Thursday, 15th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಅಪ್ಪ ಗೊಂದಲದಲ್ಲಿದ್ದಾನೆ, ಸಹಾಯ ಮಾಡಿ!

Sunday, 17.06.2018, 3:05 AM       No Comments

ಕ್ಕಳ ಬಗೆಗಿನ ದೊಡ್ಡ ಸಮಸ್ಯೆಗಳು ಅಪ್ಪ-ಅಮ್ಮ ಇಬ್ಬರನ್ನೂ ಸಮನಾಗಿ ಕಾಡುತ್ತವೆ. ಅವುಗಳ ಬಗ್ಗೆ ಈಹೊತ್ತಿನ ಅಪ್ಪನ ದಿನದ ಆಚರಣೆಯ ಸಂದರ್ಭದಲ್ಲಿ ಚರ್ಚೆ ಬೇಡ. ಮೇಲ್ನೋಟಕ್ಕೆ ಚಿಕ್ಕದೆನಿಸಿದರೂ ಕೆಲವೊಮ್ಮೆ ಮುಜುಗರಕ್ಕೆ ಅಥವ ಟೆನ್ಷನ್​ಗೆ ಎಡೆಮಾಡಬಲ್ಲ, ಕ್ಲಿಷ್ಟವಲ್ಲದಿದ್ದರೂ ಸಂದಿಗ್ಧಕ್ಕಂತೂ ಈಡುಮಾಡುವಂಥ ಸಮಸ್ಯೆಗಳ ಬಗ್ಗೆ ಹೇಳಬೇಕೆಂದಿದ್ದೇನೆ. ಇವೆಲ್ಲವೂ ಸ್ವಾನುಭವದ ಚಿತ್ರಣಗಳು ಎನ್ನುವಂತಿಲ್ಲ. ಕೆಲವು ಸ್ವಂತದ್ದು. ಹಲವು ಕಂಡದ್ದು, ಕೇಳಿದ್ದು ಮತ್ತು ಕಲ್ಪನೆಮಾಡಿದ್ದು. ನಾನು ಅಪ್ಪಂದಿರ ಪರವೋ ಗಂಡಸರ ಪರವೋ ವಕಾಲತ್ತು ವಹಿಸಿ ಮಾತನಾಡುತ್ತಿಲ್ಲ, ಹಾಗೂ ಈ ಎಲ್ಲ ಸಂದಿಗ್ಧಗಳನ್ನು ಅಮ್ಮಂದಿರೂ (ಬಹುಶಃ ಅಪ್ಪಂದಿರಿಗಿಂತ ಹೆಚ್ಚಾಗಿಯೇ) ಅನುಭವಿಸುತ್ತಿರಬಹುದು ಎನ್ನುವ ‘ಡಿಸ್ಕೆ್ಲೕಮರ್’ ಮೊದಲೇ ಕೊಟ್ಟುಬಿಡುತ್ತಿದ್ದೇನೆ. ಒಬ್ಬ ಅಪ್ಪನಾಗಿ, ನನ್ನಂಥವರು ಎದುರಿಸುವ ಸಂದಿಗ್ಧ ಪರಿಸ್ಥಿತಿಗಳ ಅಳಲನ್ನು ತೋಡಿಕೊಳ್ಳುತ್ತಿದ್ದೇನೆ, ಅಷ್ಟೆ! ನಿಮಗೂ ಹೀಗೇ ಅನ್ನಿಸುತ್ತದೆಯೇ, ಸತ್ಯ ಹೇಳಿ…

# ಯಾವುದೋ ಸ್ಪರ್ಧೆಯಲ್ಲಿ ನಮ್ಮ ಮಕ್ಕಳು ಸೋತರೆ, ಗೆದ್ದ ಮಕ್ಕಳ ಪೋಷಕರೊಡನೆ ಒಡನಾಡಲು ಒಂದೆರಡು ದಿನ ಹಿಂಜರಿಕೆ. ನಮ್ಮ ಮಕ್ಕಳು ಸೋತರೆಂದಲ್ಲ. ಆದರೆ, ಅವರ ಮಕ್ಕಳು ಗೆದ್ದಿದ್ದರ ಬಗ್ಗೆ ನಾವು ತೋರುವ ಪ್ರಶಂಸೆಯಲ್ಲಿ ಅದೆಲ್ಲಿ ನೈಜತೆಯ ಅಂಶ ಕಡಿಮೆ ಕಂಡೀತೆಂಬ ಭಯದಿಂದ! ಯಾರ ಮಕ್ಕಳಾದರೂ ಮಕ್ಕಳೇ. ಅವರು ಗೆದ್ದಿದ್ದು ಸಂತೋಷವೇ. ಆದರೆ, ಸೋತ ನಮ್ಮ ಮಕ್ಕಳ ಮನಸ್ಸಿನಲ್ಲಿ ಏನು ಜರುಗುತ್ತಿರಬಹುದು. ಅವರ ಮುಂದೆ ನಾವು ಯಾವ ‘ಎಕ್ಸ್​ಪ್ರೆಷನ್’ ಕೊಟ್ಟರೆ ಸರಿ, ಯಾವುದು ಕೊಟ್ಟರೆ ತಪ್ಪು. ಚಿಕ್ಕಚಿಕ್ಕ ಸ್ಪರ್ಧೆಗಳು ಮಕ್ಕಳಿಗಿಂತಲೂ ನಮ್ಮಂಥ ಅಪ್ಪಂದಿರಿಗೇ ದೊಡ್ಡ ಸವಾಲು. ಅಪ್ಪಂದಿರ ವೃತ್ತಿಜೀವನದಲ್ಲಿ ಗೆಲುವಿಗೆ ಅತಿಸಹಜವೆನಿಸುವಷ್ಟು ಪ್ರಾಮುಖ್ಯತೆ ಇರುವುದರಿಂದಲೋ ಏನೋ, ಮಕ್ಕಳ ಸಣ್ಣ ಸೋಲುಗಳೂ ಕೆಲವೊಮ್ಮೆ ಅಸಹನೀಯವಾಗುತ್ತವೆ. ಅದರ ಮೇಲೆ, ಏನೂ ಆಗಿಲ್ಲವೆಂಬಂತೆ ನಟಿಸಬೇಕಾದ ಅಪ್ಪನೆಂಬ ಜವಾಬ್ದಾರಿ ಬೇರೆ!

ನಮ್ಮ ಮಕ್ಕಳು ತಮ್ಮ ಕನಸುಗಳನ್ನೇ ಆಯ್ದುಕೊಳ್ಳಲಿ. ನಮ್ಮ ಪ್ರಭಾವಕ್ಕೆ ಒಳಗಾಗುವುದು ಬೇಡ’ ಎಂದು ‘ಹೃತ್ಪೂರ್ವಕವಾಗಿ’ ಅವರಿಗೆ ಹೇಳುವಾಗಲೂ, ಅದೇ ಮಾತನ್ನು ಸ್ನೇಹಿತರು, ಸಹೋದ್ಯೋಗಿಗಳು, ಸಂಬಂಧಿಕರೊಡನೆ ಪುನರುಚ್ಚರಿಸುವಾಗಲೂ, ಒಂದು ಬಗೆಯ ಅಳುಕು ಕಾಡುವುದೇ? ತಪ್ಪು ಕನಸುಗಳನ್ನು ಆಯ್ದುಕೊಂಡುಬಿಟ್ಟರೆ? ಇಲ್ಲವೇ, ಆಯ್ದ ಕನಸನ್ನು ಪೂರೈಸಿಕೊಳ್ಳುವ ಹಾದಿಯಲ್ಲಿ ನಿರಾಶೆಗಳೊಡನೆ ಸೆಣೆಸಬೇಕಾಗಿಬಂದರೆ! ಅದರ ಬದಲು, ನಾವು ತುಳಿದ ಹಾದಿಯಲ್ಲೇ ಅವರೂ ನಡೆದರೆ, ಕನಿಷ್ಠಪಕ್ಷ ಅವರಿಗೆ ಮಾರ್ಗದರ್ಶನವನ್ನಾದರೂ ಮಾಡಬಹುದಲ್ಲ! ನಾವು ಆಯ್ದುಕೊಂಡ ವೃತ್ತಿ/ಮಾರ್ಗಗಳನ್ನೇ ಮಕ್ಕಳೂ ಆಯ್ದುಕೊಳ್ಳಲಿ ಎಂದು ಒಮ್ಮೆ, ಅಯ್ಯೋ ಬೇಡ, ಆಯ್ಕೆಯನ್ನು ಅವರಿಗೇ ಬಿಟ್ಟು, ನಾವು ಬೆಂಬಲಕ್ಕೆ ಮಾತ್ರ ನಿಂತರೆ ಸಾಕು ಎಂದು ಕೆಲವೊಮ್ಮೆ ನಿಮಗೂ ಅನಿಸುತ್ತದೆಯೇ?

# ನಿಜ. ಮಕ್ಕಳಿಗೆ ಸದಾ ಅತ್ಯುತ್ತಮವಾದುದನ್ನೇ ಕೊಡಿಸಬೇಕು. ಆದರೆ, ಅವರು ಸದಾ ಶ್ರೇಷ್ಠವಾದುದನ್ನೇ ಅನುಭವಿಸುತ್ತಿದ್ದರೆ, ಅವೆಲ್ಲವೂ ಅವರಿಗೆ ಬೆಲೆ ಇಲ್ಲದಂತಾಗುತ್ತದೆಯೇ? ‘ನಾವು ಪಟ್ಟ ಕಷ್ಟದ ಅರಿವು ಮಕ್ಕಳಿಗೂ ಆಗಲಿ’ ಮತ್ತು ‘ನಾವು ಪಟ್ಟ ಕಷ್ಟ ನಮ್ಮ ಮಕ್ಕಳಿಗೆ ಬೇಡ’ ಎಂಬೆರಡು ವೈರುಧ್ಯಗಳ ನಡುವೆ ಹೊಯ್ದಾಡುವಂತಾಗುತ್ತದೆ. ಮಕ್ಕಳು ಒಳ್ಳೆಯದನ್ನು ಅನುಭವಿಸಬೇಕು ಎನ್ನುವಷ್ಟೇ, ಮಕ್ಕಳು ಒಳ್ಳೆಯದನ್ನು ಗುರುತಿಸಿ ಪ್ರಶಂಸಿಸಬೇಕು ಎನ್ನುವುದೂ ಮುಖ್ಯ. ‘ಒಳ್ಳೆಯದೆಲ್ಲವೂ ನನ್ನ ಹಕ್ಕು, ಮತ್ತು ಅದನ್ನು ತಂದುಕೊಡುವುದು ಪೋಷಕರ ಕರ್ತವ್ಯ’ ಎನ್ನುವ ಧೋರಣೆಯನ್ನು ಮಕ್ಕಳು ಎಲ್ಲಿ ಬೆಳೆಸಿಕೊಂಡಾರೋ ಎನ್ನುವ ಆತಂಕದ ಜೊತೆಗೇ, ಕಷ್ಟ-ಕಾರ್ಪಣ್ಯಗಳನ್ನು ಎದುರಿಸಲಾಗದ ನಾಜೂಕಿನವರಾಗಿ ಮಕ್ಕಳು ಬೆಳೆದರೆ ಎನ್ನುವ ಭಯವೂ ಅಪ್ಪನನ್ನು ಕಾಡುತ್ತದೆ.

# ನಮ್ಮ ಮಕ್ಕಳು ತಮಗಿಂತ ಬುದ್ಧಿವಂತ/ಸಮರ್ಥರೊಡನೆ ಸ್ನೇಹ ಮಾಡಬೇಕೋ ಇಲ್ಲವೇ ತಮಗಿಂತ ಸ್ವಲ್ಪ ಕಡಿಮೆ ಇರಬಹುದಾದವರೊಡನೆಯೋ? ತಮಗಿಂತ ಬುದ್ಧಿವಂತ/ಸಮರ್ಥರೊಡನೆ ಹೆಚ್ಚಿನ ಸಂಪರ್ಕದಲ್ಲಿದ್ದರೆ ಇನ್ನಷ್ಟು ಬೆಳೆಯುತ್ತಾರೆ ಎನ್ನುವ ಸುಪ್ತ ಆಸೆ ಒಂದೆಡೆಯಾದರೆ, ಅದರಿಂದ ಅವರಲ್ಲೇನಾದರೂ ಕೀಳರಿಮೆ ಮೂಡಿದರೆ ಎನ್ನುವ ಸಣ್ಣ ಅತಂಕ ಮತ್ತೊಂದೆಡೆ. ಬುದ್ಧಿವಂತ-ದಡ್ಡ, ಸಮರ್ಥ-ಅಸಮರ್ಥ ಎನ್ನುವ ಭೇದ ಬೇಡವೆಂಬ ಪ್ರೌಢ ಪ್ರಜ್ಞೆ ಮತ್ತೊಂದೆಡೆ. ಮಕ್ಕಳು ಮಾಡುವ ಸಹವಾಸದಿಂದಲೇ ಅವರ ಜೀವನದ ಅನೇಕ ಆಯಾಮಗಳು ವಿಕಸಿತವಾಗುತ್ತವೆ ಎನ್ನುವುದನ್ನು ತನ್ನದೇ ಬದುಕಿನ ಉದಾಹರಣೆಗಳಿಂದ ಬಲ್ಲ ಅಪ್ಪನಿಗೆ, ಈ ವಿಷಯದಲ್ಲಿಯೂ ಸದಾ ಸಂದಿಗ್ಧ!

# ತಪ್ಪು ಮಾಡಿದಾಗ, ಮಕ್ಕಳನ್ನು ಆ ಕ್ಷಣಕ್ಕೇ ಎಲ್ಲರ ಮುಂದೆಯೇ ಬೈಯಬೇಕೋ? ಅಥವ, ಆನಂತರ ನಿಧಾನವಾಗಿ ಬುದ್ಧಿ ಹೇಳಬೇಕೋ? ಥಿಯರಿ ನನಗೂ ಗೊತ್ತು ಬಿಡಿ! ಸಾರ್ವಜನಿಕವಾಗಿ ಪ್ರಶಂಸೆ, ಖಾಸಗಿಯಾಗಿ ಮಾತ್ರ ಬೈಗುಳ ಮತ್ತು ಬುದ್ಧಿಮಾತು. ಆದರೆ, ಅದೆಷ್ಟು ಪ್ರಾಯೋಗಿಕ? ಉದಾಹರಣೆಗೆ ಯಾವುದೋ ಹೋಟೆಲಿಗೋ ಅಥವ ಸಮಾರಂಭಕ್ಕೋ ಹೋಗಿದ್ದೇವೆಂದಿಟ್ಟುಕೊಳ್ಳೋಣ. ಅಲ್ಲಿ ಮಿಕ್ಕವರೆಲ್ಲರೂ ಶಾಂತವಾಗಿದ್ದು, ನಮ್ಮ ಮಕ್ಕಳು ಮಾತ್ರ ಜೋರುದನಿಯಲ್ಲಿ ಮಾತನಾಡುತ್ತಿದ್ದಾರೆ. ಯಾವುದೋ ಬೇಡದ ವಿಷಯಕ್ಕೆ ರಚ್ಚೆ ಹಿಡಿದಿದ್ದಾರೆ. ನಾವು ಮೆಲುದನಿಯಲ್ಲಿ ಎಷ್ಟೇ ಹೇಳಿದರೂ ಕೇಳುತ್ತಿಲ್ಲ. ಈಗ ಏನು ಮಾಡುವುದು? ಬೈದರೆ ಮರ್ಯಾದೆ ಹೋಗುತ್ತದೆ. ಬೈಯದಿದ್ದರೆ ಮರ್ಯಾದೆಯೂ ಹೋಗುತ್ತದೆ, ಮಕ್ಕಳನ್ನು ಹೀಗೆ ಬೆಳೆಸಿರುವುದು ಮಾತ್ರವಲ್ಲದೆ ಈಗ ಪರಿಸ್ಥಿತಿ ನಿಯಂತ್ರಿಸಲೂ ಮುಂದಾಗುತ್ತಿಲ್ಲವೆಂಬ ನಿಂದೆಗೂ ಒಳಗಾಗಬೇಕಾಗುತ್ತದೆ. ಹೇಳಿದ ಮಾತು ಕೇಳುವ ಮಕ್ಕಳಿದ್ದರೆ ಬಚಾವ್. ಇಲ್ಲದಿದ್ದರೆ ಇದು ನಿತ್ಯವೂ ಕಾಡುವ ಸಂದಿಗ್ಧ. ಅಮ್ಮಂದಿರಿಗೆ ಈ ವಿಷಯದಲ್ಲಿ ಸಾಮಾನ್ಯವಾಗಿ ಸ್ಪಷ್ಟತೆ ಇರುವುದನ್ನು ನೋಡಿದ್ದೇನೆ. ಆದರೆ, ಅಪ್ಪನಿಗೆ ಸಾಮಾಜಿಕ ಸ್ಥಳಗಳ ಮರ್ಯಾದೆಯನ್ನೂ ಮಕ್ಕಳು ತಂದೊಡ್ಡುವ ಇಂಥ ಪರಿಸ್ಥಿತಿಗಳ ಮುಜುಗರವನ್ನೂ ಸರಿದೂಗಿಸಲು ಸಾಮಾನ್ಯವಾಗಿ ಗೊತ್ತಾಗುವುದಿಲ್ಲ! ಒಂದೋ ಪ್ರತಿಕ್ರಿಯಿಸುವುದಿಲ್ಲ! ಇಲ್ಲವೇ ಅತಿಯಾಗಿ (ಓವರ್-ರಿಯಾಕ್ಟ್) ಪ್ರತಿಕ್ರಿಯಿಸುತ್ತಾನೆ!

# ಮಕ್ಕಳು ವಸ್ತುಗಳನ್ನು ಕೇಳಿದಾಗ ಬಹುಶಃ ನಿರ್ಧಾರ ಸುಲಭ. ಅವರ ಅಗತ್ಯಕ್ಕೆ ಮತ್ತು ನಮ್ಮ ಯೋಗ್ಯತೆಗೆ ಅನುಸಾರವಾಗಿ ನಿರ್ಧಾರ ತೆಗೆದುಕೊಳ್ಳಬಹುದು. ಕೊಡಿಸಬಹುದು, ಅಥವ ಇಲ್ಲವೆನ್ನಬಹುದು. ಆದರೆ, ಮಕ್ಕಳು ವಸ್ತುಗಳ ಬದಲು ನೇರವಾಗಿ ‘ದುಡ್ಡು’ ಕೇಳಿದಾಗ ಕಷ್ಟಕ್ಕೆ ಬರುತ್ತದೆ. ಏಕೆಂದರೆ, ಕೊಳ್ಳುವ ನಿರ್ಧಾರವನ್ನು ಅವರಿಗೆ ವರ್ಗಾಯಿಸಿದಂತಾಗುತ್ತದೆ. ನಮಗೆ ಗೊತ್ತಿಲ್ಲದ/ನಮಗೆ ಹೇಳಬಯಸದ ಏನನ್ನೋ ಕೊಳ್ಳುತ್ತಾರೆನ್ನುವುದು ಅಪ್ಪನಿಗೆ ಆತಂಕದ ವಿಷಯ! ಅದು, ಅವರ ಜೀವನದಲ್ಲಿ ನಮ್ಮ ಪಾತ್ರ ಕಡಿಮೆಯಾಗುತ್ತಿರುವುದರ ಸಂಕೇತ. ಆ ಕೊಳ್ಳುವ ವಸ್ತು ಅಪಾಯಕಾರಿಯಾದರೆ, ಅಥವ ಅ ದುಡ್ಡಿನಿಂದಲೇ ಅವರಿಗೇನಾದರೂ ವಿಪತ್ತು ಬಂದೊದಗಿದರೆ, ಅಥವ ಇನ್ನೂ ಸಣ್ಣ ಸ್ತರದಲ್ಲಿ, ಯಾರೋ ಇವರಿಗೆ ಹೆಚ್ಚಿನ ಬೆಲೆಗೆ ವಸ್ತುವನ್ನು ಮೋಸದಿಂದ ಮಾರಿ (ಇದೇ ಮೋಸಹೋಗುವಿಕೆ ಅವರಿಗೆ ಜೀವನಪೂರ್ತಿ ಅಭ್ಯಾಸವಾಗಿಹೋದರೆ)… ಹೀಗೆ, ಹಲವಾರು ಅನುಮಾನಗಳು. ಇವೆಲ್ಲವನ್ನೂ ಮಕ್ಕಳ ಮುಂದಾಗಲೀ ಮಡದಿಯ ಮುಂದಾಗಲೀ ಪೂರ್ತಿಯಾಗಿ ಒಪ್ಪಿಕೊಳ್ಳುವಂತಿಲ್ಲ. ದುಡ್ಡಿನ ವ್ಯವಹಾರ ಕಲಿಯುವುದು ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎನ್ನುವ ಸತ್ಯವೂ ಅಪ್ಪನಿಗೆ ಗೊತ್ತು. ಹಾಗಾಗಿ, ಒಳಗೇ ನರಳಾಟ!

# ಮಗ ಬಿದ್ದು ಗಾಯ ಮಾಡಿಕೊಂಡು ಬಂದಿದ್ದಾನೆ. ಮಗಳಿಗೆ ಜ್ವರವಿದೆ. ಅಪ್ಪ ಸಹಜವಾಗಿಯೇ ಆತಂಕದಲ್ಲಿದ್ದಾನೆ. ಆದರೆ, ಅದಕ್ಕೂ ಹೆಚ್ಚಿಗೆ, ಸಂದಿಗ್ಧದಲ್ಲಿದ್ದಾನೆ! ಈ ಗಾಯ/ಜ್ವರ ದೊಡ್ಡ ವಿಷಯವಲ್ಲ. ನಾಳೆ ಹೊತ್ತಿಗೆ ಸರಿಹೋಗುತ್ತದೆ ಎಂದು ಬಾಯಿ ಉಲಿಯುತ್ತಿದೆ. ಆದರೆ, ಗಾಯಕ್ಕೆ ಇನ್ಪೆಕ್ಷನ್ ತಗುಲಿದರೆ… ದೊಡ್ಡ ಜ್ವರವಾದರೆ ಏನು ಗತಿ? ಎಂದೆಲ್ಲ ಒಳಗೆ ಉರಿಯುತ್ತಿದೆ! ಮನೆಯವರ್ಯಾರಾದರೂ ‘ಡಾಕ್ಟರ್ ಬಳಿ ಕರೆದುಕೊಂಡು ಹೋಗೋಣವೇ?’ ಎಂದು ಈ ಅಪ್ಪನನ್ನು ಕೇಳಲಿ, ಆಗ ಮಜ ನೋಡಿ! ಇಂಥ ಮಾತಿಗೆ ಸ್ಪಷ್ಟ ಉತ್ತರವನ್ನು ಕೊಡುವ ಅಪ್ಪಂದಿರನ್ನು ನಾನಂತೂ ಕಂಡಿಲ್ಲ. ‘ಇನ್ನರ್ಧ ಗಂಟೆ ನೋಡೋಣ… ಮಕ್ಕಳು ಬಿದ್ದೇ ಕಲಿಯಬೇಕು… ಮಕ್ಕಳಿಗೆ ಜ್ವರ ಬರದೆ ಇರುತ್ತದೆಯೇ… ಆದರೂ, ಛಾನ್ಸ್ ತೆಗೆದುಕೊಳ್ಳುವುದು ಬೇಡ… ಪೇಪರ್​ನಲ್ಲಿ ಡೆಂಘ ಬಗ್ಗೆ ಬಂದಿದೆ…’ ಒಂದೇ ಪ್ಯಾರಾದಲ್ಲಿ ಎರಡು-ಮೂರು ಪಾತ್ರ ವಹಿಸಿಬಿಡುತ್ತಾನೆ ಅಪ್ಪ!

# ಮನೆಗೆ ಯಾರೋ ಅತಿಥಿಗಳು ಬಂದಿರುತ್ತಾರೆ. ಪುಟ್ಟ ಮಕ್ಕಳಿರುವ ಮನೆಗಳಲ್ಲಿ ಸಾಮಾನ್ಯವಾಗಿ ಅಮ್ಮನೋ ಅಜ್ಜಿಯೋ ಮಕ್ಕಳನ್ನು ‘ಪ್ರತಿಭಾ ಪ್ರದರ್ಶನಕ್ಕೆ’ ಎಳೆಯುತ್ತಾರೆ. ನಮ್ಮ ಮಗು ಎಷ್ಟು ಚೆನ್ನಾಗಿ ಹಾಡು/ನೃತ್ಯ/ಅನುಕರಣೆ ಮಾಡುತ್ತೆ ಎಂದು ಪ್ರಾರಂಭವಾಗುವ ಸಂಭಾಷಣೆ, ಆ ಪ್ರತಿಭೆಯ ಮೂರ್ನಾಲ್ಕು ಅವತರಣಿಕೆಗಳ ಪ್ರದರ್ಶನದೊಂದಿಗೆ ಪರ್ಯಾವಸಾನಗೊಳ್ಳುತ್ತದೆ. ಬಂದ ಅತಿಥಿಗಳ ಜೊತೆಗೆ ಮಕ್ಕಳಿದ್ದರಂತೂ ಮುಗಿದೇ ಹೋಯಿತು. ಸೂಕ್ಷ್ಮವಾದ ‘ಒನ್-ಅಪ್​ವುನ್​ಷಿಪ್’ ಶುರುವಾಯಿತು ಎಂದರ್ಥ. ಇಂತಹ ಸಂದರ್ಭದಲ್ಲಿ ನೀವು ನನ್ನಂಥ ಅಪ್ಪಂದಿರ ಮುಖವನ್ನೊಮ್ಮೆ ನೋಡಿದರೆ, ಉಭಯಸಂಕಟ ಎಂದರೇನು ಎನ್ನುವುದು ಗೊತ್ತಾಗುತ್ತದೆ. ‘ಇದೇನು ಮಕ್ಕಳನ್ನು ಅನೌಪಚಾರಿಕ ಸ್ಪರ್ಧೆಗೆ ಹಚ್ಚುತ್ತಿದ್ದಾರಲ್ಲಾ… ’ಎನ್ನುವ ಎಂಬೆರಾಸ್​ವೆುಂಟ್ ಒಂದೆಡೆಯಾದರೆ, ಮಗುವಿನ ಅತ್ಯದ್ಭುತ ಪ್ರದರ್ಶನವನ್ನು ಎದುರುನೋಡುತ್ತಿರುವ, ಅವರ ಪರವಾಗಿ ತಾನೇ ಸ್ಟೇಜ್-ಫಿಯರ್ ಅನುಭವಿಸುತ್ತಿರುವ ಸಹೃದಯಿ ಅಪ್ಪ ಇನ್ನೊಂದೆಡೆ.

# ಯಾರೋ ನಮ್ಮ ಮಗುವಿಗೆ ಅನ್ಯಾಯವಾಗಿ ಹೊಡೆದಿದ್ದಾರೆ ಅಥವ ಗೋಳುಹೊಯ್ದುಕೊಂಡಿದ್ದಾರೆ (ಬುಲ್ಲಿಯಿಂಗ್ ಮಾಡಿದ್ದಾರೆ). ಅಥವ, ನಮ್ಮ ಮಕ್ಕಳು ಯಾರ ಬಗ್ಗೆಯೋ ನ್ಯಾಯಸಮ್ಮತವಾದ ದೂರು ತಂದಿದ್ದಾರೆ. ಈಗ ಮಗುವಿಗೆ ಸೇಡಿನ ಪಾಠ ಹೇಳಿಕೊಡಬೇಕೋ ಅಥವ ಸಹನೆಯ ನೀತಿ ಕಲಿಸಬೇಕೋ? ಸಂದರ್ಭ ನೋಡಿ ನಿರ್ಧಾರ ಮಾಡಿ ಸ್ವಾಮಿ ಎಂದುಬಿಡುವುದು ಸುಲಭ! ಆದರೆ, ಮಕ್ಕಳಲ್ಲಿ ಮೌಲ್ಯ ಕಲಿಸುವ ಬಗ್ಗೆ ತಲೆಕೆಡಿಸಿಕೊಳ್ಳುವ ಅಪ್ಪಮ್ಮಂದಿರಿಗೆ ಇದು ಇಕ್ಕಟ್ಟಿನ ವಿಷಯ. ಏಕೆಂದರೆ, ನಾವು ಹೇಳಿಕೊಡುವ ಪಾಠ ಯಾವಹೊತ್ತಿಗೂ ಕನ್ಸಿಸ್ಟೆಂಟ್/ಸ್ಥಿರವಾಗಿರಬೇಕು. ಸಂದರ್ಭಾನುಸಾರ ಬದಲಾಗುವಂತಿಲ್ಲ. ಉದಾಹರಣೆಗೆ, ಪೆಟ್ಟು ತಿಂದು ಬಂದ ಮಗುವಿಗೆ ಸಹನೆಯಿಂದಿರು ಎಂದು ಉಪದೇಶಿಸುತ್ತಲೇ, ಹೊಡೆದವರ ಮೇಲೆ ಬೀಸಿ ಬರುತ್ತಿರುವ ಕೋಪವನ್ನು ನುಂಗಿ ನಲುಗುತ್ತಿರುವ, ತಾನು ಹೇಳಿಕೊಟ್ಟ ಸಹಿಷ್ಣುತೆಯ ಪಾಠಕ್ಕೆ ತಾನೇ ತುತ್ತಾಗಿರುವ ಅಪ್ಪನನ್ನು ಚಿತ್ರಿಸಿಕೊಳ್ಳಿ!

ನಮ್ಮ ಸ್ವಾರ್ಥ ಬೇರೆ. ಒಂದು ವಯಸ್ಸಿನ ನಂತರ ಆ ಸ್ವಾರ್ಥವನ್ನು ಗೆದ್ದುಬಿಡಬಹುದು. ಆದರೆ, ನಮ್ಮ ಹೆಂಡತಿ-ಮಕ್ಕಳು-ಸಂಸಾರವನ್ನು ಸೇರಿಸಿಕೊಂಡು ಯೋಚಿಸುವಾಗಿನ ಸ್ವಾರ್ಥವೇ ಬೇರೆ ರೂಪದ್ದು. ಅದು ಅನುಕ್ಷಣವೂ ಅಪ್ಪನ ಪಾತ್ರವನ್ನು ಕೆಣಕುತ್ತಿರುತ್ತದೆ. ಅವನಿಗೆ ‘ಇದಕ್ಕೆ ಸಮಂಜಸವಾದ ಉತ್ತರ ಹೇಳು ನೋಡೋಣ!’ ಎಂಬರ್ಥದಲ್ಲಿ ಅಣಕಿಸುತ್ತಿರುತ್ತದೆ. ಒತ್ತಡಕ್ಕೀಡುಮಾಡುತ್ತಿರುತ್ತದೆ!

ಈ ಎಲ್ಲ ಸಣ್ಣ-ದೊಡ್ಡ ಆತಂಕ/ಸಮಸ್ಯೆಗಳಿಗೂ ಮನಃಶಾಸ್ತ್ರಜ್ಞರ/ಮಕ್ಕಳ ತಜ್ಞರ ಬಳಿ ಪರಿಹಾರಗಳಿರಬಹುದು. ಆದರೆ, ನಾನು ತೋಡಿಕೊಂಡಿರುವುದು ಜಾಗೃತ ರೂಪದಲ್ಲಿ ಪ್ರಕಟವಾಗುವ ದೊಡ್ಡ ಪ್ರಮಾಣದ ಸಮಸ್ಯೆಗಳಲ್ಲ. ಆದರೆ, ಅಪ್ಪನಿಗೆ ಕಸಿವಿಸಿಯುಂಟುಮಾಡುವ, ಗೊತ್ತಿಲ್ಲದೆಯೇ ಹೆಗಲೇರಿ ಅವ್ಯಕ್ತವಾಗಿಯೇ ಮಾಯವಾಗುವ ಕ್ಷಣಭಂಗುರ ಆತಂಕಗಳು. ಇವುಗಳಲ್ಲಿ ಕೆಲವು ನಿರುಪದ್ರವಿಯಾಗಿರಬಹುದು, ಗಂಭೀರ ರೂಪ ಪಡೆದ ಕೆಲವು ವಿಚಾರಗಳಿಗೆ ತಜ್ಞಸಲಹೆಯೂ ಬೇಕಾಗಬಹುದು. ಇದು ಅವುಗಳನ್ನು ವಿಶ್ಲೇಷಿಸಿ ಪರಿಹಾರ ಸೂಚಿಸುವ ‘ಪ್ರಿಸ್ಕಿ›ಪ್ಟಿವ್’ ಲೇಖನವಲ್ಲ. ಬದಲಿಗೆ, ಒಬ್ಬ ಅಪ್ಪನಾಗಿ ನನ್ನನ್ನು ಕಾಡುವ ಈ ಸಂದಿಗ್ಧ, ದ್ವಂದ್ವ, ಇಕ್ಕಟ್ಟು, ಉಭಯಸಂಕಟಗಳು ಎಲ್ಲರನ್ನೂ ಕಾಡುತ್ತವೆಯೋ ಇಲ್ಲವೋ ಎಂದು ಸಮೀಕ್ಷೆಗೆ ಒಡ್ಡುವ ಪ್ರಯತ್ನ. ಅಪ್ಪನಾಗಿ ಈ ಪಟ್ಟಿಯಲ್ಲಿನ ಕೆಲವಾದರೂ ಇಕ್ಕಟ್ಟುಗಳು ನಿಮ್ಮನ್ನೂ ಕಾಡುತ್ತಿರಬಹುದು. ಅಥವ, ಬೇರೆಯದೇ ಸಿಲ್ಲಿ-ಆತಂಕಗಳ/ವಿಚಾರಗಳ ಮತ್ತೊಂದು ಪಟ್ಟಿ ನಿಮ್ಮ ಬಳಿಯಲ್ಲಿ ಇರಬಹುದು. ಅಪ್ಪನೆಂದರೆ ‘ಟೆನ್ಷನ್’ ಎನ್ನುವವರಿಗೆ ಈ ಅಪ್ಪನ ದಿನದ ಸಂದರ್ಭದಲ್ಲಿ ಅಪ್ಪನ ಕೆಲವು ‘ಟೆನ್ಷನ್’ಗಳೂ, ಅವುಗಳಿಗಿರುವ ಸಕಾರಣಗಳೂ ಗೊತ್ತಾಗಲಿ!

(ಲೇಖಕರು ಸಂವಹನ ಸಲಹೆಗಾರರು)

Leave a Reply

Your email address will not be published. Required fields are marked *

Back To Top