10 ವರ್ಷದಿಂದ ಗೋದಾಮಿನಲ್ಲೇ ಕೊಳೆಯುತ್ತಿವೆ ಟೋನರ್ಸ್

ಶ್ರೀಕಾಂತ ಶೇಷಾದ್ರಿ

ಬೆಂಗಳೂರು: ಸರ್ಕಾರದ ಮುಖ್ಯ ಕಾರ್ಯದರ್ಶಿ, ಡಿಪಿಎಆರ್, ಮಂತ್ರಿಗಳ ಕಚೇರಿಯಲ್ಲಿ ಬಳಸಲು ಖರೀದಿಸಲಾಗಿದ್ದ ಪ್ರಿಂಟರ್ ಟೋನರ್, ಕಾಟಿರ್Åಡ್ಜ್​ಗಳು ಹತ್ತು ವರ್ಷಗಳಿಂದ ಗೋದಾಮಿನಲ್ಲೇ ಕೊಳೆಯುತ್ತಿವೆೆ! ಲಕ್ಷಾಂತರ ರೂ. ಮೊತ್ತದ ಖರೀದಿ ಬಗ್ಗೆ ಸಂಶಯವಿದೆ ಎಂದು ಸಿಎಜಿ ಎಚ್ಚರಿಸಿದರೂ ಅಕ್ರಮ ಮುಚ್ಚಿಹಾಕಲು ವ್ಯವಸ್ಥಿತ ಪ್ರಯತ್ನವೊಂದು ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ನಿರ್ದೇಶಕರ ಕಚೇರಿಯಲ್ಲಿ ನಡೆದಿದೆ.

ವಿಧಾನಸೌಧದಲ್ಲಿ ಇರುವ ಮುಖ್ಯಕಾರ್ಯದರ್ಶಿ ಕಚೇರಿ, ಸಚಿವರು, ಡಿಪಿಎಆರ್ ಕಚೇರಿಗಳಿಗೆಂದು ಸರಬರಾಜು ಮಾಡಲು 2008ರಲ್ಲಿ 82.34 ಲಕ್ಷ ರೂ. ಮೊತ್ತದಲ್ಲಿ ಪ್ರಿಂಟರ್ ಟೋನರ್ ಖರೀದಿಸಲಾಗಿತ್ತು. ಈವರೆಗೂ ಅಷ್ಟೂ ಟೋನರ್​ಗಳು ಸರ್ಕಾರಿ ಮುದ್ರಣಾಲಯದಲ್ಲಿ ಇವೆ. ಸಾಮಾನ್ಯವಾಗಿ ಟೋನರ್​ಗಳನ್ನು ಖರೀದಿಸಿದ ವರ್ಷದೊಳಗೆ ವಿಲೇವಾರಿ ಮಾಡಿ ಬಳಕೆಗೆ ಅವಕಾಶ ಮಾಡಿಕೊಡಬೇಕಿತ್ತು, ಇಲ್ಲವಾದರೆ ಅವು ಬಳಕೆಗೆ ಬರುವುದಿಲ್ಲ.

2016ರಲ್ಲಿ ಮಹಾ ಲೇಖಪಾಲರು ತನಿಖೆ ವೇಳೆ ಈ ಅಕ್ರಮ ಪತ್ತೆ ಹಚ್ಚಿ ವಿವರಣೆ ಕೇಳಿದ್ದರು. ಸಿಎಜಿ ವರದಿ ಬಳಿಕ ಎಚ್ಚೆತ್ತಿದ್ದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಅಪರ ಕಾರ್ಯದರ್ಶಿ, ಇಲಾಖೆ ನಿರ್ದೇಶಕ ರವಿಶಂಕರ್ ಅವರಿಗೆ ವಿವರಣೆ ನೀಡುವಂತೆ 2016ರ ನವೆಂಬರ್ 7ರಂದು ಪತ್ರ ಬರೆದಿದ್ದರು. ಬಳಿಕ 2017ರ ಮೇ 5ರಂದು ನೆನಪೋಲೆ ಕಳಿಸಿ ವಿಳಂಬಕ್ಕೆ ಅವಕಾಶವಿಲ್ಲದಂತೆ ವಿವರಣೆ ನೀಡಲು ಅಧೀನ ಕಾರ್ಯದರ್ಶಿ ಸೂಚನೆ ನೀಡಿದ್ದರು. 2018ರ ಜ.24ರಂದು ಮತ್ತೆ ಪತ್ರ ಬರೆದ ಅಪರ ಕಾರ್ಯದರ್ಶಿ, ಎರಡೂ ಪತ್ರದ ಬಗ್ಗೆಯೂ ಉಲ್ಲೇಖಿಸಿ ವಿವರಣೆ ನೀಡುವಂತೆ ತಿಳಿಸಿದ್ದರು. ಇಷ್ಟಾದರೂ ಇಲಾಖೆ ನಿರ್ದೇಶಕ ರವಿಶಂಕರ್​ರಿಂದ ಉತ್ತರ ತಲುಪಿರಲಿಲ್ಲ. ಈ ಪತ್ರ ವ್ಯವಹಾರ ನಡೆಯುತ್ತಿದ್ದರೂ ಇಲಾಖೆ ಅಧಿಕಾರಿ ಜಪ್ಪಯ್ಯ ಎನ್ನಲಿಲ್ಲ. ಸುಮಾರು 80 ಬಗೆಯ ಟೋನರ್ ಕಾಟಿರ್Åಡ್ಜ್ ಮುದ್ರಣಾಲಯದಲ್ಲಿದ್ದರೂ ಅವನ್ನು ಕಾಲಕಾಲಕ್ಕೆ ವಿಲೇವಾರಿ ಮಾಡಲು ಕ್ರಮಕೈಗೊಳ್ಳಲಿಲ್ಲ ಎಂಬುದಕ್ಕೂ ಅವರಲ್ಲಿ ಉತ್ತರವಿಲ್ಲ.

ಆಂತರಿಕ ಲೆಕ್ಕ ಪರಿಶೋಧನೆಯೇ ನಡೆದಿಲ್ಲ ಎಂಬುದೂ ಈ ಬೆಳವಣಿಗೆಯಿಂದ ಸ್ಪಷ್ಟವಾದಂತಾಗಿದೆ. ಸಿಎಜಿ ಗಮನಕ್ಕೆ ಬಾರದೆ ಇದ್ದಿದ್ದರೆ ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನ ನಡೆದಿತ್ತಲ್ಲದೆ, 2008ರಲ್ಲಿ ಶೇ.25 ಕಮಿಷನ್​ಗಾಗಿ ಇಷ್ಟೊಂದು ದೊಡ್ಡಮೊತ್ತದಲ್ಲಿ ಟೋನರ್ ಕಾಟಿರ್Åಡ್ಜ್ ಖರೀದಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಇಲಾಖೆ ಮಾಹಿತಿ ಪ್ರಕಾರ, 11 ವರ್ಷಗಳಿಂದ ಮುದ್ರಣ- ಲೇಖನ ಸಾಮಗ್ರಿ ಮತ್ತು ಪ್ರಕಟಣೆ ನಿರ್ದೇಶಕರಾಗಿದ್ದ ರವಿಶಂಕರ್ ಜುಲೈ 31ರಂದು ನಿವೃತ್ತರಾಗಿದ್ದಾರೆ. ಅವ್ಯವಹಾರವನ್ನು ಕಚೇರಿಯ ತಾಂತ್ರಿಕ ವಿಭಾಗಕ್ಕೆ ಸಂಬಂಧಪಡದ ದ್ವಿತೀಯ ದರ್ಜೆ ನೌಕರರ ಮೂತಿಗೆ ಒರೆಸಿ ಹೊರಟಿದ್ದಾರೆ. ಸಂಬಂಧವೇ ಇಲ್ಲದ ಎಫ್​ಡಿಎ ನೌಕರನ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವ ಜತೆಗೆ 36 ಲಕ್ಷದ ಋಣಭಾರ ಹೊರಿಸಿ ಕಳಂಕ ತೊಳೆದುಕೊಳ್ಳಲು ಮುಂದಾಗಿರುವ ದಾಖಲೆಯೂ ಲಭಿಸಿದೆ.

ನಿವೃತ್ತಿ ಅಂಚಲ್ಲೂ ಟೆಂಡರ್

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪಾರದರ್ಶಕತೆ ಅಧಿನಿಯಮದ ಪ್ರಕಾರ ಟೆಂಡರ್ ಅಂಗೀಕರಿಸುವ ಪ್ರಾಧಿಕಾರವು ಟೆಂಡರ್ ಅಂಗೀಕಾರಕ್ಕೆ ಗೊತ್ತು ಮಾಡಿದ ದಿನಾಂಕದಿಂದ ಮುಂದಿನ 6 ತಿಂಗಳೊಳಗೆ ನಿವೃತ್ತನಾಗಲಿರುವ ಅಧಿಕಾರಿಯನ್ನು ಒಳಗೊಂಡಿದ್ದರೆ, ಅವನು ಸಂಗ್ರಹಣಾ ಸಂಸ್ಥೆಯ ಪೂರ್ವಾನುಮೋದನೆ ಪಡೆಯಬೇಕೆಂಬ ನಿಯಮವಿದೆ. ಆದರೆ, ಸರ್ಕಾರಿ ಮುದ್ರಣಾಲಯದ ನಿರ್ದೇಶಕರು 2018ರ ಜುಲೈ 31ರಂದು ನಿವೃತ್ತಿ ಹೊಂದಿದ್ದರೂ, ಎರಡು ತಿಂಗಳಲ್ಲಿ ಬಹುಕೋಟಿ ಟೆಂಡರ್ ಕರೆದಿರುವ ದಾಖಲೆ ಲಭ್ಯವಾಗಿದೆ. ಕರ್ನಾಟಕ ಪಾರದರ್ಶಕತೆ ಅಧಿನಿಯಮ 1999ರ ಪ್ರಕಾರ ಟೆಂಡರ್ ಪರಿಶೀಲನಾ ಸಮಿತಿ ಹಾಗೂ ಟೆಂಡರ್ ಪ್ರಾಧಿಕಾರಗಳನ್ನು ರಚಿಸಬೇಕು. ಈ ಇಲಾಖೆಯಲ್ಲಿ ಪ್ರಾಧಿಕಾರ ರಚನೆಯಾಗಿಲ್ಲ, ಜತೆಗೆ ಇಲಾಖೆ ನಿರ್ದೇಶಕರು ಪೂರ್ವಾನುಮೋದನೆ ಪಡೆಯದೆ ‘ಅನುಕೂಲತೆ’ಗೆ ತಕ್ಕಂತೆ ಟೆಂಡರ್ ಮಾಡಿ ಮುಗಿಸಿದ್ದಾರೆ.