕಾರಿಗಳಿಗೆ ಸಿಂಗಾಪುರವೆಂದರೆ ಹೆಚ್ಚು ಆಪ್ಯಾಯಮಾನ. ಎಲ್ಲರಿಗೂ, ಸಿಂಗಾಪುರದ ಬಗ್ಗೆ ಅದೇನೋ ವಿಚಿತ್ರ ಬೆರಗು! ಈ ಬೆರಗಿನಿಂದಿಂದಾಗಿಯೋ ಏನೋ- ದಶಕಗಳಿಂದ ನಮ್ಮ ನಾಯಕರು ನಮ್ಮ ನಗರಗಳ ವಿಷಯದಲ್ಲಿ ತೋರಿಸಿದ ಸಿಂಗಾಪುರದ ಕನಸಿನ ಪ್ರತಿಮೆ ಇದೇ ಎಂದಾಗ- ಸಿಂಗಾಪುರಕ್ಕೆ ಬಂದ ಕ್ಷಣ ಇದನ್ನು ಭವಿಷ್ಯದ ಭಾರತಕ್ಕೆ ಹೋಲಿಕೆ ಮಾಡುವ ಆಸೆಯಾಗುತ್ತದೆ. ಅಭಿವೃದ್ಧಿಯ ಜ್ವಲಂತ ನಿದರ್ಶನವಾದ ಸಿಂಗಾಪುರವನ್ನು ಅರ್ಥ ಮಾಡಿಕೊಳ್ಳುವ ಮನಸ್ಸಾಗುತ್ತದೆ.

ಮೇಲ್ನೋಟಕ್ಕೆ, ಸಿಂಗಾಪುರ ವಿಚಿತ್ರಗಳ ಆಗರ! ಸಿಂಗಾಪುರದಲ್ಲಿ ಚೂಯಿಂಗ್​ಗಮ್ ಕೊಳ್ಳಲು ಔಷಧದ ಅಂಗಡಿಗೇ ಹೋಗಬೇಕು, ಬೇರೆಲ್ಲೂ ದೊರೆಯುವುದಿಲ್ಲ. ಆದರೆ, ವೇಶ್ಯಾವಾಟಿಕೆ ಕಾನೂನುಬದ್ಧ! ಇಲ್ಲಿನ ನಾಣ್ಯಗಳಲ್ಲಿ ನಾಲ್ಕು ಭಾಷೆಯ ಬರಹಗಳಿವೆ-ಇಂಗ್ಲಿಷ್, ಮಂದಾರಿನ್, ಮಲಯ್ ಹಾಗೂ ತಮಿಳು! ಇಲ್ಲಿನ ಲಿಟಲ್ ಇಂಡಿಯಾವನ್ನು ನೋಡಿದ ಮೇಲೆ ಭಾರತದ ಪುಟ್ಟ ಪಟ್ಟಣಗಳನ್ನು ನೋಡಬೇಕಾಗಿಲ್ಲ. ಇಲ್ಲಿನ ಚೈನಾ ಟೌನ್ ಚೀನಾದ ಸಂಕೀರ್ಣತೆಯನ್ನು ಕೆಲವೇ ಚದರ ಕಿಲೋಮೀಟರ್​ಗಳ ವಿಸ್ತೀರ್ಣದಲ್ಲಿ ಹಿಡಿದಿಡುತ್ತದೆ. ಇಲ್ಲಿನ ಸಾರ್ವಜನಿಕ ಸಂಚಾರ ವ್ಯವಸ್ಥೆ ವಿಶ್ವಕ್ಕೇ ಮಾದರಿ. ಇಲ್ಲಿನ ಜನರು ನಿಯಮಕ್ಕೆ, ನಿಷ್ಠೆಗೆ ಹೆಸರುವಾಸಿ- ಎಷ್ಟರ ಮಟ್ಟಿಗೆ ಎಂದರೆ, ಇಲ್ಲಿನ ಟ್ಯಾಕ್ಸಿ ಚಾಲಕರು ನೀವು ಕೇಳದೆಯೇ ಸರಿಯಾದ ಚಿಲ್ಲರೆ ವಾಪಸ್ ಕೊಡುತ್ತಾರೆ, ಮಾತ್ರವಲ್ಲ, ಪೂರ್ತಿ ಚಿಲ್ಲರೆ ಇರದಿದ್ದರೆ ನಿಮ್ಮ ಕಡೆಗೇ ಹಣ ಬಿಟ್ಟುಕೊಡುತ್ತಾರೆ (ಇದು ಅನೇಕರ ಸಾಮಾನ್ಯ ಅನುಭವ)! ರಾಜಕೀಯದಲ್ಲಾಗಲೀ, ಉದ್ಯಮದಲ್ಲಾಗಲೀ, ಸಾರ್ವಜನಿಕ ಸ್ಥಳಗಳಲ್ಲಾಗಲೀ ಕೊಳಕು, ಕಲ್ಮಶವೆಂಬ ಮಾತೇ ಇಲ್ಲ. ಅಷ್ಟೇಕೆ, ಸಿಂಗಾಪುರದಲ್ಲೆಲ್ಲೂ ಧೂಳೇ ಇಲ್ಲ!

ಶುಚಿತ್ವಕ್ಕೆ ಆದ್ಯತೆ: ಸಿಂಗಾಪುರಕ್ಕೆ ಹೋಗಿಬಂದವರೆಲ್ಲರ ಮನಸ್ಸಿನಲ್ಲಿ ಕೊನೆಗೆ ಉಳಿಯುವುದು ಅದೇ ಸ್ಥಾಯಿ ಭಾವ! ಸಿಂಗಾಪುರ ಎಷ್ಟೊಂದು ಸ್ವಚ್ಛವಾಗಿದೆ ಎನ್ನುವ ಅಚ್ಚರಿ. ಸಿಂಗಾಪುರದ ಸಮಗ್ರ ಅಭಿವೃದ್ಧಿಗೆ, ಇವರು ಶುಚಿತ್ವಕ್ಕೆ ಕೊಟ್ಟಿರುವ ಮಹತ್ವವೇ ಮೂಲ ಕಾರಣ ಎಂದರೆ, ಉತ್ಪ್ರೇಕ್ಷೆಯಲ್ಲವೇನೋ.

ಉದಾಹರಣೆಗೆ, ಹೋಟೆಲ್ ರೂಮಿನಲ್ಲಿ ಕುಡಿಯುವ ನೀರು ಎಲ್ಲಿದೆ ಎಂದು ಕೇಳಿದಾಗ, ಅಲ್ಲಿನ ರೂಮ್ ಬಾಯ್ ಬಚ್ಚಲು ಮನೆಯ ನಲ್ಲಿಯನ್ನು ತೋರಿಸಿದ. ನಾನು ಒಂದು ಕ್ಷಣ ಅವಾಕ್ಕಾದೆ. ನಾನು ನಲ್ಲಿಯ ನೀರನ್ನು ಕುದಿಸದೆ ಅಥವಾ ಶೋಧಿಸದೆ ಹಾಗೆಯೇ ಕುಡಿದು ಎರಡು ದಶಕಗಳೇ ಕಳೆದಿರಬೇಕು. ಅಲ್ಲದೆ, ಭಾರತದ ಅಥವಾ ವಿಶ್ವದ ಬಹುತೇಕ ಎಲ್ಲ ದೇಶಗಳ ಪಂಚತಾರಾ ಹೋಟೆಲುಗಳಲ್ಲಿ, ಕುಡಿಯುವ ನೀರು ಕೇಳಿದಾಗ, ಯಾರಾದರೂ ಬಚ್ಚಲಮನೆಯಲ್ಲಿರುವ ನಲ್ಲಿಯಲ್ಲಿ ಹಿಡಿದುಕೊಂಡು ಕುಡಿದರೆ ಆದೀತು ಎಂದಿದ್ದರೆ, ದೊಡ್ಡ ಜಗಳವೇ ನಡೆಯುತ್ತಿತ್ತೇನೋ! ಆದರೆ, ಸಿಂಗಾಪುರದಲ್ಲಿ ಎಲ್ಲರೂ ನಲ್ಲಿಯ ನೀರನ್ನು ಎಗ್ಗಿಲ್ಲದೆ, ಒಂದರೆಕ್ಷಣವೂ ಯೋಚಿಸದೆ ಕುಡಿಯುತ್ತಾರೆ. ನೀರು ಕುಡಿಯಲು ಇನ್ನೂ ಅನುಮಾನಿಸುತ್ತಿದ್ದ ನನ್ನಲ್ಲಿ ಭರವಸೆ ಮೂಡಿಸಲು ಆ ರೂಮ್ ಬಾಯ್ ಮತ್ತೆ ಹೇಳಿದ, ‘ಚಿಂತಿಸಬೇಡಿ ಸರ್. ಸಿಂಗಾಪುರದಲ್ಲಿ ಎಲ್ಲವೂ ಸುರಕ್ಷಿತ’. ಹೌದು! ಸಿಂಗಾಪುರದಲ್ಲಿ ಎಲ್ಲವೂ ಸುರಕ್ಷಿತ! ಇದೇ ಅಲ್ಲಿನ ಮೂಲಮಂತ್ರ. ಸ್ವಚ್ಛತೆಯಿಂದಲೇ ಸುರಕ್ಷತೆ ಬಂದದ್ದು ಎನಿಸಿತು! ಏಕೆಂದರೆ, ಸ್ವಚ್ಛವಾದ ಪರಿಸರ ನಮಗೆ ಸುರಕ್ಷಿತ ಭಾವನೆಯನ್ನು ಕೊಡುತ್ತದೆ. ಮಾತ್ರವಲ್ಲ, ಸ್ವಚ್ಛತೆ ಇರುವೆಡೆ ಹಾನಿಮಾಡುವವರು/ಅಸುರಕ್ಷಿತ ಭಾವನೆಯನ್ನು ಪ್ರವರ್ತಿಸುವವರು ಸುಲಭವಾಗಿ ಸಿಕ್ಕಿಬೀಳುತ್ತಾರೆ. ಹೆಗ್ಗಣಗಳು ಅಡಗಲು ಕೊಳಕು ತಾಣಗಳೇ ಪ್ರಶಸ್ತ. ಉದಾಹರಣೆಗೆ, ಈಗ ನಮ್ಮಲ್ಲೇ ನೋಡಿ. ಸಾರ್ವಜನಿಕ ರಸ್ತೆಯಲ್ಲಿ ಕ್ಯಾಕರಿಸಿ ಉಗಿಯುವ, ಮೂತ್ರ ವಿಸರ್ಜಿಸುವ ಅದೇ ಜನ, ಮಾಲ್​ಗಳ/ ಅಪಾರ್ಟ್​ವೆುಂಟ್​ಗಳ ಸ್ವಚ್ಛ ನೆಲದ ಮೇಲೆ ಹಾಗೆ ಮಾಡಲು ಹೆದರುತ್ತಾರೆ. ಗಲೀಜು ಸಬ್​ವೇಗಳಲ್ಲಿ ಅಸಭ್ಯವಾಗಿ ವರ್ತಿಸುವವರು ಮಾಲ್​ಗಳ ಬೇಸ್​ವೆುಂಟ್​ನ ರ್ಪಾಂಗ್​ನಲ್ಲಿ ಬೇರೆಯದೇ ವ್ಯಕ್ತಿಗಳಾಗಿಬಿಡುತ್ತಾರೆ.

ಅಪರಾಧಗಳು ಕಮ್ಮಿ: ಶುಚಿತ್ವ ಹಾಗೂ ಆರೋಗ್ಯದ ದೃಷ್ಟಿಯಿಂದಲೂ ಅಷ್ಟೆ. ಭಯೋತ್ಪಾದನೆ, ಕೊಲೆ-ಸುಲಿಗೆ ಮೊದಲಾದ ಆತಂಕಗಳಿಂದ ಸುರಕ್ಷಿತವಾಗಿರುವ ದೃಷ್ಟಿಯಿಂದಲೂ ಅಷ್ಟೆ. ಕೊಳೆ, ಧೂಳು ಇಲ್ಲದಿದ್ದರೆ ಸುರಕ್ಷತೆಯ ಭಾವನೆ ಹೆಚ್ಚು. ಇದಕ್ಕೆ ನಿದರ್ಶನವೆಂಬಂತೆ, ಸಿಂಗಾಪುರ ವಿಶ್ವದ ಅತಿಕಡಿಮೆ ಕ್ರೈಮ್ ನಡೆಯುವ ದೇಶಗಳಲ್ಲೊಂದು. ಆದರೂ ಸಿಂಗಾಪುರದ ಸರ್ಕಾರ ಎಚ್ಚರ ತಪ್ಪಿಲ್ಲ. ಅಲ್ಲಿ ಎಲ್ಲೆಡೆ, ‘ಲೋ ಕ್ರೖೆಮ್ ಡಸ್ ನಾಟ್ ಮೀನ್ ನೋ ಕ್ರೖೆಮ್ (ಕಡಿಮೆ ಅಪರಾಧ ಅಂದಮಾತ್ರಕ್ಕೆ ಅಪರಾಧ ಇಲ್ಲ ಎಂದರ್ಥವಲ್ಲ) ಎಂದು ಪ್ರವಾಸಿಗರನ್ನು ಎಚ್ಚರಿಸುವ ಭಿತ್ತಿಪತ್ರಗಳು ಎಲ್ಲೆಡೆ ಕಾಣಸಿಗುತ್ತವೆ. ನನಗನ್ನಿಸಿದ್ದು… ನಮ್ಮ ನಗರಗಳು ಸಿಂಗಾಪುರದಷ್ಟು ಹೊಳೆಯುವ ನಗರಗಳಾಗದಿದ್ದರೆ ಪರವಾಗಿಲ್ಲ. ಆರೋಗ್ಯ ಹಾಗೂ ಅಪರಾಧ ತಡೆಯ ದೃಷ್ಟಿಯಿಂದ ಅದರಷ್ಟು ಸುರಕ್ಷಿತವಾದರೆ ಸಾಕು.

ಭಾರತೀಯರನ್ನು ಮಾತ್ರವಲ್ಲ, ಸಿಂಗಾಪುರಕ್ಕೆ ಅಮೆರಿಕದಂತಹ ಮುಂದುವರಿದ ದೇಶಗಳಿಂದ ಬಂದವರನ್ನೂ ಅಚ್ಚರಿಗೊಳಿಸುವ ಶಕ್ತಿಯಿದೆ. ಉದಾಹರಣೆಗೆ 30 ವರ್ಷ ಅಮೆರಿಕದಲ್ಲಿದ್ದು, ಈಗ ಸಿಂಗಾಪುರದಲ್ಲಿ ಕೆಲಸ ಮಾಡುತ್ತಿರುವ ನನ್ನ ಕಕ್ಷಿದಾರಳಾದ ವನಿಸ್ಸಾ ಹೇಳಿದ ಕಥೆಯನ್ನೇ ನೋಡಿ… ಅವಳು ಕಳೆದ ತಿಂಗಳು ಥೈಲ್ಯಾಂಡ್​ಗೆ ಹೋದಾಗ ಟ್ಯಾಕ್ಸಿಯಲ್ಲಿ ಅವಳ ದುಬಾರಿ ಮೊಬೈಲ್ ಕಳುವಾಯಿತಂತೆ. ಇದರಿಂದ ಆಘಾತಗೊಂಡಿದ್ದ ಅವಳು, ‘ಸಿಂಗಾಪುರದಲ್ಲಾಗಿದ್ದರೆ, ಸುಲಭವಾಗಿ ವಾಪಸ್ ಸಿಕ್ಕಿಬಿಡುತ್ತಿತ್ತು’ ಎಂದಳು. ‘ಸಾರ್ವಜನಿಕ ವಾಹನವೊಂದರಲ್ಲಿ ಕಳೆದುಹೋದ ವಸ್ತು ಸುಲಭಕ್ಕೆ ಸಿಗುತ್ತಿತ್ತು ಎಂದು ಅಷ್ಟು ವಿಶ್ವಾಸದಿಂದ ಹೇಗೆ ಹೇಳುತ್ತೀಯ’ ಎಂದು ಕೇಳಿದಾಗ ವಿವರಿಸಿದಳು, ‘ಸಾಧಾರಣವಾಗಿ, ಇಲ್ಲಿನ ಟ್ಯಾಕ್ಸಿ ಡ್ರೖೆವರ್ ಅದನ್ನು ಸ್ವಯಂಪ್ರೇರಣೆಯಿಂದ ಹಿಂದಿರುಗಿಸಿರುತ್ತಿದ್ದ. ಇಲ್ಲವಾದಲ್ಲಿ, ಇಲ್ಲಿನ ಪೊಲೀಸರಿಗೆ ನಾನು ಎಲ್ಲಿಂದ ಎಲ್ಲಿಗೆ ಎಷ್ಟು ಹೊತ್ತಿನಲ್ಲಿ ಹೋದೆ ಎಂದು ಹೇಳಿದರೆ ಸಾಕು. ಟ್ಯಾಕ್ಸಿ ಸಂಖ್ಯೆಯನ್ನು ಅವರೇ ಪತ್ತೆ ಮಾಡಿ, ವಸ್ತುವನ್ನು ನಮಗೆ ತಲುಪಿಸುವ ವ್ಯವಸ್ಥೆ ಮಾಡಿರುತ್ತಿದ್ದರು’.

ವನಿಸ್ಸಾ ಮುಂದುವರಿಸಿದಳು, ‘ಇಲ್ಲಿನ ಸರ್ಕಾರಕ್ಕೆ ಜನರ ನಡೆಯೆಲ್ಲವೂ ಗೊತ್ತು. ಆದ್ದರಿಂದಲೇ ಇಲ್ಲಿ ಇಷ್ಟೊಂದು ಶಿಸ್ತು, ನಿಯತ್ತು ಇರುವುದು. ಕೆಲವೊಮ್ಮೆ ಸರ್ಕಾರ ದೊಡ್ಡಣ್ಣನ ವರ್ತನೆ ತೋರುತ್ತದೆ; ನಾವು ಮಾಡುವುದೆಲ್ಲವನ್ನೂ ಗಮನಿಸುತ್ತದೆ ಎಂದು ಜನರು ಕಿರಿಕಿರಿಗೊಂಡರೂ, ಕೊನೆಗೆ ಅದರಿಂದ ಹಾನಿಗಿಂತ ಲಾಭವೇ ಹೆಚ್ಚೆಂದು ಒಪ್ಪುತ್ತಾರೆ’. ನನ್ನ ಅಭಿಪ್ರಾಯದಲ್ಲಿ, ಈ ನಿಯತ್ತಿಗೂ ಸ್ವಚ್ಛತೆಯೇ ಮೂಲ ಕಾರಣ. ಸ್ವಚ್ಛತೆ ಎನ್ನುವುದು ಪಾರದರ್ಶಕತೆಯ ಅವತಾರ. ಎಲ್ಲವೂ ಪಾರದರ್ಶಕ ಎನ್ನುವುದು ಎಲ್ಲರಿಗೂ ಗೊತ್ತಾದಾಗ, ಅಲ್ಲಿ ಮೋಸ, ವಂಚನೆಗೆ ಜಾಗವಿಲ್ಲ!

ಅಷ್ಟಾಗಿ, ಸಿಂಗಾಪುರದಲ್ಲಿರುವವರೆಲ್ಲ ಸಿರಿವಂತರು, ಹಾಗಾಗಿ ಆ ದೇಶ ಸ್ವಚ್ಛವಾಗಿದೆ ಎನ್ನುವಂತಿಲ್ಲ. ಶಿಕ್ಷೆ ಹಾಗೂ ಶಿಕ್ಷಣದ ಮಿಶ್ರಣದಿಂದ ಅವರಿಗೆ ಸ್ವಚ್ಛತೆಯನ್ನು ಅಭ್ಯಾಸ ಮಾಡಿಸಲಾಗಿದೆ. ಉದಾಹರಣೆಗೆ, ಸಿಂಗಾಪುರದಲ್ಲಿ ಗಿರಾಕಿಗಳು ಅಂಗಡಿಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದರೆ ಏಳು ವರ್ಷದ ಕಠಿಣ ಸಜೆ. ನಮ್ಮ ಅಂಗಡಿಗಳಲ್ಲಿ ಕದಿಯುವುದಿರಲಿ, ಕನ್ನ ಹಾಕಿದರೂ ಅಷ್ಟು ಕಠಿಣ ಶಿಕ್ಷೆ ಇಲ್ಲ. ಅಲ್ಲಿನ ರಸ್ತೆಯಲ್ಲಿ ಚೂಯಿಂಗ್ ಗಮ್ ಉಗಿದರೆ ಐನೂರು ಸಿಂಗ್ ಡಾಲರ್ (ಸುಮಾರು 18,000 ರೂಪಾಯಿ) ದಂಡ! ಮಾದಕ ವಸ್ತುಗಳೊಂದಿಗೆ ಸಿಕ್ಕಿಬಿದ್ದರೆ, ನೇರ ಗಲ್ಲು ಶಿಕ್ಷೆ. ಸರ್ಕಾರ ಎಲ್ಲವನ್ನೂ- ಕ್ಯಾಮರಾ ಕಣ್ಣುಗಳಿಂದ, ಮಫ್ತಿ ಪೊಲೀಸರ ದೃಷ್ಟಿಯಿಂದ- ನೋಡುತ್ತಿರುವುದರಿಂದ ತಪ್ಪು ಮಾಡಿ ತಪ್ಪಿಸಿಕೊಳ್ಳುವ ಪ್ರಶ್ನೆಯೇ ಇಲ್ಲ.

ಪರಿಪೂರ್ಣತೆಯ ಪಾಠ: ಸಿಂಗಾಪುರವನ್ನು ಯಶಸ್ವಿಯಾಗಿಸಿರುವ ಇಲ್ಲಿನ ಜನರ ಒಂದು ಗುಣ ಯಾವುದು ಎಂದು, ಅಲ್ಲಿ 15-20 ವರ್ಷಗಳಿಂದ ವಾಸವಾಗಿರುವ ಯಶಸ್ವಿ ಉದ್ಯಮಿ ಅನುರಾಗ್ ಶ್ರೀವಾಸ್ತವ ಅವರನ್ನು ಕೇಳಿದೆ. ಪ್ರಪಂಚದ ಅನೇಕ ದೇಶಗಳ ಜನರು ಕೆಲಸ ಮಾಡುವ ಕಂಪನಿಯೊಂದರ ಮಾಲಿಕರಾದ ಅವರ ಉತ್ತರ, ‘ವಿಶ್ವದ ಬೇರಾವುದೇ ದೇಶದ ಜನರಿಗಿಂತ ಸಿಂಗಪುರಿಯನ್ನರು ಹೆಚ್ಚು ಪರ್ಫೆಕ್ಷನಿಸ್ಟ್​ಗಳು. ಇತ್ತೀಚಿನ ಉದಾಹರಣೆ, ಸಿಂಗಾಪುರದಲ್ಲಿ ನಡೆಯುವ ಎಫ್-ಒನ್ ರೇಸ್! ರೇಸ್ ಕಾರ್​ಗಳು ಗಂಟೆಗೆ 300 ಕಿ.ಮೀ. ವೇಗದಲ್ಲಿ ಧಾವಿಸುವ ಸ್ಪರ್ಧೆಯನ್ನು ರಾತ್ರಿ ಹೊತ್ತು ನಡೆಸುವ ದುಸ್ಸಾಹಸವನ್ನು ಆವರೆಗೆ ವಿಶ್ವದ ಯಾವ ದೇಶದವರೂ ಮಾಡಿರಲಿಲ್ಲ. ಆದರೆ ಸಿಂಗಾಪುರದವರು, ಮೂಲ ಹಗಲು ರೇಸಿಗೆ ಸ್ವಲ್ಪವೂ ಚ್ಯುತಿ ಬಾರದಂತೆ ರಾತ್ರಿ ರೇಸ್ ಮಾಡಿ ತೋರಿಸಿದರು! ವಿಶ್ವವನ್ನೇ ನಿಬ್ಬೆರಗಾಗಿಸಿದರು! ಅಂದಹಾಗೆ ಸಿಂಗಾಪುರದ ಎಫ್-ಒನ್ ಸ್ಪರ್ಧೆ ನಡೆಯುವುದು ಅಲ್ಲಿನ ರಸ್ತೆಗಳಲ್ಲಿ! ರೇಸ್ ನಡೆಯುವ ಮೂರು ದಿನಗಳ ಮಟ್ಟಿಗೆ ಆ ರಸ್ತೆಗಳಲ್ಲಿ ಹೊನಲು ಬೆಳಕು ಹರಿಯಬಿಟ್ಟು ವಿಶ್ವಕ್ಕೆ ಪರ್ಫೆಕ್ಷನಿಸಮ್ (ಪರಿಪೂರ್ಣತೆ) ಸವಾಲೆಸೆಯುತ್ತದೆ ಸಿಂಗಾಪುರ! ಇದಕ್ಕೂ, ಒಂದರ್ಥದಲ್ಲಿ ಮೂಲ ಕಾರಣ ಸ್ವಚ್ಛತೆಯೇ. ಹಿಡಿದ ಕೆಲಸವನ್ನು ಚೊಕ್ಕವಾಗಿ ಮಾಡುವುದರಿಂದ, ಅದು ಪರ್ಫೆಕ್ಟ್ ಆಗುತ್ತದೆ ಎನ್ನುವುದು ಸದೃಶ. ದಾರ್ಶನಿಕ ನಾಯಕರಾದ ಲೀ ಕ್ವಾನ್ ಯೂ ಕಟ್ಟಿದ ಸಿಂಗಾಪುರದ ನಾಗರಿಕ ಸಮಾಜಕ್ಕೆ ಸ್ವಚ್ಛತೆಯೇ ಬುನಾದಿ. ಸ್ವಚ್ಛತೆಯಿಂದ ಏನನ್ನೆಲ್ಲ ಸಾಧಿಬಹುದು ಎನ್ನುವುದು ನಾವು ಸಿಂಗಾಪುರದಿಂದ ಕಲಿಯಬಹುದಾದ ಮೊದಲ ಪಾಠ. ಸುರಕ್ಷತೆ, ಪರ್ಫೆಕ್ಷನಿಸಮ್ ಶಿಸ್ತು, ನಿಯತ್ತು ಎಲ್ಲವೂ ಸ್ವಚ್ಛತೆಯದ್ದೇ ರೂಪಾಂತರ. ಇಂದು, ಅದೇ ಸ್ವಚ್ಛತೆಯ ಮಂತ್ರವನ್ನು ಜಪಿಸುತ್ತಿರುವ ನಮ್ಮ ಭಾರತವೂ-ರಾಜಕಾರಣಿಗಳ ಕೃಪಾಪೋಷಿತ ನಮ್ಮ ಸಣ್ಣ-ದೊಡ್ಡ ನಗರಗಳೂ- ಮುಂದೊಮ್ಮೆ ಸಿಂಗಾಪುರದಷ್ಟು ಸ್ವಚ್ಛವೂ, ಸಮೃದ್ಧವೂ, ಸುಭಿಕ್ಷವೂ ಆಗಲಿ.

(ಲೇಖಕರು ಸಂವಹನ ಸಲಹೆಗಾರರು)

Leave a Reply

Your email address will not be published. Required fields are marked *

Back To Top