ದುಬಾರೆಯಲ್ಲಿ ರಿವರ್ ರ‌್ಯಾಫ್ಟಿಂಗ್‌ಗೆ ಅವಕಾಶ ನೀಡಿ

ಮಡಿಕೇರಿ: ಅರಣ್ಯ ಇಲಾಖೆ ಅಥವಾ ಅರಣ್ಯ ಇಲಾಖೆ ಜಂಗಲ್ ಲಾಡ್ಜ್ ಮೂಲಕ ದುಬಾರೆಯಲ್ಲಿ ರಿವರ್ ರ‌್ಯಾಫ್ಟಿಂಗ್ ನಡೆಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ಮಾಜಿ ಕಾನೂನು ಸಚಿವ ಎಂ.ಸಿ. ನಾಣಯ್ಯ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಪತ್ರ ಬರೆದಿದ್ದಾರೆ.

ಸಾಹಸ ಕ್ರೀಡೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಕರ್ನಾಟಕ ಜಂಗಲ್ ಲಾಡ್ಜ್ ಕಾರ್ಯನಿರ್ವಾಹಕ ನಿರ್ದೇಶಕರೊಂದಿಗೆ ಚರ್ಚೆ ಮಾಡಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ಪ್ರವಾಸಿಗರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಹಿಂದೆ ನಡೆದಂತೆ ದಂಧೆ ನಡೆಸಲು ಅವಕಾಶ ನೀಡಬಾರದು. ಪ್ರಾಣ ಕಳೆದುಕೊಂಡ ಘಟನೆಗಳು ಇನ್ಮುಂದೆ ಮರುಕಳಿಸದಂತೆ ಎಚ್ಚರ ವಹಿಸಬೇಕೆಂದು ಗಮನ ಸೆಳೆದಿದ್ದಾರೆ.

40 ಕ್ಕಿಂತಲೂ ಹೆಚ್ಚು ಜನ ಪರವಾನಗಿ ಪಡೆಯದೆ ದುಬಾರೆಯಲ್ಲಿ ರ‌್ಯಾಫ್ಟಿಂಗ್ ದಂಧೆ ನಡೆಸುತ್ತಿದ್ದರು. ಇವರು ಬಹುತೇಕ ಎಲ್ಲ ಸಂದರ್ಭ ಜಿಲ್ಲಾಡಳಿತದ ಮೇಲೆ ರಾಜಕೀಯ ಪ್ರಭಾವ ಬೀರುತ್ತಿದ್ದರು. ಆ ಮೂಲಕ ದಂಧೆಯನ್ನು ನಿರಾತಂಕವಾಗಿ ನಡೆಸಲು ಜಿಲ್ಲಾಡಳಿತದ ಮೇಲೆ ಪ್ರಭಾವ ಮತ್ತು ಒತ್ತಡ ತರುತ್ತಿದ್ದರು.

ಈ ಹಿಂದಿನ ಜಿಲ್ಲಾಧಿಕಾರಿ ಯಾವುದೇ ಪ್ರಭಾವ ಮತ್ತು ಒತ್ತಡಕ್ಕೆ ಮಣಿಯದೆ ಸಾಹಸ ಕ್ರೀಡೆಯನ್ನು ಕಟ್ಟುನಿಟ್ಟಿನ ನಿಯಂತ್ರಣಕ್ಕೆ ಒಳಪಡಿಸಿದ್ದರು. ಇದರ ಸಂಪೂರ್ಣ ಜವಾಬ್ದಾರಿಕೆಯನ್ನು ಅರಣ್ಯ ಇಲಾಖೆ ಅಥವಾ ಅರಣ್ಯ ಇಲಾಖೆ ಮುಖಾಂತರ ನಡೆಸುತ್ತಿರುವ ಜಂಗಲ್ ಲಾಡ್ಜ್ ಮೂಲಕ ನಡೆಸಲು ಚಿಂತನೆ ನಡೆಸಿದ್ದರೆಂಬುದು ಗಮನಾರ್ಹ. ಈ ನಿಟ್ಟಿನಲ್ಲಿ ತಾವು ಗಮನ ಹರಿಸಬೇಕೆಂದು ಪತ್ರದಲ್ಲಿ ಎಂ.ಸಿ.ನಾಣಯ್ಯ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *