ಫೊನಿಯಿಂದ ರಕ್ಷಣೆಗೆ 24 ಗಂಟೆಗಳ ಅವಧಿಯಲ್ಲಿ 12 ಲಕ್ಷ ಜನರ ಸ್ಥಳಾಂತರ: ನವೀನ್​ ಪಟ್ನಾಯಕ್​

ಭುವನೇಶ್ವರ: ಕಳೆದ ಎರಡು ದಶಕಗಳ ಅವಧಿಯಲ್ಲಿ ಭಾರತ ಕಂಡ ಅತ್ಯಂತ ಪ್ರಬಲ ಚಂಡಮಾರುತ ಎಂಬ ದಾಖಲೆಯೊಂದಿಗೆ ಒಡಿಶಾ ಕರಾವಳಿಗೆ ಫೊನಿ ಚಂಡಮಾರುತ ಅಪ್ಪಳಿಸಿದೆ. ಚಂಡಮಾರುತ ಪುರಿ ಕರಾವಳಿಗೆ ಅಪ್ಪಳಿಸುವ ಮುನ್ನ ಒಡಿಶಾ ಸರ್ಕಾರ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿ ಸಾವುನೋವಿನ ಪ್ರಮಾಣ ಹೆಚ್ಚಾಗದಂತೆ ತಡೆದಿದೆ.

1999ರಲ್ಲಿ ಒಡಿಶಾಕ್ಕೆ ಅಪ್ಪಳಿಸಿದ್ದ ಚಂಡಮಾರುತದಿಂದ 10 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಬಂಗಾಳಕೊಲ್ಲಿಯಲ್ಲಿ ಎದ್ದ ಅತ್ಯಂತ ಪ್ರಬಲ ಚಂಡಮಾರುತ ಎಂದೇ ಗುರುತಿಸಲ್ಪಟ್ಟಿದ್ದ ಫೊನಿಯಿಂದ ರಾಜ್ಯದಲ್ಲಿ ಹೆಚ್ಚಿನ ಪ್ರಾಣ ಹಾನಿಯಾಗದಂತೆ ತಡೆಯಲು ಒಡಿಶಾ ಸರ್ಕಾರ ಸಂಪೂರ್ಣ ಸಿದ್ಧತೆ ನಡೆಸಿತ್ತು. ಅದರಂತೆ ಶುಕ್ರವಾರ ಬೆಳಗ್ಗೆ ಪುರಿ ಕರಾವಳಿಗೆ 175 ಕಿ.ಮೀ. ವೇಗದಲ್ಲಿ ಫೊನಿ ಅಪ್ಪಳಿಸುವ ಮುನ್ನ ಸುಮಾರು 12 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು ಎಂದು ಒಡಿಶಾ ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ ತಿಳಿಸಿದ್ದಾರೆ.

ಕೇವಲ 24 ಗಂಟೆಗಳ ಅವಧಿಯಲ್ಲಿ ದಾಖಲೆಯ 12 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ದು ಆಶ್ರಯ ಕಲ್ಪಿಸಲಾಗಿದೆ. ಇದಕ್ಕಾಗಿ 9 ಸಾವಿರ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 7,000 ಅಡುಗೆ ಮನೆಗಳನ್ನು ನಿರ್ಮಿಸಲಾಗಿದೆ. ಇವೆಲ್ಲವುಗಳನ್ನೂ ಒಂದೇ ರಾತ್ರಿಯಲ್ಲಿ ಕಾರ್ಯಸನ್ನದ್ಧಗೊಳಿಸಲಾಗಿದೆ. ಇದಕ್ಕಾಗಿ ಸುಮಾರು 45 ಸಾವಿರ ಸ್ವಯಂ ಸೇವಕರು ದುಡಿದಿದ್ದಾರೆ ಎಂದು ನವೀನ್​ ಪಟ್ನಾಯಕ್​ ತಿಳಿಸಿದ್ದಾರೆ.

12 ಜನರ ಸಾವು

ವ್ಯಾಪಕ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದ ಹಿನ್ನೆಲೆಯಲ್ಲಿ ಫೊನಿ ಚಂಡಮಾರುತಕ್ಕೆ ಸಿಲುಕಿ 12 ಜನರು ಮೃತಪಟ್ಟಿದ್ದಾರೆ. ಚಂಡಮಾರುತದಿಂದ ಹಾನಿಗೊಳಗಾಗಿರುವ 10 ಸಾವಿರ ಗ್ರಾಮಗಳು ಮತ್ತು ನಗರ ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆಯನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *