ಕೆರೆ ಒತ್ತುವರಿ ತೆರವಿಗೆ ತಿಂಗಳ ಗಡುವು

ತರೀಕೆರೆ: ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಎಸ್ಸಿ, ಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸಭೆಗೆ ಅಧಿಕಾರಿಗಳು ಗೈರಾಗಿರುವುದಕ್ಕೆ ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನಲ್ಲಿ ಕೆರೆ ಒತ್ತುವರಿ ತೆರವುಗೊಳಿಸಲು ಒಂದು ತಿಂಗಳ ಗಡುವು ನೀಡಲಾಯಿತು.

ಮೂರು ತಿಂಗಳಿಗೊಮ್ಮೆ ನಡೆಸಬೇಕಾದ ಸಭೆಯನ್ನು ಒಂಭತ್ತು ತಿಂಗಳು ವಿಳಂಬವಾಗಿ ನಡೆಸಲಾಗುತ್ತಿದೆ. ಸಭೆಯಲ್ಲಿ ರ್ಚಚಿಸುವ ಒಂದು ಸಮಸ್ಯೆಗೂ ಪರಿಹಾರ ಸಿಗದಂತಾಗಿದೆ. ಅಧಿಕಾರಿಗಳೂ ಸಭೆಗೆ ಗೈರಾಗಿದ್ದಾರೆ. ಕಾಟಾಚಾರಕ್ಕೆ ಸಭೆ ನಡೆಸುವುದಾದರೆ ನಮ್ಮ ಸಮಯವನ್ನು ಏಕೆ ವ್ಯರ್ಥ ಮಾಡುತ್ತೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ತಹಸೀಲ್ದಾರ್ ಎನ್.ಟಿ.ಧಮೋಜಿರಾವ್ ಮಾತನಾಡಿ, ಕೆಲಸದ ಒತ್ತಡದಲ್ಲಿ ಸಮಯದ ಹೊಂದಾಣಿಕೆಯಾಗದೆ ಸಭೆ ಕರೆಯಲು ವಿಳಂಬವಾಗಿದೆ. ಮುಂದಿನ ದಿನಗಳಲ್ಲಿ ನಿಗದಿತ ಸಮಯಕ್ಕೆ ಸಭೆ ನಡೆಸಲಾಗುವುದು. ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲು ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಎಂ.ಬಿ.ಭೈರಪ್ಪಗೆ ಸೂಚಿಸಿದರು.

ದಲಿತ ಸಂಘರ್ಷ ಸಮಿತಿ ಮುಖಂಡ ಎಚ್.ಬಾಲರಾಜ್ ಮಾತನಾಡಿ, ತಾಲೂಕಿನ ಬಹುತೇಕ ಕೆರೆಗಳ ಅಚ್ಚುಕಟ್ಟು ಪ್ರದೇಶವನ್ನು ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವುದರಿಂದ ಕೆರೆಯಲ್ಲಿ ಹೆಚ್ಚು ನೀರು ಸಂಗ್ರಹವಾಗದೆ ರೈತರು ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಜಂಟಿ ಸರ್ವೆ ನಡೆಸಿ ಕೆರೆ ಒತ್ತುವರಿ ಜಾಗ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನಾಗೇಂದ್ರಪ್ಪ ಮಾತನಾಡಿ, ಇಲಾಖೆ ವ್ಯಾಪ್ತಿಗೆ 29 ಕೆರೆಗಳು ಒಳಪಡುತ್ತವೆೆ. ಅವುಗಳಲ್ಲಿ ಒತ್ತುವರಿಯಾಗಿರುವ ಕೆಲವೊಂದು ಕೆರೆಗಳನ್ನು ಗುರುತಿಸಿ ಅಳತೆ ಮಾಡಲಾಗಿದೆ. ಪಟ್ಟಣ ಸಮೀಪದ ಮಾಚೇನಹಳ್ಳಿ ಕೆರೆ ಒತ್ತುವರಿದಾರರಿಗೆ ನೋಟಿಸ್ ಕೂಡ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಚ್.ಬಾಲರಾಜ್, ಪ್ರತಿ ಸಭೆ ನಡೆದಾಗಲೂ ಇದೇ ರೀತಿ ಸಿದ್ಧ ಉತ್ತರ ನೀಡುತ್ತೀರಿ. ಒತ್ತುವರಿ ಮಾಡಿರುವ ಕೆರೆ ತೆರವುಗೊಳಿಸಲು ಮೀನಮೇಷ ಏಕೆ. ಒತ್ತುವರಿದಾರ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದಿರಾ ಎಂದು ಪ್ರಶ್ನಿಸಿದರು.

ಸಹಾಯಕ ಕೃಷಿ ನಿರ್ದೇಶಕ ಡಾ. ಟಿ.ಎನ್.ಚಿತ್ರಸೇನಾ, ಪುರಸಭೆ ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್, ತಾಪಂ ಅಧಿಕಾರಿ ಜಯರಾಂ, ಸಹಾಯಕ ಪೊಲೀಸ್ ನಿರೀಕ್ಷಕ ನಯೀಮ್ುಲ್ಲಾ ಖಾನ್, ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಸಿದ್ರಾಮಪ್ಪ ಮತ್ತಿತರರಿದ್ದರು.

ಒತ್ತುವರಿ ತೆರವಿಗೆ ತಿಂಗಳ ಗಡುವು; ಕೂಡಲೇ ಒತ್ತುವರಿಯಾಗಿರುವ ಕೆರೆಗಳ ಪೈಕಿ 15 ಪ್ರಮುಖ ಕೆರೆಗಳನ್ನು ಗುರುತಿಸಿ ತಿಂಗಳಲ್ಲಿ ಕೆರೆ ತೆರವುಗೊಳಿಸುವ ಕಾರ್ಯವಾಗಬೇಕು ಎಂದು ತಹಸೀಲ್ದಾರ್ ಎನ್.ಟಿ.ಧಮೋಜಿರಾವ್ ಸಣ್ಣ ನೀರಾವರಿ ಇಲಾಖೆ ಎಇಇ ನಾಗೇಂದ್ರಪ್ಪ ಮತ್ತು ಸರ್ವೆಯರ್ ಗುರುಪ್ರಸಾದ್​ಗೆ ಸೂಚಿಸಿದರು.

ಸ್ಮಶಾನ ಜಾಗಕ್ಕೆ ಮನವಿ: ತಾಲೂಕಿನ ದಲಿತ ಜನಾಂಗ ವಾಸಿಸುತ್ತಿರುವ ಗ್ರಾಮಗಳಲ್ಲಿ ಸ್ಮಶಾನಕ್ಕೆ ಸೂಕ್ತ ಜಾಗದ ವ್ಯವಸ್ಥೆ ಇಲ್ಲ್ಲೆ ತೊಂದರೆಯಾಗುತ್ತಿದೆ ಎಂದು ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಚಾಲಕ ಎನ್.ವೆಂಕಟೇಶ್ ದೂರಿದರು. ಸರ್ಕಾರದಿಂದ ಸ್ಮಶಾನ ಜಾಗ ನೀಡಿದರೂ ಆ ಜಾಗ ಯಾವುದು ಎಂದು ಸ್ಪಷ್ಟವಾಗುತ್ತಿಲ್ಲ. ತಕ್ಷಣ ಅಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜಾಗದ ವ್ಯವಸ್ಥೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ತಹಸೀಲ್ದಾರ್ ಎನ್.ಟಿ.ಧಮೋಜಿರಾವ್, ಲಭ್ಯವಿರುವ ಸರ್ಕಾರಿ ಜಾಗ ಗುರುತಿಸಿ ಸ್ಮಶಾನಕ್ಕೆ ಬೇಕಾದ ಜಾಗ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.