ಅಧಿಕಾರಿಗಳ ಸುತ್ತ ಅನುಮಾನದ ಹುತ್ತ

ಬಾಗಲಕೋಟೆ: ಕೋಟೆನಾಡಿನ ಅಂಗನವಾಡಿ ಕೇಂದ್ರಗಳಲ್ಲಿನ ಫಲಾನುಭವಿಗಳಿಗೆ ಪೌಷ್ಟಿಕ ಆಹಾರ ಸಾಮಗ್ರಿ ವಿತರಣೆಯಲ್ಲಿ ಭಾರಿ ಗೋಲ್‍ಮಾಲ್ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ಪ್ರಕರಣ ದಿನೇ ದಿನೆ ಹೊಸ ರೂಪ ಪಡೆದುಕೊಳ್ಳುತ್ತಿದ್ದು, ಇದೀಗ ಅನುಮಾನದ ಕಟಕಟೆಯಲ್ಲಿ ಐಎಎಸ್ ಹಾಗೂ ಇತರೆ ಅಧಿಕಾರಿಗಳು ಇದ್ದಾರೆ. ಅಂಗನವಾಡಿ ಕೇಂದ್ರಗಳಿಗೆ ಪೌಷ್ಟಿಕ ಆಹಾರ ಸಾಮಗ್ರಿ ಪೂರೈಕೆ ಮಾಡುವ ಜಿಲ್ಲೆಯ ಎಂಎಸ್​ಪಿಟಿಸಿಗಳಿಗೆ ಆಹಾರ ಸಾಮಗ್ರಿಗಳಿಗೆ ಹೆಚ್ಚಿನ ದರ ನಿಗದಿ ಮಾಡಿರುವುದು ಹಾಗೂ ಬೆಲೆಯನ್ನು ಕಾಲಕಾಲಕ್ಕೆ ಪರಿಷ್ಕರಣೆ ಮಾಡದೇ 27 ತಿಂಗಳು ಮುಂದುವರಿಸಿಕೊಂಡು ಬಂದಿರು ವುದು ಚರ್ಚೆಯ ವಿಷಯವಾಗಿದೆ.

ಹಿಂದಿನ ಡಿಸಿ ಕಡೆಗೆ ಬೊಟ್ಟು: 2015ರಲ್ಲಿ ಅಂದಿನ ಜಿಲ್ಲಾಧಿಕಾರಿ ಆಗಿದ್ದ, ಸದ್ಯ ಬೆಳಗಾವಿ ಪ್ರಾದೇಶಿಕ ಆಯುಕ್ತರಾಗಿರುವ ಪಿ.ಎ. ಮೇಘಣ್ಣವರ ವಿರುದ್ಧ ಯುವಶಕ್ತಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ವೈ.ಎನ್. ಹೆಗಡೆ ಗಂಭೀರ ಆರೋಪ ಮಾಡಿದ್ದಾರೆ. ಅಂದು ಬಾಗಲಕೋಟೆ ಡಿಸಿ ಆಗಿದ್ದ ಮೇಘಣ್ಣವರ ಸಮಿತಿ ಅಧ್ಯಕ್ಷರಾಗಿ ಸಭೆಯಲ್ಲಿ ತೆಗೆದುಕೊಂಡ ದರ ನಿಗದಿ ತೀರ್ವನವೇ ತಪ್ಪು. ಸರ್ಕಾರದ ಬೆಂಬಲ ಬೆಲೆಗಿಂತ ಅಧಿಕ ದರ ನಿಗದಿ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಪ್ರತಿ 6 ತಿಂಗಳಿಗೊಮ್ಮೆ ಬೆಲೆ ಪರಿಷ್ಕರಣೆ ಮಾಡಲು ಸಭೆ ನಡೆಸದಿರುವುದು ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಕ್ಕೆ ಪುಷ್ಟಿ ನೀಡಿದೆ. ಇದರಿಂದ ಸರ್ಕಾರಕ್ಕೆ 30 ಕೋಟಿ ರೂ. ನಷ್ಟವಾಗಿದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಶನಿವಾರ ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ವಕೀಲರಾದ ವೈ.ಎನ್. ಹೆಗಡೆ ಒತ್ತಾಯಿಸಿದ್ದಾರೆ. ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದ ಯಲ್ಲಪ್ಪ ಎಂಬುವರು ಐಎಎಸ್ ಅಧಿಕಾರಿ ಮೇಘಣ್ಣವರ ವಿರುದ್ಧ ಲೋಕಾಯುಕ್ತರಿಗೆ ದೂರು ಸಹ ಸಲ್ಲಿಸಿದ್ದಾರೆ.

ಮೇಘಣ್ಣವರ ವಾದವೇನು?: ವೈ.ಎನ್. ಹೆಗಡೆ ಅವರ ಆರೋಪವನ್ನು ಸದ್ಯ ಪ್ರಾದೇಶಿಕ ಆಯುಕ್ತರಾಗಿರುವ ಪಿ.ಎ. ಮೇಘಣ್ಣವರ ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ಶನಿವಾರ ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಅವರು, ಅಂದು ನಿಗದಿ ಮಾಡಿರುವ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಈ ಬಗ್ಗೆ ಇಲಾಖೆ ಅಧಿಕಾರಿಗಳು ನೀಡಿರುವ ದರ ಪಟ್ಟಿ, ಮಾರುಕಟ್ಟೆಯ ದರಪಟ್ಟಿ ತರಿಸಿಕೊಂಡು ದರ ನಿಗದಿಪಡಿಸಲಾಗಿದೆ. ಇದರಲ್ಲಿ ಯಾವುದೇ ಲೋಪವಾಗಿಲ್ಲ ಎನ್ನುತ್ತಾರೆ.

ಆರು ತಿಂಗಳಿಗೊಮ್ಮೆ ನಡೆಸಬೇಕಿದ್ದ ಸಭೆ ನಡೆಯದಿರಲು ಹಾಗೂ ಹಲವು ತಿಂಗಳವರೆಗೂ ಅದೇ ದರ ಇರುವುದಕ್ಕೆ ನಾನು ಹೊಣೆಯಲ್ಲ. ಜಿಪಂ ಸಿಇಒ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರನ್ನೊಳಗೊಂಡ ಹಲವು ಅಧಿಕಾರಿಗಳ ಸಮಿತಿ ಇದೆ.

ಈ ಬಗ್ಗೆ ನಾನು 2016ರ ಜುಲೈ ತಿಂಗಳಲ್ಲಿ ಸಭೆ ನಡೆಸಿ, ದರ ಪರಿಷ್ಕರಣೆ ಬಗ್ಗೆ ಬಾಗಲಕೋಟೆ ಜಿಲ್ಲೆಯ ಸುತ್ತಮುತ್ತಲಿರುವ ಜಿಲ್ಲೆಗಳಲ್ಲಿ ನಿಗದಿ ಪಡಿಸಿರುವ ದರಪಟ್ಟಿ ಪಡೆದುಕೊಂಡು ಎಂಎಸ್​ಪಿಟಿಸಿಗೆ ನೀಡಿರುವ ದರ ಹಾಗೂ ಲಾಭಾಂಶ ತುಲಾನಾತ್ಮಕವಾಗಿ ಪರಿಶೀಲಿಸಿ ವರದಿ ಸಲ್ಲಿಸಲು ನಿರ್ದೇಶನ ನೀಡಿದ್ದೆ. ನನಗೆ ನವೆಂಬರ್​ನಲ್ಲಿ ಮಾಹಿತಿ ನೀಡಿದರು. ಡಿಸೆಂಬರ್ 12ರಂದು ಸಮಿತಿ ಸಭೆ ನಡೆಸಿ, ಎಂಎಸ್​ಪಿಟಿಸಿಗೆ ದರ ನಿಗದಿ ಪಡಿಸುವುದು, ಲಾಭಾಂಶದ ಬಗ್ಗೆ ಮಾಹಿತಿ ಪಡೆದು ಜಿಪಂ ಸಿಇಒ ಮೂಲಕ ವರದಿ ನೀಡುವುದು, ಮುಂದಿನ ಸಭೆಯಲ್ಲಿ ದರ ನಿರ್ಧಾರ ಮಾಡಲು ಸಭೆಯಲ್ಲಿ ತೀರ್ವನಿಸಲಾಗಿತ್ತು.

ಬಾಗಲಕೋಟೆ ಜಿಲ್ಲಾಧಿಕಾರಿ ಹುದ್ದೆಯಿಂದ ವರ್ಗಾವಣೆಯಾಗಿ ಬರುವವರೆಗೂ ಕಡತ ನನ್ನ ಕಡೆ ಬಂದಿಲ್ಲ. ಅಂದು ಜಿಪಂ ಸಿಇಒ ಆಗಿದ್ದ, ಸದ್ಯ ವಿಜಯಪುರ ಜಿಲ್ಲಾ ಪಂಚಾಯಿತಿ ಸಿಇಒ ಆಗಿರುವ ವಿಕಾಸ ಸುರಳಕರ್, ಉಪ ಕಾರ್ಯದರ್ಶಿ ಅಮರೇಶ ನಾಯಕ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ನನ್ನನ್ನು ಕತ್ತಲಲ್ಲಿಟ್ಟು ಆಹಾರ ಸಾಮಗ್ರಿ ಪೂರೈಕೆ ದರ ಕೊಡುತ್ತ ಬಂದಿದ್ದಾರೆ. ನನ್ನ ಬಳಿ ಕಡತವನ್ನೇ ತಂದಿಲ್ಲ. ಹೀಗಾಗಿ ನನ್ನ ಲೋಪವೇನಿದೆ ? ಇದಕ್ಕೆಲ್ಲ ಆ ಅಧಿಕಾರಿಗಳೇ ನೇರ ಹೊಣೆ. ಪ್ರಕರಣದಲ್ಲಿ ತಮ್ಮ ಪಾತ್ರ ಕಿಂಚಿತ್ತೂ ಇಲ್ಲ ಎಂದು ಮೇಘಣ್ಣವರ ಸಂಬಂಧಿಸಿದ ಎಲ್ಲ ಕಡತ ಬಿಚ್ಚಿಟ್ಟರು.

ತನಿಖೆಯಾಗಲಿ: ಪ್ರಕರಣದ ಬಗ್ಗೆ ತಮ್ಮ ವಿರುದ್ಧ ಯುವಶಕ್ತಿ ಹೋರಾಟ ಸಮಿತಿ ಆರೋಪ ಮಾಡಿದ್ದು, ಈ ಬಗ್ಗೆ ಯಾವುದೇ ತನಿಖೆಯಾದರೂ ತಮ್ಮ ಅಭ್ಯಂತರವಿಲ್ಲ. ನನ್ನ ಮೇಲೆ ಆರೋಪ ಬಂದಿರುವುದರಿಂದ ಬೇರೆ ಜಿಲ್ಲೆಯ ಅಧಿಕಾರಿಗಳ ತಂಡದ ಮೂಲಕ ಪ್ರಕರಣದ ಕುರಿತು ತನಿಖೆ ನಡೆಸಲಾಗುವುದು. ನನ್ನ ಸೇವಾವಧಿಯಲ್ಲಿ ಎಂದೂ ತಪು್ಪ ಮಾಡಿಲ್ಲ. ಒಂದು ನೋಟಿಸ್ ಪಡೆದಿಲ್ಲ. ಇದೀಗ ತಮ್ಮನ್ನು ತೇಜೋವಧೆ ಮಾಡಲು ಆರೋಪ ಮಾಡಲಾಗುತ್ತಿದೆ. ಈ ಬಗ್ಗೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆಯೂ ಸಲಹೆ ಪಡೆದು ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಮೇಘಣ್ಣವರ ತಿಳಿಸಿದ್ದಾರೆ.