ಮುದ್ದೇಬಿಹಾಳ: ಸರ್ಕಾರದ ಜನಪರ ಯೋಜನೆಗಳನ್ನು ಜಾರಿಗೊಳಿಸುವ ಜವಾಬ್ದಾರಿ ಅಧಿಕಾರಿಗಳದ್ದಾಗಿದೆ. ಸರ್ಕಾರಕ್ಕೆ ಒಳ್ಳೆಯ ಹೆಸರು ತರಬೇಕೆನ್ನುವುದು ನಮ್ಮೆಲ್ಲರ ಅಪೇಕ್ಷೆ. ಈ ತಾಲೂಕಿನಲ್ಲಿ ಸರಿಯಾಗಿ ಕೆಲಸ ಮಾಡುವ ಅಧಿಕಾರಿಗಳು ಬೇಕು. ಮನಸ್ಸಿದ್ದವರು ಇಲ್ಲಿರಿ, ಇಲ್ಲದವರು ಬೇರೆ ಕಡೆ ಹೋಗಿ ಎಂದು ಶಾಸಕ, ಕೆಎಸ್‌ಡಿ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಹೇಳಿದರು.
ಇಲ್ಲಿನ ತಾಪಂ ಕಚೇರಿ ಆವರಣದಲ್ಲಿ ಸೋಮವಾರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ಸಮಿತಿ ಅಧ್ಯಕ್ಷ ಶಂಕರಗೌಡ ಹಿರೇಗೌಡರ ಅವರು ತಾಪಂ ಅಡಿ ಬರುವ ಎಲ್ಲ 36 ಇಲಾಖೆಗಳ ಮೇಲುಸ್ತುವಾರಿ ನಡೆಸುವ ಅಧಿಕಾರ ಹೊಂದಿದ್ದಾರೆ. ಕೆಡಿಪಿ ಸಭೆಯಲ್ಲೂ ಪಾಲ್ಗೊಳ್ಳುತ್ತಾರೆ. ಅವರ ಕೆಲಸ 5 ಗ್ಯಾರಂಟಿಗಳಿಗೆ ಮಾತ್ರ ಸೀಮಿತವಲ್ಲ. ಜನರಿಗೆ ಸಹಾಯವಾಗುವ ಕೆಲಸಕ್ಕೆ ಅವರು ಸ್ಪಂದಿಸುತ್ತಾರೆ. ಅವರಿಗೆ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಎಲ್ಲ ರೀತಿಯ ಸಹಕಾರ ನೀಡಬೇಕು. ಶಾಸಕನಾಗಿ ನಾನು ಈ ಮಾತನ್ನು ಹೇಳುತ್ತಿದ್ದೇನೆ. ತಪ್ಪಿದಲ್ಲಿ ತಿದ್ದುವ ಅಧಿಕಾರ ಅವರಿಗಿದೆ ಎಂದರು.
ಹಿಂದಿನ ಸರ್ಕಾರ ಮಾಡಿರುವ ಸಾಲಕ್ಕೆ ಈಗಿನ ಕಾಂಗ್ರೆಸ್ ಸರ್ಕಾರ ವಾರ್ಷಿಕ 4500 ಕೋಟಿ ಬಡ್ಡಿ ಕಟ್ಟಬೇಕಾಗಿದೆ. ಹಿಂದಿನವರ ತಪ್ಪನ್ನು ತೊಳೆಯಲು ಇನ್ನೂ ಒಂದು ವರ್ಷ ಬೇಕು. ಪುರಸಭೆ ಸೇರಿ ಯಾವುದೇ ಸ್ಥಳೀಯ ಸಂಸ್ಥೆ ಚಟುವಟಿಕೆಯಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಸಲಹೆ ಕೊಡುತ್ತೇನೆ. ಅವುಗಳನ್ನು ಜವಾಬ್ದಾರಿಯುತವಾಗಿ ನಡೆಸಿಕೊಂಡು ಹೋಗುವುದು ಅವುಗಳ ಆಡಳಿತ ನಡೆಸುವವರ ಕೆಲಸ ಎಂದರು.
ಸಮಿತಿ ಜಿಲ್ಲಾಧ್ಯಕ್ಷ ಇಲಿಯಾಸ್ ಬೋರಾಮಣಿ, ತಾಲೂಕು ಅಧ್ಯಕ್ಷ ಶಂಕರಗೌಡ ಹಿರೇಗೌಡರ ಅವರು ಸರ್ಕಾರದ ಗ್ಯಾರಂಟಿ ಯೋಜನೆಗಳು, ಅವುಗಳ ಪರಿಣಾಮ ಸೇರಿ ಹಲವು ವಿಚಾರಗಳ ಕುರಿತು ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಐಎನ್‌ಬಿಸಿಡಬ್ಲುಎ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸಂಗೀತಾ ನಾಡಗೌಡ, ಕೆಪಿಸಿಸಿ ಸದಸ್ಯ ಬಾಪೂರಾವ್ ದೇಸಾಯಿ ಹಡಗಲಿ, ಸಮಿತಿ ಜಿಲ್ಲಾ ಉಪಾಧ್ಯಕ್ಷ- ಎನ್‌ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ, ಸಮಿತಿ ತಾಲೂಕು ಉಪಾಧ್ಯಕ್ಷ ಲಕ್ಷ್ಮಣ ಲಮಾಣಿ, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ- ಆಲೂರು ಗ್ರಾಪಂ ಅಧ್ಯಕ್ಷೆ ಶೋಭಾ ಶಳ್ಳಗಿ, ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ತಾಪಂ ಇಒ ಎನ್.ಎಸ್.ಮಸಳಿ, ಮುಖಂಡರಾದ ಎಂ.ಬಿ.ನಾವದಗಿ, ಎಂ.ಎಚ್.ಹಾಲ್ಯಾಳ, ಪಕ್ಷದ ಮುಖಂಡರು, ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಇದೇ ವೇಳೆ ಸಮಿತಿಯ ತಾಲೂಕು ಅಧ್ಯಕ್ಷ, ಉಪಾಧ್ಯಕ್ಷ, ಪದಾಧಿಕಾರಿಗಳು, ಸದಸ್ಯರಿಗೆ ಐಡಿ ಕಾರ್ಡ್ ವಿತರಿಸಲಾಯಿತು. ಸಿಆರ್‌ಪಿ ಜಿ.ಎಚ್.ಚವ್ಹಾಣ ಕಾರ್ಯಕ್ರಮ ನಿರ್ವಹಿಸಿದರು.
ಮಹಾತ್ಮ ಗಾಂಧೀಜಿ ನೇತೃತ್ವದ ಪ್ರಥಮ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಡಿ.27ರಂದು ಬೆಳಗಾವಿಯಲ್ಲಿ ಏರ್ಪಡಿಸಿರುವ ಸಮಾವೇಶಕ್ಕೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ಪುರಸಭೆ, ಗ್ರಾಪಂ ವ್ಯಾಪ್ತಿಗೆ ತಲಾ ಒಂದು ವಾಹನ ಕೊಡಲಾಗುತ್ತದೆ. ಅಗತ್ಯ ಬಿದ್ದರೆ ವಾಹನ ಸಂಖ್ಯೆ ಹೆಚ್ಚಿಸಲಾಗುತ್ತದೆ.
ಸಿ.ಎಸ್.ನಾಡಗೌಡ, ಶಾಸಕರು, ಅಧ್ಯಕ್ಷರು, ಕೆಎಸ್‌ಡಿ ನಿಗಮ, ಬೆಂಗಳೂರು