Friday, 16th November 2018  

Vijayavani

Breaking News

ಮಾಹಿತಿಯುಗದಲ್ಲಿ ಗ್ರಾಹಕಕೇಂದ್ರಿತ ಆರೋಗ್ಯಸೇವೆ!

Sunday, 01.07.2018, 3:05 AM       No Comments

ಯಾವುದೇ ವೃತ್ತಿಪರರ ನಡವಳಿಕೆಯನ್ನು ‘ಜನರಲೈಸ್’ ಮಾಡಿ ಹೇಳುವುದು ಸರಿಯಲ್ಲವಾದರೂ, ಸಮಯದ ಅಭಾವ ವೈದ್ಯರನ್ನೂ ತನ್ಮೂಲಕ ರೋಗಿಗಳನ್ನೂ ಕಾಡುತ್ತಿರುವುದಂತೂ ನಿಜ. ವೈದ್ಯರು ಎದುರಿಸಬೇಕಾದ ಒತ್ತಡ ಅತ್ಯಂತ ಕ್ಲಿಷ್ಟ ಮತ್ತು ಸಂಕೀರ್ಣ. ಆದರೆ, ಇದು ರೋಗಿಗಳಿಗಾಗುವ ಅನಗತ್ಯ ಖರ್ಚು, ಅನಾನುಕೂಲಗಳಿಗೆ ನೆಪವಾಗಬಾರದು.

ಇಂದು, ವೈದ್ಯರ ದಿನ. 2-3 ದಿನ ಹಿಂದಿನಿಂದಲೇ ‘ವೈದ್ಯರ ದಿನದ ಶುಭಾಶಯಗಳು’/‘ಹ್ಯಾಪಿ ಡಾಕ್ಟರ್ಸ್ ಡೇ’ ಎಂದು ಪತ್ರಿಕೆಗಳಲ್ಲಿ ಔಷಧ ಕಂಪನಿಗಳ ಜಾಹೀರಾತುಗಳು ಹಾರೈಸುತ್ತಿದ್ದರೆ, ವಾಟ್ಸಾಪ್/ಫೇಸ್​ಬುಕ್​ಗಳಲ್ಲಿ ಜನರು ತಮ್ಮ ಪರಿಚಯದ ಡಾಕ್ಟರ್​ಗಳನ್ನು ಹುಡುಹುಡುಕಿ ಅಭಿನಂದನೆ ಸಲ್ಲಿಸುತ್ತಿದ್ದರೆ, ನನಗೆ ನೆನಪಾದದ್ದು ಈ ಕೆಳಗಿನ ಎರಡು ಘಟನೆಗಳು-

ಮೊದಲನೆಯ ಘಟನೆ- ಗ್ರಾಹಕಕೇಂದ್ರಿತ ಆರೋಗ್ಯಸೇವೆ: ‘ಒಂದು ಸಣ್ಣ ಸೋಪ್ ಕೊಳ್ಳಬೇಕಾದರೆ ಅಥವಾ ದೊಡ್ಡ ಕಾರ್ ಖರೀದಿಸಬೇಕಾದರೆ ಅದರ ಬೆಲೆ ನಿರ್ದಿಷ್ಟವಾಗಿ ಇಷ್ಟೇ ಎಂದು ನಮಗೆ ಗೊತ್ತಿರುತ್ತದೆ. ಹೋಟೆಲಿನ ‘ಮೆನು’ವಿನಲ್ಲಿ ಪ್ರತಿಯೊಂದು ತಿನಿಸಿನ ಮುಂದೆ ಅದರ ರೇಟ್ ಹಾಕಿರುತ್ತಾರೆ. ಆಟೋ, ಬಸ್, ರೈಲು, ವಿಮಾನಗಳಲ್ಲಿ ಇಂತಿಷ್ಟು ದೂರಕ್ಕೆ ಇಷ್ಟೇ ಬೆಲೆ ಎಂದು ನಿಗದಿಯಾಗಿರುತ್ತದೆ. ಯಾವುದೇ ಉತ್ಪನ್ನವನ್ನು ಕೊಳ್ಳಬೇಕಾದರೆ, ಯಾವುದೇ ಸೇವೆಯನ್ನು ಪಡೆಯಬೇಕಾದರೆ, ಎಷ್ಟು ಹಣ ಖರ್ಚಾಗಬಹುದು ಎನ್ನುವುದರ ನಿಖರವಾದ ಅಂದಾಜು ನಮಗೆ ಇರುತ್ತದೆ. ಬಹುತೇಕ, ಬೇರೆ ಎಲ್ಲ ಉತ್ಪನ್ನಗಳಿಗೂ ಸೇವೆಗಳಿಗೂ ಪೂರ್ವನಿರ್ಧರಿತ ಬೆಲೆ ಇದೆ- ಆದರೆ ಆರೋಗ್ಯಸೇವೆಗೆ ಮಾತ್ರ ಏಕಿಲ್ಲ?’ ನಾಗರಿಕ ಆರೋಗ್ಯಸೇವಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಪೀಪಲ್​ಹೆಲ್ತ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಕೃಷ್ಣಮೂರ್ತಿಯವರ ಬಾಯಲ್ಲಿ ಈ ಮಾತು ಬಂದದ್ದು ನೆರೆದಿದ್ದವರ ಹುಬ್ಬೇರಿಸಿತು! ಅಷ್ಟರಲ್ಲಿ, ಅವರು ತಮ್ಮ ಮಾತಿನ ಒಳಮರ್ಮ ವಿವರಿಸಲಾರಂಭಿಸಿದರು…

‘ಈಗ ನಿಮ್ಮಲ್ಲಿ ಯಾರಿಗಾದರೂ ವೈರಲ್ ಜ್ವರ ಬಂತು ಎಂದಿಟ್ಟುಕೊಳ್ಳಿ. ಅದನ್ನು ವಾಸಿಮಾಡಿಕೊಳ್ಳಲು ವೈದ್ಯರ ಬಳಿ ಹೋದರೆ, ಎಷ್ಟು ಹಣ ಖರ್ಚಾಗಬಹುದೆಂದು ಅಂದಾಜುಮಾಡಿ ನೋಡೋಣ’ ಎಂದು ಸವಾಲೆಸೆಯುವ ದನಿಯಲ್ಲಿ ಕೇಳಿದರು. ಇದು ಕೋಣೆಯಲ್ಲಿದ್ದವರೆಲ್ಲರನ್ನೂ ಯೋಚಿಸುವಂತೆ ಮಾಡಿತು. ಒಬ್ಬೊಬ್ಬರಾಗಿ ಉತ್ತರಿಸಲಾರಂಭಿಸಿದೆವು… ‘ನಮ್ಮ ಮನೆಯ ಹತ್ತಿರದ ಡಾಕ್ಟರ್ 100 ರೂಪಾಯಿ ತಗೋತಾರೆ. ಅವರು ಬರೆದುಕೊಡೋ ಮಾತ್ರೆ ಎಲ್ಲ ಸೇರಿ 300 ರೂಪಾಯಿ ಖರ್ಚಾಗಬಹುದು’ ಎಂದು ಒಬ್ಬರು ಆರಂಭಿಸಿದರೆ, ‘100 ರೂಪಾಯಾ! ಸಾಧ್ಯವೇ ಇಲ್ಲ. ಕಳೆದ ವಾರ ನನ್ನ ಮಗಳಿಗೆ ಜ್ವರ ಬಂದಾಗ, ನಮ್ಮ ಫ್ಯಾಮಿಲಿ ಡಾಕ್ಟರ್ ಊರಲ್ಲಿರದ ಕಾರಣ, ಸ್ವಲ್ಪ ಹೈ-ಫೈ ಅನಿಸಿಕೊಳ್ಳೋ ಕ್ಲಿನಿಕ್​ಗೆ ಹೋಗಬೇಕಾಯಿತು. 450 ರೂಪಾಯಿ ಕನ್ಸಲ್ಟೇಷನ್ ಫೀ ತೆಗೆದುಕೊಂಡು 500 ರೂಪಾಯಿಯ ಔಷಧಿ ಬರೆದುಕೊಟ್ಟರು. ಅಷ್ಟೇ ಅಲ್ಲ, ಕೆಲವು ‘ಸಾಧ್ಯತೆ’ಗಳನ್ನು ‘ರೂಲ್-ಔಟ್’ ಮಾಡಿಬಿಡೋಣ ಎಂದು ಕೆಲವು ಟೆಸ್ಟ್​ಗಳನ್ನು ಬರೆದುಕೊಟ್ಟರು. ಅದರ ವೆಚ್ಚ 2,000 ರೂಪಾಯಿ. ಒಟ್ಟಾರೆ, ಜ್ವರ ಏರಿದರೆ, 2-3 ಸಾವಿರ ರೂಪಾಯಿ ಜೇಬಿನಲ್ಲಿರಬೇಕು’ ಎಂದು ಘೊಷಿಸಿದರು. ಇನಾ್ಯರೋ, ತಮಗೆ ಇಂಥದೇ ಪರಿಸ್ಥಿತಿಯಲ್ಲಿ 7,000 ರೂ. ಖರ್ಚಾದುದನ್ನು ವಿವರಿಸಿದರು. ಹೀಗೆ, ಒಬ್ಬೊಬ್ಬರದ್ದೂ ಒಂದೊಂದು ಕತೆಯಿತ್ತು! ಜ್ವರಕ್ಕೋ ಅಥವಾ ಸಣ್ಣದೊಂದು ತೊಂದರೆಗೋ ಡಾಕ್ಟರ್ ಬಳಿ ಹೋಗಿ, ಎಷ್ಟು ಖರ್ಚಾಗಬಹುದು ಎನ್ನುವುದರ ಅಂದಾಜಿಲ್ಲದೆ ಕಣ್ಣುಕಣ್ಣು ಬಿಡಬೇಕಾದ ಪರಿಸ್ಥಿತಿ ಎದುರಾದುದನ್ನು ವಿವರಿಸಿದರು. ಒಬ್ಬರು, ತಾವು ಕಾಲಿಗೆ ಪೆಟ್ಟುಮಾಡಿಕೊಂಡಾಗ, 50 ರೂಪಾಯಿಯ ಒಂದು ಇಂಜೆಕ್ಷನ್ ಕೊಟ್ಟು ನೋವನ್ನು ಮಂಗಮಾಯವಾಗಿಸಿದ ವೈದ್ಯರನ್ನು ಹಾಡಿಹೊಗಳಿದರೆ, ಇನ್ನೊಬ್ಬರು ‘ತಲೆನೋವು’ ಎಂದು ‘ಕಾಪೋರೇಟ್’ ಆಸ್ಪತ್ರೆಗೆ ಹೋದೆ. ಅದೂ-ಇದೂ ಅಂತ ಅನುಮಾನದ ಬೀಜ ಬಿತ್ತಿ, ಬ್ರೇನ್-ಸ್ಕಾ್ಯನ್ ಮಾಡಿಸುವವರೆಗೂ ಬಿಡಲಿಲ್ಲ ನೋಡಿ! ಎಲ್ಲ ಸೇರಿ, 15 ಸಾವಿರ ರೂ. ಖರ್ಚಾಯಿತು’ ಎಂದು ಹಲುಬಿದರು.

ಈ ವಾದ-ಪ್ರತಿವಾದಗಳು ಮುಗಿಯುವ ಹೊತ್ತಿಗೆ, ಕೃಷ್ಣಮೂರ್ತಿಯವರು ಮಂಡಿಸಲು ಹೊರಟಿದ್ದ ಪಾಯಿಂಟ್ ನಮಗೆ ಸ್ಪಷ್ಟವಾಗಿ ಗೋಚರಿಸತೊಡಗಿತು. ‘ಒಂದು ಜ್ವರ ಬಿಡಿಸಿಕೊಳ್ಳಲು 100ರಿಂದ 10,000 ರೂಪಾಯಿವರೆಗೆ ಖರ್ಚಾಗಬಹುದು. ಅದು, ನೀವು ಯಾರ ಬಳಿ ಹೋಗುತ್ತೀರಿ ಹಾಗೂ ನಿಮ್ಮ ಬಳಿ ಎಷ್ಟು ಹಣ ಇದೆ ಎನ್ನುವುದನ್ನು ಅವಲಂಬಿಸಿದೆ. ಆರೋಗ್ಯಸೇವೆ ಸುಖಜೀವನಕ್ಕೆ ಮೂಲ ಎಂದಮೇಲೆ, ಎಲ್ಲರಿಗೂ ಒಂದೇ ಗುಣಮಟ್ಟದ ಸೇವೆ ದೊರೆಯಬೇಕಲ್ಲವೇ? ಅಂದಮೇಲೆ, ಅದರ ಬೆಲೆಯೂ ಸರಿಸುಮಾರಾಗಿಯಾದರೂ ಒಂದೇ ಆಗಬೇಕಲ್ಲವೇ? ಆದರೆ, ಡಾಕ್ಟರ್​ಗಳಲ್ಲಿ ಮತ್ತು ಅವರು ಒದಗಿಸುವ ಆರೋಗ್ಯಸೇವೆಯಲ್ಲಿ ಬೇರೆ ಬೇರೆ ದರ್ಜೆಗಳಿರುವುದರಿಂದ, ವಿಭಿನ್ನ ದರಗಳೂ ಇವೆ. ಈ ವ್ಯತ್ಯಾಸಗಳು ನಿಜಕ್ಕೂ ಉಲ್ಬಣಗೊಳ್ಳುವುದು ನಗರ ಪ್ರದೇಶಗಳಲ್ಲಿ. ಕೆಲವೊಮ್ಮೆ ಗ್ರಾಹಕರೇ ಹಾಗಾಗುವಂತೆ ಪ್ರಚೋದಿಸುತ್ತಾರೆ! ಇವರ ಆರೋಗ್ಯದ ವೆಚ್ಚವನ್ನು ಸರ್ಕಾರವೋ, ತಾವು ಕೆಲಸ ಮಾಡುವ ಕಂಪನಿಯೋ, ಇನ್ಶೂರೆನ್ಸೋ ಕೊಡುವುದರಿಂದ ಬೇಡದ ಪರೀಕ್ಷೆಗಳನ್ನು ಅವರಾಗಿಯೇ ಕೇಳಿ ಮಾಡಿಸಿಕೊಳ್ಳುತ್ತಾರೆ. ಆದರೆ, ಮೂಲವಾಗಿ ತೊಂದರೆಯಿರುವುದು- ನಮ್ಮಲ್ಲಿ (ಕೆಲವು ಮುಂದುವರಿದ ದೇಶಗಳಲ್ಲಿರುವಂತೆ) ಯಾವ ಕಾಯಿಲೆಗೆ ಏನು ತಪಾಸಣೆ ಮಾಡಬೇಕು ಎನ್ನುವುದರ ‘ಸ್ಟಾ್ಯಂಡರ್ಡ್ ಆಪರೇಟಿಂಗ್ ಪೊ›ಸೀಜರ್’ (ಕಾರ್ಯಚಾಲನಾ ವಿಧಾನ) ಇಲ್ಲದಿರುವುದು ಹಾಗೂ ಆರೋಗ್ಯ ಸಮಸ್ಯೆಗಳ ಬಗ್ಗೆ ಜನರಲ್ಲಿನ ಅರಿವಿನ ಕೊರತೆ. ಇವೆಲ್ಲಕ್ಕೂ ಪರಿಹಾರವೆಂದರೆ, ’ಕನ್ಸೂ್ಯಮರ್-ಸೆಂಟ್ರಿಕ್ ಹೆಲ್ತ್​ಕೇರ್’ ಅಥವಾ ಜಾಗೃತ ಗ್ರಾಹಕನೇ ಕೇಂದ್ರಬಿಂದುವಾಗಿರುವ ಆರೋಗ್ಯಸೇವಾ ವ್ಯವಸ್ಥೆ’.

ಕೃಷ್ಣಮೂರ್ತಿ ಹೇಳಿದಂತೆ, ರೋಗಿ ಗ್ರಾಹಕನಾಗಬೇಕೆ? ಅರಿವು, ಮಾಹಿತಿಯ ಲಭ್ಯತೆ ಮತ್ತು ಗ್ರಹಿಕೆ, ಹಾಗೂ ಹಕ್ಕಿನ ದೃಷ್ಟಿಯಿಂದ ನೋಡುವುದಾದರೆ, ನಿಜಕ್ಕೂ ಹೌದು. ಆದರೆ, ಕಳ್ಳಲೆಕ್ಕ ಕೊಟ್ಟು ಮೆಡಿಕಲ್ ರೀಇಮ್​ಸ್ಮೆಂಟ್, ಇನ್ಶೂರೆನ್ಸ್​ಗಳನ್ನು ಪಡೆಯುವ ಗ್ರಾಹಕರೂ ಇರುವಾಗ, ‘ಗ್ರಾಹಕ’ನೇ ‘ರೋಗಿ’ಯಾಗಲೂಬಹುದು. ಇಲ್ಲಿ, ಸುಲಭದ ಉತ್ತರಗಳಿಲ್ಲ. ಆದರೆ, ಇಂದಿನ ಮಾಹಿತಿಯುಗದಲ್ಲಿ, ಸಮಾನತೆಯ ಮಂತ್ರ ಮತ್ತು ಉತ್ಕೃಷ್ಟ ಆಯ್ಕೆಯ ಸ್ವಾತಂತ್ರ್ಯಗಳೆರಡೂ ಆರೋಗ್ಯಸೇವಾ ಕ್ಷೇತ್ರಕ್ಕೆ ಅನ್ವಯವಾಗಲೇಬೇಕು.

ಎರಡನೆಯ ಘಟನೆ- ನಿದಾನದಲ್ಲಿ ನಿಧಾನವಿರದಿದ್ದಾಗ: ಹತ್ತು ವರ್ಷದ ಹಿಂದಿನ ಮಾತು. ನನ್ನ ಕಿವಿಗೆ ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ನಿರ್ಧರಿಸಿದ್ದರು. ಈ ಸುದ್ದಿಯಿಂದ ನನಗೆ ಕರ್ಣಾನಂದವಾಗದಿದ್ದರೂ, ಆಗ್ಗೆ ಕೆಲವು ತಿಂಗಳ ಕಾಲ ಸದಾ ಕಿವಿ ಮುಚ್ಚಿದಂತಿರುತ್ತಿದ್ದುದು, ಸಂವಹನ ಸಲಹೆಗಾರನಾದ ನನಗೆ ವೃತ್ತಿಬಾಧೆಯಾಗಿ ಪರಿಣಮಿಸಿ, ವೈದ್ಯರ ಮಾತಿಗೆ ಕಿವಿಗೊಡಲು ನಿರ್ಧರಿಸಿದೆ. ಅಲ್ಲದೆ, ನನಗೆ ಶಸ್ತ್ರಚಿಕಿತ್ಸೆ ಮಾಡಹೊರಟಿರುವ ವೈದ್ಯರು ಕಿವಿಯ ವಿಷಯದಲ್ಲಿ ಪಂಡಿತೋತ್ತಮರೆಂದೂ, ಅವರ ಕೈಯಲ್ಲಿ ಮಾಯೆಯಿದೆಯೆಂದೂ ‘ಕೇಳಿ’ಬಂದದ್ದು ನನ್ನ ಆತ್ಮವಿಶ್ವಾಸವನ್ನು ಸ್ವಲ್ಪ ಹೆಚ್ಚಿಸಿತ್ತು. ಆ ದಿನ, ಅವರ ವೈದ್ಯಾಲಯಕ್ಕೆ ಹೋಗಿ ದಾಖಲಾದೆ. ನಾಲ್ಕೈದು ಜನ ಮುಖವಾಡಧಾರಿ ವೈದ್ಯರು ಮತ್ತು ಪರಿಚಾರಕರಿದ್ದ ಶಸ್ತ್ರಚಿಕಿತ್ಸಾ ಕೋಣೆಯನ್ನು ಪ್ರವೇಶಿಸಿದಾಗ ನನ್ನ ಎದೆ ಢವಗುಡಲಾರಂಭಿಸಿತ್ತು. ನನ್ನನ್ನು ಅಲ್ಲಿನ ಮಂಚದ ಮೇಲೆ ಮಲಗಲು ಹೇಳಿದ ವೈದ್ಯರು, ಕಿವಿಯೊಳಗೆ ಪ್ರಖರವಾದ ಬೆಳಕು ಬಿಟ್ಟು ನೋಡಲಾರಂಭಿಸಿದರು. ನನಗೆ ಇನ್ನೇನು ಅರಿವಳಿಕೆ (ಅನಸ್ತೇಷಿಯ) ಕೊಡಬೇಕು, ಅಷ್ಟರಲ್ಲಿ ಅವರಲ್ಲಿ ಎಲ್ಲರಿಗೂ ವರಿಷ್ಠರಾಗಿದ್ದ ಡಾಕ್ಟರ್ ಆತಂಕದ ದನಿಯಲ್ಲಿ, ‘ಅಯ್ಯೋ! ಇದು ಬೇರೆ ಸಮಸ್ಯೆ ಅಂತ ಕಾಣುತ್ತೆ ರೀ! ಮೊದಲು ನಾವಂದುಕೊಂಡಂತೆ ಇದು ‘ಫ್ಲೂಯಿಡ್ ಅಕ್ಯುಮುಲೇಷನ್’ ಕೇಸ್ ಅಲ್ಲ. ‘ಬೋನ್ ಫಿಕ್ಸೇಷನ್’ ಸಮಸ್ಯೆಯಂತೆ ಕಾಣುತ್ತಿದೆ. ಮೊನ್ನೆ ನನಗೆ ಸರಿಯಾಗಿ ಕಂಡಿರಲಿಲ್ಲ’ ಎಂದು ಸಹೋದ್ಯೋಗಿಗಳಿಗೆ ಹೇಳಿದರು. ನಂತರ ನನ್ನ ಕಡೆಗೆ ತಿರುಗಿ ‘ನಿಮಗೆ ಇನ್ನೂ ಸಂಕೀರ್ಣವಾದ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ನಂತರ ಸಂರ್ಪಸಿ. ಮುಂದಿನ ಶಸ್ತ್ರಚಿಕಿತ್ಸೆಯ ತಾರೀಕು ಹೇಳುತ್ತೇನೆ’ ಎಂದರು. ಆಶ್ಚರ್ಯವೆಂದರೆ, ಅವರ ದನಿಯಲ್ಲಿ ನನ್ನನ್ನು ವೃಥಾ ಆತಂಕಕ್ಕೀಡುಮಾಡಿದ, ಸಮಯ ಹಾಳುಮಾಡಿದ, ಭ್ರಮನಿರಸನಗೊಳಿಸಿದ ಬಗ್ಗೆ ಪಶ್ಚಾತ್ತಾಪದ ಯಾವ ಸುಳಿವೂ ಇರಲಿಲ್ಲ. ಆಗ್ಗೆ ದಿಗ್ಭಾ ್ರತನಾಗಿದ್ದ ನನಗೆ, ತಕ್ಷಣ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ. ಜತೆಗೆ, ಈ ವೃತ್ತಿವೈಶಿಷ್ಟ್ಯದಲ್ಲಿ ಅತ್ಯಂತ ಶ್ರೇಷ್ಠರೆಂಬ ಹೆಗ್ಗಳಿಕೆಯುಳ್ಳವರಾದ್ದರಿಂದ, ಇವರನ್ನು ಪ್ರಶ್ನಿಸಿ ಪ್ರತಿಭಟಿಸುವ ಮುನ್ನ ಸಾಕಷ್ಟು ಯೋಚಿಸಬೇಕಿತ್ತು. ಒಟ್ಟಿನಲ್ಲಿ ಅತ್ಯಂತ ಸಂದಿಗ್ಧದ ಪರಿಸ್ಥಿತಿ ಎದುರಾಯಿತು.

ವಿಚಿತ್ರವೆಂದರೆ, ಈ ಶ್ರೇಷ್ಠ ತಜ್ಞವೈದ್ಯರು ಶಸ್ತ್ರಚಿಕಿತ್ಸೆಗೆಂದು ಕರೆದ ಎರಡು ದಿನದ ಹಿಂದೆಯಷ್ಟೇ ನನ್ನ ಸಮಸ್ಯೆಯನ್ನು ಹತ್ತೇ ನಿಮಿಷದ ಶಸ್ತ್ರಚಿಕಿತ್ಸೆಯಲ್ಲಿ ಬಗೆಹರಿಸುವ ಭರವಸೆ ನೀಡಿದ್ದರು. ‘ಮೊನ್ನೆ ಸರಿಯಾಗಿ ಕಂಡಿರಲಿಲ್ಲ’ ಎಂದು ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಹೇಳಿದ್ದ ಅವರು, ನಿಜ ಹೇಳಬೇಕೆಂದರೆ, ರೋಗನಿದಾನದ (ಡಯಗ್ನೋಸಿಸ್) ಸಮಯದಲ್ಲಿ ಸೂಕ್ಷ್ಮವಾಗಿ ನೋಡುವ ವ್ಯವಧಾನ ತೋರಿರಲಿಲ್ಲ. ಹೊರಗೆ ಕಾದುಕುಳಿತಿದ್ದ ಅಸಂಖ್ಯಾತ ರೋಗಿಗಳ ಒತ್ತಡ ಹಾಗೂ ಮಧ್ಯೆಮಧ್ಯೆ ಕಾಡುವ ಫೋನಿನ ಭರಾಟೆಯಲ್ಲಿ ನನ್ನ ಸಮಸ್ಯೆಯ ಬಗ್ಗೆ ಪೂರ್ಣ ಗಮನಹರಿಸಲು, ಕೂಲಂಕಷವಾಗಿ ತಪಾಸಣೆ ಮಾಡಲು ಅವರಿಗೆ ಸಾಧ್ಯವಾಗಿರಲಿಲ್ಲ. ಆಗ, ಸಮಸ್ಯೆಯ ಸಂಕೀರ್ಣತೆ ಅರಿಯುವ ಪ್ರಯತ್ನ ಮಾಡದೆ, ತಕ್ಷಣಕ್ಕೆ ಏನೋ ಉತ್ತರ ಹೇಳಿ ಕಳುಹಿಸಿದ್ದರು. ಅವರ ತರಾತುರಿ ಮತ್ತು ಆತುರಗೆಟ್ಟ ನಡವಳಿಕೆಯೇ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿತ್ತು.

ಇಂತಹ ಅನೇಕ ಅನುಭವಗಳನ್ನು ನಾವೆಲ್ಲರೂ ಕೇಳಿದ್ದೇವೆ. ಕಳೆದ ಒಂದು ದಶಕದಲ್ಲಿ ಅನೇಕ ಕಾರಣಗಳಿಗೆ ಬೇರೆಬೇರೆ ವೈದ್ಯರನ್ನು ನೋಡಬೇಕಾಗಿ ಬಂದಿರುವ ನನ್ನ ಸ್ವಂತ ಅನುಭವ ಹಾಗೂ ಅವನ್ನು ರ್ಚಚಿಸಿದಾಗ ಸ್ನೇಹಿತ-ಸಹೋದ್ಯೋಗಿ-ಸಂಬಂಧಿಗಳು ಹಂಚಿಕೊಂಡ ಅನುಭವದಿಂದ, ಒಂದು ವಿಷಯವಂತೂ ಖಚಿತವಾಗಿದೆ. ಅದೇನೆಂದರೆ, ವೈದ್ಯಕೀಯ ವೃತ್ತಿ ಬದಲಾಗಿದೆ. ಒಬ್ಬ ರೋಗಿಯ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ವೈದ್ಯರಿಗೆ ಲಭ್ಯವಿರುವ ಸರಾಸರಿ ಸಮಯ ಕಡಿಮೆಯಾಗುತ್ತ ಬಂದಿದೆ. ಬೇಡಿಕೆ ಹೆಚ್ಚಿದ್ದು, ಸ್ಪೆಷಲಿಸ್ಟ್​ಗಳ ಪೂರೈಕೆ ಕಡಿಮೆಯಿರುವ ಎಲ್ಲ ತಜ್ಞ-ವೃತ್ತಿಗಳಲ್ಲೂ ಇದು ಸಾಮಾನ್ಯವಾಗಿದೆ.

ಯಾವುದೇ ವೃತ್ತಿಯಲ್ಲಿ ತೊಡಗಿರುವ ವೃತ್ತಿಪರರ ನಡವಳಿಕೆಯನ್ನು ‘ಜನರಲೈಸ್’ ಮಾಡಿ ಹೇಳುವುದು ಸರಿಯಲ್ಲವಾದರೂ, ಸಮಯದ ಅಭಾವ ವೈದ್ಯರನ್ನೂ ತನ್ಮೂಲಕ ರೋಗಿಗಳನ್ನೂ ಕಾಡುತ್ತಿರುವುದಂತೂ ನಿಜ. ವೈದ್ಯರು ಎದುರಿಸಬೇಕಾದ ಒತ್ತಡ ಮತ್ತು ತೆಗೆದುಕೊಳ್ಳಬೇಕಾದ ನಿರ್ಧಾರಗಳು ಖಂಡಿತವಾಗಿಯೂ ಅತ್ಯಂತ ಕ್ಲಿಷ್ಟ ಮತ್ತು ಸಂಕೀರ್ಣ. ಆದರೆ, ಇದ್ಯಾವುದೂ ಕರ್ತವ್ಯಲೋಪಕ್ಕೆ ಮತ್ತು ರೋಗಿಗಳಿಗಾಗುವ ಅನಗತ್ಯ ಖರ್ಚು ಮತ್ತು ಅನಾನುಕೂಲಗಳಿಗೆ ನೆಪವಾಗಬಾರದು, ಕಾರಣವಾಗಬಾರದು.

ಅಂದು, ಆ ವೈದ್ಯರು ಏನು ಮಾಡಬಹುದಿತ್ತು? ತಾವು ನಿತ್ಯವೂ ನೋಡುವ ರೋಗಿಗಳ ಸಂಖ್ಯೆಯನ್ನು ಪರಿಮಿತಗೊಳಿಸಬಹುದಿತ್ತು. ಇಲ್ಲವೇ, ವೈಜ್ಞಾನಿಕ ಮತ್ತು ತರ್ಕಬದ್ಧವಾದ ಪ್ರಶ್ನಾವಳಿಗಳನ್ನು ಉಪಯೋಗಿಸಿ ಮಾಹಿತಿ ಕಲೆಹಾಕಬಹುದಿತ್ತು. ಅದನ್ನು ನಿಧಾನವಾಗಿ ಪರಾಮಶಿಸಿ ಸಲಹೆ, ಸೂಚನೆ ಅಥವಾ ಚಿಕಿತ್ಸೆ ನೀಡಬಹುದಿತ್ತು. ರೋಗನಿದಾನದಲ್ಲಿ ನಿಧಾನವೇ ಪ್ರಧಾನವಾಗಬೇಕು. ಇಲ್ಲದಿದ್ದರೆ ಅದು ಅನೇಕ ಕೆಡಕು-ತೊಡಕುಗಳಿಗೆೆ ಕಾರಣವಾಗಬಹುದು. ಸಣ್ಣ ಸಮಸ್ಯೆ, ರಣವಾಗಬಹುದು!

ಈ ಎರಡೂ ಘಟನೆಗಳನ್ನು ಮತ್ತೆ ನೆನಪಿಸಿದ ವೈದ್ಯರ ದಿನದ ಸಂದರ್ಭದಲ್ಲಿ ನನಗನ್ನಿಸಿದ್ದು- ಒಂದು, ಮಾಹಿತಿಯುಗದಲ್ಲಿ ವೈದ್ಯ ಮತ್ತು ರೋಗಿಯ ನಡುವಿನ ಸಂಬಂಧ ಬದಲಾಗುತ್ತಿದೆ. ಅಂತರ್ಜಾಲದಲ್ಲಿ ಮುಕ್ತವಾಗಿ ಲಭ್ಯವಿರುವ ಮಾಹಿತಿ ಹೆಚ್ಚಾದಷ್ಟೂ ರೋಗಿ ವೈದ್ಯರಿಗೆ ಹೊಸ ಸವಾಲುಗಳನ್ನು ಹಾಕುತ್ತಿದ್ದಾನೆ. ಎರಡನೆಯದು- ಸಮಯದ ಕೊರತೆ ಎಲ್ಲರಂತೆ ವೈದ್ಯರನ್ನೂ ಕಾಡುತ್ತಿದೆ. ಆದರೆ, ರೋಗಿ ಜಾಗೃತ ಗ್ರಾಹಕನಂತೆ ವರ್ತಿಸುತ್ತಿರುವ ಈ ಹೊತ್ತಿನಲ್ಲಿ ವೈದ್ಯರಿಗೆ ಸಣ್ಣ ತಪ್ಪನ್ನೂ ಮಾಡುವ ಆಸ್ಪದವಿಲ್ಲ. ಈ ಕಾರಣಗಳಿಂದಾಗಿ, ವೈದ್ಯರೂ ‘ಚಾನ್ಸ್ ತೆಗೆದುಕೊಳ್ಳುವುದು ಬೇಡ’ ಎಂದು ರೋಗಿಯನ್ನು ಅಗತ್ಯಕ್ಕೂ ಹೆಚ್ಚು ಪರೀಕ್ಷಿಸಲು ಮುಂದಾಗುತ್ತಿದ್ದಾರೆ. ಇದರಿಂದ ಎರಡು ಅಡ್ಡಪರಿಣಾಮಗಳಾಗಿವೆ. ಒಂದು- ಆರೋಗ್ಯಸೇವೆಯ ವೆಚ್ಚ ಹೆಚ್ಚಾಗುತ್ತಿದೆ. ಎರಡು- ಮಾಹಿತಿಯ ಅತಿವೃಷ್ಟಿಯಿಂದಾಗಿ ವೈದ್ಯರ ವಿಶ್ವಾಸಾರ್ಹತೆ ಕಡಿಮೆಯಾಗುತ್ತಿದೆ.

ಒಟ್ಟಿನಲ್ಲಿ, ತನಗಿರಬಹುದಾದ ಕಾಯಿಲೆಯ ಬಗ್ಗೆ ಅಂತರ್ಜಾಲದಲ್ಲಿ ಎಲ್ಲವನ್ನೂ ಮೊದಲೇ ಓದಿಕೊಂಡು ವೈದ್ಯರ ಬಳಿ ಹೋಗುವ ರೋಗಿಯನ್ನು ಚಿತ್ರಿಸಿಕೊಂಡಾಗ, ಮಾಹಿತಿಯುಗದಲ್ಲಿ ಇವರಿಬ್ಬರ ಸ್ಥಾನಮಾನಗಳು ಸ್ವಲ್ಪಮಟ್ಟಿಗಾದರೂ ಬದಲಾಗಿರುವುದು ಗ್ರಹಿಕೆಗೆ ಬರುತ್ತದೆ. ಇನ್ನು ಮುಂದೆ ವೈದ್ಯರ

ದಿನವನ್ನು ಪರ್ಯಾಯವಾಗಿ ರೋಗಿಯ ದಿನವೆಂದೂ ಕರೆದು- ಏಕಲವ್ಯನಂತೆ ಮರೆಯಲ್ಲಿ ನಿಂತು ವೈದ್ಯವಿದ್ಯೆಯ ಕೆಲವು ಪಾಠಗಳನ್ನಾದರೂ

ಆಸ್ಥೆಯಿಂದ ಕಲಿಯುತ್ತಿರುವ ಅಭಿನವ ರೋಗಿಯನ್ನೂ ಏಕಕಾಲಕ್ಕೆ ಅಭಿನಂದಿಸಿದರೆ ತಪ್ಪೇನಿಲ್ಲ ಎನಿಸಿತು!

(ಲೇಖಕರು ಸಂವಹನ ಸಲಹೆಗಾರರು)

Leave a Reply

Your email address will not be published. Required fields are marked *

Back To Top