ಸೂಕ್ಷ್ಮವೀಕ್ಷಕರ ಮೇಲಿದೆ ಮತಗಟ್ಟೆ ಜವಾಬ್ದಾರಿ

ಚಿಕ್ಕಮಗಳೂರು: ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ನೇಮಕಗೊಂಡಿರುವ ಸೂಕ್ಷ್ಮವೀಕ್ಷಕರು ಮತಗಟ್ಟೆಯ ಸಂಪೂರ್ಣ ಉಸ್ತುವಾರಿ ವಹಿಸಬೇಕಿರುವ ಹಿನ್ನೆಲೆಯಲ್ಲಿ ಅತ್ಯಂತ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಾರ್ವತ್ರಿಕ ಚುನಾವಣೆಯ ಸಾಮಾನ್ಯ ವೀಕ್ಷಕ ಕೃಷ್ಣ ಕುನಾಲ್ ನಿರ್ದೇಶನ ನೀಡಿದರು.

ನಗರದ ಎಐಟಿ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಸೂಕ್ಷ್ಮವೀಕ್ಷಕರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲೆಯ ಸೂಕ್ಷ್ಮ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಸೂಕ್ಷ್ಮವೀಕ್ಷಕರು ನೇಮಕಗೊಂಡಿದ್ದು, ಅವರು ಚುನಾವಣೆ ಪ್ರಕ್ರಿಯೆ ನಡೆಯುವ ಬಗ್ಗೆ ಹಾಗೂ ಮತಗಟ್ಟೆ ಕೇಂದ್ರಗಳಲ್ಲಿ ಅಹಿತಕರ ಘಟನೆ ನಡೆಯದಂತೆ ಅಗತ್ಯ ಕ್ರಮ ವಹಿಸಬೇಕು ಎಂದು ಸೂಚಿಸಿದರಲ್ಲದೆ, ಮತದಾನಕ್ಕೆ ಅಗತ್ಯ ಸಿದ್ಧತೆಗಳಾಗಿವೆೆಯೇ ಎಂಬ ಬಗ್ಗೆ ನಿಗಾ ವಹಿಸಬೇಕು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಡಾ. ಕುಮಾರ್ ಸೂಕ್ಷ್ಮ ವೀಕ್ಷಕರ ಕರ್ತವ್ಯಗಳ ಕುರಿತು ಮಾಹಿತಿ ನೀಡಿ, ಮತಗಟ್ಟೆಗಳಲ್ಲಿ ಸರಿಯಾದ ವೇಳೆಗೆ ಮತದಾನ ಪ್ರಕ್ರಿಯೆ ಆರಂಭ, ಅಭ್ಯರ್ಥಿ ಪರ ಏಜೆಂಟರು ಚುನಾವಣಾ ಆಯೋಗದ ನಿರ್ದೇಶನಗಳನ್ನು ಪಾಲಿಸುವ ಬಗ್ಗೆ ಪರಿಶೀಲಿಸಬೇಕು ಎಂದರು.

ಮತದಾನ ಬೆಳಗ್ಗೆ 7 ಕ್ಕೆ ಆರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ. ಪ್ರತಿ 2 ಗಂಟೆಗೊಮ್ಮೆ ಶೇಕಡವಾರು ಮತದಾನದ ಮಾಹಿತಿ ಕಳುಹಿಸಬೇಕು. ಮತದಾನ ಪೂರ್ಣಗೊಂಡ ಸಮಯ ಹಕ್ಕು ಚಲಾಯಿಸಿರುವ ಮತದಾನದ ಸಂಖ್ಯೆ, ಒಟ್ಟಾರೆ ಶೇಕಡವಾರು ಪ್ರಮಾಣ ಮತ್ತಿತರ ಮಾಹಿತಿಯನ್ನು ನಮೂದು ಮಾಡಬೇಕು ಎಂದು ನಿರ್ದೇಶನ ನೀಡಿದರು.

ಮತದಾನದ ಅವಧಿ ಪೂರ್ಣಗೊಂಡ ಬಳಿಕ ವಿದ್ಯುನ್ಮಾನ ಮತ ಯಂತ್ರಗಳನ್ನು ಸರಿಯಾಗಿ ಸೀಲ್ ಮಾಡಲಾಗಿದೆಯೇ, ಏಜೆಂಟರು ನಿಗದಿತ ನಮೂನೆಯಲ್ಲಿ ಸಹಿ ಮಾಡಿದ್ದಾರೆಯೇ, ಯಾವ ವೇಳೆಯಲ್ಲಿ ಮತಗಟ್ಟೆಯಿಂದ ಅಧಿಕಾರಿ, ಸಿಬ್ಬಂದಿ ನಿರ್ಗಮಿಸಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಒದಗಿಸಬೇಕು ಎಂದು ತಿಳಿಸಿದರು.

ಚುನಾವಣೆಗೆ ಸಾರ್ವತ್ರಿಕ ರಜೆ: ಜಿಲ್ಲೆಯಲ್ಲಿ ಏ.18ರಂದು ಲೋಕಸಭಾ ಚುನಾವಣೆ ನಡೆಯುವುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜು, ಸರ್ಕಾರೇತರ ಸಂಸ್ಥೆಗಳು, ಬ್ಯಾಂಕುಗಳಿಗೆ ಸಾರ್ವತ್ರಿಕ ವೇತನಸಹಿತ ರಜೆ ಘೊಷಿಸಲಾಗಿದೆ. ಖಾಸಗಿ ಸಂಸ್ಥೆಗಳು ಹಾಗೂ ಸಾರ್ವಜನಿಕ ಸಂಸ್ಥೆಗಳಲ್ಲಿ ಕಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರು, ಕಾರ್ವಿುಕರು ಮತದಾನ ಮಾಡಲು ಅನುಕೂಲವಾಗುವಂತೆ ವೇತನ ಸಹಿತ ರಜೆ ನೀಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದ್ದಾರೆ.