ಜನಪದ ತೇರನೆಳೆಯಲು ಕೈಜೋಡಿಸಿ

ಚಿಕ್ಕಮಗಳೂರು: ಜನಪದ ಸಂಸ್ಕೃತಿಯ ತೇರನ್ನು ಯಾವುದೆ ಒಬ್ಬ ವ್ಯಕ್ತಿ ಎಳೆಯಲು ಸಾಧ್ಯವಿಲ್ಲ. ಎಲ್ಲರೂ ಕೈಜೋಡಿಸಿದರೆ ಮಾತ್ರ ಅದು ಮುಂದಕ್ಕೆ ಹೋಗುತ್ತದೆ ಎಂದು ಕರ್ನಾಟಕ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಟಿ.ತಿಮ್ಮೇಗೌಡ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕಣ್ಮರೆಯಾಗುತ್ತಿರುವ ಜನಪದ ಸಂಸ್ಕೃತಿ ಉಳಿಸಿ ಬೆಳೆಸುವ ಉದ್ದೇಶದಿಂದ 1979ರಲ್ಲಿ ಎಚ್.ಎಲ್.ನಾಗೇಗೌಡರು ಸ್ಥಾಪಿಸಿದ ಪರಿಷತ್ ನಾಲ್ಕು ದಶಕ ಕಂಡಿದೆ. ಸಾಹಿತಿ ಪ್ರೊ. ಚಂದ್ರಯ್ಯನಾಯ್ಡು ಮತ್ತು ಡಾ. ಜೆ.ಪಿ.ಕೃಷ್ಣೇಗೌಡರ ಅವಧಿಯಲ್ಲಿ ಜಿಲ್ಲೆಯಲ್ಲಿ ಪರಿಷತ್ ಅತ್ಯಂತ ಕ್ರಿಯಾಶೀಲವಾಗಿತ್ತು. ನಗರದಲ್ಲಿ ರಾಜ್ಯಮಟ್ಟದ ಜನಪದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ ಆಯೋಜಿಸಬೇಕು. ಅದಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು.

ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಸಮಾರಂಭದ ನೆನಪಿಗಾಗಿ ಹೊರತರಲಾದ ಜನಪದ ಭಾಷೆ ಮತ್ತು ಸಾಹಿತ್ಯದ ಕಿರುಹೊತ್ತಗೆ ಬಿಡುಗಡೆಗೊಳಿಸಲಾಯಿತು. ಇತ್ತೀಚೆಗೆ ನಿಧನರಾದ ಸಾಹಿತಿ ಡಾ. ಸುಮತೀಂದ್ರ ನಾಡಿಗ್ ಮತ್ತು ಕೊಡಗು ಹಾಗೂ ಕೇರಳದಲ್ಲಿ ಸಂಭವಿಸಿದ ಅತಿವೃಷ್ಟಿಯಲ್ಲಿ ನಿಧನರಾದವರ ಆತ್ಮಕ್ಕೆ ಶಾಂತಿಕೋರಿ ಮೌನಾಚರಣೆ ಮಾಡಲಾಯಿತು.

ಜಿಲ್ಲಾ ಘಟಕದ ಸಾರಥ್ಯವನ್ನು ಸಮರ್ಥ ವ್ಯಕ್ತಿಯೊಬ್ಬರು ವಹಿಸಿಕೊಂಡಿದ್ದಾರೆ. ಅವರೊಬ್ಬರಿಂದ ಮಾತ್ರ ಜನಪದ ತೇರು ಎಳೆಯಲು ಸಾಧ್ಯವಾಗುವುದಿಲ್ಲ. ಸಾಹಿತ್ಯ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖ. ಹಾಗಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಗಣ್ಯರು ಮತ್ತು ಸಾಹಿತಿಗಳು ಪರಿಷತ್​ನೊಂದಿಗೆ ಕೈಜೋಡಿಸಬೇಕು.

| ಟಿ.ತಿಮ್ಮೇಗೌಡ, ಕರ್ನಾಟಕ ಜಾನಪದ ಪರಿಷತ್ ರಾಜ್ಯಾಧ್ಯಕ್ಷ