ಆಂಧ್ರಕ್ಕೆ ಜಗನ್, ಒಡಿಶಾದಲ್ಲಿ ನವೀನ್: ಐದನೇ ಬಾರಿ ಪಟ್ನಾಯಕ್ ಕೈಹಿಡಿದ ಮತದಾರ, ಜಗನ್​ಗೆ ಜೈಕಾರ

ಆಂಧ್ರದಲ್ಲಿ ಜಗನ್ ಪಾದಯಾತ್ರೆ ಮೂಲಕ ಗ್ರಾಮ ಗ್ರಾಮಗಳಿಗೂ ತಲುಪಲು ಮಾಡಿದ ಪ್ರಯತ್ನ ಫಲ ನೀಡಿದ್ದು, ವಿಧಾನಸಭಾ ಚುನಾವಣೆಯಲ್ಲಿ ಜಗನ್​ವೋಹನ್ ರೆಡ್ಡಿ ನೇತೃತ್ವದ ವೈಎಸ್​ಆರ್ ಕಾಂಗ್ರೆಸ್ ಹೊಸ ಅಲೆ ಎಬ್ಬಿಸಿದೆ. 175 ವಿಧಾನಸಭಾ ಕ್ಷೇತ್ರಗಳ ಪೈಕಿ 150 ಕ್ಷೇತ್ರಗಳಲ್ಲಿ ಜಯಸಾಧಿಸಿದೆ. ಮಹಾಮೈತ್ರಿಗಾಗಿ ಓಡಾಟದಲ್ಲೇ ತೊಡಗಿದ್ದ ಚಂದ್ರಬಾಬು ನಾಯ್ಡುಗೆ ಜನ ದೊಡ್ಡ ಹೊಡೆತ ನೀಡಿದ್ದಾರೆ. ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ 24 ಸೀಟುಗಳಿಗೇ ಓಟ ನಿಲ್ಲಿಸುವಂತಾಗಿದೆ. ಆಂಧ್ರದಲ್ಲಿ ನೂತನ ಸರ್ಕಾರ ರಚನೆ ತಯಾರಿ ಜೋರಾಗಿ ನಡೆದಿದ್ದು, ಜಗನ್​ವೋಹನ್ ಅವರನ್ನು ಪಕ್ಷದ ಅಧಿಕೃತ ನಾಯಕನನ್ನಾಗಿ ಘೋಷಿಸಲು ಮೇ 25ರಂದು ಪಕ್ಷದ ಸಭೆ ಕರೆಯಲಾಗಿದೆ. ಮೇ 30ರಂದು ತಿರುಪತಿಯ ತಾರಕರಾಮ ಸಭಾಂಗಣದಲ್ಲಿ ಜಗನ್ ಆಂಧ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಇದಕ್ಕೂ ಮೊದಲು ತಿರುಪತಿ ವೆಂಕಟೇಶ್ವರನ ದರ್ಶನ ಪಡೆಯಲಿದ್ದಾರೆ.

ಸವಾಲು ಹಲವು

ಜಗನ್ ಆಂಧ್ರದಲ್ಲಿ ಅಧಿಕಾರಕ್ಕೇರುತ್ತಿದ್ದಾರಾದರೂ ಅವರೆದುರು ಸಾಕಷ್ಟು ಸವಾಲುಗಳಿವೆ. 2014ರಲ್ಲಿ ರಾಜ್ಯ ವಿಭಜನೆ ಬಳಿಕ ಆಂಧ್ರ ಭಾರಿ ಪ್ರಮಾಣದ ಸಂಪನ್ಮೂಲ ಕೊರತೆ ಎದುರಿಸುತ್ತಿದೆ. ಹೊಸ ರಾಜಧಾನಿ ಅಮರಾವತಿ ಇನ್ನೂ ಕನಸಾಗಿಯೇ ಉಳಿದಿದೆ. ಗ್ರಾಮೀಣಾಭಿವೃದ್ಧಿ ಜಗನ್ ಎದುರಿಗಿರುವ ಮತ್ತೊಂದು ಸವಾಲಾಗಿದ್ದು, ಜಗನ್ ನೀಡಿರುವ ಭರವಸೆಗಳನ್ನು ಈಡೇರಿಸುವುದು ಕಷ್ಟಸಾಧ್ಯವಾಗಿದೆ.

ಶ್ರಮಕ್ಕೆ ಸಿಕ್ಕ ಫಲ

2014ರ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ಎದುರು ಭಾರಿ ಅಂತರದ ಸೋಲು ಕಂಡಿದ್ದ ವೈಎಸ್​ಆರ್ ಕಾಂಗ್ರೆಸ್ ಪಕ್ಷವನ್ನು ಮೇಲಕ್ಕೆತ್ತಿದ ಶ್ರೇಯ ಜಗನ್​ಗೆ ಸಲ್ಲುತ್ತದೆ. ಚುನಾವಣಾ ಸೋಲಿನ ಬಳಿಕ ಮತ್ತೆ ರಾಜಕೀಯದಲ್ಲಿ ಸಕ್ರಿಯರಾದ ಜಗನ್ ರಾಜ್ಯದ ಉದ್ದಗಲಕ್ಕೂ ಪಾದಯಾತ್ರೆ ಮಾಡಿದ್ದರು. 3,500 ಕಿಮೀ ಪ್ರದೇಶವನ್ನು ಪಾದಯಾತ್ರೆ ಮೂಲಕ ಕ್ರಮಿಸಿದ ಜಗನ್ ಜನರೊಂದಿಗೆ ಸಂಪರ್ಕ ಹೆಚ್ಚಿಸಿಕೊಳ್ಳಲು ಸಾಧ್ಯವಾಯಿತು. ಈ ನಡುವೆ ನಾಯ್ಡು ಎನ್​ಡಿಎನಿಂದ ಹೊರನಡೆದಿದ್ದು, ಮೋದಿ ವಿರುದ್ಧದ ಹೇಳಿಕೆಗಳು ಒಂದರ್ಥದಲ್ಲಿ ಜಗನ್​ಗೆ ವರವಾಯಿತು. ಅಧಿಕೃತವಾಗಿ ಬಿಜೆಪಿಗೆ ಬೆಂಬಲಿಸದಿದ್ದರೂ ಎರಡೂ ಪಕ್ಷಗಳು ನಾಯ್ಡು ವಿರುದ್ಧದ ನಿಲುವನ್ನೇ ಹೊಂದಿದ್ದು ಜಗನ್​ಗೆ ಅನುಕೂಲವಾಯಿತು. ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಕೂಡ ಜಗನ್ ಬೆನ್ನಿಗೆ ನಿಂತಿದ್ದರು. ಚುನಾವಣಾ ಪ್ರಚಾರ ಅಭಿಯಾನ ಕೂಡ ಸಾಕಷ್ಟು ಪ್ರಭಾವ ಬೀರಿತು. ಜನರಲ್ಲಿ ನಾಯ್ಡು ಆಡಳಿತದ ಬಗ್ಗೆ ವಿರೋಧ ಮನೋಭಾವ ಹುಟ್ಟಿಕೊಂಡಿದ್ದಿದ್ದು ಕೂಡ ಅನುಕೂಲ ಮಾಡಿಕೊಟ್ಟಿತು.

ಬಲ ಹೆಚ್ಚಿಸಿಕೊಂಡ ಕಮಲ ಪಾಳಯ

ಒಡಿಶಾ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ ಪಕ್ಷ (ಬಿಜೆಡಿ) ಭರ್ಜರಿ ಗೆಲುವು ಸಾಧಿಸಿದೆ. ಬಿಜೇಪುರ್ ಮತ್ತು ತವರು ಹಿಂಜಿಲಿ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಪಟ್ನಾಯಕ್ ಅವರಿಗೆ ಎರಡೂ ಕಡೆಗಳಲ್ಲಿ ಮತದಾರ ಕೈಹಿಡಿದಿದ್ದಾನೆ. ಈ ಮೂಲಕ ಸತತ ಐದನೇ ಬಾರಿಗೆ ಪಟ್ನಾಯಕ್ ಅವರು ಗೆಲುವಿನ ರುಚಿ ಕಂಡಿದ್ದಾರೆ. ಒಟ್ಟೂ 147 ಕ್ಷೇತ್ರಗಳಲ್ಲಿ ಪೈಕಿ 113 ಕ್ಷೇತ್ರಗಳಲ್ಲಿ ಬಿಜೆಡಿ ಜಯ ಸಾಧಿಸಿದೆ. ಬಿಜೆಪಿ 22 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಸರ್ಕಾರದ ರಚನೆಗೆ 74 ಸ್ಥಾನಗಳು ಅಗತ್ಯವಿತ್ತು. ನವೀನ್ ಪಟ್ನಾಯಕ್ ಅವರ ತಂದೆ ಬಿಜು ಪಟ್ನಾಯಕ್ ಅವರು 1977,1980 ಹಾಗೂ 1984ರಲ್ಲಿ ಸತತವಾಗಿ ಚುನಾವಣೆಯಲ್ಲಿ ಜಯ ಸಾಧಿಸಿದ್ದರು. ಅದನ್ನೇ ಮಗ ನವೀನ್ ಅವರೂ ಮುಂದುವರಿಸಿಕೊಂಡು ಬಂದಿದ್ದು, 1998ರಿಂದ ಈವರೆಗೆ ಸೋಲು ಕಂಡಿಲ್ಲ. ಆದರೂ ಅವರಿಗೆ ಈ ಬಾರಿ ಇನ್ನಷ್ಟು ಬೆಂಬಲ ಸಿಗಲು ಕಾರಣ, ಚುನಾವಣೆ ಘೊಷಣೆಯಾದ ಬೆನ್ನಲ್ಲೇ ಒಡಿಶಾ ರಾಜ್ಯದ ಜನರನ್ನು ಕಂಗಾಲು ಮಾಡಿದ್ದ ಫೋನಿ ಚಂಡಮಾರುತ. ಚಂಡಮಾರುತದ ವೇಳೆ ಪಟ್ನಾಯಕ್ ಅವರು ತೆಗೆದುಕೊಂಡ ದಿಟ್ಟ ನಿರ್ಧಾರ ಅವರ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದೆ. ಚಂಡಮಾರುತವನ್ನು ಎದುರಿಸಲು ಅವರ ನೇತೃತ್ವದ ಸರ್ಕಾರ ಕೈಗೊಂಡ ರಕ್ಷಣಾ ಕಾರ್ಯಾಚರಣೆ ವಿಶ್ವಸಂಸ್ಥೆಯಿಂದಲೂ ಭಾರಿ ಶ್ಲಾಘನೆಗೆ ಪಾತ್ರವಾಗಿತ್ತು. ಚಂಡಮಾರುತ ಅಪ್ಪಳಿಸುವುದಕ್ಕೂ ಮುನ್ನವೇ ಪುರಿ ಮತ್ತು ಕೆಲವು ಕರಾವಳಿ ಜಿಲ್ಲೆಗಳಿಂದ 15 ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ರವಾನೆ ಮಾಡಿ ಅಪಾರ ಪ್ರಮಾಣದ ಸಾವುನೋವನ್ನು ತಗ್ಗಿಸಿದ್ದು ಮಾತ್ರವಲ್ಲದೇ ಪಟ್ನಾಯಕ್ ಅವರು ಖುದ್ದಾಗಿ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದು ಕೂಡ ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ. ಇದರ ಜತೆಗೆ, ಟಿಕೆಟ್ ಹಂಚಿಕೆ ವಿಷಯದಲ್ಲಿ ಹಾಗೂ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಜಾರಿ ಮಾಡುವ ಮೂಲಕ ಇವರು ರಾಜ್ಯದ ಮಹಿಳಾ ಮತದಾರರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಎಐಎಡಿಎಂಕೆ ಸರ್ಕಾರ ಸೇಫ್

ತಮಿಳುನಾಡಿನ 22 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಎಐಎಡಿಎಂಕೆ 9 ಕ್ಷೇತ್ರಗಳಲ್ಲಿ ಜಯಗಳಿಸಿದ್ದು ಸರ್ಕಾರ ಸೇಫ್ ಆಗಿದೆ. ಡಿಎಂಕೆ 13 ಕ್ಷೇತ್ರಗಳಲ್ಲಿ ಜಯಗಳಿಸಿದೆ.

ಒಟ್ಟು 213 ಸದಸ್ಯ ಬಲ ಹೊಂದಿರುವ ತಮಿಳುನಾಡು ವಿಧಾನಸಭೆಯಲ್ಲಿ ಆಡಳಿತದಲ್ಲಿರುವ ಎಐಎಡಿಎಂಕೆ 113 ಸದಸ್ಯರನ್ನು ಹೊಂದಿದೆ. ಪ್ರಮುಖ ಪ್ರತಿಪಕ್ಷವಾದ ಡಿಎಂಕೆ ಮೈತ್ರಿಕೂಟ ಒಟ್ಟು 97 ಶಾಸಕರನ್ನು ಹೊಂದಿದೆ. ಇದರಲ್ಲಿ ಕಾಂಗ್ರೆಸ್ 8 ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್(ಐಯುಎಂಎಲ್) ನ ಓರ್ವ ಶಾಸಕರಿದ್ದಾರೆ. ಎಎಂಎಂಕೆ ಪಕ್ಷದಿಂದ ಟಿಟಿವಿ ದಿನಕರನ್ ಏಕೈಕ ಶಾಸಕ. ಎಐಎಡಿಎಂಕೆಯ 113 ಶಾಸಕರ ಪೈಕಿ ಕನಿಷ್ಠ 5 ಶಾಸಕರು ದಿನಕರನ್​ರೊಂದಿಗಿದ್ದಾರೆ ಎನ್ನಲಾಗುತ್ತಿದೆಯಾದರೂ ಕೆ. ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಮರುಚುನಾವಣೆಯಲ್ಲಿ 9 ಕ್ಷೇತ್ರಗಳಲ್ಲಿ ಜಯಗಳಿಸಿದ್ದು,ಐವರು ಶಾಸಕರನ್ನು ಕಳೆದುಕೊಂಡರೂ ಇದರ ಸದಸ್ಯಬಲ 117 ಆಗಿರಲಿದೆ. ಹೀಗಾಗಿ ರಾಜ್ಯ ಸರ್ಕಾರ ಸುರಕ್ಷಿತವಾಗಿರಲಿದೆ. ಸ್ಟಾಲಿನ್ ನೇತೃತ್ವದ ಡಿಎಂಕೆಗೆ ಸದ್ಯದ ಸರ್ಕಾರವನ್ನು ಉರುಳಿಸಬೇಕಾದರೆ 21 ಸೀಟುಗಳ ಅಗತ್ಯವಿದೆ. ಸದ್ಯ 13 ಕ್ಷೇತ್ರಗಳಲ್ಲಿ ಡಿಎಂಕೆ ಗೆದ್ದಿದ್ದು, ದಿನಕರನ್ ಮತ್ತು ಅವರತ್ತ ಒಲವು ತೋರಿರುವ ಐವರು ಎಐಎಡಿಎಂಕೆ ಶಾಸಕರನ್ನು ತಮ್ಮತ್ತ ಸೆಳೆದರೂ ಇವರ ಶಾಸಕ ಬಲ 106 ಆಗಲಿದೆಯಷ್ಟೆ. ತಮಿಳುನಾಡು ಹೊರತುಪಡಿಸಿದಂತೆ ಒಟ್ಟು 11 ರಾಜ್ಯಗಳಲ್ಲಿ ವಿಧಾನಸಭಾ ಕ್ಷೇತ್ರಗಳಿಗೆ ಮರುಮತದಾನ ನಡೆದಿದೆ. ಇದರಲ್ಲೂ ಬಿಜೆಪಿ ಮುನ್ನಡೆ ಸಾಧಿಸಿದೆ. ಉತ್ತರಪ್ರದೇಶದ ಎರಡೂ ಕ್ಷೇತ್ರಗಳನ್ನು ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡಿದ್ದರೆ, ಮೇಘಾಲಯದಲ್ಲಿ ಎನ್​ಪಿಪಿ-1, ಮಿಜೋರಾಂನಲ್ಲಿ ಎಂಎನ್​ಎಫ್-1, ಗೋವಾದಲ್ಲಿ ಬಿಜೆಪಿ-3 ಕಾಂಗ್ರೆಸ್-1, ನಾಗಾಲ್ಯಾಂಡ್​ನಲ್ಲಿ ಎನ್​ಡಿಪಿಪಿ-1, ಗುಜರಾತ್​ನಲ್ಲಿ ಬಿಜೆಪಿ-4, ಪುದುಚೇರಿಯಲ್ಲಿ ಡಿಎಂಕೆ-1, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ -4, ಟಿಎಂಸಿ-3, ಕಾಂಗ್ರೆಸ್-1, ಬಿಹಾರದಲ್ಲಿ ಜೆಡಿಯು-1 , ಬಿಜೆಪಿ-1, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-1 ಕ್ಷೇತ್ರಗಳಲ್ಲಿ ಜಯಗಳಿಸಿವೆ.

ಅರುಣಾಚಲದಲ್ಲೂ ಅರಳಿದ ಕಮಲ

ಅರುಣಾಚಲ ಪ್ರದೇಶದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಜನರು ಮತ್ತೊಮ್ಮೆ ಅಧಿಕಾರದ ಗದ್ದುಗೆ ಒಪ್ಪಿಸಿದ್ದಾರೆ. ಇಲ್ಲಿನ 60 ಕ್ಷೇತ್ರಗಳ ಪೈಕಿ 42 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದು, ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ 9 ಕ್ಷೇತ್ರಗಳಲ್ಲಿ ಗೆದ್ದಿದೆ. ಅರುಣಾಚಲ ಪ್ರದೇಶದಲ್ಲಿ ಒಟ್ಟು 60 ಕ್ಷೇತ್ರಗಳಿವೆಯಾದರೂ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಅವಿರೋಧವಾಗಿ ಆಯ್ಕೆಯಾಗಿದ್ದರಿಂದ 57 ಕ್ಷೇತ್ರಗಳಿಗೆ ಮಾತ್ರ ಮತದಾನವಾಗಿತ್ತು. 2014ರ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಪೇಮಾ ಖಾಂಡು ನೇತೃತ್ವದಲ್ಲಿ ಸರ್ಕಾರ ರಚನೆಯಾಯಿತು. ಆದರೆ ಅಸಂತುಷ್ಟ ನಾಯಕರು ಪಿಪಿಎ ಪಕ್ಷಕ್ಕೆ ಸೇರಿಕೊಂಡಿದ್ದರು. ಈ ಬೆಳವಣಿಗೆಗಳ ಬೆನ್ನಲ್ಲಿ ಕಾಂಗ್ರೆಸ್​ನ ಎಲ್ಲ ಶಾಸಕರು ಬಿಜೆಪಿ ಸೇರ್ಪಡೆಯಾದರು. ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು.

ಪ್ರಧಾನಿ ಮೋದಿ ಮತ್ತು ವೈಎಸ್ ಜಗನ್​ವೋಹನ್ ರೆಡ್ಡಿ ಹಾಗೂ ಒಡಿಶಾ ಸಿಎಂ ಅವರ ಗೆಲುವಿಗೆ ಶುಭಾಶಯಗಳು. ಪಕ್ಷಕ್ಕಾಗಿ ದುಡಿದ ಹಾಗೂ ಟಿಡಿಪಿಯನ್ನು ಆಶೀರ್ವದಿಸಿದ ಎಲ್ಲರಿಗೂ ಧನ್ಯವಾದಗಳು. ಸೋಲಿನ ಬಗ್ಗೆ ಪುನರಾವಲೋಕನ ಮಾಡಲಿದ್ದೇವೆ.

| ಎನ್ ಚಂದ್ರ ಬಾಬು ನಾಯ್ಡು ಆಂಧ್ರ ಮಾಜಿ ಸಿಎಂ(ಟಿಡಿಪಿ)

ಆಡಳಿತ ಪಕ್ಷಕ್ಕೆ ಕಠಿಣ ಸವಾಲು

1994ರಿಂದಲೂ ಮುಖ್ಯಮಂತ್ರಿ ಗದ್ದುಗೆಯಲ್ಲಿದ್ದ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್​ಡಿಎಫ್) ಮುಖ್ಯಸ್ಥ ಪವನ್ ಚಾಮ್ಲಿಂಗ್ ಅವರಿಗೆ ಈ ಬಾರಿಯೂ ಜಯದ ಮಾಲೆ ಒಲಿದಿದೆ. ಪಾಕ್​ಲೋಕ್ ಕಮರಂಗ್ ಕ್ಷೇತ್ರದಲ್ಲಿ 2,899 ಮತಗಳ ಅಂತರದಲ್ಲಿ ಅವರು ಗೆಲುವು ಸಾಧಿಸಿದ್ದಾರೆ. ಆದರೆ ಎಸ್​ಡಿಎಫ್ ಪಕ್ಷ ಬಹುಮತ ಸಾಧಿಸುವಲ್ಲಿ ವಿಫಲವಾಗಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ 22 ಕ್ಷೇತ್ರಗಳನ್ನು ಗೆದ್ದಿದ್ದ ಎಸ್​ಡಿಎಫ್, ಈ ಬಾರಿ ಸೋಲುಂಡು 15 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. 32 ವಿಧಾನಸಭಾ ಕ್ಷೇತ್ರಗಳಲ್ಲಿ ಆಡಳಿತ ನಡೆಸಲು 17 ಕ್ಷೇತ್ರಗಳಲ್ಲಿ ಗೆಲ್ಲುವುದು ಪಕ್ಷಕ್ಕೆ ಅನಿವಾರ್ಯವಾಗಿತ್ತು. ಆದರೆ ವಿರೋಧ ಪಕ್ಷವಾಗಿರುವ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್​ಕೆಎಂ) ಕೊನೆಯ ಕ್ಷಣದವರೆಗೂ ನೆಕ್ ಟು ನೆಕ್ ಫೈಟ್ ನೀಡಿತು. ಎಸ್​ಕೆಎಂ 17 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಬಹುಮತ ಪಡೆದುಕೊಂಡಿದೆ.

ಬಿಜೆಡಿಗೆ ಗೆಲುವಿನ ಮಾಲೆಯನ್ನು ಹಾಕಿದ ರಾಜ್ಯದ ಜನತೆಗೆ ಧನ್ಯವಾದ ಸಲ್ಲಿಸುತ್ತೇನೆ. ಗೆಲುವಿಗೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಶ್ರಮ ಕಾರಣ. ಇದೇ ಸಂದರ್ಭದಲ್ಲಿ ರಾಜ್ಯದ ಮಹಿಳೆಯರೆಲ್ಲರಿಗೂ ಕೃತಜ್ಞತೆ ಸಲ್ಲಿಸಲು ಇಚ್ಛಿಸುತ್ತೇನೆ. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಅವರು ಮತಚಲಾವಣೆ ಮಾಡಿದ್ದರಿಂದ ಈ ಗೆಲುವು ಸಾಧ್ಯವಾಗಿದೆ.

| ನವೀನ್ ಪಟ್ನಾಯಕ್ ಒಡಿಶಾ ಮುಖ್ಯಮಂತ್ರಿ

Leave a Reply

Your email address will not be published. Required fields are marked *