Thursday, 15th November 2018  

Vijayavani

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಶಾಸಕರ ಲಾಬಿ - ತುಕಾರಾಂ ಸೇರಿದಂತೆ ಐವರ ಪೈಪೋಟಿ        RSS ಬೈಠಕ್​​ನಲ್ಲಿ ರಾಮಮಂದಿರ ಪ್ರತಿಧ್ವನಿ-ಶಬರಿಮಲೆ ಹೋರಾಟದಿಂದ ಹಿಂದೆ ಸರಿಯಲ್ಲ-ಷಾ ಸಮ್ಮುಖದಲ್ಲಿ ನಿರ್ಧಾರ        KRS ಬಳಿ 125 ಅಡಿ ಎತ್ತರದ ಕಾವೇರಿ ಮಾತೆ ಸ್ಟ್ಯಾಚ್ಯೂ ನಿರ್ಧಾರ-ಡಿಕೆಶಿ ನೇತೃತ್ವದ ಸಮಿತಿಯ ತೀರ್ಮಾನ        ರವಿ ಕೊಲೆ ಹಿಂದೆ ಸೈಲೆಂಟ್ ಸುನಿಲನ ನೆರಳು - ತುಮಕೂರು ಡಾಬಾದಲ್ಲೇ ನಡೆದಿತ್ತು ಹಂತಕ ಮೀಟಿಂಗ್        ತಮಿಳುನಾಡಿನಲ್ಲಿ ಗಜ ಆರ್ಭಟ-ಸಮುದ್ರದಲ್ಲಿ ಅಲೆಗಳ ಅಬ್ಬರ-ಬೆಂಗಳೂರಿನ ಹಲವೆಡೆ ಮಳೆ ಸಾಧ್ಯತೆ        ದೀಪ್​-ವೀರ್​​ ಕಲ್ಯಾಣೋತ್ಸವ-ನಿನ್ನೆ ಕೊಂಕಣಿ, ಇಂದು ಸಿಂಧಿ ಸ್ಟೈಲ್​ ಕಲ್ಯಾಣ-ಇಟಲಿಯಲ್ಲಿ ಅದ್ದೂರಿ ವಿವಾಹ       
Breaking News

ಮೆಟ್ರೋ ಡಬ್ಬಿಯೊಳಗೊಂದು ಅದ್ಭುತ ಪ್ರಪಂಚ!

Sunday, 08.07.2018, 3:05 AM       No Comments

ರಂಭಗೊಂಡ ಕೆಲವೇ ವರ್ಷಗಳಲ್ಲಿ ಬೆಂಗಳೂರಿನ ಜೀವನಾಡಿಯಾಗಿಬಿಟ್ಟಿರುವ ನಮ್ಮ ಮೆಟ್ರೋ ರೈಲು ಹಲವಾರು ಕಾರಣಗಳಿಗೆ ಈಚೆಗೆ ಸುದ್ದಿಯಲ್ಲಿದೆ. ಮುಂದಿನ ಹಂತದ ವಿಸ್ತರಣೆ ಹತ್ತು ಕಿಲೋಮೀಟರ್ ಕಡಿತಗೊಂಡಿರುವುದು, ಕೆಲವೆಡೆ ಮೂರು ಬೋಗಿ ಇರುವೆಡೆ ಆರು ಬೋಗಿ ಅಳವಡಿಸಲಾಗಿರುವುದು, ಒಂದೇ ದಿನದಲ್ಲಿ ಒಂದೂವರೆ ಕೋಟಿ ರೂ.ಗಳಷ್ಟು ಆದಾಯ ಗಳಿಸಿದ್ದು, ಹೀಗೆ ಮೆಟ್ರೋ ಬಗ್ಗೆ ಸುದ್ದಿಯನ್ನು ಕೇಳುತ್ತಲೇ ಇರುತ್ತೇವೆ. ಮೆಟ್ರೋ ಹಲವು ಹಂತಗಳಿಗೆ ವಿಸ್ತರಣೆಗೊಳ್ಳುತ್ತಲೇ ಬೆಂಗಳೂರಿನ ಪ್ರಾಥಮಿಕ ಆದ್ಯತೆಯ ಸಾರ್ವಜನಿಕ ಸಾರಿಗೆಯಾಗಿ, ನಗರ ಎದುರಿಸುತ್ತಿರುವ ಮಾಲಿನ್ಯ ಹಾಗೂ ವಾಹನದಟ್ಟಣೆಯ ಸಮಸ್ಯೆಗಳನ್ನು ಬಹುಮಟ್ಟಿಗೆ ನೀಗಿಸುವ ಆಸೆ ಹುಟ್ಟಿಸಿದೆ.

ಆದರೆ ನಾನಿಂದು ಬರೆಯ ಹೊರಟಿರುವುದು ಮೆಟ್ರೋ ಬಗೆಗಿನ ಈ ಯಾವ ‘ಗಂಭೀರ’ ವಿಷಯ, ಆಯಾಮಗಳ ಬಗ್ಗೆ ಅಲ್ಲ. ಬದಲಿಗೆ ಒಂದು ವರ್ಷ ಮೆಟ್ರೋದ ಸಾಮಾನ್ಯ ಪ್ರಯಾಣಿಕನಾಗಿ, ನಾನು ಕಂಡ ವೈವಿಧ್ಯಮಯ ಮೆಟ್ರೋ ‘ಪಾತ್ರಗಳ’ ಬಗ್ಗೆ. ನಿಜ. ನೋಡುವ ಕಣ್ಣಿದ್ದರೆ, ಕೇಳುವ ಕಿವಿಯಿದ್ದರೆ, ಗಮನಿಸುವ ಮನಃಸ್ಥಿತಿಯಿದ್ದರೆ ಬೇರೆ ಬೇರೆ ಥರದ ವ್ಯಕ್ತಿಗಳು ಎಲ್ಲೆಡೆಯೂ ನಮಗೆ ಕಾಣಸಿಗುತ್ತಾರೆ. ಮಾರುಕಟ್ಟೆಗಳಲ್ಲಿ, ರಸ್ತೆ ಬದಿಗಳಲ್ಲಿ, ಆಫೀಸುಗಳಲ್ಲಿ, ಮಾಲ್​ನಲ್ಲಿ, ಸ್ನೇಹಕೂಟಗಳಲ್ಲಿ, ಎಲ್ಲೆಂದರಲ್ಲಿ! ಆದರೆ ಮೆಟ್ರೋ ವೈವಿಧ್ಯಮಯ ವ್ಯಕ್ತಿಗಳನ್ನು ಒಂದು ಡಬ್ಬದಲ್ಲಿ ಸೇರಿಸಿ ಪ್ರಕಾಶಮಾನವಾದ ಬೆಳಕಿನಲ್ಲಿ ಅವರ ಸಂಪೂರ್ಣ ರೂಪ ನಮಗೆ ಕಾಣುವಂತಾಗಿಸುವುದರಿಂದ, ಎಷ್ಟೋ ಜನ ನಮಗೆ ಹತ್ತಿರದಲ್ಲಿಯೇ ಇದ್ದು ನಾವು ಅವರನ್ನು ಗಮನಿಸುವ ಅವಕಾಶ ದೊರೆಯುವುದರಿಂದ ಮೆಟ್ರೋ ಒದಗಿಸುವ ಜನಗಳ ದರ್ಶನವೇ ಬೇರೆ ರೀತಿಯದು ಎನಿಸುತ್ತದೆ. ಇಲ್ಲಿ ವ್ಯಕ್ತಿಗಳು ಅವರ ಜೀವನದಲ್ಲಿ ಇರುವುದಕ್ಕಿಂತ ಭಿನ್ನವಲ್ಲದಿದ್ದರೂ, ಈ ಚಿಕ್ಕ ಮೈಕ್ರೋಕಾಸಮ್ಲ್ಲಿ ಅವರ ವರ್ತನೆಗಳು ಆಂಪ್ಲಿಫೈ ಆಗುವುದರಿಂದ/ಉತ್ಪ್ರೇಕ್ಷಿತ ರೂಪ ಪಡೆಯುವುದರಿಂದ ಅದರಲ್ಲಿನ ಮಜ ಮತ್ತು ಒಳನೋಟಗಳು ಬೇರೆಯದೇ ರೀತಿಯಲ್ಲಿರುತ್ತವೆ.

ನನ್ನೊಳು ನಾನು: ನೀವು ಒಮ್ಮೆಯಾದರೂ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಿದ್ದರೆ ನಿಮಗೆ ಈ ವ್ಯಕ್ತಿಯ ಪರಿಚಯ ಇರಲೇಬೇಕು. ಬೆನ್ನಿಗೆ ಇರಬೇಕಾದ ಬ್ಯಾಗನ್ನು ಇತರರಿಗೆ ತೊಂದರೆ ಆಗದಿರಲಿ ಎಂದು ಹಿಂದುಮುಂದಾಗಿ ಮುಂದಕ್ಕೆ ಹಾಕಿಕೊಂಡು ಕಿವಿಗೆ ಇಯರ್ ಪ್ಲಗ್ ಸಿಕ್ಕಿಸಿಕೊಂಡ, ಮೊಬೈಲ್​ನಲ್ಲಿ ಮುಖ ಹುದುಗಿಸಿಕೊಂಡ, ನಾನು ಏನನ್ನೂ ಕೇಳಿಸಿಕೊಳ್ಳುವುದಿಲ್ಲ ‘ಮೈ ಲೈಫ್, ಮೈ ರೂಲ್ಸ್’ ಎಂದು ಸ್ಪಷ್ಟವಾಗಿ ಮುಖದ ಮೇಲೆ ಬರೆದುಕೊಂಡ ವ್ಯಕ್ತಿ. ಇಲ್ಲಿ ಮುಖಕ್ಕಿಂತಲೂ ಮುಖ್ಯವಾದ್ದು ಬಂದ್ ಆಗಿರುವ ಕಿವಿ ಮತ್ತು ನೇರವಾಗಿ ಏನನ್ನೂ ನೋಡದ ಕಣ್ಣು. ಒಂದು ಬಗೆಯ ಧ್ಯಾನಸ್ಥ ಮುಖವನ್ನು ಹೊತ್ತು, ಯಾರೊಡನೆಯೂ ಅಪ್ಪಿತಪ್ಪಿಯೂ ಐ ಕಾಂಟ್ಯಾಕ್ಟ್ ಆಗದಂತೆ ನೋಡಿಕೊಳ್ಳುವ ಅಭ್ಯಾಸ ರೂಢಿಸಿಕೊಂಡ ಯುವಕ ಅಥವಾ ಯುವತಿ ನಿಮಗೆ ಮೆಟ್ರೋ ರೈಲಿನಲ್ಲಿ ಸಿಗುವ ಅತ್ಯಂತ ಪರಿಚಿತ ಮುಖ. ಈ ವ್ಯಕ್ತಿಗೆ ಸಂಭಾಷಣೆ ಬೇಡ ಎನ್ನುವುದನ್ನು ಇಯರ್​ಫೋನ್ ಸಾರಿ ಹೇಳುತ್ತಿದ್ದರೆ, ಆ ಇಯರ್​ಫೋನ್ ಕಿವಿಯೊಳಗೆ ಏನನ್ನು ಹೊರಸೂಸುತ್ತಿದೆಯೋ ಅದನ್ನು ಮುಖಭಾವ ಒಂದು ಚೂರೂ ಬಿಟ್ಟುಕೊಡಕೂಡದು ಎಂಬ ದೃಢನಿರ್ಧಾರವೂ ಚರ್ಯುಯಲ್ಲಿ, ಹಾವಭಾವಗಳಲ್ಲಿ (ಅಥವಾ ಅದರ ಗೈರಿನಲ್ಲಿ) ನಿಮಗೆ ಎದ್ದು ಕಾಣುತ್ತಿರುತ್ತದೆ. ಈ ವ್ಯಕ್ತಿ ಇಂದಿನ ‘ನಾನು ಏನನ್ನೂ ಕೇಳಬೇಕಾಗಿಲ್ಲ; ಮತ್ತು ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ’ ಎನ್ನುವ ಪೀಳಿಗೆಗಳ ಪ್ರತಿನಿಧಿ!

ನಿದ್ರಾಸಂಚಾರಿ: ಎರಡನೆಯ ವ್ಯಕ್ತಿಯನ್ನು ನಿದ್ರಾದೇವತೆ ಆವರಿಸಿಕೊಂಡಿದ್ದಾಳೆ. ಭಾರದ ರೆಪ್ಪೆಯ, ಕಂಡ ಕಡೆ ಕತ್ತು ವಾಲಿಸುವ ಈ ವ್ಯಕ್ತಿ, ತಲೆಯ ಮೇಲಿನ ಹ್ಯಾಂಡಲ್ ಹಿಡಿದುಕೊಂಡು, ತನ್ನದೇ ಭುಜವನ್ನು ಆಸರೆಯಾಗಿಸಿಕೊಂಡು ನಿಂತೇ ನಿದ್ದೆ ಮಾಡುವರು! ಇನ್ನು ಸೀಟು ಸಿಕ್ಕಿದರಂತೂ ಮುಗಿದೇ ಹೋಯಿತು. ಒಂದೊಂದು ಸ್ಟೇಷನ್ ಬಂದಾಗಲೂ ಪಕ್ಕದವರು ಇವರ ಬೀಳುತ್ತಿರುವ ತಲೆಯನ್ನು ಸರಿ ಮಾಡಬೇಕು. ನಮ್ಮದು ನಿದ್ದೆಗೆಟ್ಟ ಸುಶಿಕ್ಷಿತ ನಾಗರಿಕ ಸಮಾಜ. ರಾತ್ರಿಯೆಲ್ಲ ಘನತರವಾದ್ದೇನನ್ನೋ ಮಾಡುತ್ತಿದ್ದೇವೆಂಬ ಭ್ರಮೆಯಲ್ಲಿ ಸ್ಮಾರ್ಟ್​ಫೋನ್​ಗಳೊಳಗೆ ನುಗ್ಗಿ ಹೊರಬರಲಾರದೆ ಒದ್ದಾಡುತ್ತಿರುವ ಈ ವರ್ಗದ ಪ್ರತಿನಿಧಿಗಳು ಮತ್ತು ಅವರ ಇನ್ಸೋಮ್ನಿಯ ಮೆಟ್ರೋದಲ್ಲಿ ಪರಿಹಾರಗೊಳ್ಳುತ್ತಿರುವುದು ನಮಗೆ ನಿತ್ಯವೂ ನೋಡಲು ಲಭ್ಯ.

ಮುಟ್ಟಿದರೆ ತಟ್ಟಿಬಿಡ್ತೀನಿ: ಒರಟುತನದ ಪ್ರದರ್ಶನಕ್ಕೆ ಸಾರ್ವಜನಿಕ ಸ್ಥಳಗಳನ್ನೇ ಮೀಸಲಿಟ್ಟುಕೊಂಡ ಇಂಥವರು ನಿಮಗೆ ಮೆಟ್ರೋಗಳಲ್ಲೂ ಸುಲಭವಾಗಿ ಕಾಣಸಿಗುತ್ತಾರೆ. ಮುಖದಲ್ಲಿ ಕೋಪವನ್ನು ತೋರುತ್ತ ವಿನಾಕಾರಣ ಅದೇನೋ ತಮಗೆ ಅನ್ಯಾಯವಾಗಿದೆ ಎಂಬಂಥ ಧೋರಣೆ ಪ್ರದರ್ಶಿಸುತ್ತಿರುತ್ತಾರೆ. ಸ್ವಲ್ಪ ಮೊಣಕೈ ತಾಗಿದರೂ ಸಾಕು, ಅದರ ದುಪ್ಪಟ್ಟು ಬಲದಲ್ಲಿ ನಿಮಗೆ ಅವರ ಮೊಣಕೈಯಿಂದ ತಿವಿದೇ ಬಿಡುತ್ತಾರೆ. ನಿಮ್ಮ ಬ್ಯಾಗ್ ಅವರಿಗೇನಾದರೂ ಸ್ವಲ್ಪ ತೊಂದರೆ ಮಾಡಿತೆಂದಿಟ್ಟುಕೊಳ್ಳಿ, ಅದನ್ನು ಇನ್ನೇನು ಕಿತ್ತೊಗೆದೇ ಬಿಡುತ್ತಾರೆ. ಈ ಟಫ್ ಎಕ್ಸ್​ಟೀರಿಯರ್ ಮತ್ತು ಟಫ್ ಪೋಸ್ಚರಿಂಗ್ ಅದ್ಯಾವ ಕೀಳರಿಮೆಯ, ಅದ್ಯಾವ ಇನ್ಸೆಕ್ಯೂರಿಟಿಯ ಪರಿಣಾಮವೋ ಗೊತ್ತಿಲ್ಲ. ಆದರೆ ಒಂದು ಬೋಗಿಯಲ್ಲಿ ಇಂಥವರು ಕನಿಷ್ಠ ಒಬ್ಬರಾದರೂ ಇರುತ್ತಾರೆ ಮತ್ತು ಇಂಥ ಜನನಿಬಿಡವಾದ ನಿಲ್ಲಲೇ ಜಾಗವಿಲ್ಲದ ಬೋಗಿಗಳಲ್ಲಿಯೂ ಯಾರೊಬ್ಬರೂ ತನ್ನನ್ನು ಸೋಕಿಸಕೂಡದು ಮತ್ತು ಯಾವುದೇ ರೀತಿಯಲ್ಲಿ ತಮಗೆ ಕಿರಿಕಿರಿ ಉಂಟುಮಾಡಬಾರದು. ಮಾಡಿದರೆ ಅವರ ಗತಿ ಅಷ್ಟೇ! ಎಂಬಂಥ ಸಿಟ್ಟಿನ ನಿಲುವಿನಲ್ಲಿರುವ ಈ ವ್ಯಕ್ತಿಯ ಬಲ್ಲಿರಾ ಬಲ್ಲಿರಾ?

ನೆಟ್ಟ ನೋಟ: ಇವರು ಮಾತನಾಡುವುದಿಲ್ಲ. ನಗುವುದಿಲ್ಲ. ಮುಖದಲ್ಲಿ ಯಾವ ಭಾವವನ್ನೂ ತೋರುವುದಿಲ್ಲ. ಆದರೆ ದುರುದುರು ನಿಮ್ಮನ್ನೇ ನೋಡುತ್ತಿರುತ್ತಾರೆ. ಇಂಥವರಿಗೆ ಸಾಮಾನ್ಯವಾಗಿ ಒಬ್ಬರನ್ನು ಗುರಿಯಾಗಿಟ್ಟುಕೊಂಡು ಅವರನ್ನೇ ನೋಡುತ್ತಿರುವುದು ಅಭ್ಯಾಸ. ಸರಿ ಇವರ ನೋಟವನ್ನು ತಪ್ಪಿಸಿಕೊಳ್ಳಲು ಮೊಬೈಲನ್ನೋ ಅಥವಾ ಪುಸ್ತಕವನ್ನೋ ನೋಡತೊಡಗುತ್ತೀರಿ ಎಂದಿಟ್ಟುಕೊಳ್ಳಿ. ಅವರು ಅದಕ್ಕೆ ತಕ್ಕಂತೆ ದೃಷ್ಟಿ ಬದಲಾಯಿಸಿಕೊಂಡು ನಿಮ್ಮ ಮೊಬೈಲನ್ನು ದುರುಗುಟ್ಟುತ್ತಾರೆ. ಅಥವಾ ನೀವು ಓದುತ್ತಿರುವ ಪುಸ್ತಕವನ್ನು ಹೆಚ್ಚು ಕಡಿಮೆ ಸಾಲು ಸಾಲನ್ನೇ ನಿಮಗೆ ಮ್ಯಾಚ್ ಮಾಡುವಂತೆ ಓದುತ್ತ ಬರುತ್ತಾರೆ. ಪುಸ್ತಕ ಮಡಿಚಿಟ್ಟು ಇನ್ನೊಂದೆಡೆಗೆ ನೋಡಲು ಶುರು ಮಾಡಿದರೆ ಮತ್ತೆ ನಿಮ್ಮ ಕಡೆಗೇ ನೋಡಲು ಶುರು ಮಾಡುತ್ತಾರೆ. ಏನೋ ತಪ್ಪು ಮಾಡಿದ್ದೇನೆ. ನನ್ನಲ್ಲಿ ಏನೋ ಕೊಂಕೋ, ಊನವೋ, ಭಿನ್ನತೆಯೋ ಇದೆ ಎಂದು ನಿಮಗೆ ಮನದಟ್ಟಾಗುವವರಗೆ ಅವರು ದುರುಗುಟ್ಟುವುದನ್ನು ಬಿಡುವುದಿಲ್ಲ. ಅದು ಯಾವುದೇ ಸಿಟ್ಟಿನ ಅಥವಾ ಚಿಕಿತ್ಸಕವಾದ ದುರುಗುಟ್ಟುವಿಕೆಯಲ್ಲ. ಬದಲಿಗೆ ಶಾಂತವಾದ ಪ್ರಾಯಶಃ ನಿಷ್ಕಲ್ಮಶವಾದ ದುರುಗುಟ್ಟುವಿಕೆ. ಆದರೂ ಮುಚ್ಚಿದ ಬೋಗಿಯೊಳಗೆ ನಡೆಯುತ್ತಿರುವುದರಿಂದ ಸ್ವಲ್ಪ ಹಿಂಸಾತ್ಮಕ!

ಗಾಢ ಪರಿಮಳರು: ಕೆಲವು ವ್ಯಕ್ತಿಗಳು ನಮ್ಮ ಆಘ್ರಾಣ ಶಕ್ತಿಗೆ ಸವಾಲು. ಇಂಥವರಲ್ಲಿ ಎರಡು ವಿಧ. ಒಂದು ಸಿಕ್ಕಾಪಟ್ಟೆ ಸೆಂಟ್ ಪೂಸಿಕೊಂಡು ಬೋಗಿಯೊಳಗೆ ನುಗ್ಗುತ್ತಲೇ ತಮ್ಮ ಇರುವನ್ನು ದಟ್ಟದಾಗಿ ಸಾರುವವರು. ಮುಚ್ಚಿದ ಡಬ್ಬದಲ್ಲಿ ನಿಮಗೆ ಆ ಸೆಂಟ್ ವಾಸನೆ ಆಗಿಬರದಿದ್ದರೆ, ನಿಮ್ಮ ದುರದೃಷ್ಟಕ್ಕೆ ಅವರ ಕಂಕಳು ನಿಮ್ಮ ಮೂಗಿಗೆ ಹತ್ತಿರವೇ ಇರುವಂತೆ ಜನದಟ್ಟಣೆಯಲ್ಲಿ ಸಿಲುಕಿದ್ದರೆ, ಕಥೆ ಮುಗಿದಂತೆ! ಎರಡನೆಯ ವಿಧದವರು ಎಲ್ಲರನ್ನೂ ಕಷ್ಟಕ್ಕೀಡುಮಾಡುವವರು. ಬೆಳಗ್ಗೆ ಸ್ನಾನ ಮಾಡಲು ಸಮಯವಿಲ್ಲದೆ ಹಾಗೇ ಬಂದಿರುವವರು. ಕೆಲವರಂತೂ ಬಹುಶಃ ಹಲ್ಲೇ ಉಜ್ಜಿಲ್ಲದವರು! ಮೆಟ್ರೋ ಜನರನ್ನು ಸಿಕ್ಕಾಪಟ್ಟೆ ಹತ್ತಿರ ತಂದುಬಿಡುವುದರಿಂದ ಮನುಷ್ಯನ ಆಘ್ರಾಣ ಶಕ್ತಿ ಸೂಕ್ಷ್ಮವಾಗಿದ್ದಷ್ಟೂ ಈ ಮುಚ್ಚಿದ ಬೋಗಿಗಳೊಳಗಿನ ಪಯಣ ಕಷ್ಟಕರ. ಒಳ್ಳೆಯ ಮತ್ತು ಕೆಟ್ಟ ಎರಡೂ ತೀವ್ರ ವಾಸನೆಗಳನ್ನು ‘ಮೈಮರೆತು’ ಹೊರಹಾಕುತ್ತಿರುವ ಅದೆಷ್ಟೋ ಮಂದಿ, ಇನ್ನಿತರ ಪ್ರಯಾಣಿಕರಿಗೆ ಸವಾಲಾಗಿದ್ದಾರೆ.

ದೊಡ್ಡ ಬಾಯಿ: ಕೆಲವರು ತಮ್ಮೆಲ್ಲ ಮುಖ್ಯವಾದ ಸಂಭಾಷಣೆಗಳನ್ನು ಮೆಟ್ರೋಗೆಂದೇ ಮೀಸಲಾಗಿಟ್ಟುಕೊಂಡಿರುತ್ತಾರೆ ಎನಿಸುತ್ತದೆ. ರೈಲು ಹತ್ತುತ್ತಿದಂತೆ ಜೋರಾಗಿ ಮೊಬೈಲಿನಲ್ಲಿ ಅದ್ಯಾವುದೋ ಅತಿ ಮುಖ್ಯವಾದ ವಿಷಯಗಳನ್ನು ಪ್ರಸ್ತಾಪ ಮಾಡಲು ಶುರು ಮಾಡುತ್ತಾರೆ. ಮತ್ತೆ ಕೆಲವರು ಸ್ನೇಹಿತರೊಂದಿಗೋ ಸಹೋದ್ಯೋಗಿಗಳೊಂದಿಗೋ ಹತ್ತಿ ಅವರೊಡನೆ ಅಂಥದ್ದೇ ಘನತರವಾದ ವಿಷಯಗಳನ್ನು ದೊಡ್ಡದನಿಯಲ್ಲಿ ಚರ್ಚೆ ಮಾಡಲು ಆರಂಭಿಸುತ್ತಾರೆ. ಸಾರ್ವಜನಿಕ ಬಸ್​ಗಳಲ್ಲಿ ಅಥವಾ ಗದ್ದಲವಿರುವೆಡೆ ಇಂಥ ಚರ್ಚೆಗಳು ನಡೆಯುತ್ತಿದ್ದರೆ ಬಹುಶಃ ಪಕ್ಕದವರಿಗೆ ಅದರ ಪೂರ್ಣಪಾಠ ಗೊತ್ತಾಗುವುದಿಲ್ಲವೇನೋ. ಆದರೆ ಹವಾನಿಯಂತ್ರಿತ ಬೋಗಿಯಲ್ಲಿ ಸಣ್ಣ ಮಾತುಗಳೇ ದೊಡ್ಡದಾಗಿ ಕೇಳುವಾಗ ಈ ಏರುದನಿಯ ವ್ಯಕ್ತಿತ್ವಗಳ ವ್ಯವಹಾರವೆಲ್ಲ ಸುತ್ತಮುತ್ತಲಿನವರ ಕುತೂಹಲಕ್ಕೆ ಆಹಾರವಾಗಿರುತ್ತದೆ. ಅವರು ಮಾಡುವ ದೊಡ್ಡಗಂಟಲಿನ ಸಂಭಾಷಣೆಗಳು ಕೆಲವರಿಗೆ ಕಿರಿಕಿರಿಯಾದರೆ ಮತ್ತೆ ಕೆಲವರಿಗೆ ಭರಪೂರ ಮನರಂಜನೆ!

ದ್ವಾರಪಾಲಕರು: ರೈಲು ಮುಂದೆ ಯಾವ ನಿಲ್ದಾಣದಲ್ಲಿ ನಿಲ್ಲುತ್ತದೆ? ಆ ನಿಲ್ದಾಣದಲ್ಲಿ ಬಾಗಿಲು ಯಾವ ಕಡೆ ತೆರೆಯುತ್ತದೆ ಎಂಬುದೆಲ್ಲ ಮುಂಚಿತವಾಗಿಯೇ ಧ್ವನಿವರ್ಧಕದಲ್ಲಿ ಬರುತ್ತಿದ್ದರೂ ಕೆಲವರಿಗೆ ಬಾಗಿಲು ಕಾಯುವ ಚಾಳಿ. ಇಳಿಯುತ್ತಿರುವ ಏರುತ್ತಿರುವ ಎಲ್ಲರಿಗೂ ನಿರ್ದೇಶನಗಳನ್ನು ನೀಡುತ್ತ ಸ್ಥಾಯಿಯಾಗಿ ಬಾಗಿಲ ಬಳಿಯೇ ನಿಂತು ದ್ವಾರಪಾಲಕರಂತೆ ವರ್ತಿಸುವ ಕೆಲವರನ್ನು ಕಂಡರೆ ಇವರ ಉದ್ದೇಶ ಸರಿಯಿಲ್ಲವೇನೋ ಎನಿಸುತ್ತಿರುತ್ತದೆ. ಕೆಲವರು ಅಂಥವರು ಇದ್ದರೂ ಇರಬಹುದು. ಆದರೆ ಬಹುಪಾಲು ಮಂದಿಗೆ ಅದೇನೋ ತಮಗೆ ಇಳಿಯುವ ಅವಕಾಶ ತಪ್ಪಿಹೋಗುತ್ತದೆ ಎಂಬ ದೂರದ ಮತ್ತು ಅಕಾರಣವಾದ ಭಯ ಅಷ್ಟೇ! ಎಲ್ಲೆಡೆಯೂ ಹೇಗೋ ಮಾಡಿ ನುಗ್ಗಿಬಿಡುವ, ಹೇಗೋ ಮಾಡಿ ಇಳಿದುಬಿಡುವ ಎಂಬ ಜೀವನದ ಹೋರಾಟದಲ್ಲೇ ನಿರತರಾಗಿರುವ ಅಪಾರ ಸಂಖ್ಯೆಯ ಜನರ ಪ್ರತಿರೂಪಗಳಷ್ಟೇ ಇವರು!

ಮೊದಲೇ ಹೇಳಿದಂತೆ, ಎಲ್ಲ ಬಗೆಯ ಜನರೂ ಎಲ್ಲೆಡೆಯೂ ಇರುತ್ತಾರೆ. ಆದರೆ ಒಂದು ಪ್ರಕಾಶಮಾನವಾದ ಡಬ್ಬದೊಳಗೆ ಇಷ್ಟು ಜನರನ್ನು ಒಂದೇ ಬಾರಿಗೆ ನೋಡುವ ಅವಕಾಶ ಮೆಟ್ರೋ ರೈಲಿನ ಪಯಣದಲ್ಲಿ ಲಭ್ಯವಾದಾಗ ನಮಗೆ ಆ ವ್ಯಕ್ತಿತ್ವಗಳಿಗೂ ಮೀರಿದ ಸಮಾಜದ ದರ್ಶನವಾಗುತ್ತದೆ. ಉದಾಹರಣೆಗೆ- ಮೆಟ್ರೋನಲ್ಲಿ ಓಡಾಡುವಾಗಲೆಲ್ಲ ನನಗನಿಸುವುದು ಈ ಹೊತ್ತು ಜನ ಹೆಚ್ಚು ಅಂತಮುಖಿಗಳಾಗುತ್ತಿದ್ದಾರೆಯೇ? ಮುಂಚೆಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಜನರು ಪರಸ್ಪರರನ್ನು ಭೇಟಿ ಮಾಡಿದಾಗ, ಅಪರಿಚಿತರು ಒಟ್ಟಿಗೆ ಬಂದಾಗ ಏನೋ ನೆಪ ತೆಗೆದು ಒಬ್ಬರನ್ನೊಬ್ಬರು ಮಾತನಾಡುತ್ತಿದ್ದೆವು. ಆದರೆ ಈ ಮೆಟ್ರೋ ಒಂದು ರೀತಿಯ ‘ವಿಮಾನನಿಲ್ದಾಣದ ಸಂಸ್ಕೃತಿ’ಯನ್ನು, ಒಂದು ಬಗೆಯ ‘ಸ್ಯೂಡೋ ಸೊಫೆಸ್ಟಿಕೇಷನ್’ಅನ್ನು ಬೆಂಗಳೂರಿನಂಥ ನಗರಗಳ ಜನರಿಗೆ ಸ್ವಲ್ಪ ಹೊತ್ತಿನ ಮುಂಚೆಯೇ ದಯಪಾಲಿಸಿಬಿಟ್ಟಿತೇನೋ ಎಂಬ ಆತಂಕ ಕಾಡುತ್ತದೆ. ಒಬ್ಬರು ಮತ್ತೊಬ್ಬರಿಗೆ ಬೇಕಿರದ, ಇನ್ನೊಬ್ಬ ವ್ಯಕ್ತಿ ನನ್ನ ಖಾಸಗಿತನವನ್ನು ಹರಣ ಮಾಡಲೆಂದೇ ನಿಂತಿರುವ ಒಬ್ಬ ಅನುಮಾನಾಸ್ಪದ ಆಗಂತುಕ ಎಂಬ ಮನಃಸ್ಥಿತಿಯಲ್ಲಿ ನಾವು ಹೆಚ್ಚು ಹೊತ್ತು ಕಳೆದಷ್ಟೂ ಪ್ರಪಂಚದ ಬಗೆಗಿನ ನಮ್ಮ ಒಟ್ಟಾರೆ ದೃಷ್ಟಿಕೋನವೂ ಮಾರ್ಪಾಡಾಗುತ್ತದೇನೋ ಎಂದೆನಿಸುತ್ತದೆ.

ಹಾಗೆಯೇ ಎಷ್ಟೋ ಒಳ್ಳೆಯ ವಿಷಯಗಳೂ ಇವೆ. ಮೆಟ್ರೋದಲ್ಲಿ ನೀವು ಸಾಮಾನ್ಯವಾಗಿ ಜನರು ಜಗಳ ಆಡುವುದನ್ನು ನೋಡುವುದಿಲ್ಲ. ಮೆಟ್ರೋದ ಎಸ್ಕಲೇಟರುಗಳಲ್ಲಿ ಯಾರೋ ಆತುರಾತುರವಾಗಿ ಓಡಿ ಬರುತ್ತಿದ್ದರೆ ಮಿಕ್ಕವರು ಪಕ್ಕಕ್ಕೆ ಸರಿದು ಅವರಿಗೆ ದಾರಿ ಮಾಡಿಕೊಡುವುದನ್ನು ನೋಡಿರುತ್ತೀರಿ. ಸ್ವಲ್ಪ ತಗುಲಿದರೆ ‘ಸಾರಿ’ ಹೇಳುವುದು, ಏನನ್ನಾದರೂ ಕೇಳುವಾಗ ‘ದಯವಿಟ್ಟು’ ಎನ್ನುವ ಸೌಜನ್ಯಪೂರ್ವಕ ಭಾಷೆ ಬೇರೆಡೆಗಳಿಗಿಂತಲೂ ಜಾಸ್ತಿ ಮೆಟ್ರೋದಲ್ಲಿ ಕೇಳಸಿಗುತ್ತದೆ. ಸ್ವಚ್ಛತೆ ಹಾಗೂ ಸೌಜನ್ಯಗಳು ದಿನಕ್ಕೆ ಸ್ವಲ್ಪ ಹೊತ್ತಾದರೂ ಮೆಟ್ರೋ ಮುಖೇನ ಪ್ರಾಯೋಗಿಕವಾಗಿ ಜನರ ಜೀವನದೊಳಗೆ ಬರುವುದರಿಂದ ಅದರ ಪರಿಣಾಮಗಳು ಜೀವನದ ಇತರ ವಿಷಯಗಳ ಮೇಲೂ ಆಗಬಹುದು.

ಒಟ್ಟಿನಲ್ಲಿ, ನಿತ್ಯವೂ ಮೆಟ್ರೋಗಳಲ್ಲಿ ನಮಗೆ ಸಿಗುವ ಈ ಬೇರೆ ಬೇರೆ ಬಗೆಯ ವ್ಯಕ್ತಿಗಳನ್ನು ಇನ್ನಷ್ಟು ಸೂಕ್ಷ್ಮವಾಗಿ ಗಮನಿಸಿ ಅವರ ಇನ್ನಷ್ಟು ಪ್ರಭೇದಗಳನ್ನು ಹುಡುಕೋಣ. ಮನರಂಜನೆಗಲ್ಲದಿದ್ದರೂ ಇದರಿಂದ ಒಂದು ಬಗೆಯ ಮನೋವಿಕಾಸ ಸಾಧ್ಯ ಎಂದು ನಂಬೋಣ. ಏಕೆಂದರೆ ಎಷ್ಟೋ ಬಾರಿ ಈ ಮೇಲೆ ಹೇಳಿದ ವ್ಯಕ್ತಿಗಳೆಲ್ಲ ನಾವೇ. ನಮ್ಮ ಅಂದಂದಿನ ಮೂಡ್​ನ ಪ್ರಕಾರವಾಗಿ, ಅದ್ಯಾವುದೋ ಒಂದು ವ್ಯಕ್ತಿಯಾಗಿ ನಾವು ಮೆಟ್ರೋ ರೈಲು ಹತ್ತಿರುತ್ತೇವೆ. ನಮಗೇ ಗೊತ್ತಿಲ್ಲದಂತೆ ವಿಚಿತ್ರವಾಗಿ ವರ್ತಿಸುತ್ತೇವೆ. ಆ ಮುಚ್ಚಿದ ಡಬ್ಬದೊಳಗೆ ಮತ್ತಾವುದೋ ಕಣ್ಣು ನಮ್ಮನ್ನು ಹಿಂಬಾಲಿಸುತ್ತ ನಮ್ಮ ಬಗ್ಗೆಯೂ ಈ ರೀತಿಯ ಟಿಪ್ಪಣಿಗಳನ್ನು ಮಾಡಿಕೊಳ್ಳುತ್ತದೆ. ಅಷ್ಟರಲ್ಲಿ ನಿಲ್ದಾಣ ಬಂದು ನಾವು ಇಳಿದುಹೋಗಬೇಕಾಗುತ್ತದೆ- ಪ್ಲಾಟ್​ಫಾಮ್ರ್ ಮತ್ತು ರೈಲಿನ ನಡುವೆ ಇರುವ ಅಂತರವನ್ನು ಗಮನಿಸುತ್ತ!

(ಲೇಖಕರು ಸಂವಹನ ಸಲಹೆಗಾರರು)

Leave a Reply

Your email address will not be published. Required fields are marked *

Back To Top