Crime : ಪತ್ನಿಯ ಹುಟ್ಟುಹಬ್ಬದ ದಿನ ಆಕೆಗೆ ಸರ್ಪ್ರೈಸ್ ಕೊಡಲು ಲಂಡನ್ ನಿಂದ ಬಂದ ವ್ಯಕ್ತಿಯನ್ನ ಹೆಂಡತಿ ಮತ್ತು ಆಕೆಯ ಪ್ರಿಯತಮ ಇಬ್ಬರೂ ಸೇರಿ ಆತನನ್ನು 15 ತುಂಡುಗಳಾಗಿ ಕತ್ತರಿಸಿದ್ದಾರೆ. ಪತ್ನಿ ಮತ್ತು ಆಕೆಯ ಪ್ರಿಯಕರ ತನ್ನ ಗಂಡನನ್ನು ಕೊಂದು, ಆತನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಸಿಮೆಂಟ್ ತುಂಬಿದ ಡ್ರಮ್‌ನಲ್ಲಿ ಬಚ್ಚಿಟ್ಟಿದ್ದ ಪ್ರಕರಣ ನಿನ್ನೆ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಮೀರತ್‌ನಲ್ಲಿ 27 ವರ್ಷದ ಮುಸ್ಕಾನ್ ಎಂಬ ಮಹಿಳೆ ತನ್ನ ಪ್ರಿಯಕರ ಸಾಹಿಲ್ ಎಂಬವವರ ಜೊತೆ ಸೇರಿ ತನ್ನ ಮರ್ಚೆಂಟ್ ನೇವಿ ಅಧಿಕಾರಿಯಾದ 29 ವರ್ಷದ ಸೌರಭ್ ರಜಪೂತ್ ಎಂಬ ಪತಿಯನ್ನು ಇರಿದು ಕೊಂದಿದ್ದಾರೆ. ನಂತರ ಆತನ ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಹಾಕಿದ್ದು, ಕತ್ತರಿಸಿದ ದೇಹದ ಭಾಗಗಳನ್ನು ಸಿಮೆಂಟ್ ತುಂಬಿದ ಡ್ರಮ್‌ನಲ್ಲಿ ಮುಚ್ಚಿಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯ ಬೆಳಕಿಗೆ ಬರುತ್ತಿದ್ದ ಹಾಗೆ ಮೃತ ವ್ಯಕ್ತಿಯ ಪತ್ನಿ ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ರನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಾರ್ಚ್ 4 ರಂದು ವಾಣಿಜ್ಯ ನೌಕಾಪಡೆಯ ಸೌರಭ್ ರಜಪೂತ್ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿತ್ತು. ಈ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇನ್ನೂ ಮೀರತ್‌ನ ಇಂದಿರಾ ನಗರದಲ್ಲಿ ದುರ್ವಾಸನೆ ಬರುತ್ತಿದ್ದ ಕಾರಣ ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆಯುಷ್ ವಿಕ್ರಮ್ ಸಿಂಗ್ ತಿಳಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ ಇಬ್ಬರೂ ಸೇರಿ ಮಾರ್ಚ್ 4 ರಂದು ಸೌರಭ್‌ನನ್ನು ಚಾಕುವಿನಿಂದ ಇರಿದು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾರೆ. ನಂತರ ಇಬ್ಬರೂ ಅವನ ದೇಹವನ್ನು ಕತ್ತರಿಸಿ, ದೇಹದ ತುಂಡುಗಳನ್ನು ಡ್ರಮ್‌ನಲ್ಲಿ ಇರಿಸಿ, ಸಿಮೆಂಟ್‌ನಿಂದ ಮುಚ್ಚಿದ್ದಾಗಿ ಬಾಯ್ಬಿಟ್ಟಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸೌರಭ್ ಕುಟುಂಬದವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, 2016 ರಲ್ಲಿ ಇಬ್ಬರು ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಇದಕ್ಕೆ ಇವರ ಕುಟುಂಬದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ನಂತರ ತಮ್ಮ 3 ಮರ್ಷದ ಮಗುವಿನೊಂದಿಗೆ ಪ್ರತ್ಯೇಕ ಬಾಡಿಗೆ ಮನೆಯಲ್ಲಿ ವಾಸಿಸುತ್ತಾ ಇದ್ದರು ಎಂದಿದ್ದಾರೆ.