Wednesday, 12th December 2018  

Vijayavani

Breaking News

ಮಾಹಿತಿ ಯುಗದಲ್ಲಿ ಮೂರ್ಖರಾಗುವ ನೂರಾರು ಬಗೆಗಳು

Monday, 16.04.2018, 3:05 AM       No Comments

ಮಾಹಿತಿಯುಗದಲ್ಲಿ ಯಾರ್ಯಾರು ಯಾರ್ಯಾರನ್ನು ಹೇಗೇಗೆ ಮೂರ್ಖರನ್ನಾಗಿಸುತ್ತಿದ್ದಾರೆ ಎನ್ನುವುದರ ಬಗೆಗಿನ ಈ ಲೇಖನಮಾಲೆಯಲ್ಲಿ ಕಳೆದೆರಡು ವಾರ ನಮ್ಮನ್ನು ಸದಾ ಮೂರ್ಖರನ್ನಾಗಿಸುವ ರಾಜಕಾರಣಿಗಳ ಬಗ್ಗೆ; ಹಾಗೂ, ನಮ್ಮನ್ನು ನಾವೇ ಮೂರ್ಖರನ್ನಾಗಿಸಿಕೊಳ್ಳಲು ಕಂಡುಹಿಡಿದುಕೊಂಡಿರುವ ನವೀನಮಾರ್ಗವಾದ ಸಾಮಾಜಿಕ ಮಾಧ್ಯಮಗಳ ಬಗ್ಗೆ ಬರೆದಿದ್ದೆ. ಈ ವಾರ ಈ ಮೂರ್ಖರಾಗಿಸುವ ಕೆಲಸಕ್ಕೆ ಇನ್ನೊಂದು ಪದರವನ್ನು ಸೇರಿಸುತ್ತಿದ್ದೇನೆ. ಮೂರ್ಖತನದ ವಿರಾಟ್​ರೂಪ ನಿಜಕ್ಕೂ ಪ್ರಕಟಗೊಳ್ಳುವುದು ಮಾಹಿತಿಯ ಜತೆಗೆ ವಾಣಿಜ್ಯಾತ್ಮಕ/ಔದ್ಯಮಿಕ ಉದ್ದೇಶವೂ ಬೆರೆತಾಗ. ದುರಾಸೆಗೆ ಬಿದ್ದು ಮೂರ್ಖರಾದ ಗ್ರಾಹಕರ ಕತೆಗಳನ್ನು ನಾವು ಪಂಚತಂತ್ರದ ಕಾಲದಿಂದಲೂ ಓದುತ್ತಲೇ ಬಂದಿದ್ದೇವೆ. ಆದರೆ, ಮಾಹಿತಿ ಯಥೇಚ್ಛವಾಗಿ ಲಭ್ಯವಿರುವ ಈ ಹೊತ್ತಿನಲ್ಲಿಯೂ, ಅತಿಯಾಸೆಯಿಂದಾಗಿ ಗತಿಗೇಡಾಗಿ, ನಾವು ಮಕ್ಕಳ ಕತೆಗಳಲ್ಲಾಗುವಷ್ಟೇ ಸುಲಭವಾಗಿ ಮೂರ್ಖರಾಗುತ್ತಿದ್ದೇವೆ ಎಂದರೆ! ವಿವರಿಸುತ್ತೇನೆ…

ಇಂದಿಗೂ, ಬೆಂಗಳೂರಿನ ಇಂದಿರಾನಗರದ ನೂರಡಿ ರಸ್ತೆಯಲ್ಲಿ ನೀವು ಸಾಗುತ್ತಿದ್ದರೆ, ನೂರಾರು ‘ಉಚಿತ’ ಎನ್ನುವ ಸಂದೇಶಗಳು ನಿಮ್ಮ ಕಣ್ಸೆಳೆಯುತ್ತವೆ. ಆದರೆ, ನನ್ನ ಅಭಿಪ್ರಾಯದಲ್ಲಿ ಅವೆಲ್ಲವುಗಳ ಪಟ್ಟಿಯಲ್ಲಿ ಅತ್ಯಂತ ಆಸಕ್ತಿದಾಯಕವಾದುದು “Buy a frame, get a painting free!’/‘ಒಂದು ಕಟ್ಟನ್ನು ಕೊಳ್ಳಿ, ಕಲಾಕೃತಿಯನ್ನು ಉಚಿತವಾಗಿ ಪಡೆಯಿರಿ’ ಎಂದು ಸಾರುವ, ಗಾಜಿನ ಗೂಡಿನಿಂದ ಹೊರಗಿಣುಕುವ ಹೈ-ಫೈ ಫ್ರೇಮುಗಳನ್ನು ಮಾರುವ ಅಂಗಡಿಯೊಂದರ ಪೋಸ್ಟರ್! ಅಂಗಡಿಯ ಮಾಲೀಕ, ತನ್ನ ಗ್ರಾಹಕರನ್ನು ಮೂರ್ಖರೆಂದು ಭಾವಿಸದೆ ಇಂತಹ ಪೋಸ್ಟರ್ ಒಂದನ್ನು ಸೃಷ್ಟಿಸಿರಲು ಸಾಧ್ಯವಿಲ್ಲ. ಫ್ರೇಮ್ ಇರುವುದು ಏತಕ್ಕಾಗಿ? ಕಲಾಕೃತಿಯ ಸುರಕ್ಷತೆಗಾಗಿ/ಜೋಪಾನವಾಗಿಡಲು? ಅಥವಾ ಅದು ಎಲ್ಲರಿಗೂ ಕಾಣುವಂತೆ ಗೋಡೆಗೆ ನೇತುಹಾಕಲು ಸಹಾಯವಾಗಲೆಂದು? ಅಥವಾ ಸ್ವಲ್ಪಮಟ್ಟಿಗೆ, ಕಲಾಕೃತಿಯೆಡೆಗೆ ಜನರ ಗಮನ ಬರಲೆಂದು ಅದಕ್ಕೊಂದು ಚೌಕಟ್ಟನ್ನು ಕೊಡಲು? ಒಟ್ಟಿನಲ್ಲಿ, ಫ್ರೇಮ್ ಕೆಲಸ ಕಲಾಕೃತಿಯ ಮೆರುಗನ್ನೂ ಸುರಕ್ಷತೆಯನ್ನೂ ಹೆಚ್ಚಿಸುವುದು. ಆದರೆ ಆಗಿರುವುದೇನು? ಜನರು, ತಾವು ವಾಸಿಸುವ ಸ್ಥಳಗಳಲ್ಲಿ ತಮ್ಮ ಅಭಿರುಚಿಯನ್ನು ಪ್ರತಿನಿಧಿಸುವಂತಹ ಕಲಾಕೃತಿಗಳನ್ನು ಪ್ರದರ್ಶನಕ್ಕಿಡುತ್ತಾರೆ, ಅದಕ್ಕೆ ಇನ್ನಷ್ಟು ಪ್ರಾಮುಖ್ಯತೆ ದೊರೆಯುವಂತಾಗಲು ಕಲಾಕೃತಿಗೆ ಪೂರಕವಾದ ಚೌಕಟ್ಟು ಬೇಕು ಎಂಬಲ್ಲಿಂದ ಆರಂಭಗೊಂಡ ಈ ಉದ್ಯಮ, ಕಡೆಗೆ ಕಲಾಕೃತಿಯನ್ನೇ ಗೌಣವಾಗಿಸಿದೆ! ನಿಮಗಿರಬೇಕಾದ್ದು ಕಲಾಭಿರುಚಿಯಲ್ಲ, ಆದರೆ ನಿಮ್ಮ ಮನೆಗೆ ಬರುವ ಜನರಿಗೆ ಹಾಗೆಂದು ಭ್ರಮಿಸುವಂತೆ ಮಾಡುವ ‘ಕಲಾಗಾರಿಕೆ’ ಎಂದು ಸಾರಿ ಹೇಳುತ್ತಿದೆ.

ಈ ಪೋಸ್ಟರ್ ತಿಂಗಳಾನುಗಟ್ಟಲೆ ಈ ಅಂಗಡಿಯಲ್ಲಿದೆ ಎಂದರೆ, ಈ ಉಚಿತದ ಆಹ್ವಾನ ನಿಜಕ್ಕೂ ಕೆಲಸ ಮಾಡುತ್ತಿರಬೇಕು! ಜನರು ಬಂದು ಇಲ್ಲಿ ಸಿಗುವ ದುಬಾರಿ ಒರಿಜಿನಲ್ ಫ್ರೇಮುಗಳನ್ನು ಕೊಂಡು ಅಸಲಿಯ ತಲೆಯ ಮೇಲೆ ಹೊಡೆದಂತೆ ತಿದ್ದಲಾದ ಡಿಜಿಟಲ್ ಪ್ರಿಂಟ್-ಔಟ್ ನಕಲಿ ಕಲಾಕೃತಿಗಳನ್ನು ಉಚಿತವಾಗಿ ಪಡೆದು ಹೋಗುತ್ತಿರಬಹುದು! ಕೊಳ್ಳುಗನ ಮೂಲ ಉದ್ದೇಶವನ್ನೇ ಬದಲಾಯಿಸಿ, ಆದರೂ ಆತ ಕೊಳ್ಳುವಂತೆ ಮಾಡಿದ ಈ ಮಾರಾಟಗಾರನ ಬುದ್ಧಿವಂತಿಕೆಯನ್ನು ಶ್ಲಾಘಿಸುವುದೋ, ಇಲ್ಲವೇ ಫ್ರೇಮನ್ನು ಮಾತ್ರ ಪ್ರಶಂಸಿಸುವಷ್ಟು ಮೂರ್ಖರಾದ ಕೊಳ್ಳುಗರ ಸ್ಥಿತಿಗೆ ಮರುಕ ಪಡುವುದೋ ನೀವೇ ನಿರ್ಧರಿಸಿ!

ಸೂಕ್ಷ್ಮವಾಗಿ ಗಮನಿಸಿದರೆ, ಇಲ್ಲೊಂದು ಮೋಸದ ಸರಣಿಯೇ ಆರಂಭಗೊಂಡಿದೆ! ಮೊದಲನೆಯದು ಮಾರುವವ ಮಾಡುತ್ತಿರುವ ಸ್ಪಷ್ಟ ಮೋಸ. ಆದರೆ, ಅದಕ್ಕಿಂತಲೂ ಕ್ರೂರವಾದುದು, ಅದನ್ನು ಕೊಂಡವರು ತಮ್ಮ ಮನೆಗಳಲ್ಲಿ ಆ ಕಲಾಕೃತಿಯನ್ನೂ ದುಬಾರಿ ಫ್ರೇಮನ್ನೂ ನೇತುಹಾಕಿ ‘ಇಂಥ ಅದ್ದೂರಿ ಕಟ್ಟಿನೊಳಗಿರುವ ಕಲಾಕೃತಿ ಬಹುಮೂಲ್ಯವಾದದ್ದಿರಬೇಕು’ ಎಂದುಕೊಳ್ಳುವಂತೆ ಭ್ರಮೆ ಸೃಷ್ಟಿಸಿರುವುದು! ಆ ಮೂಲಕ ತಮ್ಮ ಬಂಧುಗಳು ಸ್ನೇಹಿತರನ್ನು ಮೂರ್ಖರನ್ನಾಗಿಸುತ್ತಿರುವುದು! ಒಂದಂತೂ ಸತ್ಯ. ಈ ಪ್ರಕರಣ, ಕಲಾಕೃತಿಯಷ್ಟೇ ನಕಲಿಯಾದ ನಮ್ಮ ಬದುಕುಗಳಿಗೂ, ಈ ಹೊತ್ತು ನಾವು ಇತರರನ್ನು ಮೋಸಗೊಳಿಸಲು ಬಳಸುವ ನಾನಾ ಪರಿಗಳಿಗೂ ಹಿಡಿದ ಕನ್ನಡಿ.

ಉಚಿತಕ್ಕೆ ನಾವೆಲ್ಲರೂ ಖಚಿತವಾಗಿ ಬಿದ್ದೇ ಬೀಳುತ್ತೇವೆ ಎನ್ನುವುದು ಸತ್ಯವಾದರೂ ಅದರ ಮಿತಿಯನ್ನು ಮಾರಾಟಗಾರರು ನಿತ್ಯವೂ ಪರೀಕ್ಷಿಸುತ್ತಲೇ ಇರುವುದು, ಮತ್ತು ನಾವದರಲ್ಲಿ ಪಾಲ್ಗೊಂಡು ಮೂರ್ಖರಾಗುತ್ತಲೇ ಇರುವುದು ಮಾತ್ರ ಸೋಜಿಗದ ಸಂಗತಿಯೇ. ನಾವು ನಾನಾ ರೀತಿ ನಿತ್ಯವೂ ಮೂರ್ಖರಾಗುತ್ತಿದ್ದೇವೆ ಎನ್ನುವುದಕ್ಕೆ ಪುರಾವೆ ಬೇಕಿಲ್ಲವಾದರೂ, ಮೋಸಹೋಗುವ ಪ್ರಮಾಣವನ್ನು ಅರಿಯಲು ಎಷ್ಟು ನಿದರ್ಶನಗಳನ್ನು ಕೊಟ್ಟರೂ ಸಾಲದು. ಉದಾಹರಣೆಗೆ, ನಾವು ದುಡ್ಡು ಕೊಡುವುದು ಪೇಯಕ್ಕಲ್ಲ. ಅದರ ಪ್ಯಾಕೇಜಿಂಗ್​ಗೆ ಮತ್ತು ಆ ಪೇಯವನ್ನು ಮಾರಾಟ ಮಾಡಲು ಅವರಿಗೆ ತಗಲುವ ಖರ್ಚಿಗೆ! ಕೋಲಾ, ಪ್ಯಾಕ್ಡ್ ಜ್ಯೂಸ್​ಗಳ ವಿಷಯದಲ್ಲಿ ಒಳಗಿರುವ ದ್ರವದ ಬೆಲೆ ಒಟ್ಟು ಮಾರಾಟ ಬೆಲೆಯ ಶೇಕಡ 10-15ರಷ್ಟು ಮಾತ್ರ ಎನ್ನುವುದೀಗ ಸಾಮಾನ್ಯ ಜ್ಞಾನ! ಆದರೆ, ನಾವು ಕೊಳ್ಳುವ ಪೀಠೋಪಕರಣಗಳು, ಕಾರು, ಮನೆಯಂತಹ ದೊಡ್ಡ ಖರೀದಿಗಳ ವಿಷಯದಲ್ಲಿಯೂ ಪರಿಸ್ಥಿತಿ ಪೇಯಗಳಿಗಿಂತ ತೀರಾ ಭಿನ್ನವಾಗಿಲ್ಲವೆಂದರೆ, ನಾವು ಎಷ್ಟರ ಮಟ್ಟಿಗೆ ಮೂರ್ಖರಾಗುತ್ತಿದ್ದೇವೆ ಎನ್ನುವುದನ್ನು ಊಹಿಸಿ!

ಪ್ರಮೋಷನ್​ಗೆಂದು ಕಳುಹಿಸುವ ಎಸ್ಸೆಮ್ಮೆಸ್, ಇಮೇಲ್​ಗಳಲ್ಲಿ, ‘ಮನೆ ಕೊಂಡರೆ ಕಾರ್ ಉಚಿತ’, ‘ಸೈಟ್ ಕೊಂಡರೆ ವಿದೇಶ ಪ್ರವಾಸ ಉಚಿತ’ ಇತ್ಯಾದಿಗಳನ್ನು ನೋಡಿ ದಣಿದಿದ್ದ ಕಣ್ಣಿಗೆ ಈ ಫ್ರೇಮ್ೆ ಕಲಾಕೃತಿ ಉಚಿತದ ಜಾಹೀರಾತು ವಿಸ್ಮಯಕಾರಿಯೆನಿಸಿತು. ತಮ್ಮ ಸ್ಪರ್ಧಿಗಳಿಗಿಂತ ಎರಡು ಹೆಜ್ಜೆ ಮುಂದೆ ಹೋಗುವ ಪ್ರಯತ್ನದಲ್ಲಿ ಇವರು ಮಾಡುವ ಇಂಥ ಆಫರ್​ಗಳನ್ನು ದೊಡ್ಡ ಅಪದ್ಧವೆನ್ನಿ, ಅಥವಾ ಯಾವ ಮೂರ್ಖ ಇಂತಹ ಕಪಟಕ್ಕೆ ಬಲಿಯಾದಾನು ಎಂದು ನೀವಾಳಿಸಿಬಿಡಿ! ಅದರೆ, ಸತ್ಯ ಬೇರೆಯದೇ ಇದೆ. ಈ ಆಫರ್ ಬಿಟ್ಟಾಗಲೆಲ್ಲ ವ್ಯಾಪಾರ ವೃದ್ಧಿಸಿದೆ ಎಂದು ಬಲ್ಲವರು ಹೇಳುತ್ತಾರೆ.

ಈ ಆಫರ್​ನಲ್ಲಿ ಕೊಂಡವರು ನಿಜಕ್ಕೂ ಮಾರಾಟಗಾರನ ಮಾತನ್ನು ನಂಬಿದರೇ? ಅಥವಾ ಕೊಳ್ಳುವವರು ಅಷ್ಟೊಂದು ಮೂರ್ಖರಾಗಿರುತ್ತಾರೆ ಎನ್ನುವುದು ಇದರ ಅರ್ಥವೇ? ಖಂಡಿತವಾಗಿಯೂ ಇಲ್ಲ. ಇದರ ಹಿಂದಿರುವ ತತ್ತ್ವವೇ ಬೇರೆ. ಅದನ್ನು ‘ಸಸ್ಪೆನ್ಷನ್ ಆಫ್ ಡಿಸ್​ಬಿಲೀಫ್’ ಎಂದು ಕರೆಯಬಹುದು. ತೀರಾ ನಂಬಲಾಗದ ವಿಷಯವೊಂದನ್ನು ಯಾರಾದರೂ ನಮಗೆ ಹೇಳಿದಾಗ, ಅದು ನಿಜಕ್ಕೂ ನಂಬಲಸದಳವಾದ ಉತ್ಪ್ರೇಕ್ಷೆ ಎಂದು ನಮಗನ್ನಿಸಿದಾಗ ನಾವು ಈ ‘ಸಸ್ಪೆನ್ಷನ್ ಆಫ್ ಡಿಸ್​ಬಿಲೀಫ್’ ಸ್ಥಿತಿಗೆ ಹೋಗುತ್ತೇವೆ. ಅಂದರೆ, ನಡೆಯುತ್ತಿರುವುದೆಲ್ಲವೂ ಸುಳ್ಳೆಂದು ಗೊತ್ತಿದ್ದರೂ, ನಂಬುವುದಿಲ್ಲ ಎನ್ನುವ ಮನಃಸ್ಥಿತಿಯನ್ನು ತಾತ್ಕಾಲಿಕವಾಗಿ ಪಕ್ಕಕ್ಕಿಟ್ಟು, ನಮಗೆ ಈ ಕಟ್ಟುಕತೆ ಹೇಳುತ್ತಿರುವ ವ್ಯಕ್ತಿಯೊಡನೆ ಅವನ ಕತೆಯಲ್ಲಿ ಸ್ವಲ್ಪ ದೂರ ಪ್ರಯಾಣ ಮಾಡಲು ನಿರ್ಧರಿಸುತ್ತೇವೆ!

ಇದನ್ನು ಇನ್ನಷ್ಟು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಲು, ಜಾಕಿ ಚಾನ್ ಅಥವಾ ರಜನಿಕಾಂತ್​ರಂತಹವರ ಚಿತ್ರಗಳನ್ನು ನೋಡುವಾಗ ವೀಕ್ಷಕರಲ್ಲಾಗುವ ವಿಶೇಷ ಬದಲಾವಣೆಯನ್ನು ಗಮನಿಸಬೇಕು. ನೂರು ಜನರನ್ನು ಒಟ್ಟಿಗೆ ಹೊಡೆದು ಹಿಮ್ಮೆಟ್ಟಿಸುವ, ಮುಷ್ಟಿಯಿಂದ ಗೋಡೆಯನ್ನು ಪುಡಿಮಾಡುವ, ಕಾರು-ಬೈಕುಗಳನ್ನು ಮೂವತ್ತು ಪಲ್ಟಿ ಹೊಡೆಸಿದರೂ ಏನೂ ಆಗದ- ಒಟ್ಟಿನಲ್ಲಿ ತೆರೆಯ ಮೇಲೆ ನಡೆಯುವುದೆಲ್ಲವನ್ನೂ ರ್ತಸದೆ, ಪ್ರಶ್ನಿಸದೆ, ಸತ್ಯಾಸತ್ಯತೆಯನ್ನು ಒರೆಗೆ ಹಚ್ಚಿ ನೋಡದೆ, ಕಂಡದ್ದನ್ನು ಕಂಡಂತೆ ಒಪ್ಪಿಕೊಳ್ಳುವ ಮನಃಸ್ಥಿತಿಯೇ ಈ ‘ಸಸ್ಪೆನ್ಷನ್ ಆಫ್ ಡಿಸ್​ಬಿಲೀಫ್’. ಇದು, ಸಾಮಾನ್ಯವಾಗಿ ವೀಕ್ಷಕ ಮನೋಭಾವಕ್ಕೆ ವಿರುದ್ಧವಾದುದು. ಆದರೆ, ತಾವು ಮೆಚ್ಚಿ್ಚದವರ ಬಗ್ಗೆ ಜನರು ಸಹಜ ತರ್ಕಕ್ಕೆ ವಿರುದ್ಧವಾಗಿ ವರ್ತಿಸುತ್ತಾರೆ. ಆದ್ದರಿಂದಲೇ, ಜನರು ತಾರೆಯರ ಬಗ್ಗೆ ಉತ್ಪ್ರೇಕ್ಷಿತ ಕಲ್ಪನೆಗಳನ್ನು ಇಟ್ಟುಕೊಂಡಾಗ, ಅವರು ತೆರೆಯ ಮೇಲೆ ಮತ್ತು ಆಚೆ ಅದಕ್ಕಿಂತ ದೊಡ್ಡ ಹೀರೋಗಳಾಗಿ ಕಾಣುತ್ತಾರೆ! ವೀಕ್ಷಕ ಈ ‘ಸಸ್ಪೆನ್ಷನ್ ಆಫ್ ಡಿಸ್​ಬಿಲೀಫ್’ ಸ್ಥಿತಿಯಲ್ಲಿ ವಿವರಿಸಲಾಗದ ವಿಲಕ್ಷಣ ಸುಖ ಅನುಭವಿಸುತ್ತಾನೆ.

ವೀಕ್ಷಕನ ಇದೇ ಮನಃಸ್ಥಿತಿಯನ್ನು ಗ್ರಾಹಕನಿಗೂ ವಿಸ್ತರಿಸಬಹುದು. ಗ್ರಾಹಕ ನಂಬುವುದಿಲ್ಲ ಎಂದು ಚೆನ್ನಾಗಿಯೇ ಗೊತ್ತಿರುವ ಸುಳ್ಳನ್ನು ಆತನ ಮುಂದಿಡುತ್ತಾರೆ. ಫ್ರೇಮ್ ಕೊಂಡರೆ ಕಲಾಕೃತಿ ಉಚಿತದ ಪ್ರಕರಣಗಳಲ್ಲಾದಂತೆ, ಇದು ಸುಳ್ಳು ಎಂದು ಇಬ್ಬರೂ ಒಪ್ಪಿದ್ದೇವೆ ಎನ್ನುವಂತೆ ಸ್ವಲ್ಪ ಹೊತ್ತು ನಟಿಸುತ್ತಾರೆ. ಆಫರ್​ಗೆ ಮರುಳಾಗಿ ಆಶೆಬುರುಕರಾಗಿರುವ ನಾವು ‘ಸಸ್ಪೆನ್ಷನ್ ಆಫ್ ಡಿಸ್​ಬಿಲೀಫ್’ ಸ್ಥಿತಿಯನ್ನು ಸುಲಭವಾಗಿಯೇ ತಲುಪುತ್ತೇವೆ. ಆಗ ನಿಧಾನವಾಗಿ ನಮ್ಮಿಂದಾಗಬೇಕಾದ ಔದ್ಯಮಿಕ ಲಾಭದ ಕಡೆಗೆ ಹೊರಳುತ್ತಾರೆ. ಅದನ್ನು ಗ್ರಾಹಕರಾದ ನಮಗೇ ಲಾಭದಾಯಕ ಎನ್ನುವಂತೆ ಬಿಂಬಿಸುತ್ತಾರೆ. ‘ಸಸ್ಪೆನ್ಷನ್ ಆಫ್ ಡಿಸ್​ಬಿಲೀಫ್’ ಸ್ಥಿತಿಯಲ್ಲಿ ಭಾವನಾತ್ಮಕವಾಗಿ ನಿತ್ರಾಣವಾಗಿರುವ ನಾವು ಅವರ ಮಾರಾಟದ ವಸ್ತುವನ್ನು ಈಗಾಗಲೇ ಮೋಹಿಸಲು ಆರಂಭಿಸಿರುತ್ತೇವೆ. ಅವರ ಪ್ರಸ್ತಾಪ ನಮಗೆ ಲಾಭದಾಯಕವಾಗಿರುವಂತೆ ಕಾಣಲಾರಂಭವಾಗುತ್ತದೆ. ಅಷ್ಟನ್ನೆಲ್ಲ ಉಚಿತವಾಗಿ ಕೊಡಲು ಅವನೇನು ಮೂರ್ಖನೇ? ಎಂದು ರ್ತಾಕವಾಗಿ ಯೋಚಿಸುವ ಬದಲು, ‘ಸಸ್ಪೆನ್ಷನ್ ಆಫ್ ಡಿಸ್​ಬಿಲೀಫ್’ ಸ್ಥಿತಿಯಲ್ಲಿರುವ ನಾವು ಈ ಸುಸಂದರ್ಭವನ್ನು ಬಳಸಿಕೊಳ್ಳದಿದ್ದರೆ ನಾವು ಮೂರ್ಖರಾಗುತ್ತೇವೆ ಎಂದು ಯೋಚಿಸುತ್ತೇವೆ. ಪರ್ಸ್ ತೆಗೆಯುತ್ತೇವೆ!

ಮಾರಾಟದ ಪ್ರಕ್ರಿಯೆಯನ್ನು ಸುಸಜ್ಜಿತವಾದ ಪಿತೂರಿಯಂತೆ ಅಥವಾ ಮಂಕುಬೂದಿ ಎರಚಿ ಮಾಡುವ ಯಾವುದೇ ಮಾಟದಂತೆ ವಿವರಿಸಿರುವುದಕ್ಕೆ ನಿಮ್ಮ ಕ್ಷಮೆಯಿರಲಿ. ಮಾರುವವರಿಗೆಲ್ಲ ಈ ‘ಸಸ್ಪೆನ್ಷನ್ ಆಫ್ ಡಿಸ್​ಬಿಲೀಫ್’ನ

ಥಿಯರಿ ಗೊತ್ತಿರದಿದ್ದರೂ ಅದರ ಕಾರ್ಯವೈಖರಿ ಗೊತ್ತು! ತಾನು ನಡೆಸುವ ದಂಧೆಯಲ್ಲಿ ಏನು ಹೇಳಿದರೆ ಗ್ರಾಹಕ ಮರುಳಾಗುತ್ತಾನೆ ಎನ್ನುವ ಸೂಕ್ಷ್ಮವನ್ನು ಬುದ್ಧಿವಂತ ಮಾರಾಟಗಾರರೆಲ್ಲರೂ ಬಲ್ಲರು. ಗ್ರಾಹಕನ ಗ್ರೀಡ್ ಅಥವಾ ದುರಾಸೆಯ ಮೇಲೆ ಪ್ರಹಾರ ಮಾಡಿದರೆ ಕಾಂಚಾಣ ತನ್ನಿಂತಾನೇ ಉದುರುತ್ತದೆ. ಈ ಪ್ರಕ್ರಿಯೆಗೆ ನೂರಾರು ಹೆಸರು – ಪೊ›ಮೋಷನ್, ಸೇಲ್, ಆಫರ್, ಇತ್ಯಾದಿ. ಆದರೆ, ಪರಿಣಾಮ ಒಂದೇ! ಹಿಂದಿರುವ ಲೆಕ್ಕ ಒಂದೇ. ಪ್ರೆಸೆಂಟೇಷನ್ ಮತ್ತು ಪ್ಯಾಕೇಜಿಂಗ್ ಬೇರೆ, ಅಷ್ಟೆ.

ಮಾಹಿತಿಯುಗದಲ್ಲಿ ಜನರು ಹೇಗೆ ದುರಾಸೆಗೆ ಬಿದ್ದು ಮೂರ್ಖರಾಗುತ್ತಿದ್ದಾರೆ ಎನ್ನುವುದಕ್ಕೆ ಇವೆಲ್ಲ ನಿದರ್ಶನಗಳು. ತರ್ಕಕ್ಕೆ ವಿರುದ್ಧವಾದ ಮಾಹಿತಿಯನ್ನು ಜನರಿಗೆ ಕೊಟ್ಟು, ಅವರನ್ನು ಕಾಲ್ಪನಿಕವಾದ ಮತ್ತು ದುರ್ಬಲವಾದ ಮನಃಸ್ಥಿತಿಗೆ ತಳ್ಳಿ, ಅವರು ಬೇರೊಂದು ಲೋಕದಲ್ಲಿ ವಿಹರಿಸುತ್ತಿರುವಾಗಲೇ ಅವರ ಜೇಬಿಗೆ ಕೈಹಾಕಿ ಹಣ ಕೊಡುವಂತೆ ಮಾಡುವ ಕೆಲ ಮಾರಾಟಗಾರರು, ಸಂವಹನಕಲೆಯಿಂದ ಹಿಡಿದು ನಿರ್ವಹಣಾಶಾಸ್ತ್ರದವರೆಗೆ, ಪ್ಯಾಕೇಜಿಂಗ್​ನಿಂದ ಹಿಡಿದು ಸೈಕಾಲಜಿಯವರೆಗೆ ಎಲ್ಲವನ್ನೂ ಬಳಸುತ್ತಿದ್ದಾರೆ.

ಇದು ನಮಗೆಲ್ಲರಿಗೂ ಪರಿಚಯವಿರುವ ಮೂರ್ಖತನದ ಕತೆಯಾಯ್ತು. ಇದಕ್ಕಿಂತಲೂ ಸ್ವಲ್ಪ ಸಂಕೀರ್ಣವಾದ ಕೆಲವು ವಿಧಾನಗಳನ್ನು ಮಾಹಿತಿಯುಗದಲ್ಲಿ ಹೇಗೆ ಪ್ರಯೋಗಿಸಲಾಗುತ್ತಿದೆ ಎನ್ನುವುದರ ಸಂಕ್ಷಿಪ್ತ ವಿವರ, ಮುಂದಿನ ವಾರ ಈ ಲೇಖನಮಾಲೆಯ ಕೊನೆಯ ಭಾಗದಲ್ಲಿ.

(ಲೇಖಕರು ಸಂವಹನ ಸಲಹೆಗಾರರು)

(ಅನಿವಾರ್ಯ ಕಾರಣದಿಂದ ಚಕ್ರವರ್ತಿ ಸೂಲಿಬೆಲೆ

ಅವರ ‘ವಿಶ್ವಗುರು’ ಅಂಕಣ ಪ್ರಕಟವಾಗಿಲ್ಲ)

Leave a Reply

Your email address will not be published. Required fields are marked *

Back To Top