VIDEO| ದೇಶದ ಈ ರೆಸ್ಟೋರೆಂಟ್​ನಲ್ಲಿದೆ ಮೇಡ್​ ಇನ್​ ಇಂಡಿಯಾ ರೋಬೋಗಳು: ಎಲ್ಲ ಭಾಷೆ ಮಾತನಾಡೋ ಈ ರೋಬೋಗಳಲ್ಲಿದೆ ಸಾಕಷ್ಟು ವಿಶೇಷತೆ!

ಭುವನೇಶ್ವರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆಯಲು ಹೋಟೆಲ್​ ಮತ್ತು ರೆಸ್ಟೋರೆಂಟ್​ಗಳ ಮಾಲೀಕರು ನಾನಾ ಪ್ರಯತ್ನ ಮಾಡುವುದನ್ನು ನೋಡಿದ್ದೇವೆ ಹಾಗೂ ಕೇಳಿದ್ದೇವೆ. ಆಹಾರ ಸಿದ್ಧಪಡಿಸುವುದರಿಂದ ಉಣಬಡಿಸುವವರೆಗೂ ವಿಭಿನ್ನತೆಗೆ ಯತ್ನಿಸುತ್ತಾರೆ. ಇದೇ ಮಾದರಿಯನ್ನು ಒಡಿಶಾ ರಾಜಧಾನಿ ಭುವನೇಶ್ವರದ ರೆಸ್ಟೋರೆಂಟ್​ ಒಂದು ಅಳವಡಿಸಿಕೊಂಡಿದೆ.

ಭುವನೇಶ್ವರದ ರೆಸ್ಟೋರೆಂಟ್​ ತನ್ನಲ್ಲಿಗೆ ಬರುವ ಗ್ರಾಹಕರಿಗೆ ಉತ್ತಮವಾದ ಸೇವೆ ಒದಗಿಸಲು ಮೇಡ್​ ಇನ್​ ಇಂಡಿಯಾ ರೋಬಾಟ್​​ಗ​ಳನ್ನು ಅಳವಡಿಸಿಕೊಂಡಿದೆ. ಗ್ರಾಹಕರೊಂದಿಗೆ ಸಂವಹನ ನಡೆಸಿ, ಅವರಿಗೆ ಆಹಾರ ಸೇವೆ ಒದಗಿಸುವ ರೋಬೋ ಚೆಫ್​ ಹೊಂದಿದ ಭುವನೇಶ್ವರದ ಮೊದಲ ರೆಸ್ಟೋರೆಂಟ್​ ಖ್ಯಾತಿಯನ್ನು ಹೊಂದಿದೆ. ರೆಸ್ಟೋರೆಂಟ್​ನಲ್ಲಿ ಎರಡು ರೋಬೋಗಳಿದ್ದು, ಅವು ಗ್ರಾಹಕರಿಗೆ ಬೇಕಾದ ಆಹಾರ ಸೇವೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತವೆ.

ಈ ಪ್ರಯತ್ನ ಮಾಡಿರುವ ರೆಸ್ಟೋರೆಂಟ್​ ಮಾಲೀಕ ಜೀತಾ ಬಾಸಾ ಮಾತನಾಡಿ, ಈ ಎರಡು ರೋಬೋಗಳಿಗೆ “ಚಂಪಾ” ಮತ್ತು “ಚಮೇಲಿ” ಎಂದು ಹೆಸರಿಡಲಾಗಿದೆ. ಎರಡು ಕೂಡ ಮೇಡ್​ ಇನ್​ ಇಂಡಿಯಾ ರೋಬೋಗಳು. ಈ ಮೂಲಕ ಪೂರ್ವ ಭಾರತದ ಮೊದಲ ರೋಬೋ ರೆಸ್ಟೋರೆಂಟ್​ ಖ್ಯಾತಿಗೆ ನಾವು ಭಾಜನರಾಗಿದ್ದೇವೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಇಷ್ಟೇ ಅಲ್ಲದೇ, ಭಾರತದ ಮೊದಲ ನಾನ್​ ಲೈನ್​ ಫಾಲೋವರ್ಸ್​ ರೋಬಾಟ್​ ರೆಸ್ಟೋರೆಂಟ್​ ಎಂಬ ಹೆಗ್ಗಳಿಕೆ ಹೊಂದಿದ್ದು, ಇಲ್ಲಿನ ರೋಬಾಟ್​ಗಳು ರಾಡರ್​ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತವೆ. ಇವುಗಳಿಗೆ ನಿರ್ಧಿಷ್ಟವಾದ ದಾರಿ ಬೇಕಾಗಿಲ್ಲ. ಆದೇಶ ನೀಡಿದಂತೆ ಕೆಲಸ ಮಾಡುತ್ತವೆ. ಒಡಿಯಾ ಸೇರಿ ಅನೇಕ ಭಾಷೆಯನ್ನು ಈ ರೋಬೋಗಳು ಮಾತನಾಡಬಲ್ಲವು ಎಂದು ಮಾಲೀಕ ಬಾಸಾ ಮಾಹಿತಿ ನೀಡಿದ್ದಾರೆ.

ರೋಬೋಗಳು ವಾಯ್ಸ್ ಆಪರೇಟಿಂಗ್​ ಸಿಸ್ಟಮ್​ ಕೂಡ ಹೊಂದಿದ್ದು, ರೆಸ್ಟೋರೆಂಟ್​ಗೆ ಬರುವ ಮತ್ತು ಹೋಗುವ ಗ್ರಾಹಕರನ್ನು ಸ್ವಾಗತಿಸಿ, ಅಭಿನಂದನೆ ಸಲ್ಲಿಸುತ್ತವೆ. ಈ ವಿಶೇಷ ಪರಿಕಲ್ಪನೆಯನ್ನು ಕಂಡು ರೆಸ್ಟೋರೆಂಟ್​ಗೆ ಬರುವ ಗ್ರಾಹಕರು ಫಿದಾ ಆಗಿದ್ದು, ಮಾಲೀಕರನ್ನು ಅಭಿನಂದಿಸುತ್ತಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *