Friday, 16th November 2018  

Vijayavani

Breaking News

ಪುರಾಣ, ಇತಿಹಾಸ, ಮನರಂಜನೆ ಮೇಳೈಸಿದ ಅಮರ ಕಥೆಗಳು!

Sunday, 10.06.2018, 3:05 AM       No Comments

ಳೆದ ವಾರ, ಮಕ್ಕಳು ಶಾಲೆಯ ಒಳಗೂ ಹೊರಗೂ ಕಲಿಯಬಹುದಾದ ವಿಷಯಗಳಲ್ಲಿ, ಪಠ್ಯೇತರ ಓದಿನ ಮತ್ತು ಚಟುವಟಿಕೆಗಳ ಮಹತ್ವದ ಬಗ್ಗೆ ಬರೆದಿದ್ದೆ. ಅದೇ ದಿನ ನನ್ನ ಹತ್ತು ವರ್ಷದ ಮಗಳು ಲಾಸ್ಯಳೊಡನೆ ಏನೋ ಹರಟುತ್ತಿರುವಾಗ, ‘‘ಅಪ್ಪ, ನೀನು ತಂದುಕೊಟ್ಟ ‘ಅಮರ ಚಿತ್ರಕಥೆ’ಗಳು ಮತ್ತು ‘ಟಿಂಕಲ್’ಗಳೆಲ್ಲ ಖಾಲಿ ಆಯ್ತು! ಜೊತೆಗೆ, ನನಗೆ ಇತ್ತೀಚೆಗೆ ಕಾಮಿಕ್ ಪುಸ್ತಕಗಳಿಗಿಂತಲೂ, ಮಾಮೂಲಿ (ಚಿತ್ರವಿಲ್ಲದೆ ಬರಹ ಮಾತ್ರವೇ ಇರುವ) ಪುಸ್ತಕಗಳೇ ಹೆಚ್ಚು ಇಷ್ಟವಾಗುತ್ತಿವೆ’ ಎಂದಳು. ಅಯ್ಯೋ! ಈ ಕಾಮಿಕ್​ಗಳ ಜತೆಗಿನ ಐದಾರು ವರ್ಷಗಳ ಅವಳ ಪಯಣ ಮುಗಿದುಹೋಗುತ್ತಿದೆಯಲ್ಲ ಎನ್ನುವ ಬೇಸರದ ಜೊತೆಗೇ, ಕಾಮಿಕ್​ಗಳ ಜತೆಗಿನ ನಮ್ಮ ಬಾಲ್ಯ ನೆನಪಾಯಿತು!

ವ್ಯುತ್ಪತ್ತಿಯಲ್ಲಿ ಕಾಮಿಕ್ ಎಂದರೆ ನಕಲು ಮಾಡುವುದು ಅಥವಾ ಲೇವಡಿ ಎಂದರ್ಥ! ಆದರೆ, ಭಾರತೀಯರ ಮಟ್ಟಿಗೆ ಕಾಮಿಕ್​ಗಳನ್ನು ಈ ಮೂಲಾರ್ಥದಿಂದ ಬಹುದೂರ ಕರೆತಂದದ್ದು, ಅವನ್ನು ಜ್ಞಾನಾರ್ಜನೆಗೆ ಪೂರಕವಾದ ಉಪಕರಣವನ್ನಾಗಿ ಬೆಳೆಸಿದ್ದು ‘ಅಮರ ಚಿತ್ರಕಥೆ’ಗಳ ಸೃಷ್ಟಿಕರ್ತ ಮತ್ತು ಸ್ಥಾಪಕ ಅನಂತ (ಅಂಕಲ್) ಪೈ.

ಕಳೆದೆರಡು ಪೀಳಿಗೆಗಳ ಬಹುಪಾಲು ಮಂದಿ ಪುರಾಣ, ಇತಿಹಾಸಗಳನ್ನು ಅರಗಿಸಿಕೊಂಡದ್ದು, ಸಂದರ್ಭಾನುಸಾರವಾದ ಹಾಸ್ಯಪ್ರಜ್ಞೆ ರೂಢಿಸಿಕೊಂಡದ್ದು, ನೀತಿಶಾಸ್ತ್ರದ ಮೊದಲ ಪಾಠಗಳನ್ನು ಕಲಿತದ್ದು, ಸಾಮಾನ್ಯ ಜ್ಞಾನ ಬೆಳೆಸಿಕೊಂಡದ್ದು ಕಾಮಿಕ್ಸ್ ಅಥವಾ ಚಿತ್ರಕಥೆಗಳಿಂದ. ಟಿವಿ ವ್ಯಾಪಕವಾಗಿರದ ಆ ಕಾಲದಲ್ಲಿ, ಆನಿಮೇಷನ್ ಎನ್ನುವುದು ಲೈನ್ ಡ್ರಾಯಿಂಗ್​ಗೆ ಮಾತ್ರ ಸೀಮಿತವಾಗಿದ್ದ ಹೊತ್ತಿನಲ್ಲಿ, ಇತಿಹಾಸ-ಪುರಾಣಗಳನ್ನು ಸರಳೀಕರಿಸಿ ಹೇಳುವ ಪುಸ್ತಕಗಳು ಸುಲಭವಾಗಿ ಲಭ್ಯವಿರದ ಸಮಯದಲ್ಲಿ… ಸದಭಿರುಚಿಯ ಮನರಂಜನೆಯನ್ನು ಪುರಾಣ, ಇತಿಹಾಸದೊಡನೆ ಹದವಾಗಿ ಬೆರೆಸಿ ಉಣಿಸಿದ ಶ್ರೇಯ ಅನಂತ ಪೈ ಹಾಗೂ ಅಮರ ಚಿತ್ರಕಥೆಗೆ ಸಲ್ಲಬೇಕು. ಈ ಮಾತನ್ನು ಅಂತರ್ಜಾಲ ಚಾಲ್ತಿಗೆ ಬರುವ ಹಿಂದಿನ ಮೂರು ದಶಕಗಳ ಜನರು ಪ್ರಮಾಣಿಸಿ ಹೇಳುತ್ತಾರೆ.

ಅಮರ ಚಿತ್ರಕಥೆ ಮಕ್ಕಳಿಗೆ ಮಾತ್ರ ಪುರಾಣ, ಇತಿಹಾಸಗಳನ್ನು ಕಲಿಸಿದೆ ಎಂದರೆ ಅದು ತಪ್ಪಾಗುತ್ತದೆ! ಅದನ್ನು ನಿಜಕ್ಕೂ ಕಲಿಸಿದ್ದು ಇಂದಿನ ದೊಡ್ಡವರಿಗೆ. ಕಳೆದ ನಾಲ್ಕು ದಶಕಗಳಲ್ಲಿ, ನಮ್ಮ ದೇಶದಲ್ಲಿ ಅದೆಷ್ಟು ಮಂದಿ ರಾಮಾಯಣ, ಮಹಾಭಾರತಗಳನ್ನು ಮೂಲರೂಪದಲ್ಲಿ ಓದಿದ್ದಾರೆ ಎಂದು ಯೋಚಿಸಿದಾಗ, ಇದು ತಾನಾಗಿಯೇ ಗೋಚರಿಸುತ್ತದೆ!

ನಮ್ಮ ದೇಶದ ಬಹುಸಂಖ್ಯಾತರಿಗೆ ಇತಿಹಾಸ, ಪುರಾಣಗಳ ಪರಿಚಯ ಆದದ್ದು ಎರಡು ಮೂಲಗಳಿಂದ. ಓದಲು ಬಲ್ಲ ನಗರ-ಪಟ್ಟಣಗಳ ಮಕ್ಕಳಿಗೆ ಗತಕಾಲದ ನಿಜವಾದ ಪರಿಚಯವಾದದ್ದು ಕಾಮಿಕ್​ಗಳಿಂದ. ಇನ್ನಿತರರ ಮಟ್ಟಿಗೆ ಹೇಳುವುದಾದರೆ, ಅಂದಿನ ಕಾಲದ ದೂರದರ್ಶನದ ರಾಮಾಯಣ, ಮಹಾಭಾರತ, ಭಾರತ್ ಏಕ್ ಖೋಜ್, ಚಾಣಕ್ಯ ಮೊದಲಾದ ಧಾರಾವಾಹಿಗಳಿಂದ. ಪುರಾಣ, ಇತಿಹಾಸಗಳನ್ನು ಓದಿ ಅರ್ಥ ಮಾಡಿಕೊಳ್ಳಲು ಸಮಯ, ವ್ಯವಧಾನಗಳೆರಡೂ ಅತ್ಯವಶ್ಯಕವಾದ್ದರಿಂದ, ಇಂದು ನಮ್ಮ ದೇಶದಲ್ಲಿ ಕೆಲವೇ ಮಂದಿ, ಪುರಾಣ, ಇತಿಹಾಸಗಳನ್ನು ಮೂಲರೂಪದಲ್ಲಿ ಓದಿ ಬಲ್ಲವರಾಗಿದ್ದಾರೆ. ಒಟ್ಟಿನಲ್ಲಿ, ಇಂದಿನ ಸುಶಿಕ್ಷಿತ ನಾಗರಿಕ ಸಮಾಜ ನಮ್ಮ ದೇಶದ ಪುರಾಣ, ಇತಿಹಾಸಗಳ ಬಗ್ಗೆ ಜ್ಞಾನವನ್ನೂ, ತತ್ಪರಿಣಾಮವಾಗಿ ಪ್ರೀತಿ, ಅಭಿಮಾನಗಳನ್ನು ಹೊಂದಿದ್ದರೆ, ಅದಕ್ಕಿರುವ ಪ್ರಮುಖ ಕಾರಣಗಳಲ್ಲಿ ಅಮರ ಚಿತ್ರಕಥೆಯೂ ಪಟ್ಟಿಯಾಗಬೇಕು.

ಅಮರ ಚಿತ್ರಕಥೆ ಪ್ರಭಾವವನ್ನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೋಡಬಹುದು. ನಮ್ಮ ರಾಜರಾಣಿಯರಿಗೆ, ದೇವಾನುದೇವತೆಗಳಿಗೆ, ಋಷಿಮುನಿಗಳೇ ಮೊದಲಾದ ಪೌರಾಣಿಕ ಹಾಗೂ ಐತಿಹಾಸಿಕ ಪಾತ್ರಗಳಿಗೆ ನಾವು ಇಂದು ಆರೋಪಿಸಿರುವ ರೂಪ-ಸ್ವರೂಪಗಳನ್ನು ಕೊಟ್ಟದ್ದು ಇವೇ ಚಿತ್ರಕಥೆಗಳು ಎಂದರೆ ತಪ್ಪಲ್ಲ! ಏಕೆಂದರೆ, ಅಮರ ಚಿತ್ರಕಥೆಯಲ್ಲಿ ಈ ಪಾತ್ರಗಳು ಚಿತ್ರಿತವಾಗುವವರೆಗೆ ನಾವು ದೇವರುಗಳು ಹಾಗೂ ರಾಜರಾಣಿಯರ ರೂಪವನ್ನು ಕಲ್ಪಿಸಿಕೊಂಡಿದ್ದು, ನಾವು ಕೇಳಿ ಹಾಗೂ ಓದಿ ತಿಳಿದಿದ್ದ ವಿವರಣೆಗಳಿಂದ ಮಾತ್ರ. ಕೆಲವು ಚಲನಚಿತ್ರಗಳಲ್ಲಿ ದೇವರುಗಳಿಗೆ ರೂಪ, ಗುಣ, ಸ್ವರೂಪಗಳನ್ನು ಆರೋಪಿಸಲಾಗಿತ್ತಾದರೂ ಚಲನಚಿತ್ರಗಳಲ್ಲಿ ಪಾತ್ರಗಳಿಗಿಂತ ನಟರ ವರ್ಚಸ್ಸೇ ಮಿಗಿಲಾಗಿಬಿಡುವುದರಿಂದ, ಅದನ್ನೂ ಮೀರಿ ದೇವರು-ರಾಜರುಗಳನ್ನು ಕಲ್ಪಿಸಿಕೊಳ್ಳುವುದು ಕಷ್ಟವಾಗುತ್ತಿತ್ತು.

ಪಾತ್ರಗಳೊಂದಿಗೆ ವಿಹಾರ: ಇತಿಹಾಸ-ಪುರಾಣಗಳಿಂದ ಕಲಿಯುವುದಕ್ಕೂ, ಫಿಕ್ಷನ್ ಅಥವಾ ಕಟ್ಟುಕಥೆಗಳಿಂದ ಆಗುವ ಕಲಿಕೆಗೂ ಅಗಾಧವಾದ ವ್ಯತ್ಯಾಸವಿದೆ. ಹಾಗೆಯೇ ಚಿತ್ರಕಥೆಗಳಿಂದ ಅರ್ಥ ಮಾಡಿಕೊಳ್ಳುವುದಕ್ಕೂ ದೃಶ್ಯ, ಶ್ರವ್ಯ ಪರಿಪೂರ್ಣವಾದ ಚಲನಚಿತ್ರ ಅಥವಾ ಪೌರಾಣಿಕ ಧಾರಾವಾಹಿಗಳನ್ನೂ ನೋಡಿ ಅರ್ಥ ಮಾಡಿಕೊಳ್ಳುವುದಕ್ಕೂ ಅಗಾಧವಾದ ವ್ಯತ್ಯಾಸವಿದೆ. ಕಾಮಿಕ್​ಗಳು ನಮ್ಮ ಕಲ್ಪನೆಗೆ ರೆಕ್ಕೆ ಕೊಡುತ್ತವೆ. ಘಟನೆಯ ಬಗ್ಗೆ ನಮಗೆ ಸುಳಿವು ಮಾತ್ರ ಕೊಟ್ಟು ಮಿಕ್ಕದ್ದನ್ನು ನಾವೇ ಊಹಿಸಿಕೊಳ್ಳುವಂತೆ ಪ್ರೇರೇಪಿಸುತ್ತವೆ. ಒಂದು ಫ್ರೇಮ್ಲ್ಲಿರುವ ಚಿತ್ರವನ್ನು ನೋಡಿ ಅಲ್ಲಿನ ಸಂಭಾಷಣೆಯನ್ನು ಅರ್ಥ ಮಾಡಿಕೊಂಡ ಮೇಲೆ, ಮುಂದಿನ ಫ್ರೇಮ್ ತಲುಪುವ ತನಕ- ನಮ್ಮ ಕಲ್ಪನಾಲೋಕದಲ್ಲಿ, ಈ ಸಜೀವ ಪಾತ್ರಗಳೊಂದಿಗೆ ವಿಹರಿಸುತ್ತೇವೆ. ಚಲನಚಿತ್ರ, ಅನಿಮೇಷನ್​ಗಳಂತೆ ಪೂರ್ಣ ಚಿತ್ರ ತಂತಾನೆ ದೊರೆತರೆ ನಮ್ಮ ಕಲ್ಪನೆಗೆ ಅವಕಾಶ ಇರುವುದಿಲ್ಲ. ಕಾಮಿಕ್​ಗಳಲ್ಲಿ ನಮ್ಮ ನಂಬಿಕೆ-ಸಂಶಯಗಳನ್ನು ಪಾತ್ರಗಳೊಳಗೆ ತುಂಬುವುದಕ್ಕೆ ವಿಪುಲ ಅವಕಾಶವಿದೆ. ಹಾಗಾಗಿ, ಈ ‘ರೀಡಿಂಗ್-ಬಿಟ್ವೀನ್-ದಿ-ಫ್ರೇಮ್್ಸ’ ಎನ್ನುವುದು, ಮುಂದೆ ಚಿತ್ರವಿರದ ಪುಸ್ತಕಗಳನ್ನು ಓದುವಾಗಿನ ‘ರೀಡಿಂಗ್-ಬಿಟ್ವೀನ್-ದಿ-ಲೈನ್ಸ್’ಗೆ ಪೂರ್ವಭಾವಿ ತಯಾರಿ, ಮತ್ತು ಕಲ್ಪನಾಶಕ್ತಿಯನ್ನು ಉದ್ದೀಪಿಸುವ ದೃಷ್ಟಿಯಿಂದ ಅತ್ಯಂತ ಪರಿಣಾಮಕಾರಿ.

ಸ್ವಲ್ಪ ಮಟ್ಟಿಗೆ, ಮನೆಗಳಲ್ಲಿದ್ದ ದೇವರ ಚಿತ್ರಪಟಗಳು ದೇವರುಗಳ ನಮ್ಮ ಕಲ್ಪನೆಗೆ ಇಂಬು ಕೊಟ್ಟಿದ್ದವು. ಆದರೆ ಚಿತ್ರಪಟಗಳು ದೇವರುಗಳ ಸ್ಥಾಯಿಭಾವವನ್ನು ಮಾತ್ರ ಬಿಂಬಿಸುತ್ತಿದ್ದವು. ಆದರೆ ಅವರನ್ನು ಪೂರ್ಣಪ್ರಮಾಣದ ಪಾತ್ರಗಳನ್ನಾಗಿ ವಿಕಸನಗೊಳ್ಳುವಂತೆ ಮಾಡಿದ್ದು, ಅವರನ್ನು ಕಥೆ-ಉಪಕಥೆಗಳ ನೈಜ ಸನ್ನಿವೇಶಗಳಲ್ಲಿ ಜನರು ಕಲ್ಪಿಸಿಕೊಳ್ಳಲು ಸಾಧ್ಯವಾಗುವಂತೆ ಮಾಡಿದ್ದು ಅಮರ ಚಿತ್ರಕಥೆಯಂತಹ ಕಾಮಿಕ್​ಗಳು.

ಇದರಿಂದಾಗಿ, ಇತಿಹಾಸ, ಪುರಾಣಗಳ ಪಾತ್ರಗಳು ನಮ್ಮಂತೆಯೇ ಕಷ್ಟ-ಕಾರ್ಪಣ್ಯಗಳನ್ನು ಅನುಭವಿಸುವ, ತಮ್ಮ ಉಳಿವಿಗಾಗಿ ಹೋರಾಡುವ, ಸುಖ-ದುಃಖಗಳಿಗೆ ಸ್ಪಂದಿಸುವ-ಒಟ್ಟಿನಲ್ಲಿ, ಇಂದಿನ ಮನುಕುಲಕ್ಕೆ ನಿಜಕ್ಕೂ ಹತ್ತಿರವಾದ, ನಾವು ಸುಲಭಕ್ಕೆ ಅರ್ಥ ಮಾಡಿಕೊಳ್ಳಬಹುದಾದ ನಮ್ಮನಿಮ್ಮೊಳಗೊಬ್ಬರಂತಹ ಪಾತ್ರಗಳಾದದ್ದು ಕಾಮಿಕ್​ಗಳ ದೆಸೆಯಿಂದಲೇ. ಆರಾಧನಾಭಾವ ಹಾಗೂ ವೈಭವೋತ್ಪ್ರೇಕ್ಷೆಗಳನ್ನಷ್ಟೇ ಟ್ರಿಗರ್ ಮಾಡುತ್ತಿದ್ದ ಇತಿಹಾಸ, ಪುರಾಣಗಳ ಪಾತ್ರಗಳಿಗೆ ಒಂದೇ ಪಡಿಯಚ್ಚಿನ ಒಂದೇ ತೆರನಾದ ಭಾವಗಳಿಂದ ಬಿಡುಗಡೆ ಕೊಟ್ಟದ್ದರಿಂದ, ಚಿತ್ರಕಥೆಗಳಲ್ಲಿ ಅವಕ್ಕೆ ನೈಜತೆಯ ಸ್ವರೂಪ ದೊರೆಯಿತು.

ಅಂಕಲ್ ಪೈ ಮಾತು: ‘ನಮಗೆ ನಮ್ಮ ಇತಿಹಾಸದ ಜೊತೆಗೆ ಕಂಟಿನ್ಯುಟಿ (ಮುಂದುವರಿಕೆ) ಇರದ ಹೊರತು, ಪ್ರಸಕ್ತ ವಿದ್ಯಮಾನಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ನಾವು ನಡೆದಿರುವುದೆಲ್ಲವನ್ನೂ ಒಪ್ಪುತ್ತೇವೆಯೋ ಇಲ್ಲವೋ ಎನ್ನುವುದು ಬೇರೆಯ ಮಾತು. ಅದರೆ, ಇತಿಹಾಸದ ಅರಿವು ಮುಖ್ಯ’ ಎಂದು ಅಂಕಲ್ ಪೈ ಹೇಳಿದ್ದರು. ಅಂತೆಯೇ, ಅವರು ನಮ್ಮ ಇತಿಹಾಸ ಮತ್ತು ಪುರಾಣವನ್ನು ನಮಗೆ ಪರಿಚಯಿಸಿದರು. ತನ್ಮೂಲಕ ಇತಿಹಾಸದ ಮುಂದುವರಿಕೆಗೆ ಅತಿ ಮುಖ್ಯ ಕೊಂಡಿಯಾದರು.

ಪಠ್ಯಪುಸ್ತಕಗಳು ಮಾಡಲಾರದ್ದನ್ನು ಅಮರ ಚಿತ್ರಕಥೆ ಮಾಡಿ ತೋರಿಸಿತು. ಮಕ್ಕಳ ಚಿತ್ರಗಳು ಹಾಗೂ ಅನಿಮೇಷನ್​ಗಳು ದೊಡ್ಡ ಉದ್ಯಮವಾಗಿರುವ ಇಂದಿನ ಕಾಲದಲ್ಲಿ, ಮಕ್ಕಳ ಚಿತ್ರ ತಯಾರಕರಿಗೆ ವಿಶ್ವಾಸ ಬಂದದ್ದೇ ಅಮರ ಚಿತ್ರಕಥೆಯ ಯಶಸ್ಸಿನಿಂದ ಎಂದರೆ ಉತ್ಪ್ರೇಕ್ಷೆಯಲ್ಲವೇನೋ. ಮಾತ್ರವಲ್ಲ, ಇಂದಿನ ಬಹುತೇಕ ಪೌರಾಣಿಕ ಹಾಗೂ ಐತಿಹಾಸಿಕ ಅನಿಮೇಷನ್​ಗಳು ಅಮರ ಚಿತ್ರಕಥೆಯಲ್ಲಿ ನಾವು ಕಂಡ ಪಾತ್ರಗಳ ವಿಸõತ ಅವತರಣಿಕೆಗಳು.

ಹಾಗಾಗಿಯೇ, ಅಭಿಮನ್ಯು ಚಕ್ರವ್ಯೂಹದೊಳಗೆ ಹೋದ ದೃಶ್ಯವನ್ನು ಕಲ್ಪಿಸಿಕೊಂಡರೆ, ಅಮರ ಚಿತ್ರಕಥೆಯಲ್ಲಿನ ಅಭಿಮನ್ಯುವಿನ ವೀರಾವೇಶವೇ ಮನಸ್ಸಿನಲ್ಲಿ ನಿಂತಿರುವುದು. ಭೀಮನ ಮೀಸೆ, ನೀಲಿ ಬಣ್ಣದ ಅರ್ಜುನ ಹಾಗೂ ಕೃಷ್ಣನ ಪಾತ್ರಗಳು, ವಸಿಷ್ಠ-ವಿಶ್ವಾಮಿತ್ರರ ಮುಖದಲ್ಲಿನ ತೇಜಸ್ಸುಗಳೆಲ್ಲಕ್ಕೂ ಅಮರ ಚಿತ್ರಕಥೆಯದ್ದೇ ಮೇಲ್ಪಂಕ್ತಿ.

ಅಮೋಘ ಪಯಣ: 1967ನೇ ಇಸವಿಯಲ್ಲಿ ಟಿವಿ ಕಾರ್ಯಕ್ರಮವೊಂದರಲ್ಲಿ, ‘ರಾಮಾಯಣದಲ್ಲಿ ರಾಮನ ತಾಯಿ ಯಾರು?’ ಎಂಬ ಪ್ರಶ್ನೆಗೆ ಸ್ಪರ್ಧಿಯೊಬ್ಬರು ಉತ್ತರಿಸದಿದ್ದಾಗ ಅನಂತ ಪೈ ತುಂಬ ನೊಂದುಕೊಂಡರಂತೆ. ಇಂತಹ ಸುಲಭವಾದ ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದರೆ ಅದು ಜನರ ತಪ್ಪಲ್ಲ, ಬದಲಿಗೆ, ನಮ್ಮ ಇತಿಹಾಸ, ಪುರಾಣಗಳನ್ನು ಜನರವರೆಗೆ ತಲುಪಿಸುವ ಸಾಧನಗಳಿಲ್ಲದಿರುವುದೇ ಕಾರಣ ಎಂದು ನಿರ್ಧರಿಸಿದರು. ತಕ್ಷಣವೇ ಕೆಲಸಕ್ಕೆ ರಾಜೀನಾಮೆ ಕೊಟ್ಟು ಇತಿಹಾಸ, ಪುರಾಣದ ಕ್ಲಿಷ್ಟ ಕಥೆಗಳನ್ನು ಸರಳ ಚಿತ್ರಕಥೆಗಳನ್ನಾಗಿ ಮರುಸೃಷ್ಟಿಸುವ ಕೆಲಸಕ್ಕೆ ತೊಡಗಿದರು. ಅಲ್ಲಿಂದ ಆರಂಭವಾಯಿತು ಸಾವಿರಾರು ಶೀರ್ಷಿಕೆಗಳುಳ್ಳ, ಇಂದು ಒಟ್ಟು ಇಪ್ಪತ್ತು ಭಾಷೆಗಳಲ್ಲಿ ಸುಮಾರು ಹತ್ತು ಕೋಟಿ ಪ್ರತಿಗಳನ್ನು ಮಾರಾಟ ಮಾಡಿರುವ ಅಮರ ಚಿತ್ರಕಥೆ ಮತ್ತು ಟಿಂಕಲ್​ಗಳ ಅಮೋಘ ಪಯಣ.

ಪುಸ್ತಕ ಪ್ರಕಟಣೆ ಮತ್ತು ಮಾರಾಟವನ್ನು ಉದ್ಯಮವನ್ನಾಗಿ ನೋಡದೆ, ಜನರಿಗೆ ಒಳ್ಳೆಯ ಉತ್ಪನ್ನವನ್ನು ತಲುಪಿಸುವ ಸದುದ್ದೇಶದಿಂದ ಆರಂಭಗೊಂಡದ್ದು ಅಮರ ಚಿತ್ರಕಥೆಯ ಯಶಸ್ಸಿಗೆ ಮೂಲಕಾರಣ. ಜನರ ಮನಸ್ಸಿನ ತುಡಿತವನ್ನೇ ಬಂಡವಾಳವಾಗಿಸಿಕೊಂಡು, ಮಾರುಕಟ್ಟೆಯಲ್ಲಿ ಇರುವ ಇತರ ಉತ್ಪನ್ನಗಳಿಗಿಂತ ಭಿನ್ನವಾದುದನ್ನು ಸದ್ಭಾವನೆಯಿಂದ ಕೊಟ್ಟವರು ಯಶಸ್ವಿಯಾಗುತ್ತಾರೆ. ಇಲ್ಲಿ ಉತ್ಪನ್ನದಷ್ಟೇ ಸದ್ಭಾವನೆಯೂ ಮುಖ್ಯ.

ಮೊತ್ತಮೊದಲಬಾರಿಗೆ ಮಕ್ಕಳಿಗೆ ಸಚಿತ್ರವಾದ ಸಂಪೂರ್ಣ ಮನರಂಜನೆಯನ್ನು ತಂದಿತ್ತವರು ಅಂಕಲ್ ಪೈ. ಟಿಂಕಲ್​ಗೆ ಸಮನಾದ ಮಕ್ಕಳ ನಿಯತಕಾಲಿಕ ಬಹುಶಃ ವಿಶ್ವದಲ್ಲೇ ಇಲ್ಲ. ಟಿಂಕಲ್​ನ ವಿಶೇಷತೆಯೆಂದರೆ, ಮನರಂಜನೆಗಿರುವಷ್ಟೇ ಮಹತ್ವವನ್ನು ಮಕ್ಕಳು ಕಲಿಯಬೇಕಾದ ಮೌಲ್ಯಗಳಿಗೂ ಕೊಟ್ಟದ್ದು.

ಒಂದರ್ಥದಲ್ಲಿ, ಇವರು ಸೃಷ್ಟಿಸಿದ ಪಾತ್ರಗಳು ನಮ್ಮ ಸುತ್ತಲಿನ ಜನರ ಮತ್ತು ಸಮಾಜದ ಬಿಂಬವಾಗಿವೆ. ಮಾತ್ರವಲ್ಲ, ಬುದ್ಧಿವಂತ ಕಾಲಿಯ, ಚತುರ ತಂತ್ರಿ, ಪೆದ್ದ ಸುಪ್ಪಂಡಿ, ಹೆದರುಪುಕ್ಕಲ ಶಂಭುಗಳು ನಮ್ಮೊಳಗೇ ಅಡಗಿರುವ ಬೇರೆಬೇರೆ ಭಾವಗಳ ಅಭಿವ್ಯಕ್ತಿ. ಉದಾಹರಣೆಗೆ, ಸುಪ್ಪಂಡಿ ಎನ್ನುವುದು ಕೇವಲ ಪಾತ್ರವಾಗದೆ, ಪೆದ್ದುತನಕ್ಕೆ ಪರ್ಯಾಯನಾಮವಾಗುವಂತೆ ಬೆಳೆಸಿದರು. ಹೇಳಿದ ಕೆಲಸ ಸರಿಯಾಗಿ ಮಾಡಲಾರದವನನ್ನು ‘ಯಾಕೆ ಸುಪ್ಪಂಡಿ ತರಹ ಆಡ್ತೀಯ?’ ಎಂದರೆ, ಕಳೆದ ಮೂರು ದಶಕಗಳಲ್ಲಿ ಒಂದಾದರೂ ಟಿಂಕಲ್ ಓದಿದ ಯಾರೂ ಸುಪ್ಪಂಡಿ ಯಾರು ಎಂದು ಕೇಳುವುದಿಲ್ಲ. ತನ್ನ ಬಲೆಯಲ್ಲಿ ತಾನೇ ಸಿಲುಕುವ ಶಿಕಾರಿ ಶಂಭುವನ್ನು ಆರಂಭಶೂರತ್ವಕ್ಕೆ ಉಪಮೆಯಾಗಿ ಬಳಸಿದರೆ, ಯಾರೂ ಹುಬ್ಬೇರಿಸುವುದಿಲ್ಲ. ಹೀಗೆ, ತಂತ್ರಿಯ ಕೃತ್ರಿಮ, ಕಾಲಿಯ ಕಾಗೆಯ ಬುದ್ಧಿವಂತಿಕೆ, ಎಲ್ಲವನ್ನೂ ಮುಗ್ಧ ಮಕ್ಕಳ ಮನಸ್ಸಿನಲ್ಲಿ ಅಚ್ಚೊತ್ತುವಂತೆ ಹೇಳಿದರು.

ನಮ್ಮ ದೇಶದ ಕಾಮಿಕ್​ಗಳು ಪ್ರತಿಪಾದಿಸಿರುವ ಸಂಸ್ಕೃತಿಗೂ ವಿದೇಶಿ ಕಾಮಿಕ್​ಗಳು ಪ್ರತಿಪಾದಿಸಿರುವ ಪರಂಪರೆಗೂ ಅಗಾಧ ವ್ಯತ್ಯಾಸವಿದೆ. ನಮ್ಮ ಕಾಮಿಕ್​ಗಳಲ್ಲಿನ ಪಾತ್ರಗಳಲ್ಲಿ ಮುಗ್ಧತೆಯಿದೆ. ನಮ್ಮ ಸೂಪರ್​ಹೀರೋಗಳ ವಿಷಯದಲ್ಲಿ ಸೂಪರ್​ವ್ಯಾನ್, ಸ್ಪೈಡರ್​ವ್ಯಾನ್​ಗಳ ವಿಷಯದಲ್ಲಿರುವಂತೆ ಅತ್ಯುತ್ಪ್ರೇಕ್ಷೆ ಸಲ್ಲ. ಮಾತ್ರವಲ್ಲ, ನಮ್ಮ ಚಿತ್ರಕಥೆಗಳಿಗೆ ಲೈಂಗಿಕತೆ ರ್ವ್ಯಜ. ಸದಾ ಸದಭಿರುಚಿಯೇ ಪ್ರಾಮುಖ್ಯ. ಸಾಧಾರಣ ಜನರನ್ನು ಅಸಾಧಾರಣ ಸನ್ನಿವೇಶಗಳಲ್ಲಿ ಇಟ್ಟು ನೋಡಿದ, ನೈಜ ಸಂದರ್ಭಗಳ ಸಾಧ್ಯತೆಗಳನ್ನು ಹಿಗ್ಗಿಸಿ ನೋಡಿದ ಶ್ರೇಯ ಭಾರತೀಯ ಕಾಮಿಕ್​ಗಳಿಗೆ, ಅದರಲ್ಲೂ ಅಮರ ಚಿತ್ರಕಥೆಗೆ ಸಲ್ಲಬೇಕು. ಅಮರ ಚಿತ್ರಕಥೆಯ ಅತಿ ದೊಡ್ಡ ಸಾಧನೆಯೆಂದರೆ, ಮಕ್ಕಳಲ್ಲಿ (ಹಾಗೂ ದೊಡ್ಡವರಲ್ಲಿ) ನಮ್ಮ ಸಂಸ್ಕೃತಿಯ ಬಗ್ಗೆ ಅಭಿಮಾನ ಉಕ್ಕುವಂತೆ ಮಾಡಿದ್ದು. ಮಕ್ಕಳ ಮನರಂಜನೆಗೆ ಹೊಸ ಭಾಷ್ಯ ಬರೆದದ್ದು. ನಾಲ್ಕೈದು ದಶಕಗಳ ಕಾಲ ಭಾರತೀಯ ಸಂಸ್ಕೃತಿಯ ಹರಿಕಾರರಾದದ್ದು.

ನನ್ನ ಮಗಳು ಓದಲೆಂದು, ಅವಳು ಪೂರ್ಣವಾಕ್ಯಗಳನ್ನು ಓದಲು ಕಲಿತ ಸ್ವಲ್ಪ ದಿನಕ್ಕೇ ಅಮರ ಚಿತ್ರಕಥೆ ಆವರೆಗೂ ಪ್ರಕಟಿಸಿದ್ದ ಎಲ್ಲ ಪುಸ್ತಕಗಳ ‘ಕಂಪ್ಲೀಟ್ ಕಲೆಕ್ಷನ್’ ಮತ್ತು ಅವರದೇ ಆದ ಟಿಂಕಲ್​ನ ಬಹುತೇಕ ಎಲ್ಲ ಕಲೆಕ್ಷನ್​ಗಳನ್ನೂ ಕೊಂಡಿದ್ದೆ. ಅವಳು ಅವೆಲ್ಲವನ್ನೂ ಓದಿದ್ದಾಯಿತು ಎಂದಾಗ ಮನಸ್ಸಿನಲ್ಲಿ ಮಿಶ್ರಭಾವ ಮೂಡಿದ್ದು- ಈ ಭಾರತೀಯ ಕಾಮಿಕ್ ಪ್ರಪಂಚದ ಮೊದಲ ನಂಟು ಆಕೆಯ ಪಾಲಿಗೆ ಮುಗಿಯಿತಲ್ಲ ಎಂದು! ‘ಹೋಗಲಿ ಬಿಡು, ಇದನ್ನೆಲ್ಲ ನಾನೇ ಇನ್ನೊಂದು ಬಾರಿ ಓದುತ್ತೇನೆ’ ಎಂದು ಅವಳನ್ನು ಚಿತ್ರಗಳಿಲ್ಲದ ಬರೇ ಅಕ್ಷರಗಳೇ ಎಲ್ಲವಾದ ಮತ್ತೊಂದು ಅದ್ಭುತ ಪ್ರಪಂಚಕ್ಕೆ ಸ್ವಾಗತಿಸಿದೆ!

(ಲೇಖಕರು ಸಂವಹನ ಸಲಹೆಗಾರರು)

Leave a Reply

Your email address will not be published. Required fields are marked *

Back To Top