ಹುತ್ತೂರು ಕೆರೆಯಂಗಳಕ್ಕೆ ಅಧಿಕಾರಿಗಳ ಭೇಟಿ

ಗುಂಡ್ಲುಪೇಟೆ: ತಾಲೂಕಿನ ಹುತ್ತೂರು ಕೆರೆಯಂಗಳಕ್ಕೆ ಮಂಗಳವಾರ ಭೇಟಿ ನೀಡಿದ ಕೇಂದ್ರ ಜಲ ಸಂಪನ್ಮೂಲ ಇಲಾಖೆ ಅಧಿಕಾರಿ ಎಂ.ಪ್ರಿಯಾಂಕಾ ನೇತೃತ್ವದ ಅಧಿಕಾರಿಗಳ ತಂಡ, ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ವ್ಯಾಪ್ತಿಗೆ ಒಳಪಡುವ ಪ್ರದೇಶಗಳ ಬಗ್ಗೆ ಮಾಹಿತಿ ಪಡೆಯಿತು.

ನಂತರ ತೆರಕಣಾಂಬಿಯ ರೈತಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ರೈತರೊಂದಿಗೆ ಅಧಿಕಾರಿಗಳು ಸಮಾಲೋಚನೆ ನಡೆಸಿದರು. ರಾಷ್ಟ್ರದಲ್ಲಿ ಅಂತರ್ಜಲ ಮಟ್ಟ ಕಡಿಮೆಯಿರುವ ತಾಲೂಕುಗಳ ಪಟ್ಟಿಯಲ್ಲಿ ಗುಂಡ್ಲುಪೇಟೆಯೂ ಸೇರಿದ್ದರಿಂದ ವಿವಿಧ ಇಲಾಖೆಗಳು ಜಲಸಂವರ್ಧನೆಗೆ ಕೈಗೊಂಡ ಕ್ರಮಗಳು, ಕೃಷಿ ಹೊಂಡ, ಚೆಕ್ ಡ್ಯಾಂಗಳನ್ನು ಪರಿಶೀಲಿಸಿದರು.

ಮುಂಬರುವ ವರ್ಷದಲ್ಲಿ ಮಳೆಯ ನೀರನ್ನು ಸಮಗ್ರವಾಗಿ ಇಂಗಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ಬಗ್ಗೆ ಕ್ರಿಯಾಯೋಜನೆ ತಯಾರಿಸುವ ಸಲುವಾಗಿ ರೈತರೊಂದಿಗೆ ಚರ್ಚಿಸಿದರು.

ಈ ವೇಳೆ ರೈತರು ಮಾತನಾಡಿ, ಮಾರುಕಟ್ಟೆಗಳಲ್ಲಿ ಶೇ.7ರಷ್ಟು ದಾಟಿದ ದಳ್ಳಾಳಿಗಳ ಕಮಿಷನ್ ಹಾವಳಿ, ಆನ್‌ಲೈನ್ ಟ್ರೇಡಿಂಗ್ ವ್ಯವಸ್ಥೆ ಇಲ್ಲದೆ ಅನಿವಾರ್ಯವಾಗಿ ಮಧ್ಯವರ್ತಿಗಳನ್ನು ಅವಲಂಬಿಸಬೇಕಾಗಿದೆ. ಪ್ರತಿ ವರ್ಷವೂ ಫಸಲ್‌ಬಿಮಾ ಯೋಜನೆಯಲ್ಲಿ ನೋಂದಾಯಿಸಿದರೂ ಬೆಳೆ ನಾಶವಾದ ರೈತರಿಗೆ ಪರಿಹಾರ ದೊರೆಯುತ್ತಿಲ್ಲ. ಕಳೆದ ಸಾಲಿನಲ್ಲಿ ಹುರುಳಿ ಬೆಳೆಗೆ ಚಾಮರಾಜ ತಾಲೂಕಿಗೆ ವಿಮೆ ಹಣ ನೀಡಿದ್ದರೂ ಗುಂಡ್ಲುಪೇಟೆ ರೈತರಿಗೆ ದೊರೆತಿಲ್ಲ. ಕೃಷಿ ಹೊಂಡಕ್ಕೆ ಸದ್ಯ ನೀಡುತ್ತಿರುವ ಟಾರ್ಪಾಲಿನ್ ಬಿಸಿಲಿಗೆ ಬೇಗನೆ ನಾಶವಾಗುತ್ತಿರುವುದರಿಂದ ಅದರ ಬದಲು ಸಿಮೆಂಟ್ ಅಳವಡಿಕೆ ಮಾಡಲು ಯೋಜನೆ ರೂಪಿಸಬೇಕು. ಸರ್ಕಾರದ ಯಾವುದೇ ಯೋಜನೆಗಳಲ್ಲಿ ಹಣ ಕಟ್ಟಿಸಿಕೊಳ್ಳಲು ಬ್ಯಾಂಕ್‌ಗಳು ನಿರಾಕರಿಸುತ್ತಿವೆ. ಇದರಿಂದ ರೈತರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ದೂರಿದರು.

ಎಲ್ಲವನ್ನೂ ಆಲಿಸಿದ ಅಧಿಕಾರಿಗಳು, ಮುಂದಿನ ನರೇಗಾ ಯೋಜನೆಯಲ್ಲಿ ಕೃಷಿ ಇಲಾಖೆ ಕೃಷಿ ಹೊಂಡ, ಚೆಕ್ ಡ್ಯಾಂ ನಿರ್ಮಿಸಲು ಸಹಾಯಧನ ನೀಡುತ್ತಿದೆ. ಎಲ್ಲರೂ ತಮ್ಮ ಜಮೀನುಗಳಲ್ಲಿ ಬದುಗಳನ್ನು ನಿರ್ಮಿಸಿಕೊಳ್ಳುವ ಮೂಲಕ ಮಳೆ ನೀರು ಇಂಗುವಂತೆ ಮಾಡಿ ಅಂತರ್ಜಲ ಮಟ್ಟ ವೃದ್ಧಿಸಿಕೊಳ್ಳಬೇಕು. ಈ ಬಗ್ಗೆ ಸಮಗ್ರ ಕ್ರಿಯಾಯೋಜನೆ ತಯಾರಿಸಿ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಪರಿಣಾಮಕಾರಿ ಕ್ರಮಕೈಗೊಳ್ಳಲಾಗುವುದು ಎಂದರು.
ಕೃಷಿ ಇಲಾಖೆಯ ಉಪನಿರ್ದೇಶಕ ಡಾ.ಮುತ್ತುರಾಜ್, ಕೃಷಿ ಅಧಿಕಾರಿ ಕೆ.ಎನ್.ಪರಮೇಶ್ವರಪ್ಪ, ನಾಡಕಚೇರಿಯ ಕಂದಾಯಾಧಿಕಾರಿ ನಂಜೇಗೌಡ ಮತ್ತಿತರರಿದ್ದರು.

 

Leave a Reply

Your email address will not be published. Required fields are marked *