ನವೀನ್ ಪಟ್ನಾಯಕ್​ಗೆ ನಡುಕ ಹುಟ್ಟಿಸಿದ ಬಿಜೆಪಿ; ಅಡಳಿತ ವಿರೋಧಿ ಅಲೆಯಲ್ಲಿ ದಡ ಸೇರುವರೇ?

ನವದೆಹಲಿ: ಕಳೆದ 19 ವರ್ಷಗಳಿಂದ ಒಡಿಶಾ ಮುಖ್ಯಮಂತ್ರಿಯಾಗಿರುವ ನವೀನ್ ಪಟ್ನಾಯಕ್​ಗೆ ರಾಷ್ಟ್ರ ರಾಜಕಾರಣದಲ್ಲಿ ವಿಶೇಷ ಸ್ಥಾನವಿದೆ. ಪ್ರಾದೇಶಿಕ ಪಕ್ಷಗಳ ನಾಯಕರಲ್ಲಿ ಮಮತಾ ಬ್ಯಾನರ್ಜಿಗೆ ಸರಿಸಮಾನಾಗಿ ನಿಲ್ಲುವ ಸಾಮರ್ಥ್ಯ ಅವರಲ್ಲಿದ್ದರೂ, ಪ್ರಧಾನಿಯಾಗಬೇಕೆಂಬ ಆಕಾಂಕ್ಷೆಯನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹೊರಹಾಕಿದವರಲ್ಲ. ‘ವಿಪಕ್ಷಗಳ ಮಹಾಮೈತ್ರಿ ರಚಿಸೋಣ’ ಎಂದು ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಮನವೊಲಿಸುವ ಯತ್ನ ಮಾಡಿದರೂ, ಪಟ್ನಾಯಕ್ ಹೆಚ್ಚು ಆಸಕ್ತಿ ತೋರಿರಲಿಲ್ಲ.

ಮೋದಿ ಅಲೆ ನಡುವೆಯೂ ಮುನ್ನಡೆ: 2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅಲೆಯ ಹೊರತಾಗಿಯೂ 21 ಕ್ಷೇತ್ರಗಳಲ್ಲಿ 20ನ್ನು ಗೆದ್ದುಕೊಂಡಿದ್ದ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ ಯುಪಿಎ ಅಥವಾ ಎನ್​ಡಿಎ ಮೈತ್ರಿಕೂಟದೊಂದಿಗೆ ಗುರುತಿಸಿಕೊಂಡಿಲ್ಲ. ಹಾಗಿದ್ದರೂ, ಕಳೆದ ವರ್ಷ ಸಂಸತ್ತಿನಲ್ಲಿ ತೆಲುಗು ದೇಶಂ ಪಕ್ಷದ ಸಂಸದರು ಕೇಂದ್ರ ಸರ್ಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿಲುವಳಿ ಮಂಡನೆ ವಿರುದ್ಧ ಬಿಜೆಡಿ ಮತ ಹಾಕುವ ಮೂಲಕ ಅನಿವಾರ್ಯ ಸಂದರ್ಭಗಳಲ್ಲಿ ತಮ್ಮ ಬೆಂಬಲ ಯಾರಿಗೆ ಎಂಬ ಸಂದೇಶವನ್ನು ರವಾನಿಸಿತು. ಹೀಗಾಗಿ, 2019ರ ಲೋಕಸಭೆ ಚುನಾವಣೋತ್ತರ ಸನ್ನಿವೇಶದಲ್ಲಿ ಎನ್​ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀಡಲೇಬೇಕಾದ ಸನ್ನಿವೇಶ ನಿರ್ಮಾಣವಾದರೆ, ಕೇಸರಿಪಡೆಯ ನಾಯಕರು ಬಿಜೆಡಿ ಕಡೆ ಮುಖ ಮಾಡಿದರೆ ಅಚ್ಚರಿ ಪಡಬೇಕಿಲ್ಲ.

2009ರ ಲೋಕಸಭೆ ಚುನಾವಣೆಯಲ್ಲಿ 14 ಸೀಟುಗಳನ್ನು ಗೆದ್ದಿದ್ದ ಬಿಜೆಡಿ, 2014ರಲ್ಲಿ ಕಾಂಗ್ರೆಸ್ ಬಳಿಯಿದ್ದ 6 ಸೀಟುಗಳನ್ನೂ ತನ್ನದಾಗಿಸಿಕೊಂಡಿತು. ಇದರಿಂದಾಗಿ ಇತಿಹಾಸದಲ್ಲೇ ಮೊದಲ ಬಾರಿಗೆ ಕಾಂಗ್ರೆಸ್ ರಾಜ್ಯದ ಲೋಕಸಭೆ ಚುನಾವಣೆಯಲ್ಲಿ ‘ಶೂನ್ಯ ಸಂಪಾದನೆ’ಯ ಕುಖ್ಯಾತಿಗೆ ಪಾತ್ರವಾಯಿತು.

ಈ ಬಾರಿ ರಾಜ್ಯದಲ್ಲಿ ಲೋಕಸಭೆ ಜತೆಗೆ ವಿಧಾನಸಭೆ ಚುನಾವಣೆ (147 ಕ್ಷೇತ್ರಗಳು) ನಿಗದಿಯಾಗಿದೆ. ಏಪ್ರಿಲ್ 11, 18, 23, 29 ಹೀಗೆ ನಾಲ್ಕು ಹಂತಗಳಲ್ಲಿ ಮತದಾನ ನಡೆಯಲಿದೆ. ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ನವೀನ್ ಪಟ್ನಾಯಕ್​ಗೆ ಇದು ಸವಾಲಿನ ಚುನಾವಣೆ. ಸಚಿವರು, ಮುಖಂಡರು ಬಹುಕೋಟಿ ಭ್ರಷ್ಟಾಚಾರ ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪಗಳು ಬಿಜೆಡಿಯನ್ನು ಕಾಡುತ್ತಿವೆ. ಏತನ್ಮಧ್ಯೆ, ಬಿಜೆಪಿ ಸಂಘಟನೆ ಬಲಗೊಳ್ಳುತ್ತಿದೆ. ಈ ಲೋಕಸಭೆ ಚುನಾವಣೆಯಲ್ಲಿ 2014ರ ಫಲಿತಾಂಶವನ್ನು ಬಿಜೆಡಿ ಪುನರಾವರ್ತಿಸುವುದು ಅನುಮಾನ ಎನ್ನಲಾಗುತ್ತಿದ್ದರೂ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಡಿಯನ್ನು ಸೋಲಿಸುವುದು ಸುಲಭ ಸಾಧ್ಯವಲ್ಲ ಎನ್ನುವುದು ವಿಶ್ಲೇಷಕರ ಅಭಿಪ್ರಾಯ. ಹಾಗಿದ್ದರೂ, ಬಿಜೆಪಿಯ ರಾಜಕೀಯ ಏರುಗತಿ ಪರಿಣಾಮ ಮೊದಲ ಬಾರಿಗೆ ರಾಜ್ಯದಲ್ಲಿ ನವೀನ್ ಪಟ್ನಾಯಕ್​ರನ್ನು ಎರಡು ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ಮಾಡಿದೆ!

ಈ ಮಧ್ಯೆ, ಶೇಕಡ 33ರಷ್ಟು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತೇವೆಂಬ ಸಿಎಂ ಪಟ್ನಾಯಕ್ ಘೊಷಣೆ ಪ್ರಗತಿಶೀಲ ಮಹಿಳಾ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. 2009 ಮತ್ತು 2014ರ ಚುನಾವಣೆಯಲ್ಲಿ ಮಹಿಳಾ ಮತದಾರರು ದೊಡ್ಡ ಸಂಖ್ಯೆಯಲ್ಲಿ ಬಿಜೆಡಿಯನ್ನು ಬೆಂಬಲಿಸಿದ್ದರು. ಈ ಚುನಾವಣೆಯಲ್ಲೂ ಆ ಮತಬ್ಯಾಂಕ್​ನ್ನು ದೃಢವಾಗಿಟ್ಟುಕೊಳ್ಳಲೆಂದೇ ಈ ನಿರ್ಧಾರಕ್ಕೆ ಬರಲಾಗಿದೆ. ದೇಶದಲ್ಲಿ ಮಹಿಳಾ ಮೀಸಲಾತಿ ಜಾರಿಯಾಗದಿದ್ದರೂ, ರಾಜ್ಯವೊಂದು ಈ ದಿಕ್ಕಿನಲ್ಲಿ ಸಾಗಿರುವುದು ಗಮನಾರ್ಹ ಬೆಳವಣಿಗೆ.

ಪಕ್ಷಾಂತರ ಪರ್ವ

ಚುನಾವಣೆಗೆ ಮುನ್ನ ಬಿಜೆಡಿಯ ಮೂವರು ಸಂಸದರು ಮತ್ತು ನಾಲ್ವರು ಶಾಸಕರು ಬಿಜೆಪಿ ಸೇರ್ಪಡೆಗೊಂಡಿರುವುದು ಪಕ್ಷಕ್ಕೆ ಭಾರಿ ಹಾನಿ ಮಾಡುವ ಲಕ್ಷಣಗಳಿವೆ. 7 ದಿನಗಳ ಅಂತರದಲ್ಲಿ 12ಕ್ಕಿಂತಲೂ ಹೆಚ್ಚು ಬಿಜೆಡಿ ಮುಖಂಡರು ಬಿಜೆಪಿ ಸೇರಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಡಿ ಸ್ಥಾಪಕರಲ್ಲಿ ಒಬ್ಬರಾಗಿದ್ದ ಕೇಂದ್ರಪಾಡಾ ಲೋಕಸಭೆ ಸಂಸದ ಬೈಜಯಂತ್ ಪಾಂಡಾ ಬಿಜೆಪಿ ಕಡೆ ವಾಲಿದ್ದು ನವೀನ್ ಪಟ್ನಾಯಕ್​ಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಪಾಂಡಾರನ್ನು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ಈ ಬಾರಿಯೂ ಕೇಂದ್ರಪಾಡಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಬಿಜೆಡಿಯ ಮತ್ತೋರ್ವ ಪ್ರಮುಖ ಮುಖಂಡ ದಾಮೋದರ್ ರೌತ್ ಈಗ ರಾಜ್ಯ ಬಿಜೆಪಿ ಪ್ರಚಾರ ಸಮಿತಿಯ ಸಂಚಾಲಕರು! ಒಟ್ಟಿನಲ್ಲಿ ಪಕ್ಷಾಂತರ ಪರ್ವ ಬಿಜೆಪಿ ಸೀಟುಗಳ ಸಂಖ್ಯೆಯನ್ನು ಏಷ್ಟರ ಮಟ್ಟಿಗೆ ವೃದ್ಧಿಸಲಿದೆ ಎನ್ನುವುದು ಪ್ರಶ್ನೆ. ಕಳೆದೆರಡು ದಶಕಗಳಿಂದ ನವೀನ್ ಪಟ್ನಾಯಕ್ ನಾಯಕತ್ವ ಪ್ರಶ್ನಿಸುವ ಧೈರ್ಯವನ್ನು ಶಾಸಕರು, ಸಂಸದರಾಗಲೀ ಮಾಡಿರಲಿಲ್ಲ. ಆದರೆ, ಕಳೆದೈದು ವರ್ಷಗಳಲ್ಲಿ ಬಿಜೆಪಿ ನೆಲೆ ಗಟ್ಟಿಯಾಗಿರುವುದರಿಂದಲೇ ಬಿಜೆಡಿ ಮುಖಂಡರು ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ.

ಪುರಿಗೆ ಪಾತ್ರಾ

ಬಿಜೆಪಿ ಈ ಬಾರಿ ಪುರಿ ಲೋಕಸಭೆಗೆ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾಗೆ ಟಿಕೆಟ್ ಕೊಟ್ಟಿದೆ. ಮಾಧ್ಯಮಗಳಲ್ಲಿ ಪಕ್ಷವನ್ನು ಬಲವಾಗಿ ಸಮರ್ಥಿಸಿಕೊಳ್ಳುವ ಪಾತ್ರಾ ವರಿಷ್ಠರೊಂದಿಗೂ ಉತ್ತಮ ಸಂಪರ್ಕ ಹೊಂದಿದ್ದಾರೆ. ಪುರಿಯಲ್ಲಿ ಈವರೆಗೆ ಬಿಜೆಪಿ ಗೆಲುವಿನ ಬಾವುಟ ಹಾರಿಸಿಲ್ಲ. ಆರಂಭದಲ್ಲಿ ಕಾಂಗ್ರೆಸ್, ಜನತಾದಳ ಹಾಗೂ ನಂತರದಲ್ಲಿ ಬಿಜು ಜನತಾದಳ ಕ್ಷೇತ್ರವನ್ನು ಗೆಲ್ಲುತ್ತಿದೆ. 1998ರ ನಂತರ ಇಲ್ಲಿ ಬಿಜೆಡಿಯದ್ದೇ ಕಾರುಬಾರು. 1996ರಲ್ಲಿ ಕಾಂಗ್ರೆಸ್​ನ ಪಿನಾಕಿ ಮಿಶ್ರಾ ಗೆದ್ದಿದ್ದರು. 2009 ಮತ್ತು 2014ರಲ್ಲಿ ಪಿನಾಕಿ ಮಿಶ್ರಾ ಬಿಜೆಡಿ ಮೂಲಕ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಕಳೆದ ಚುನಾವಣೆಯಲ್ಲಿ ಬಿಜೆಪಿ ಮೂರನೇ ಸ್ಥಾನದಲ್ಲಿತ್ತು. ಈ ನಡುವೆ ವಾರಾಣಸಿ ಬಳಿಕ ಪ್ರಧಾನಿ ಮೋದಿ ಒಡಿಶಾದ ಭುವನೇಶ್ವರವನ್ನು ಎರಡನೇ ಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರಾ ಎಂಬ ಚರ್ಚೆ ಗರಿಗೆದರಿದೆ.

| ರಾಘವ ಶರ್ಮನಿಡ್ಲೆ