ನೀರಿನ ಸಮಸ್ಯೆಯಾದರೆ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ

ಎನ್.ಆರ್.ಪುರ: ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗದಂತೆ ಎಚ್ಚರವಹಿಸಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಅಧಿಕಾರಿಗಳಿಗೆ ಸೂಚಿಸಿದರು.

ತಾಪಂ ಸಾಮರ್ಥ್ಯಸೌಧದಲ್ಲಿ ಏರ್ಪಡಿಸಿದ್ದ ಟಾಸ್ಕ್​ಫೋರ್ಸ್ ಸಭೆಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಪ್ರತಿಭಟನೆ ಮಾಡುವುದು, ಖಾಲಿ ಕೊಡ ಪ್ರದರ್ಶನ ಮಾಡುವ ಸ್ಥಿತಿ ನಿರ್ಮಾಣ ಮಾಡಿದರೆ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕುಡಿಯುವ ನೀರಿಗೆ ಕೊಳವೆ ಬಾವಿ ಅಗತ್ಯವಿದ್ದರೆ ನನ್ನ ಅನುಮತಿಗೆ ಕಾಯದೆ ಕೂಡಲೆ ಬೋರ್​ವೆಲ್ ಕೊರೆಸಿ ನೀರು ಸರಬರಾಜು ಮಾಡಬೇಕು. ಮೊದಲೇ ಟ್ಯಾಂಕರ್ ವ್ಯವಸ್ಥೆ ಮಾಡಿಕೊಳ್ಳಬೇಕು. ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮೆಸ್ಕಾಂ ಸಿಬ್ಬಂದಿ ನೀರಿಗೆ ತೊಂದರೆ ಉಂಟುಮಾಡಬಾರದು. ಟಿಸಿ ಅಗತ್ಯವಿದ್ದ ಕಡೆ ತಕ್ಷಣ ಹಾಕಬೇಕು. ವಿದ್ಯುತ್ ವೋಲ್ಟೇಜ್ ಸಮಸ್ಯೆ ನೆಪ ಹೇಳಬಾರದು ಎಂದರು.