ಅಧಿಕೃತ ಫಲಿತಾಂಶ ಘೋಷಣೆ ವಿಳಂಬ

ಬೆಂಗಳೂರು: ಬೆಂಗಳೂರು ದಕ್ಷಿಣ, ಕೇಂದ್ರ ಮತ್ತು ಉತ್ತರ ಲೋಕಸಭಾ ಕ್ಷೇತ್ರಗಳ ಮತ ಎಣಿಕೆಗೆ ಸಿದ್ಧತೆಗಳು ಪೂರ್ಣಗೊಂಡಿವೆ. ಈ ಬಾರಿ 120 ವಿವಿ ಪ್ಯಾಟ್​ಗಳನ್ನು ಮತಯಂತ್ರಗಳ ಜತೆಗೆ ತಾಳೆ ಹಾಕಬೇಕಿರುವುದರಿಂದ ಹೆಚ್ಚುವರಿ ಕಾಲಾವಕಾಶ ಬೇಕಾಗಲಿದ್ದು, ಸಂಜೆ 6 ಗಂಟೆಯೊಳಗೆ ಅಧಿಕೃತ ಫಲಿತಾಂಶ ಘೋಷಣೆಯಾಗುವ ಸಾಧ್ಯತೆಯಿದೆ.

23ರ ಬೆಳಗ್ಗೆ 6 ಗಂಟೆಗೆ ಭದ್ರತಾ ಕೊಠಡಿಗಳಿಂದ ಯಂತ್ರಗಳನ್ನು ಹೊರಗೆ ತೆಗೆಯುವ ಕಾರ್ಯ ನಡೆಯಲಿದ್ದು, 8 ಗಂಟೆಗೆ ಎಣಿಕೆ ಕಾರ್ಯ ಆರಂಭವಾಗಲಿದೆ. ಮೊದಲ ಸುತ್ತಿನಲ್ಲಿ 11,626 ಅಂಚೆ ಮತಗಳ ಎಣಿಕೆ ನಡೆಯಲಿದೆ. ಪ್ರತಿ ಸುತ್ತಿನ ಎಣಿಗೆ ಮುಗಿದ ತಕ್ಷಣ ಆಯಾ ಸುತ್ತಿನ ಫಲಿತಾಂಶ ಘೋಷಿಸಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್. ಮಂಜುನಾಥಪ್ರಸಾದ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮತ ಎಣಿಕೆ ಪೂರ್ಣಗೊಂಡ ನಂತರ ಪ್ರತಿ ವಿಧಾನಸಭಾ ಕ್ಷೇತ್ರದ 5 ವಿವಿ ಪ್ಯಾಟ್ ಮತ್ತು ಮತಯಂತ್ರಗಳನ್ನು ತಾಳೆ ಹಾಕುವ ಕಾರ್ಯ ಮಾಡಲಾಗುತ್ತದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎಣಿಕೆ ಕೇಂದ್ರದಲ್ಲಿ 14 ಟೇಬಲ್​ಗಳನ್ನು ಇಡಲಾಗಿರುತ್ತದೆ. ಕ್ಷೇತ್ರಗಳ ವ್ಯಾಪ್ತಿ ಹೆಚ್ಚಳವಿದ್ದರೆ ಇನ್ನೂ ಹೆಚ್ಚಿನ ಟೇಬಲ್​ಗಳನ್ನು ಬಳಸಲಾಗುತ್ತದೆ. ಕೆ.ಆರ್. ಪುರ, ಬ್ಯಾಟರಾಯನಪುರ, ದಾಸರಹಳ್ಳಿ ಕ್ಷೇತ್ರಗಳ ಮತಗಳು ಎಣಿಕೆಯಾಗುವ ಕೇಂದ್ರಗಳಲ್ಲಿ ತಲಾ 26, ಯಶವಂತಪುರ ಕ್ಷೇತ್ರ 24, ಸರ್ವಜ್ಞನಗರ 21, ಮಹದೇವಪುರ 28, ಬೊಮ್ಮನಹಳ್ಳಿ ಕ್ಷೇತ್ರದ ಎಣಿಕೆಗೆ 24 ಟೇಬಲ್​ಗಳಿರಲಿವೆ ಎಂದು ವಿವರಿಸಿದರು.

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 31 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಕೇಂದ್ರದಲ್ಲಿ 22 ಹಾಗೂ ದಕ್ಷಿಣದಲ್ಲಿ 25 ಮಂದಿ ಸ್ಪರ್ಧಿಸಿದ್ದಾರೆ. ಅಭ್ಯರ್ಥಿಗಳ ಏಜೆಂಟ್​ಗಳಿಗೆ ಆಸನದ ವ್ಯವಸ್ಥೆ ಕಲ್ಪಿಸುವುದು ಕಷ್ಟ ಎಂದು ಮಂಜುನಾಥಪ್ರಸಾದ್ ಹೇಳಿದರು.

ಕಳೆದ ಚುನಾವಣೆಯಲ್ಲಿ 7 ವೀಕ್ಷಕರನ್ನು ನಿಯೋಜಿಸಲಾಗಿತ್ತು. ಈ ಬಾರಿ 14 ವೀಕ್ಷಕರನ್ನು ನಿಯೋಜಿಸಲಾಗಿದೆ. ವೀಕ್ಷಕರು ಹಾಗೂ ಮಾಧ್ಯಮದವರನ್ನು ಹೊರತುಪಡಿಸಿ ಯಾರೂ ಮೊಬೈಲ್ ತರಬಾರದು ಎಂದು ಸೂಚನೆ ನೀಡಲಾಗಿದೆ. ಎಣಿಕೆ ಕೇಂದ್ರದಲ್ಲಿ ಕೆಲಸ ಮಾಡುವ ವಿಧಾನದ ಕುರಿತು ಈಗಾಗಲೇ ಒಂದು ಹಂತದ ತರಬೇತಿ ನೀಡಲಾಗಿದೆ. ಮತ್ತೊಂದು ತರಬೇತಿಯನ್ನು 22 ರಂದು ನೀಡಲಾಗುವುದು. ಚುನಾವಣಾ ಸಿಬ್ಬಂದಿ ಯಾವ ಟೇಬಲ್​ನಲ್ಲಿ ಕೆಲಸ ಮಾಡಬೇಕೆಂಬುದನ್ನು ಎಣಿಕೆಯ ದಿನವೇ ತಿಳಿಸಲಾಗುವುದು ಎಂದು ಹೇಳಿದರು.

ಗುರುವಾರ ಮದ್ಯ ಮಾರಾಟಕ್ಕಿಲ್ಲ ಅವಕಾಶ

ಮೇ 23ರ ಮತ ಎಣಿಕೆ ದಿನದಂದು ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಂದು ಬೆಳಗ್ಗೆ 6 ರಿಂದ ಮರುದಿನ ಬೆಳಗ್ಗೆ 6ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. 92 ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, 1.52 ಕೋಟಿ ರೂ. ನಗದು ಹಾಗೂ 1.10 ಲಕ್ಷ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಬಿಗಿ ಬಂದೋಬಸ್ತ್ ವ್ಯವಸ್ಥೆ

ಮತ ಎಣಿಕೆ ಕೇಂದ್ರಗಳು ಮತ್ತು ನಗರ ದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗುತ್ತಿದೆ. ಮೂರು ಕೇಂದ್ರಗಳಲ್ಲಿ 7 ಡಿಸಿಪಿ, 24 ಎಸಿಪಿ, 76 ಇನ್​ಸ್ಪೆಕ್ಟರ್, 180 ಸಬ್ ಇನ್​ಸ್ಪೆಕ್ಟರ್, 2 ಸಾವಿರ ಎಎಸ್​ಐ, ಪಿಸಿಗಳನ್ನು ನಿಯೋಜಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ. ಸುನಿಲ್​ಕುಮಾರ್ ತಿಳಿಸಿದರು. ಇದಲ್ಲದೆ ಅರೆಸೇನಾಪಡೆಯ ಎರಡು ತಂಡ ಹಾಗೂ ಕೆಎಸ್​ಆರ್​ಪಿಯ 23 ತುಕಡಿಗಳು, 30 ನಗರ ಸಶಸ್ತ್ರ ತುಕಡಿಗಳು ಭದ್ರತೆ ಕಾರ್ಯ ನಿರ್ವಹಿಸಲಿವೆ ಎಂದು ಹೇಳಿದರು.

ಇಲ್ಲಿ ನಡೆಯುತ್ತೆ ಮತ ಎಣಿಕೆ

# ಬೆಂಗಳೂರು ದಕ್ಷಿಣ: ಎಸ್​ಎಸ್​ಎಂಕೆಆರ್​ವಿ ಕಾಲೇಜು, ಜಯನಗರ

# ಬೆಂಗಳೂರು ಕೇಂದ್ರ: ಮೌಂಟ್ ಕಾರ್ವೆಲ್ ಕಾಲೇಜು, ವಸಂತನಗರ

# ಬೆಂಗಳೂರು ಉತ್ತರ: ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್, ವಿಠಲ್ ಮಲ್ಯ ರಸ್ತೆ.

Leave a Reply

Your email address will not be published. Required fields are marked *