Friday, 16th November 2018  

Vijayavani

Breaking News

ಪ್ರಜಾಪ್ರಭುತ್ವದಲ್ಲಿ ನಿಮ್ಮ ಹೂಡಿಕೆಗೆ ಇದೇ ಸುಸಮಯ!

Sunday, 06.05.2018, 3:06 AM       No Comments

ಇನ್ನುಳಿದಿರುವುದು ಆರೇ ದಿನ! ಮುಂದಿನ ವಾರ ಇಷ್ಟುಹೊತ್ತಿಗೆ ಚುನಾವಣೆಗೆ ನಿಂತು ಪ್ರಭುಗಳಾಗಲು ಬಯಸಿದವರ ಭವಿಷ್ಯ ಇನ್ನೂ ಇವಿಎಮ್ ಒಳಗೇ ಇರುತ್ತದಾದರೂ, ಪ್ರಜೆಗಳಾದ ನಮ್ಮ ಬಂಡವಾಳವಂತೂ ಬಟಾಬಯಲಾಗಿರುತ್ತದೆ! ನಮ್ಮ ಯೋಗ್ಯತೆಯ ಪರೀಕ್ಷೆಯ ಫಲಿತಾಂಶ ಹೊರಬಿದ್ದಿರುತ್ತದೆ! ಒಂದೋ ನಾವು ಮತ ಚಲಾಯಿಸಿ ಗೆದ್ದಿರುತ್ತೇವೆ. ಇಲ್ಲವೇ ಸೋತು ತೆಪ್ಪಗಾಗಿರುತ್ತೇವೆ. ಪ್ರಜಾಪ್ರಭುತ್ವದಲ್ಲಿನ ನಮ್ಮ ಅತಿದೊಡ್ಡ ಅಸ್ತ್ರವನ್ನು ತ್ಯಜಿಸಿ ರಣಹೇಡಿಗಳಾಗಿಬಿಟ್ಟಿರುತ್ತೇವೆ. ಮುಂದಿನ ಐದು ವರ್ಷ ಮಾತನಾಡುವ ಹಕ್ಕನ್ನು ಕಳೆದುಕೊಂಡುಬಿಟ್ಟಿರುತ್ತೇವೆ!

ಚುನಾವಣೆಯ ದಿನ, ನಮ್ಮ ಮುಂದೆ ಎರಡು ಆಯ್ಕೆಗಳಿವೆ. ಒಂದು, ಮತ ಚಲಾಯಿಸುವುದು. ಎರಡು, ಮತ ಚಲಾಯಿಸದಿರುವುದು. ಎರಡನೆಯ ಆಯ್ಕೆ ಸುಲಭದ್ದು! ಆ ಆಯ್ಕೆಯನ್ನು ಈಗಾಗಲೇ ಅನೇಕರು ಮಾಡಿ ಆಗಿದೆ. ಸುಶಿಕ್ಷಿತರಾಗಿರುವ, ಮಿಕ್ಕ ಅನೇಕ ವಿಷಯಗಳಲ್ಲಿ ‘ಪ್ರಜ್ಞಾವಂತ’ ನಾಗರಿಕರಿರುವ ಬೆಂಗಳೂರಿನಂತಹ ಊರುಗಳಲ್ಲಿ ಕನಿಷ್ಠ ಕಾಲುಭಾಗದಷ್ಟು ಮಂದಿಯ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದಿಲ್ಲ! ಇನ್ನೂ ಕೆಲವರಿಗೆ ಮುಜುಗರ. ಇರದಿದ್ದರೂ, ಇದೆ ಎನ್ನುತ್ತಾರೆ! ನಾಳೆ ಹೋಗಿ ಹುಡುಕುತ್ತೇವೆ ಎಂದು ಹುಸಿ ನುಡಿಯುತ್ತಾರೆ. ಮತ್ತೆ ಕೆಲವರದ್ದು ಉದ್ದದ ವಿವರಣೆ. ‘ನಮ್ಮದು ಜೆನ್ಯುನ್ ರೀಸನ್, ಸರ್. ನನ್ನ ವೋಟರ್ ಐಡಿ ಇರೋದು ನಮ್ಮೂರಾದ ಕಲ್ಕತ್ತಾದಲ್ಲಿ. ಎರಡೆರಡು ವೋಟರ್ ಐಡಿ ಇಟ್ಕೊಳೋದು ತಪ್ಪಲ್ವಾ? ಹಾಗಾಗಿ, ನಾನೇ ಕಾನ್ಶಿಯಸ್​ಲೀ ಈ ಚುನಾವಣೆಯಿಂದ ದೂರ ಉಳಿಯಲು ನಿರ್ಧರಿಸಿದೆ’ ಎಂದು ಸಹೋದ್ಯೋಗಿಯೊಬ್ಬರು ಹೇಳಿದರು. ಅಸಲಿ ವಿಷಯವೇನೆಂದರೆ, ಅವರು ಬೆಂಗಳೂರಿಗೆ ವಲಸೆ ಬಂದು ಹತ್ತು ವರ್ಷಗಳಾಗಿವೆ. ಹಿಂದೊಮ್ಮೆ ತಮ್ಮ ಊರಲ್ಲಿ ಅವರು ವೋಟರ್ ಐಡಿ ಮಾಡಿಸಿಕೊಂಡಿರುವುದು ನಿಜವೇ ಇದ್ದಿರಬಹುದು. ಈಗ ಅದನ್ನೇ ನೆಪ ಮಾಡಿಕೊಂಡು ತಾವು ಹತ್ತು ವರ್ಷಗಳಲ್ಲಿ ಮತ ಹಾಕಿರಬಹುದಾಗಿದ್ದ ಇಲ್ಲಿನ ಎಲ್ಲ ಚುನಾವಣೆಗಳಿಂದ ದೂರ ಉಳಿದಿದ್ದಾರೆ!

ಇಂಥವರ ವಿಷಯ ಬಿಡಿ. ಏಕೆಂದರೆ, ಇಂದಿನ ಚುನಾವಣೆಯಲ್ಲಿ ಮತ ಚಲಾಯಿಸಲು ಆಗದ ಪರಿಸ್ಥಿತಿಯನ್ನು ಈಗಾಗಲೇ ತಂದಿಟ್ಟುಕೊಂಡಿರುವವರ ಬಗ್ಗೆ ಏನೂ ಮಾಡಲು ಸಾಧ್ಯವಿಲ್ಲ.

ಆದರೆ, ಮತದಾರರ ಪಟ್ಟಿಯಲ್ಲಿ ಹೆಸರಿದ್ದೂ, ಮತದಾನದ ವೇಳೆ ಮುಗಿಯುವಷ್ಟರಲ್ಲಿ ಮತಗಟ್ಟೆ ತಲುಪುವ ಸಾಧ್ಯತೆ ಇದ್ದೂ ಅದರ ಬಗ್ಗೆ ಆಸ್ಥೆ ತೋರದೆ ಇರುವವರು ಮಾತ್ರ ಇಂದಿನ ಚರ್ಚೆಗೆ ಪ್ರಸ್ತುತ. ಮತ ಚಲಾಯಿಸುತ್ತಾರೋ ಇಲ್ಲವೋ ಎನ್ನುವುದರ ಬಗ್ಗೆ ತೊಂಬತ್ತು ಪಾಲು ಇವರ ಮನಸ್ಸಿನಲ್ಲಿ ಈಗಾಗಲೇ ನಿರ್ಧಾರ ಆಗಿಬಿಟ್ಟಿರಬೇಕು. ಉಳಿದ ಸಣ್ಣ ಪಾಲಿನಲ್ಲಿ, ಈ ಲೇಖನವೂ ಸೇರಿದಂತೆ ‘ಮತ ಚಲಾಯಿಸಿ, ಅದು ನಿಮ್ಮ ಹಕ್ಕು’, ‘ನಿಮ್ಮ ಮತ ನಿಮ್ಮ ಹಿತ’ ಎನ್ನುತ್ತಿರುವ ಅನೇಕ ಅಭಿಯಾನಗಳಿಗೆ ಕಿಡಿ ಹೊತ್ತಿಸಲು ಸಾಧ್ಯವೇ, ನೋಡಬೇಕು…

ಈ ಹೊತ್ತು, ವೋಟ್ ಮಾಡದಿರಲು ನಿರ್ಧರಿಸಿರುವವರಲ್ಲಿ ಅನೇಕ ಬಗೆ. ಅವರು ಕೊಡುವ ಕಾರಣಗಳಾದರೋ, ಕಾಸಿಗೊಂದು ಕೊಸರಿಗೆರಡು. ಕೆಲವರು ದೀರ್ಘ ಚರ್ಚೆ ಮಂಡಿಸಿದರೆ, ಮತ್ತೆ ಕೆಲವರು ಅರ್ಧವಾಕ್ಯದಲ್ಲಿ ಮೂಗು ಮುರಿಯುತ್ತಾರೆ. ಇನ್ನೂ ಕೆಲವರು ಕೊಡುವ ಕಾರಣಗಳಲ್ಲಿ ಪ್ರತಿಕ್ರಿಯಿಸಲಾಗದಷ್ಟು ಹೊಸ ಹಮ್ಮುಗೆ! ಇಂಥವರನ್ನೂ, ಇವರು ಕೊಡುವ ಕಾರಣಗಳನ್ನೂ ಸ್ಥೂಲವಾಗಿ ಹೀಗೆ ವಿಂಗಡಿಸಬಹುದು-

ವ್ಯವಸ್ಥೆ ವಿರಾಗಿಗಳು- ‘ಕಳೆದ 15 ವರ್ಷಗಳಿಂದ ಒಂದು ಚುನಾವಣೆಯಲ್ಲೂ ತಪ್ಪದೆ ಮತ ಚಲಾಯಿಸಿದ್ದೇನೆ. ಅದರಿಂದ ಬಂದದ್ದೇನು? ನಮ್ಮೂರು ಕೇರಿ ಇದ್ದಂತೆಯೇ ಇದೆ. ಅದಕ್ಕೆ ಪ್ರತಿಭಟನೆಯಾಗಿ, ಮತ ಚಲಾಯಿಸದಿರಲು ನಿರ್ಧರಿಸಿದ್ದೇನೆ.’ 35ರ ಹರೆಯದ ಚಿಕ್ಕ-ಪಟ್ಟಣದವರ ಅಚಲ ನಿರ್ಧಾರ. ‘ನಮಗೆ ಊರು ಹೋಗು ಅನ್ನುತ್ತಿದೆ ಕಾಡು ಬಾ ಅನ್ನುತ್ತಿದೆ. ನಮ್ಮ ಕಾಲದಲ್ಲಿ ನಾವು ಮತದಾನದ ಜವಾಬ್ದಾರಿಯನ್ನು ಹೊತ್ತು ನಿರ್ವಹಿಸಿದ್ದಾಗಿದೆ. ಈಗ ವಯಸ್ಸಿನಲ್ಲಿ ಚಿಕ್ಕವರಾದ ನಿಮ್ಮಂಥವರ ಕಾಲ’ ಎನ್ನುತ್ತಾರೆ ಬೇಸತ್ತ ‘ಇತ್ತೀಚೆಗಷ್ಟೇ ಸೀನಿಯರ್-ಸಿಟಿಝುನ್’ ಆದ ಒಬ್ಬರು. ‘ಮತದಾನ ಲೌಕಿಕರಿಗೆ ಮಾತ್ರ. ನಾವೀಗ ಅದನ್ನೆಲ್ಲ ಬಿಟ್ಟು ಅಧ್ಯಾತ್ಮದ ಕಡೆಗೆ ಹೊರಟಿದ್ದೇವೆ. ಈಗ ಮತದಾನ-ಗಿತದಾನ ಎಂದರೆ, ಲೌಕಿಕದ ಕರೆಗೆ ಮತ್ತೆ ಓಗೊಟ್ಟಂತೆ’ ಎನ್ನುವುದು ಜೀವನಕ್ಕೂ ಪ್ರಜಾಪ್ರಭುತ್ವಕ್ಕೂ ವಿಮುಖರಾಗಿರುವ 75 ದಾಟಿದ ಹಿರಿಯರೊಬ್ಬರ ನಿಲುವು.

ಚರ್ಚೆಯೇ ಮುಖ್ಯವಾದವರು- ‘ಹೂಂ… ಈಗ ಹೇಳಿ. ಯಾರಿಗೆ ವೋಟ್ ಹಾಕ್ಬೇಕು ಅಂತ. ಒಬ್ಬೊಬ್ಬರ ಯೋಗ್ಯತೆನೂ ಅಳೆದೂ-ಸುರಿದೂ ಅವರ ಕಲ್ಯಾಣಗುಣಗಳನ್ನು ಪಟ್ಟಿ ಮಾಡಿದೀನಿ. ನನ್ನ ಅಮೂಲ್ಯವಾದ ಮತ ತೆಗೆದುಕೊಳ್ಳೋ ಯೋಗ್ಯತೆ, ಯಾವ ಮುಠ್ಠಾಳನಿಗೂ ಇಲ್ಲ.’ ಬುದ್ಧಿಜೀವಿಯೊಬ್ಬರ ಸವಾಲು. ‘ಮತ ಯಾಚಿಸಲು ಬರುವವರು ನಾನು ಕೇಳುವ ಆರು ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ಕೊಡಬೇಕು. ಅಲ್ಲಿಯವರೆಗೆ ಯಾರಿಗೂ ಮತ ಚಲಾಯಿಸುವುದಿಲ್ಲ.’ ಮತ್ತೊಬ್ಬರ ದೃಢ ನಿರ್ಧಾರ.

ವಿತಂಡವಾದಿಗಳು- ‘ವೋಟ್ ಹಾಕಲ್ಲ ಅಂದ್ರೆ ಹಾಕಲ್ಲ, ಅಷ್ಟೆ. ಯಾವೋನ್ ಅದೇನ್ ಕಿತ್ಕೋತಾನೋ ಕಿತ್ಕೊಳ್ಲಿ.’ ಕಿತ್ತುಕೊಳ್ಳಲು ಹೆಚ್ಚೇನೂ ಇಟ್ಟುಕೊಂಡಿರದ ನಿರುದ್ಯೋಗಿಯೊಬ್ಬರ ರೋಷ. ‘ನನ್ನ ಹತ್ತಿರ ವೋಟರ್ ಐಡೀನೂ ಇದೆ, ಮತದಾರರ ಪಟ್ಟಿಯಲ್ಲಿ ನನ್ನ ಹೆಸರೂ ಇದೆ. ಅದರೆ, ಇನ್ನು ಎರಡೇ ತಿಂಗಳಲ್ಲಿ ನಾನು ಕರ್ನಾಟಕ ಬಿಟ್ಟು, ನಮ್ಮ ರಾಜ್ಯಕ್ಕೆ ವಾಪಸ್ ಹೊಗ್ತಾ ಇದೀನಿ. ಅಲ್ಲಿನ ಚುನಾವಣೆಯಲ್ಲಿ ಮತ ಚಲಾಯಿಸ್ತೀನಿ. ಈ ಕ್ಷೇತ್ರದಲ್ಲಿ ಮತ ಹಾಕಿ ಏನು ಪ್ರಯೋಜನ? ಇದೊಂದು ದಿನ ನಾನು ಮತ ಚಲಾಯಿಸಿದರೆ, ಯಾವ ವ್ಯತ್ಯಾಸವಾದೀತು. ಮಿಕ್ಕ ಐದು ವರ್ಷಗಳ ಇವರ ನಿರ್ಧಾರದಲ್ಲಿ ನನಗೆ ಯಾವುದೇ ಪಾತ್ರ ಇಲ್ಲವಲ್ಲ?’ ಎಂದು ಪ್ರಜಾಪ್ರಭುತ್ವದ ಪರಿಕಲ್ಪನೆಯ ವಿರುದ್ಧವೇ ತರ್ಕ ಹೂಡುವವರು!

‘ಕೂಲ್’ ನಿರ್ಲಿಪ್ತರು- ‘ನನಗೆ ಮತದಾನವನ್ನಾಗಲೀ ಬೇರೆ ಯಾವ ದಾನವನ್ನಾಗಲೀ ಸ್ವೀಕರಿಸಿಯೂ ಗೊತ್ತಿಲ್ಲ. ಕೊಟ್ಟೂ ಗೊತ್ತಿಲ್ಲ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ.’ ಕೈ ಮುಗಿಯುವ ಸೆಲ್ಪ-ಎಂಪ್ಲಾಯ್್ಡ ಯುವ ಉದ್ಯಮಿ. ‘ಐ ವಿಷ್ ಐ ಕುಡ್ ವೋಟ್. ಐ ವಿಷ್ ದೇರ್ ವಾಸ್ ಅಟ್​ಲೀಸ್ಟ್ ಒನ್ ಡಿಸರ್ವಿಂಗ್ ಕ್ಯಾಂಡಿಡೇಟ್’/‘ನನಗೆ ವೋಟ್ ಮಾಡಲು ಸಾಧ್ಯವಿದ್ದಿದ್ದರೆ ಚೆನ್ನಾಗಿತ್ತು. ಕನಿಷ್ಠಪಕ್ಷ ಒಬ್ಬನೇ ಒಬ್ಬ ಅರ್ಹ ಅಭ್ಯರ್ಥಿ ಇದ್ದಿದ್ದರೆ ಚೆನ್ನಾಗಿತ್ತು’- ಸಾಮಾಜಿಕ ಮಾಧ್ಯಮಗಳಲ್ಲಿ ಈ ಪರಿಯಾಗಿ ಮೊಸಳೆ ಕಣ್ಣೀರು ಸುರಿಸಿದವರು, ಮತ್ತು ಇಂತಹ ಮಾತನ್ನಾಡುವ ಮೂಲಕವೇ ಮಾತದಾನ ಮಾಡದಿರುವುದರ ಪಾಪಪ್ರಜ್ಞೆ ತೊಳೆದುಕೊಳ್ಳಲು ಯತ್ನಿಸುತ್ತಿರುವವರು ಅದೆಷ್ಟೋ ಮಂದಿ.

ಕುಂಟುನೆಪದವರು – ‘ನಮ್ಮದು ಬಾಡಿಗೆ ಮನೆ. ಆಗಾಗ ವಿಳಾಸ ಬದಲಾಗುತ್ತಾ ಇರುತ್ತೆ. ಒಂದೆರಡು ಬಾರಿ ವೋಟರ್ ಐಡಿ ಮಾಡ್ಸಿದೀನಿ. ಈಗ ನನ್ನ ಹೆಸರು ಯಾವ ಪಟ್ಟಿಯಲ್ಲಿ ಇದೆ ಅನ್ನೋದೇ ಗೊಂದಲ…’, ‘ಚುನಾವಣೆಯ ದಿವಸವೇ, ಊರಿನ ದೇವಸ್ಥಾನದಲ್ಲಿ ಹಳೆಯದೊಂದು ಹರಕೆ ಬಾಕಿ ಇದೆ…’, ‘ನಾಡಿದ್ದು ಎಲೆಕ್ಷನ್ ಅನ್ನೋ ವಿಷಯ ಮರೆತು, ಮಕ್ಕಳನ್ನ ವಂಡರ್-ಲಾಗೆ ಕರ್ಕೊಂಡ್ ಹೋಗ್ತೀನಿ ಅಂತ ಕಮಿಟ್ ಮಾಡಿದೀನಿ. ಈಗ, ಆಗಲ್ಲ ಅಂದ್ರೆ, ಅವಕ್ಕೆ ಬೇಜಾರಾಗಲ್ವ?’ ‘ಸ್ನೇಹಿತರೆಲ್ಲಾ ಸೇರಿ ಮೂರು ತಿಂಗಳು ಮುಂಚೇನೇ ಗೋವಾದಲ್ಲಿ ಗೆಟ್​ಟುಗೆದರ್ ಪ್ಲಾನ್ ಮಾಡಿದೀವಿ.’

‘ಬಿಜಿ’ಯಾಗಿರುವವರು- ‘ಒಂದ್ ಇಂಪಾರ್ಟೆಂಟ್ ಮೀಟಿಂಗ್ ಇದೆ. ಚಾನ್ಸ್ ತೊಗೊಳೋದ್ ಬೇಡ ಅಂತ ಒಂದು ದಿನ ಮುಂಚಿತವಾಗಿ ಫ್ಲೈಟ್ ಬುಕ್ ಮಾಡಿದೀನಿ. ನಾಡಿದ್ದು ಬಾಂಬೆಗೆ ಹೊರಟೆ… ಊರಲ್ಲೇ ಇದ್ದಿದ್ರೆ ಖಂಡಿತ ವೋಟ್ ಮಾಡ್ತಿದ್ದೆ’ ಎಂದು ಈಗಾಗಲೇ ಸೂಟ್​ಕೇಸ್ ಪ್ಯಾಕ್ ಮಾಡಿ ಇಟ್ಟಿರುವವರು. ಅಥವಾ, ‘ಎಂಬಿಎ ಎಂಟ್ರೆನ್ಸ್​ಗೆ ತಯಾರಾಗೋದು ಅಂದ್ರೆ ಹುಡುಗಾಟಾನಾ? ಪೋಲಿಂಗ್ ಬೂತ್​ಗೆ ಹೋಗಿ ಬರುವಷ್ಟರಲ್ಲಿ ಪುಸ್ತಕದಲ್ಲಿರುವ ಒಂದು ‘ಮಾಕ್-ಎಕ್ಸಾಮ್ (ತಯಾರಿಕಾ ಪರೀಕ್ಷೆ) ಮುಗಿಸಬಹುದು…!’

ಇವರು ಮೇಲಿನ ಯಾವ ಪಂಗಡಕ್ಕೆ ಸೇರಿದವರೇ ಆಗಿರಲಿ, ಇವರಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧರಿರದ ಆಷಾಡಭೂತಿಗಳು ಎನ್ನುವುದರಲ್ಲಿ ಅನುಮಾನವೇ ಇಲ್ಲ! ನೀವು ದೇವರಲ್ಲಿ ನಂಬಿಕೆಯಿರದ ನಾಸ್ತಿಕರಾದಲ್ಲಿ, ನಿಮಗೆ ದೇವರನ್ನು ದೂಷಿಸುವ ಹಕ್ಕಾಗಲೀ, ದೇವರಲ್ಲಿ ವರವನ್ನು ಬೇಡುವ ಅಧಿಕಾರವಾಗಲೀ ಹೇಗೆ ಬರಬೇಕು? ಅಂತೆಯೇ, ಮತ ಚಲಾಯಿಸದೆ ಪ್ರಜಾಪ್ರಭುತ್ವವೆಂಬ ಸಾರ್ವತ್ರಿಕ ನಂಬಿಕೆಯಿಂದ ದೂರವಾದ ಮೇಲೆ, ಪ್ರಜಾಪ್ರಭುತ್ವದ ಅಪೇಕ್ಷೆಗಳಿಂದಲೂ, ನಿರೀಕ್ಷೆಗಳಿಂದಲೂ, ಸವಲತ್ತು-ಸೌಕರ್ಯಗಳಿಂದಲೂ ದೂರ ಉಳಿಯಬೇಕು.

ಮತ ಚಲಾಯಿಸದೆ ಇರುವುದು ನಿರ್ಲಿಪ್ತ ನಿಲುವನ್ನು ತಳೆಯುವುದಕ್ಕೆ ಸಮನಾದ ನಡವಳಿಕೆ ಅಲ್ಲ. ಏಕೆಂದರೆ, ನಿರ್ಲಿಪ್ತಿಯೂ ಪ್ರಜಾಪ್ರಭುತ್ವ ವಿರೋಧಿಯೇ! ‘ಇಲ್ಲಿನ ಕಣದಲ್ಲಿ ಯಾರೂ ಒಳ್ಳೆಯವರಿಲ್ಲ. ಆದ್ದರಿಂದ ಯಾರಿಗೆ ಮತ ನೀಡಲಿ’ ಎಂದು ಕೇಳುವುದು ಹಾಸ್ಯಾಸ್ಪದ. ನೀವು ಮತ ಚಲಾಯಿಸದೆ ಇದ್ದರೂ, ಅವರಲ್ಲಿ ಯಾರಾದರೂ ಒಬ್ಬರು ಆಯ್ಕೆ ಆಗಿ ಬರುತ್ತಾರೆ ಎನ್ನುವುದೇ, ಮತ ಚಲಾಯಿಸಿ ಜಾಗೃತ ನಿಲುವು ತಳೆಯಲು ಪ್ರಮುಖ ಕಾರಣ ಆಗಬೇಕು.

ಹಾಗೆಯೇ, ಪ್ರಜಾಪ್ರಭುತ್ವದ ಬಗ್ಗೆಯೇ ಕೋಪಿಸಿಕೊಂಡು ಮುಖ ತಿರುಗಿಸಿಕೊಂಡವರಿಗೆ, ನೇರ ಪ್ರಶ್ನೆ. ಗ್ರಾಮೀಣ ಪ್ರದೇಶಗಳಲ್ಲಿ ಕೇಳುವಂತೆ- ಕೆರೆಯ ಮೇಲೆ ಕೋಪ ಮಾಡಿಕೊಂಡು ಹಿಂಭಾಗ ತೊಳೆದುಕೊಳ್ಳದಿರಲು ನಿರ್ಧರಿಸಿದರೆ, ನಷ್ಟ ಯಾರಿಗೆ? ಕೆರೆಗೋ? ಕೊಳಕಾದವರಿಗೋ?

ನೆರಳು ಬೀಳುತ್ತಿದೆ ಎಂದರೆ, ಬೆಳಕೂ ಇರಲೇಬೇಕಲ್ಲ! ಚುನಾವಣಾ ಆಯೋಗ ಈ ಬಾರಿ ಮಾಡಿರುವ ಜಾಗೃತಿ ಅಭಿಯಾನ ಹಿಂದೆಂದಿಗಿಂತಲೂ ದೊಡ್ಡದು. ಮತದಾರರನ್ನು ಮತಗಟ್ಟೆಯೆಡೆಗೆ ಹೋಗುವಂತೆ ಪ್ರೇರೇಪಿಸಲು ಖಾಸಗಿ ಮತ್ತು ಸರ್ಕಾರೇತರ ಸಂಸ್ಥೆಗಳೂ ಮಾಡುತ್ತಿರುವ ಪ್ರಯತ್ನಗಳು ಶ್ಲಾಘನೀಯ. ಯಾವುದೇ ಪಕ್ಷಕ್ಕಾಗಲೀ, ಯಾವ ಅಭ್ಯರ್ಥಿಗೇ ಆಗಲೀ ಬೆಂಬಲ ಸೂಚಿಸಲು ನಿಮ್ಮಲ್ಲಿ ಮತ ಯಾಚಿಸುವವರನ್ನು ಅನುಮಾನದಿಂದ ನೋಡಬಹುದು. ಆದರೆ, ಸಮಾಜಮುಖಿಯಾದ ವಿಷಯವನ್ನೋ ವಿಚಾರವನ್ನೋ ಆಧರಿಸಿ ನಿಮ್ಮ ಬೆಂಬಲರೂಪಕವಾದ ಮತವನ್ನು ಯಾರಾದರೂ ಕೇಳಿದರೆ, ಅದನ್ನು ಕೊಡದಿರಲು ಸಾಧ್ಯವೇ? ಅಥವಾ, ಅಂಥವರ ವಿಚಾರವೇ ನಿಮಗೆ ಅಪ್ರಿಯವಾದರೆ, ಅದರ ವಿರೋಧವಾಗಿಯಾದರೂ ಮತ ಚಲಾಯಿಸಬಹುದಲ್ಲ? ನೀವು ಮಖೇಡಿಗಳಲ್ಲದಿದ್ದರೆ ನಿಂತು ರ್ಚಚಿಸಬಹುದಲ್ಲ? ನಿಮ್ಮ ಅಭಿಪ್ರಾಯವನ್ನು ಆ ಸದೃಢ ಠಸ್ಸೆಯ ರೂಪದಲ್ಲಿ ಒತ್ತಿ ಹೇಳಬಹುದಲ್ಲ? ಅದು ಬಿಟ್ಟು, ನಿಮ್ಮನ್ನು ಮಾತನಾಡಿಸಲು ಯಾರೋ ಮುಂದಾಗಿರುವಾಗ, ಮುಖ ತಿರುಗಿಸಿ ಹೊರಟಿರುವ ನೀವು ಅದೆಂತಹ ರಣಹೇಡಿಗಳಿರಬೇಕು!?

ಮತ ಚಲಾಯಿಸದಿರಲು ಹಲವಾರು ಕಾರಣಗಳಿರಬಹುದು. ಆದರೆ, ಮತ ಚಲಾಯಿಸಲು ಒಂದೇ ಕಾರಣ ಬೇಕೆಂದರೆ, ಗಾಂಧೀಜಿ ಹೇಳಿದ ಮಾತು ಸಾಕು. ‘ಪ್ರಜಾಪ್ರಭುತ್ವದ ನನ್ನ ಪರಿಕಲ್ಪನೆ ಎಂದರೆ- ಅದರಲ್ಲಿ, ಅತ್ಯಂತ ಸಬಲ ವ್ಯಕ್ತಿಗೆ ಇರುವಷ್ಟೇ ಅವಕಾಶ ಅತ್ಯಂತ ದುರ್ಬಲ ವ್ಯಕ್ತಿಗೂ ಇರಬೇಕು ಎನ್ನುವುದು’. ಈ ಸಮಾನಾವಕಾಶದ ಪರಿಕಲ್ಪನೆ ಸಾಕಾರವಾಗುವುದು ಸಬಲರು, ದುರ್ಬಲರು ಎನ್ನುವ ಭೇದವಿಲ್ಲದೆ, ಎಲ್ಲರೂ ಮತದಾನ ಮಾಡಿದಾಗ ಮಾತ್ರ. ನಮ್ಮ ಮತವೇ ಪ್ರಜಾಪ್ರಭುತ್ವದಲ್ಲಿ ನಮಗಿರುವ ರಾಜದಂಡ. ಏಕಮಾತ್ರ ಪ್ರಭುತ್ವದ ಐಡೆಂಟಿಟಿ. ಅಸ್ಮಿತೆ. ಅಭಿವ್ಯಕ್ತಿ. ಅದನ್ನು ನಿರ್ವಹಿಸಲು ಅಸಮರ್ಥನಾದವನು, ಪ್ರಜೆಯಾಗಿ ಏನನ್ನೂ ನಿಭಾಯಿಸಲಾರ, ನಿರೀಕ್ಷಿಸಲಾರ.

ನಮ್ಮ ಮತ, ಪ್ರಜಾಪ್ರಭುತ್ವದಲ್ಲಿ ನಾವು ಮಾಡುವ ಏಕೈಕ ದೊಡ್ಡ ಹೂಡಿಕೆ. ನಮಗೆ ಲಾಭವಾಗುವುದೋ, ನಷ್ಟವಾಗುವುದೋ ಯೋಚಿಸಿ ಹೂಡಿಕೆಯ ಆಯ್ಕೆಯನ್ನು ನಿರ್ಧರಿಸಬೇಕು. ಆದರೆ, ಆ ಹೂಡಿಕೆಯನ್ನು ಮಾಡುವ ಮುನ್ನವೇ ಹತಾಶೆಯಿಂದ ಕೈಚೆಲ್ಲುವುದು ಬುದ್ಧಿಗೇಡಿತನ. ಚುನಾವಣೆಯ ದಿನ, ನಮ್ಮ ಮುಂದೆ ಇರುವುದು ಒಂದೇ ಆಯ್ಕೆ. ಮತ ಹಾಕುವುದು. ಪ್ರಜಾಪ್ರಭುತ್ವದಲ್ಲಿನ ನಮ್ಮ ಹೂಡಿಕೆಯನ್ನು ಹೆಚ್ಚಿಸಿ, ಅದು ಸಾಕಾರಗೊಳ್ಳುವ ಪ್ರಕ್ರಿಯೆಯಲ್ಲಿ ಸಕ್ರಿಯರಾಗುವುದು. ನಮ್ಮ ಅಭಿಪ್ರಾಯ, ಅಭಿಮತ, ವಾದ, ವಿಚಾರ, ವಿವೇಚನೆಗಳೆಲ್ಲಕ್ಕೂ ಮತದ ರೂಪ ಕೊಟ್ಟು ಜಯಶಾಲಿಗಳಾಗೋಣ. ನಮ್ಮ ಎಡಗೈ ತೋರುಬೆರಳಿನ ಶಾಯಿಯನ್ನು ಹೆಮ್ಮೆಯಿಂದ ತೋರೋಣ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ನಮ್ಮ ಹೆಸರನ್ನೂ ‘ಚಿರಶಾಯಿ’ಯಾಗಿಸೋಣ!

Leave a Reply

Your email address will not be published. Required fields are marked *

Back To Top