ಬದುಕಿಗೆ ವಿಶ್ವಾಸದ ಅಗತ್ಯವಿದ್ದು, ಅರ್ಪಣಾ ಭಾವದಿಂದ ಸೇವೆ ನಡೆಯಬೇಕು. ಸಂಘಟನೆಗಳನ್ನು ಘಟ್ಟಿಗೊಳಿಸುವ ಜತೆಗೆ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸುವವರಿಂದ ಕಾರ್ಯ ಯಶಸ್ಸಾಗುತ್ತದೆ. ಸಮಾಜದ ಹಿತವನ್ನು ಕಾಯ್ದುಕೊಳ್ಳುವ ಕಾರ್ಯ ರಥೋತ್ಸವದ ಮೂಲಕ ನಡೆದಿದೆ. ಪರಿವರ್ತನೆ ಪ್ರತಿಯೊಬ್ಬರಿಂದ ನಡೆಯಬೇಕಾಗಿದ್ದು, ಈ ಮೂಲಕ ಉತ್ತಮ ಸಮಾಜ ಕಟ್ಟಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ವಿಜೃಂಭಣೆಯಿಂದ ಸಂಪನ್ನಗೊಂಡ ತುಳುನಾಡ್ದ ಜಾತ್ರೆ-ಶ್ರೀ ಒಡಿಯೂರು ರಥೋತ್ಸವ-ಶ್ರೀ ಗುರುದೇವ ಅಧ್ಯಾತ್ಮ ಕೇಂದ್ರ ಲೋಕಾರ್ಪಣೆ -೨೫ನೇ ತುಳು ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದ ಎಲ್ಲ ಬಂಧುಗಳಿಗೆ ಕೃತಜ್ಞತೆ ಸಮರ್ಪಣೆ ಸಭೆಯಲ್ಲಿ ಆಶೀರ್ವಚನ ನೀಡಿದರು.
ಸಾಽ ಮಾತಾನಂದಮಯೀ ಆಶೀರ್ವಚನ ನೀಡಿ, ಉತ್ಸವಗಳು ಸೇವೆಗೆ ಸಿಕ್ಕ ಅವಕಾಶವಾಗಿದ್ದು, ನಿಷ್ಕಲ್ಮಶ ಮನಸ್ಸಿನಿಂದ ಎಲ್ಲ ಪಾಲ್ಗೊಳ್ಳುವಿಕೆಯಾಗಿದೆ. ಕ್ರಿಯಾಶೀಲತೆ ಹಾಗೂ ಉತ್ಸಾಹಗಳಿಂದ ಕೆಲಸ ಕಾರ್ಯಗಳು ನಡೆಯಬೇಕು. ಹೊರೆಕಾಣಿಕೆಯಲ್ಲಿ ಗೋವುಗಳಿಗೆ ಆಹಾರ ಒದಗಿಸಿರುವುದು ಮಾದರಿಯಾಗಿದೆ. ಅವಕಾಶಗಳನ್ನು ವಿನಿಯೋಗಿಸಿಕೊಂಡು ಜೀವನ ಪಾವನವಾಗಿಸಿಕೊಳ್ಳಬೇಕು. ಗುರುವಿನ ಮೇಲಿನ ಭಕ್ತಿ, ಶ್ರದ್ಧೆ ಎಲ್ಲದಕ್ಕೂ ಬಲ ನೀಡುತ್ತದೆ ಎಂದು ತಿಳಿಸಿದರು.
ವಿವಿಧ ಸಮಿತಿಗಳ ಸಂಚಾಲಕರು ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀ ಒಡಿಯೂರು ರಥೋತ್ಸವ ಸಮಿತಿ ಕೋಶಾಽಕಾರಿ ಎ. ಸುರೇಶ್‌ರೈ, ಕಾರ್ಯಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಸ್ವಾಗತ ಸಮಿತಿ ಸಂಚಾಲಕ ಲಿಂಗಪ್ಪ ಗೌಡ ಪನೆಯಡ್ಕ, ಆರ್ಥಿಕ ಸಮಿತಿ ಸಂಚಾಲಕ ಶಶಿಧರ ಶೆಟ್ಟಿ ಜಮ್ಮದಮನೆ ಮತ್ತಿತರರು ಉಪಸ್ಥಿತರಿದ್ದರು.
ಹರಿಣಾಕ್ಷಿ ಎಸ್.ಶೆಟ್ಟಿ ಜಮ್ಮದಮನೆ ಪ್ರಾರ್ಥಿಸಿದರು. ಯಶವಂತ ವಿಟ್ಲ ಸ್ವಾಗತಿಸಿದರು. ಮಾತೇಶ್ ಭಂಡಾರಿ ನಿರೂಪಿಸಿದರು.
ಶಿಸ್ತು ಸಂಯಮ ಇದ್ದಲ್ಲಿ ಭಗವಂತನ ಸಾನಿಧ್ಯ ಇರುತ್ತದೆ. ಅರ್ಪಿತ ಮನೋಭಾವದಿಂದ ಸೇವಾ ಕಾರ್ಯ ನಡೆಯಬೇಕು. ಸೇವೆ ಎಂಬ ರೀತಿಯಲ್ಲಿ ಕೆಲಸಗಳು ನಡೆದಾಗ ಭಗವಂತನ ಅನುಗ್ರಹ ಪಾತ್ರವಾಗುತ್ತದೆ. ಸೌಹಾರ್ದತೆಯಲ್ಲಿ ಧರ್ಮದ ಮರ್ಮವಿದ್ದು, ತಾರತಮ್ಯವಿಲ್ಲದೆ ಚಟುವಟಿಕೆ ನಡೆಯಬೇಕು. ಧರ್ಮ ಶ್ರದ್ಧೆಯಿಂದ ಮಾಡುವ ಕಾರ್ಯದಲ್ಲಿ ಯಶಸ್ಸು ಇರುತ್ತದೆ. ಕರ್ತವ್ಯ ಎಂಬ ನಿಟ್ಟಿನಲ್ಲಿ ಕೆಲಸ ಮಾಡಿದಾಗ ಪರಿವರ್ತನೆಯ ಅಗತ್ಯವಿಲ್ಲ. ನಮ್ಮದೆಂಬ ಭಾವನೆಯಿಂದ ಬದಲಾವಣೆಯಾಗುತ್ತದೆ.
| ಶ್ರೀ ಗುರುದೇವಾನಂದ ಸ್ವಾಮೀಜಿ, ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನ
