ಮೈಸೂರು: ಏರಿಕೆಯಾಗಿರುವ ತೈಲಬೆಲೆ ಇಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಗತಿಪರ ಚಿಂತಕರ ವೇದಿಕೆಯಿಂದ ನಗರದ ನ್ಯಾಯಾಲಯ ಮುಂದಿನ ಗಾಂಧಿ ಪುತ್ಥಳಿ ಬಳಿ ಪ್ರತಿಭಟನೆ ನಡೆಸಲಾಯಿತು.
ವೇದಿಕೆ ರಾಜ್ಯಾಧ್ಯಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ನಿತ್ಯದ ಅಗತ್ಯ ವಸ್ತುಗಳಲ್ಲಿಯೂ ಏರಿಕೆಯಾಗಿ ಜನ ಸಾಮಾನ್ಯರ ಬದುಕು ದುಸ್ತರವಾಗಿದೆ ಎಂದು ದೂರಿದರು.
ತೈಲ ಬೆಲೆ ಏರಿಕೆಯಿಂದ ಬಸ್ ಪ್ರಯಾಣ ದರ ಸೇರಿದಂತೆ ಸರಕು, ಸೇವೆಗಳ ಬೆಲೆಯೂ ಏರಿಕೆಯಾಗುತ್ತಿದೆ. ಇಷ್ಟೆಲ್ಲಾ ಸಮಸ್ಯೆಗಳಾಗುತ್ತಿದ್ದರೂ ಕೇಂದ್ರ ಸರ್ಕಾರ ಮಾತ್ರ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಏರಿಕೆಯಾದಾಗ ಮಾತ್ರ ದೇಶದಲ್ಲೂ ಏರಿಕೆ ಮಾಡಲಾಗುತ್ತಿತ್ತು. ಆದರೆ, ಕೇಂದ್ರ ಸರ್ಕಾರ ನಿತ್ಯವೂ ತೈಲ ಬೆಲೆ ಪರಿಷ್ಕರಣೆ ಮಾಡುತ್ತಿದೆ ಎಂದು ದೂರಿದರು.
ಕೇಂದ್ರ ಸರ್ಕಾರ ಕೂಡಲೇ ತೈಲ ಬೆಲೆ ಮೇಲಿನ ತೆರಿಗೆ ತೆಗೆದುಹಾಕಿ ಜನರ ಆರ್ಥಿಕ ಬಾರ ಇಳಿಸಬೇಕು. ಈಗ ಆಗಿರುವ ತೊಂದರೆಗೆ ಸಾರ್ವಜನಿಕರ ಕ್ಷಮೆ ಯಾಚಿಸಬೇಕು. ಇಲ್ಲವಾದರೆ ಪ್ರಧಾನಿ, ಇಂಧನ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.