More

    ಒಪೆಕ್​ನಿಂದ ಉತ್ಪಾದನೆ ಕಡಿತ; ತೈಲ ಬೆಲೆ ಏರಿಕೆ ನಿಶ್ಚಿತ

    ಕಳೆದ ವಾರಾಂತ್ಯದಲ್ಲಿ ಒಪೆಕ್ (ಆರ್ಗನೈಸೇಷನ್ ಆಫ್ ಪೆಟ್ರೋಲ್ ಎಕ್ಸ್​ಪೋರ್ಟಿಂಗ್ ಕಂಟ್ರೀಸ್, ಅಂದರೆ ಪೆಟ್ರೋಲ್ ರಫ್ತು ಮಾಡುವ ರಾಷ್ಟ್ರಗಳ ಸಂಘಟನೆ) ಸದಸ್ಯ ರಾಷ್ಟ್ರಗಳು ಕಚ್ಚಾ ತೈಲ ಉತ್ಪಾದನೆಯನ್ನು ಕಡಿತಗೊಳಿಸುವ ನಿರ್ಧಾರ ಕೈಗೊಂಡಿವೆ. ತೈಲದ ನಿಧಾನಗತಿಯ ಬೇಡಿಕೆ ಹಿನ್ನೆಲೆಯಲ್ಲಿ ಈ ತೀರ್ವನಕ್ಕೆ ಬರಲಾಗಿದೆ.

    ಸೌದಿ ಅರೇಬಿಯಾವು ದಿನಕ್ಕೆ 5 ಲಕ್ಷ ಬ್ಯಾರೆಲ್​ಗಳ ಸ್ವಯಂಪ್ರೇರಿತ ಕಡಿತಕ್ಕೆ ಮುಂದಾಗಿದೆ. ಇರಾಕ್ 2,11,000, ಸಂಯುಕ್ತ ಅರಬ್ ಸಂಸ್ಥಾನ 1,44,000, ಕುವೈತ್ 1,28,000, ಅಲ್ಜೀರಿಯಾ 48,000, ಓಮನ್ 40,000, ಕಜಕಿಸ್ತಾನ್ 78,000 ಹಾಗೂ ಗ್ಯಾಲನ್ 8,000 ಬ್ಯಾರೆಲ್​ನಷ್ಟು ತೈಲವನ್ನು ಪ್ರತಿದಿನ ಕಡಿಮೆ ಉತ್ಪಾದಿಸಲಿವೆ.

    ಜಾಗತಿಕ ತೈಲ ಉತ್ಪಾದನೆಯಲ್ಲಿ ಮೂರನೇ ಒಂದು ಭಾಗ ಹೊಂದಿರುವ ಒಪೆಕ್ ರಾಷ್ಟ್ರಗಳ ತೈಲ ಉತ್ಪಾದನೆ ಕಡಿತವು ಮೇ 2023ರಲ್ಲಿ ಪ್ರಾರಂಭವಾಗುತ್ತಿದ್ದು, ಈ ವರ್ಷಪೂರ್ತಿ ಮುಂದುವರಿಯಲಿದೆ. ಒಟ್ಟು ಕಡಿತವು ಅಂದಾಜು ಪ್ರತಿದಿನ 11.6 ಲಕ್ಷ ಬ್ಯಾರೆಲ್ ಇರಲಿದೆ. ಇದಲ್ಲದೆ, ರಷ್ಯಾ ಕೂಡ 2023ರ ಅಂತ್ಯದವರೆಗೆ ಪ್ರತಿದಿನ 5 ಲಕ್ಷ ಬ್ಯಾರೆಲ್ ಹೊಂದಾಣಿಕೆ ಮಾಡುವುದಾಗಿ ಸ್ವಯಂಪ್ರೇರಿತವಾಗಿ ಘೊಷಿಸಿದೆ.

    ಉತ್ಪಾದನೆಯಲ್ಲಿ ಈ ಕಡಿತವನ್ನು ಏಕೆ ಘೊಷಿಸಲಾಯಿತು? ಪ್ರಸ್ತುತ ದೈನಂದಿನ ಉತ್ಪಾದನೆಯು ದೈನಂದಿನ ಬೇಡಿಕೆಯನ್ನು ಪೂರೈಸಲು ಸಾಕಾಗುತ್ತದೆಯೇ?

    ತೈಲ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ಉದ್ದೇಶದೊಂದಿಗೆ ಮುಂಜಾಗ್ರತಾ ಕ್ರಮವಾಗಿ ಉತ್ಪಾದನೆ ಕಡಿತ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಒಪೆಕ್ ಹೇಳಿದೆ. ಜಾಗತಿಕ ಆರ್ಥಿಕತೆ ಬೆಳವಣಿಗೆಯ ನಿಧಾನಗತಿ ಮತ್ತು ಕಚ್ಚಾ ತೈಲ ಬೆಲೆಗಳ ಮೇಲೆ ಅಮೆರಿಕ ಬ್ಯಾಂಕಿಂಗ್ ಬಿಕ್ಕಟ್ಟಿನ ಪ್ರಭಾವವನ್ನು ತಗ್ಗಿಸುವ ಉದ್ದೇಶವು ಈ ಕಡಿತದ ಹಿಂದಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

    ಆರ್ಥಿಕತೆಯ ನಿಧಾನಗತಿ ಮತ್ತು ಬ್ಯಾಂಕಿಂಗ್ ಬಿಕ್ಕಟ್ಟಿನಿಂದಾಗಿ ಕಚ್ಚಾ ತೈಲ ಬೆಲೆಗಳು ಗಣನೀಯವಾಗಿ ಕುಸಿದಿದ್ದವು (ಬ್ಯಾರೆಲ್​ಗೆ 67-68 ಡಾಲರ್). ಆದರೀಗ, ಉತ್ಪಾದನೆ ಕಡಿತ ಘೊಷಣೆಯ ನಂತರ ಕಚ್ಚಾ ತೈಲ ಬೆಲೆಗಳು ಪ್ರತಿ ಬ್ಯಾರೆಲ್​ಗೆ 85 ಡಾಲರ್​ಗೆ ಏರಿಕೆಯಾಗಿ, 2021ರ ಡಿಸೆಂಬರ್ -2022ರ ಜನವರಿಯಲ್ಲಿ ಅವಧಿಯಲ್ಲಿನ ದರದ ಮಟ್ಟವನ್ನು ತಲುಪಿವೆ. 2022ರ ಮಾರ್ಚ್​ನಲ್ಲಿ ಕಚ್ಚಾ ತೈಲ ಬೆಲ ಪ್ರತಿ ಬ್ಯಾರೆಲ್​ಗೆ 139 ಡಾಲರ್ ತಲುಪಿತ್ತು.

    ತೈಲ ಪೂರೈಕೆಯಲ್ಲಿ ಈಗ ಯಾವುದೇ ತೊಂದರೆ ಇಲ್ಲ ಎಂದು ವಿಶ್ಲೇಷಕರು ಹೇಳುತ್ತಾರೆ. ಜಾಗತಿಕ ಕಚ್ಚಾ ತೈಲ ಉತ್ಪಾದನೆಯು 2022-23ರಲ್ಲಿ ಪ್ರತಿದಿನಕ್ಕೆ 10 ಕೋಟಿ ಬ್ಯಾರೆಲ್ ಇತ್ತು. 2023-24ರಲ್ಲಿ ಇದು 10.15-10.2 ಕೋಟಿ ಬ್ಯಾರೆಲ್ ತಲುಪುವ ನಿರೀಕ್ಷೆಯಿದೆ. ತೈಲ ಪೂರೈಕೆ 2023ರ ಫೆಬ್ರವರಿಯಲ್ಲಿ ಪ್ರತಿದಿನ 10.15 ಕೋಟಿ ಬ್ಯಾರೆಲ್ ಇತ್ತು.

    ಇಂಟರ್​ನ್ಯಾಷನಲ್ ಎನರ್ಜಿ ಏಜೆನ್ಸಿಯ (ಐಇಎ) ಮಾರ್ಚ್ ತಿಂಗಳ ತೈಲ ಮಾರುಕಟ್ಟೆ ವರದಿಯ ಪ್ರಕಾರ, 2023ರ ಜನವರಿಯಲ್ಲಿ ಜಾಗತಿಕ ದಾಸ್ತಾನುಗಳಲ್ಲಿ 5.29 ಕೋಟಿ ಬ್ಯಾರೆಲ್ ಏರಿಕೆ ಕಂಡಿತು. ಇದರಿಂದಾಗಿ ದಾಸ್ತಾನು ಮಟ್ಟ 700 ಕೋಟಿ ಬ್ಯಾರೆಲ್​ಗಳಿಗೆ ತಲುಪಿತು. 2021ರ ಸೆಪ್ಟೆಂಬರ್ ನಂತರದ ಅತಿಹೆಚ್ಚಿನ ದಾಸ್ತಾನು ಇದಾಗಿತ್ತು. 2023ರ ಫೆಬ್ರವರಿಯಲ್ಲಿ ಇದು ಇನ್ನಷ್ಟು ಹೆಚ್ಚಳ ಕಂಡಿದೆ. ಏಷ್ಯಾದ ಮಾರುಕಟ್ಟೆಯಲ್ಲಿ ತೀವ್ರ ಬೇಡಿಕೆಯ ಹೊರತಾಗಿಯೂ ಮೂರು ನೇರ ತ್ರೖೆಮಾಸಿಕಗಳಲ್ಲಿ ತೈಲದ ದಾಸ್ತಾನು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿದೆ.

    ಭಾರತಕ್ಕೂ ಫಜೀತಿ

    ತೈಲ ಉತ್ಪಾದನೆ ಕಡಿತವು ಭಾರತಕ್ಕೂ ಪ್ರತಿಕೂಲ ಪರಿಣಾಮ ಬೀರಲಿದೆ. ತೈಲ ಆಮದು ಪಾವತಿ ಹೆಚ್ಚಳ ಕಾಣಲಿದೆ. ಸರ್ಕಾರವು ದೈನಂದಿನ ಚಿಲ್ಲರೆ ವಾಹನ ಇಂಧನ ಬೆಲೆ ಪರಿಷ್ಕರಣೆ ಕಾರ್ಯವಿಧಾನವನ್ನು ಪುನರಾರಂಭಿಸಿದರೆ ಇದು ಹಣದುಬ್ಬರವನ್ನು ಹೆಚ್ಚಿಸಬಹುದು. ಒಂದು ವೇಳೆ ಸರ್ಕಾರವು ತೈಲ ಚಿಲ್ಲರೆ ಬೆಲೆಗಳನ್ನು ಸ್ಥಿರಗೊಳಿಸಿದರೆ, ತೈಲ ಕಂಪನಿಗಳು ಮತ್ತೆ ನಷ್ಟದತ್ತ ಸಾಗುತ್ತವೆ. ಇಂಧನ ಬೆಲೆ ಏರಿಕೆಯು ಆಹಾರ ಮತ್ತು ಮುಖ್ಯ ಹಣದುಬ್ಬರವನ್ನು ಮತ್ತಷ್ಟು ಹೆಚ್ಚಿಸಬಹುದಾಗಿದೆ.

    ಬ್ಯಾರೆಲ್​ಗೆ 100 ಡಾಲರ್?

    ರಫ್ತು ಮಾಡುವ ಕಚ್ಚಾ ತೈಲ ಉತ್ಪಾದನೆ ಕಡಿತವನ್ನು ಘೊಷಿಸಿದ ನಂತರ ತೈಲ ಬೆಲೆ ಶೇಕಡಾ 5ಕ್ಕಿಂತ ಹೆಚ್ಚು ಏರಿಕೆಯಾಗಿ, ಪ್ರತಿ ಬ್ಯಾರೆಲ್​ಗೆ 84.13 ಡಾಲರ್ ತಲುಪಿದೆ. ಇದು ಕಳೆದ 10-11 ತಿಂಗಳುಗಳಲ್ಲಿ ಅತಿಹೆಚ್ಚಿನ ಬೆಲೆ ಏರಿಕೆಯಾಗಿದೆ. ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಕುಸಿತದ ನಂತರ, ಕಚ್ಚಾ ತೈಲ ಬೆಲೆಯು ತೀರ ಕಡಿಮೆಯಾಗಿ ಬ್ಯಾರೆಲ್​ಗೆ 67 ಡಾಲರ್​ಗೆ ಕುಸಿದಿತ್ತು. ಕಚ್ಚಾ ತೈಲ ಬೆಲೆಯು 2023ರ ಡಿಸೆಂಬರ್​ನಿಂದ 2024ರ ಮಾರ್ಚ್ ವೇಳೆಯಲ್ಲಿ ಪ್ರತಿ ಬ್ಯಾರೆಲ್​ಗೆ 95-100 ಡಾಲರ್ ಇರಲಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ. ಉತ್ಪಾದನೆ ಕಡಿತವು ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಜಾಗತಿಕ ಆರ್ಥಿಕತೆಯ ಮೇಲೆ ಹಣದುಬ್ಬರದ ಒತ್ತಡವನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ.

    ರೂಪಾಯಿ ದುರ್ಬಲ ಚಾಲ್ತಿ ಖಾತೆ ಕೊರತೆ ಅಧಿಕ

    ಭಾರತಕ್ಕೆ ಅಗತ್ಯವಿರುವ ಕಚ್ಚಾ ತೈಲದ ಪೈಕಿ ಶೇ. 75ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಹೆಚ್ಚಿನ ಬೆಲೆಗಳು ಆಮದು ಪಾವತಿಯನ್ನು ಹೆಚ್ಚಿಸಲಿವೆ. ಇದರಿಂದ ಡಾಲರ್​ಗೆ ಹೆಚ್ಚಿನ ಬೇಡಿಕೆಯುಂಟಾಗಿ, ರೂಪಾಯಿ ದುರ್ಬಲಗೊಳ್ಳುತ್ತದೆ. ಅಲ್ಲದೆ, ಚಾಲ್ತಿ ಖಾತೆ ಕೊರತೆ ಇನ್ನಷ್ಟು ಹೆಚ್ಚಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts