ಕೊಪ್ಪ ಜನತೆಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ

ಕೊಪ್ಪ: ಮುಂಗಾರು ಮಳೆ ಕೈಕೊಟ್ಟಿದ್ದರಿಂದ ನೀರಿನ ಮೂಲವಾದ ಹಿರಿಕೆರೆ ಸಂಪೂರ್ಣ ಬತ್ತಿಹೋಗಿದೆ. ಹಾಗಾಗಿ ಪಟ್ಟಣ ವ್ಯಾಪ್ತಿಯ ಜನರಿಗೆ ತೊಂದರೆಯಾಗದಂತೆ ಟ್ಯಾಂಕರ್ ನೀರು ಪೂರೈಸಲು ಸೂಚಿಸಿದ್ದೇನೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಸೋಮವಾರ ಬಾಳಗಡಿ ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ಟಾಸ್ಕ್​ಫೋರ್ಸ್ ಸಮಿತಿ ಸಭೆಯಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗಲಾಪುರದಿಂದ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಸಿಗದಾಳು ಘಾಟಿಯ ಎರಡನೇ ಪಂಪ್​ಹೌಸ್​ನಲ್ಲಿ ಲಿಫ್ಟಿಂಗ್ ಪಂಪ್ ಹಾಳಾಗಿದೆ. ಶೀಘ್ರ ದುರಸ್ತಿಗೊಳಿಸುವಂತೆ ತಿಳಿಸಿದ್ದೇನೆ ಎಂದರು.

ಹೆಚ್ಚಿನ ಸಾಮರ್ಥ್ಯದಲ್ಲಿ ನೀರು ಸರಬರಾಜು ಮಾಡಲು ಸಾಧ್ಯವಾಗುವಂತೆ 15 ಲಕ್ಷ ರೂ. ವೆಚ್ಚದಲ್ಲಿ 75 ಎಚ್​ಪಿ ಸಾಮರ್ಥ್ಯದ ಮೋಟಾರ್ ಖರೀದಿಸಿ ಅಳವಡಿಸಲು ಟೆಂಡರ್ ಪ್ರಕ್ರಿಯೆ ಮುಗಿದಿದೆ. ಹಿರಿಕೆರೆಯಿಂದ ನೀರು ಶುದ್ಧೀಕರಣ ಘಟಕದವರೆಗೂ ನೀರು ಲಿಫ್ಟ್ ಮಾಡಲು ಅನುಕೂಲವಾಗುವಂತೆ 12 ಲಕ್ಷ ರೂ. ವೆಚ್ಚದಲ್ಲಿ 50 ಎಚ್​ಪಿ ಸಾಮರ್ಥ್ಯದ ಪಂಪ್ ಅಳವಡಿಕೆಗೆ ಟೆಂಡರ್ ಕರೆಯಲಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಚಾಲನೆ ನೀಡಲಾಗುವುದು ಎಂದರು.

ತಹಸೀಲ್ದಾರ್ ಎರ್ರಿಸ್ವಾಮಿ ಮಾತನಾಡಿ, ಕೆಸವೆ ಗ್ರಾಪಂನ ಗಾಡಿಕೆರೆಯ ವಾಟೆಸರಳಿನಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ವಸತಿ ಪ್ರದೇಶದಿಂದ ಸುಮಾರು 1.5 ಕಿಮೀ ದೂರದಿಂದ ಪೈಪ್ ಅಳವಡಿಸಿ ನೀರು ಪೂರೈಸುವಂತೆ ಜನ ಮನವಿ ಸಲ್ಲಿಸಿದ್ದಾರೆ. ಜನವಸತಿ ಪ್ರದೇಶದ ಅಕ್ಕಪಕ್ಕದಲ್ಲಿಯೆ ಕೆರೆಗಳಿದ್ದು ಆ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿ ನೀರು ಪೂರೈಕೆಗಾಗಿ ಸೂಕ್ತ ಕ್ರಮ ಕೈಗೊಳ್ಳಬಹುದು. ಖಾಸಗಿ ತೋಟದ ಮಾಲೀಕರು ಕೆರೆಗೆ ಪೈಪ್ ಅಳವಡಿಸಿ ನೀರು ಪೂರೈಸಲು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಇದಕ್ಕ ಪ್ರತಿಕ್ರಿಯಿಸಿದ ಶಾಸಕರು, ಕೆರೆಗಳಿಗೆ ಪಂಪ್ ಅಳವಡಿಸಿ ಪೈಪ್ ಮೂಲಕ ನೀರು ಪೂರೈಸಲು ಕಾನೂನಿನಲ್ಲೂ ಅವಕಾಶವಿದೆ. ಆಕ್ಷೇಪಿಸುವ ವ್ಯಕ್ತಿಗಳ ಮನವೊಲಿಸಿ ನೀರು ಪೂರೈಕೆಗೆ ಸೂಕ್ತ ಕ್ರಮ ವಹಿಸಬೇಕು. ಅಲ್ಲಿಯವರೆಗೂ ಅವಶ್ಯವಿದ್ದಲ್ಲಿ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಿ ಎಂದು ತಿಳಿಸಿದರು.

ಹಿರಿಕೆರೆ ದುರಸ್ತಿಗೆ ಸೂಚನೆ: ಭಾನುವಾರ ಸಂಜೆ ವೇಳೆ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ತಿಳಿಯುತ್ತಿದ್ದಂತೆ ಹಿರಿಕೆರೆ ವೀಕ್ಷಣೆಗೆ ಆಗಮಿಸಿ ಅಲ್ಲಿನ ಸ್ಥಿತಿಗತಿಗಳನ್ನು ತಿಳಿದುಕೊಂಡೆ ಎಂದು ಶಾಸಕ ರಾಜೇಗೌಡ ಹೇಳಿದರು. ಕೆರೆಯ ಒಳಭಾಗದಲ್ಲಿ ರಂಧ್ರ ಆಗಿರುವುದರಿಂದ ನೀರು ಸುಮಾರು 5 ಇಂಚು ವೇಗದಲ್ಲಿ ಹೊರಹೋಗುತ್ತದೆ ಎಂದು ವಾಟರ್​ವ್ಯಾನ್ ನೀಡಿದ ಮಾಹಿತಿಗೆ ಸ್ಪಂದಿಸಿ ಕೂಡಲೆ ದುರಸ್ತಿ ಕಾರ್ಯಕ್ಕೆ ಮುಂದಾಗುವಂತೆ ಸೂಚಿಸಿದ್ದೇನೆ. ಇದಕ್ಕಾಗಿ ಟಾಸ್ಕ್​ಫೋರ್ಸ್ ಹಣವನ್ನು ಬಳಸಿಕೊಳ್ಳುವಂತೆ ತಿಳಿಸಿದ್ದೇನೆ ಎಂದರು.

17 ಕೊಪ್ಪ 03

ಬಾಳಗಡಿ ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ಟಾಸ್ಕ್​ಫೋರ್ಸ್ ಸಮಿತಿ ಸಭೆಯಲ್ಲಿ ಶಾಸಕ ರಾಜೇಗೌಡ, ತಾಪಂ ಇಒ ಕೆ.ಗಣಪತಿ, ಪಪಂ ಮುಖ್ಯಾಧಿಕಾರಿ ಶೇಷಮೂರ್ತಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *