ರಥಬೀದಿಯಲ್ಲಿ ಸಾಂಪ್ರದಾಯಿಕ ಬಣ್ಣದೋಕುಳಿ

<ಬಣ್ಣ ಹಚ್ಚಿ ಸಂಭ್ರಮಿಸಿದ ಸಹಸ್ರಾರು ಭಕ್ತರು * ವೆಂಕಟರಮಣ ದೇವಸ್ಥಾನದ ವರ್ಷಾವಧಿ ರಥೋತ್ಸವ>

ಮಂಗಳೂರು: ನಗರದ ರಥಬೀದಿಯ ವೆಂಕಟರಮಣ ದೇವಸ್ಥಾನ ಆವರಣದಲ್ಲಿ ಬುಧವಾರ ಓಕುಳಿ ಹಬ್ಬದಲ್ಲಿ ಸಾವಿರಾರು ಮಂದಿ ಬಣ್ಣಗಳನ್ನು ಹಚ್ಚಿಕೊಂಡು, ನೃತ್ಯ ಮಾಡಿ ಸಂಭ್ರಮಿಸಿದರು.

ಮಂಗಳೂರು ರಥೋತ್ಸವ ಎಂದೇ ಹೆಸರುವಾಸಿಯಾಗಿರುವ ವೆಂಕಟರಮಣ ದೇವಸ್ಥಾನದ ವರ್ಷಾವಧಿ ಉತ್ಸವದ ಕೊನೇ ದಿನದಂದು ಓಕುಳಿ ಹಬ್ಬ ನಡೆಯುತ್ತದೆ. ಜಿಎಸ್‌ಬಿ ಸಮುದಾಯದವರ ಈ ಓಕುಳಿ ಹಬ್ಬದಲ್ಲಿ ಜಾತಿ, ಭೇದ ಮರೆತು ಒಬ್ಬರಿಗೊಬ್ಬರು ಬಣ್ಣ ಹಚ್ಚುತ್ತಾ ಸಂತಸ ಹಂಚಿಕೊಳ್ಳುವ ಮೂಲಕ ಪ್ರೀತಿ, ಸಹೋದರತ್ವ, ಬಾಂಧವ್ಯವನ್ನು ವ್ಯಕ್ತಪಡಿಸಿದರು.

ದೇವಸ್ಥಾನ ಮುಂಭಾಗದಲ್ಲಿ ನಾಸಿಕ್ ಬ್ಯಾಂಡ್ ಲಯಕ್ಕೆ ಪೂರಕವಾಗಿ ಬಣ್ಣಗಳನ್ನು ಪರಸ್ಪರ ಹಚ್ಚಿಕೊಳ್ಳುತ್ತಾ ಹೆಜ್ಜೆ ಹಾಕಿ, ಕುಣಿದು ಕುಪ್ಪಳಿಸಿದರು. ಒಂದೆಡೆ ಯುವಕರು ಬಣ್ಣಗಳ ಲೋಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೆ, ಅಲ್ಲಲ್ಲಿ ಮಕ್ಕಳು ಪಿಚಕಾರಿಗಳಲ್ಲಿ ಬಣ್ಣ ನೀರು ತುಂಬಿಸಿ, ಪರಸ್ಪರ ಚಿಮ್ಮಿಸುತ್ತಾ ಖುಷಿ ಪಟ್ಟರು. ಮತ್ತೆ ಹಲವರು ದೂರದಲ್ಲಿ ಈ ಸಂಭ್ರಮದ ಓಕುಳಿ ಹಬ್ಬವನ್ನು ಕಣ್ಣು ತುಂಬಿಕೊಂಡರು. ಸಣ್ಣ ಮಗುವಿನಿಂದ ಹಿಡಿದು ವಯೋವೃದ್ಧರವರೆಗೆ ಈ ಓಕುಳಿ ಸಂಭ್ರಮದಲ್ಲಿ ಪಾಲ್ಗೊಂಡರು. ಬೆಳಗ್ಗೆ ದೇವರ ಮೂರ್ತಿಯ ರಥಯಾತ್ರೆ ಆರಂಭಗೊಳ್ಳುತ್ತಿರುವಂತೆಯೇ ಈ ಓಕುಳಿ ಹಬ್ಬ ಆರಂಭಗೊಳ್ಳುತ್ತದೆ. ಬಳಿಕ ಸಂಜೆಯವರೆಗೆ ಇದು ಮುಂದುವರಿಯುತ್ತದೆ. ಈ ಬಾರಿ ಓಕುಳಿಯನ್ನು ಪರಿಸರ ಸಹ್ಯವಾಗಿ ಆಚರಿಸಿದ್ದು ವಿಶೇಷವಾಗಿತ್ತು.

ಮಂಗಳೂರು ರಥೋತ್ಸವದ ಕೊನೆಯ ದಿನ ಓಕುಳಿ ಸಂಭ್ರಮ. ಕಳೆದ 35 ವರ್ಷಗಳಿಂದ ಈ ಸಂಭ್ರಮದಲ್ಲಿ ಭಾಗವಹಿಸುತ್ತಿದ್ದು, ಅಧಿವೇಶವಿದ್ದರೂ ಅನುಮತಿ ಪಡೆದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಯುವಕರು ನಮೋ ಟಿಶರ್ಟ್ ಧರಿಸಿ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಿ ಆಯ್ಕೆಯಾಗಲು ಪ್ರಾರ್ಥನೆ ಮಾಡಿದ್ದಾರೆ. ಖಂಡಿತವಾಗಿಯೂ ಮೋದಿ ಮತ್ತೊಮ್ಮೆ ಪ್ರಧಾನಿ ಆಗುತ್ತಾರೆ.
ವೇದವ್ಯಾಸ ಕಾಮತ್ ಶಾಸಕರು, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ

Leave a Reply

Your email address will not be published. Required fields are marked *