ಆಲೂರು ಕ್ವಾರಿ ಮೇಲೆ ಅಧಿಕಾರಿಗಳ ದಾಳಿ

ಕುಂದಾಪುರ: ಆಲೂರು ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅತಿಕ್ರಮ ಕೆಂಪುಕಲ್ಲು ಕ್ವಾರಿ ಮೇಲೆ ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಗ್ರಾಪಂ ಅಭಿವೃದ್ಧಿ ಅಧಿಕಾರಿ ಜತೆ ಶುಕ್ರವಾರ ದಾಳಿ ಮಾಡಿದ್ದಾರೆ.
ಅತಿಕ್ರಮ ಗಣಿಗಾರಿಕೆಗೆ ಆಲೂರು ಹಾಳು..! ಶೀರ್ಷಿಕೆಯಡಿ ‘ವಿಜಯವಾಣಿ’ ಗುರುವಾರ ವಿಸ್ಕೃತ ವರದಿ ಪ್ರಕಟಿಸಿತ್ತು. ಈ ವರದಿ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಮಹೇಶ್, ಆಲೂರು ಗ್ರಾಪಂ ಪಿಡಿಒ ಸುಶೀಲಾ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು.
ದಾಳಿ ಸಂದರ್ಭ ಆಲೂರು ಪ್ರೌಢಶಾಲೆ ಸಮೀಪದ ಕಲ್ಲುಕ್ವಾರಿ ಗಣಿಗಾರಿಕೆ ನಿಲ್ಲಿಸಿದ್ದು, ಕಲ್ಲು ಕೊರೆಯುವ ಯಂತ್ರವನ್ನು ಸ್ಥಳಾಂತರಿಸಲಾಗಿದ್ದು, ಸ್ಥಳದಲ್ಲಿ ಗಣಿಗಾರಿಕೆ ನಡೆಸಿದ ಕುರುಹು ಬಿಟ್ಟರೆ ಮತ್ತೇನೂ ಸಿಗಲಿಲ್ಲ. ಆಲೂರು ಮಾರಣಕಟ್ಟೆ ರಸ್ತೆ ಪಕ್ಕದ ವಿಶಾಲ ಜಾಗದಲ್ಲಿ ಗಣಿ ಇಲಾಖೆ ಹೊಂಡದ ಸುತ್ತ ಬೇಲಿ ನಿರ್ಮಿಸಿದ್ದು, ಅಲ್ಲಿ ಗಣಿಗಾರಿಕೆ ನಡೆಸಲಾಗುತ್ತಿತ್ತು. ಕೆಂಪುಕಲ್ಲು ಕ್ವಾರಿ ನಡೆಯುವ ಸ್ಥಳ ಅಭಯಾರಣ್ಯ ಹಾಗೂ ವೈಲ್ಡ್‌ಲೈಫ್ ಸರಹದ್ದಿನಲ್ಲಿದ್ದು, ದಾಳಿ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಇಲ್ಲದೇ ಇದ್ದದ್ದು ಸ್ಥಳೀಯರಲ್ಲಿ ಅಸಮಾಧಾನ ಮೂಡಿಸಿತು.
ದಾಳಿ ನಡೆಸಿದ ಎಲ್ಲ ಕಡೆ ಮಹಜರು ನಡೆಸಿದ್ದು, ದಾಸ್ತಾನು ಕಲ್ಲುಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ. ಅತಿಕ್ರಮ ಕೆಂಪುಕಲ್ಲು ಗಣಿ ಬಗ್ಗೆ ಸಂಪೂರ್ಣ ವರದಿ ಸಿದ್ಧಪಡಿಸಿ, ಶನಿವಾರ ಕುಂದಾಪುರ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲಾಗುತ್ತದೆ ಎಂದು ಅಧಿಕಾರಿ ಮಹೇಶ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಬಾರದ ಅರಣ್ಯ ಇಲಾಖೆ ಅಧಿಕಾರಿಗಳು: ಆಲೂರು ಕೆಂಪುಕಲ್ಲು ಗಣಿ ನಡೆಯುವ ಸ್ಥಳಕ್ಕೆ ಆಲೂರು ಗ್ರಾಪಂ ಪಿಡಿಒ, ಗಣಿ ಹಾಗೂ ಭೂವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರೂ, ಅರಣ್ಯ ಇಲಾಖೆ ಯಾವುದೇ ಅಧಿಕಾರಿ ಸ್ಥಳಕ್ಕೆ ಬಾರದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಕೆಆರ್‌ಡಿಎಲ್ ಮೂಲಕ ಕಲ್ಲು ತೆಗೆದ ಹೊಂಡಕ್ಕೆ ಕಲ್ಲು ಕಂಬನೆಟ್ಟು ಕಲ್ಲುಕ್ವಾರಿ ಹೊಂಡ ಅಪಾಯ ರಹಿತವಾಗಿ ಮಾಡಿದ ಪ್ರದೇಶದಲ್ಲೇ ಕೆಂಪುಕಲ್ಲು ತೆಗೆಯಲಾಗುತ್ತಿದೆ. ಪ್ರಸಕ್ತ ಕಲ್ಲು ತೆಗೆಯುವ ಪ್ರದೇಶ ಅರಣ್ಯ ಇಲಾಖೆ ಸೇರಿದ್ದು, ಆರ್‌ಟಿಸಿಯಲ್ಲೂ ನಮೂದಾಗಿದೆ. ಈ ಹಿನ್ನೆಲೆಯಲ್ಲಿ ಗಣಿ ಇಲಾಖೆ ಅಧಿಕಾರಿಗಳು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಹಜರು ನಡೆಸುವ ಸಂದರ್ಭ ಸ್ಥಳಕ್ಕೆ ಬರುವಂತೆ ಸೂಚಿಸಿದರೂ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಬಾರದೆ ಕಲ್ಲು ತೆಗೆಯುವ ಸ್ಥಳ ಅರಣ್ಯ ಇಲಾಖೆಗೆ ಸೇರಿಲ್ಲ ಎಂದು ಹೇಳುವ ಮೂಲಕ ಆಲೂರು ವಲಯ ಅರಣ್ಯಾಧಿಕಾರಿ ಹೇಳಿಕೆ ಅನುಮಾನ ಹುಟ್ಟಿಸುವಂತೆ ಮಾಡಿದೆ. ಪ್ರಸಕ್ತ ಕಲ್ಲು ತೆಗೆಯುವ ಸ್ಥಳ ವೈಲ್ಡ್ ಲೈಪ್ ಹಾಗೂ ಅಭಯಾರಣ್ಯಕ್ಕೆ ಸೇರುತ್ತದೆ.

ಆಲೂರು ಅರಣ್ಯ ಪ್ರದೇಶಕ್ಕೆ ಸೇರಿದ ಜಾಗ ತಮ್ಮದಲ್ಲ ಎಂದಿರುವುದರಿಂದ ಅರಣ್ಯ ಇಲಾಖೆಗೆ ಎನ್‌ಒಸಿ ಕೊಡಲು ಬರೆಯಲಾಗುತ್ತದೆ. ಅರಣ್ಯ ಇಲಾಖೆಗೆೆ ಸಂಬಂಧಪಡದ ಜಾಗವಾದರೆ ಅದು ಸರ್ಕಾರಕ್ಕೆ ಸೇರುತ್ತದೆ. ಆಲೂರು ಗ್ರಾಪಂ ಜಾಗ ವಶಕ್ಕೆ ಪಡೆದು ಅದನ್ನು ನಿವೇಶನವಾಗಿ ವಿಂಗಡಿಸಿ ವಿತರಿಸಲಿದೆ.
|ಸುಶೀಲಾ, ಪಿಡಿಒ,ಆಲೂರು ಗ್ರಾಮ ಪಂಚಾಯಿತಿ.

ಆಲೂರು ಅತಿಕ್ರಮ ಕಲ್ಲುಕ್ವಾರಿ ಮೇಲೆ ದಾಳಿ ನಡೆಸಿ, ಮಹಜರು ಮಾಡಲಾಗಿದೆ. ಕಲ್ಲು ತೆಗೆಯುವ ಸ್ಥಳ ಅರಣ್ಯ ಇಲಾಖೆಗೆ ಸೇರಿದೆ ಎಂದು ಆರ್‌ಟಿಸಿಯಲ್ಲಿ ತಿಳಿಸಿದ್ದು, ಅದರಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸ್ಥಳಕ್ಕೆ ಬಾರದೆ, ಅರಣ್ಯ ಇಲಾಖೆ ಇದು ತಮಗೆ ಸೇರಿದ ಜಾಗವಲ್ಲ ಎಂಬ ಸ್ಟೇಟ್‌ಮೆಂಟ್ ಕೊಟ್ಟಿದ್ದಾರೆ. ಕಲ್ಲು ತೆಗೆದ ಬಗ್ಗೆ ಪ್ರಕರಣ ದಾಖಲಿಸಿ, ಕುಂದಾಪುರ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲಾಗುತ್ತದೆ.
|ಮಹೇಶ್, ಅಧಿಕಾರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಡುಪಿ