ನಿಯಮಗಳನ್ನು ಗಾಳಿಗೆ ತೂರಿದ್ದಕ್ಕೆ ಓಲಾ ಸೇವೆಯನ್ನು 6 ತಿಂಗಳು ರದ್ದುಮಾಡಿದ ಸಾರಿಗೆ ಇಲಾಖೆ

ಬೆಂಗಳೂರು: ಆರ್​ಟಿಒ ನಿಯಮಗಳನ್ನು ಗಾಳಿಗೆ ತೂರಿದ್ದಕ್ಕೆ ಆರು ತಿಂಗಳು ಕಾಲ ರಾಜಧಾನಿಯಲ್ಲಿ ಓಲಾ ಸೇವೆಯನ್ನು ರದ್ದು ಮಾಡಿ ಸಾರಿಗೆ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ.

ಪರವಾನಗಿಯನ್ನು ರದ್ದುಗೊಳಿಸಿ ಸಾರಿಗೆ ಇಲಾಖೆಯ ಆಯುಕ್ತ ಇಕ್ಕೇರಿ ಅವರು ಆದೇಶ ಹೊರಡಿಸಿದ್ದಾರೆ. ಓಲಾ ಕಂಪನಿ ವಿರುದ್ಧ ಬಿಎಂಟಿಸಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಬೈಕ್ ಟ್ಯಾಕ್ಸಿ ಸೇವೆ ನೀಡ್ತಿದ್ದ ಆರೋಪ ವ್ಯಕ್ತವಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಬೈಕ್​ ಟ್ಯಾಕ್ಸಿ ಓಲಾ ಸೇವೆಯನ್ನು ಸಾರಿಗೆ ಇಲಾಖೆ ರದ್ದು ಮಾಡಿದೆ. ಉಳಿದಂತೆ ಆಪ್​ ಆಧಾರಿತ ಟ್ಯಾಕ್ಸಿ ಸೇವೆಗೆ ಅನುವು ಮಾಡಿಕೊಡಲಾಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

ನಿಯಮಗಳ ಪ್ರಕಾರ ಬಿಎಂಟಿಸಿ ವ್ಯಾಪ್ತಿಯಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ನೀಡುವಂತಿಲ್ಲ. ಒಂದು ವೇಳೆ ಸೇವೆ ಒದಗಿಸಿದ್ದರೆ ಅದು ಕಾನೂನು ಬಾಹಿರವಾಗಿದೆ. ಇದನ್ನು ಈಗಾಗಲೇ ಮೀರಿದ್ದರಿಂದ ಓಲಾ ಕಂಪನಿಗೆ ಸೇರಿದ್ದ 5 ಬೈಕ್ ಟ್ಯಾಕ್ಸಿಯನ್ನು ಸಾರಿಗೆ ಇಲಾಖೆ ವಶಪಡಿಸಿಕೊಂಡಿತ್ತು. ನೋಟಿಸ್ ನೀಡಿದ್ದರೂ ಉತ್ತರ ನೀಡದೆ ನಿರ್ಲಕ್ಷ್ಯ ವಹಿಸಿದ್ದಕ್ಕೆ ಸೇವೆಯನ್ನು ರದ್ದು ಮಾಡಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *